ಮಡಿಕೇರಿ: ಕೊಡಗಿನ ಕಾವೇರಿ ನದಿಯೂ ನಾಡಿನ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ನದಿ ನೀರು ಕಲುಷಿತಗೊಳ್ಳುತ್ತಿದೆ. ಮುಖ್ಯವಾಗಿ ನಾಪೋಕ್ಲು ಪಟ್ಟಣದ ಹಲವು ಕೋಳಿ ಮತ್ತು ಕುರಿ ಮಾಂಸದ ಅಂಗಡಿಗಳ ಮಾಲೀಕರು ಕುರಿ, ಕೋಳಿ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಸಿ ನದಿಗೆ ಎಸೆಯುತ್ತಿದ್ದಾರೆ. ಎಷ್ಟೋ ಜನರು ಯಾವುದೊ ಮಾಟ ಮಂತ್ರಗಳನ್ನು ಮಾಡಿದ ತ್ಯಾಜ್ಯವನ್ನು ಇದೇ ಹೊಳೆಗೆ ಸುರಿಯುತ್ತಿದ್ದಾರೆ. ಯಾವುದೇ ವಸ್ತು ಬೇಡ ಎನಿಸಿದರು ಜನರು ತಮ್ಮ ವಾಹನಗಳಲ್ಲಿ ತಂದು ನಾಪೋಕ್ಲು ಸೇತುವೆ ಮೇಲೆ ನಿಂತು ಕಾವೇರಿ ನದಿಗೆ ಸುರಿಯುತ್ತಿದ್ದಾರೆ.
ಇದನ್ನು ಓದಿ: ಅಕ್ರಮ ಗಣಿ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ, ಸಿಬಿಐ ತನಿಖೆಗೆ ಆಗ್ರಹ
ಇದರಿಂದ ಈ ನೀರು ಕುಡಿಯಲು ಯೋಗ್ಯವಲ್ಲ ಎನ್ನೋ ಸ್ಥಿತಿ ತಲುಪಿದೆ. ಅದಕ್ಕೆ ಮುಖ್ಯವಾಗಿ ನದಿ ಪಾತ್ರದ ಜಾಗ ಬಹುತೇಕ ಒತ್ತುವರಿಯಾಗಿರುವುದು ಮತ್ತು ಜನರು ಕಸ ಮತ್ತು ವಿವಿಧ ತ್ಯಾಜ್ಯವನ್ನು ನದಿಗೆ ಸುರಿಯುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.
ಇಲ್ಲೊಬ್ಬ ಕಾಫಿ ಪ್ಲಾಂಟರ್ 62 ವಯಸ್ಸಿನ ಹಸೈನರ್ಗೆ ನದಿ ಮೇಲೆ ಅದೇನು ಪ್ರೀತಿ. ಕಾವೇರಿ ನದಿಯನ್ನು ನಿತ್ಯ ಸ್ವಚ್ಚಗೊಳಿಸುವ ಕಾಯಕದಲ್ಲಿ ಕಳೆದ ಹಲವು ತಿಂಗಳುಗಳಿಂದ ಸದ್ದಿಲ್ಲದೆ ಮಾಡುತ್ತಿದ್ದಾರೆ. ಹೌದು, ಎರಡು ಎಕರೆ ಕಾಫಿ ತೋಟವಿದ್ದರೆ ಸಾಕು ಅದರಲ್ಲಿ ಬರುವ ಆದಾಯದಲ್ಲಿ ಶೋಕಿ ಮಾಡಿಕೊಂಡು ಕಾಲ ಕಳೆಯುವ ಇಂದಿನ ಕಾಲಮಾನದಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೊಟ್ಟಮುಯದವರಾದ ಹಸೈನರ್ ನಿತ್ಯ ಮಧ್ಯಾಹ್ನದ ಬಳಿಕ ಕಾವೇರಿ ನದಿ ಸ್ವಚ್ಛತೆಗೆ ಇಳಿದು ಬಿಡುತ್ತಾರೆ.
ತಮ್ಮ ಮನೆ ಬಳಿಯೇ ಇರುವ 6 ಎಕರೆ ಕಾಫಿ ತೋಟ ಇರುವ ಕೊಟ್ಟಮುಡಿಯಿಂದ ಕಾವೇರಿ ನದಿ ಬಳಿಗೆ ಬರುವ ಹಸೈನರ್ ಅವರು ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಇಳಿದು, ನದಿ ಒಡಲಿನಲ್ಲಿ ಮುಳುಗಿರುವ ವಿವಿಧ ತ್ಯಾಜ್ಯಗಳನ್ನು ತಾವು ಮುಳುಗಿಯಾದರೂ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ನದಿಗೆ ಕಸ ಸುರಿಯಲು ಬರುವವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಬೈದು ಕಳುಹಿಸಿದ್ದಾರೆ ಹಸೈನರ್ ಅವರು.
ಇದನ್ನು ಓದಿ: ಕೊಡಗು ಜಿಲ್ಲೆಯ ಮೇಲೆ ಕಸ್ತೂರಿ ರಂಗನ್ ವರದಿ ತೂಗುಗತ್ತಿ
ಕೊಡಗು ಸೇರಿದಂತೆ ಮೈಸೂರು, ಬೆಂಗಳೂರು ಮಹಾನಗರಗಳ ಜನರಿಗೆ ಕುಡಿಯುವುದಕ್ಕೆ ಇದೇ ನೀರು ಪೂರೈಕೆ ಆಗುತ್ತಿರುವುದರಿಂದ ಜನರಿಗೆ ತೊಂದರೆ ಆಗಬಾರದು ಎಂದು ಹಸೈನರ್ ಯೋಚಿಸಿದರು. ನಾಪೋಕ್ಲು ಪಟ್ಟಣದಿಂದ ಆರಂಭಿಸಿ ಹೊದ್ದೂರು ಗ್ರಾಮದವರೆಗೆ ಅಂದರೆ ನದಿಯ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ನದಿ ಸ್ವಚ್ಚಗೊಳಿಸುತ್ತಿದ್ದಾರೆ.
ಕಳೆದ ವರ್ಷ ಲಾಕ್ಡೌನ್ ಆಗಿದ್ದರಿಂದ ಏನೂ ಕೆಲಸವಿಲ್ಲದೆ ಸುಮ್ಮನಿದ್ದಿದ್ದರಿಂದ ಏನಾದರೂ ಮಾಡಬೇಕೆಂದೆನಿಸಿತು. ಹೊಳೆ ಬಳಿ ಸುತ್ತಾಡುವಾಗ ಹೊಳೆಯನ್ನೇ ಕ್ಲೀನ್ ಮಾಡಬೇಕು ಎಂದೆನಿಸಿತು. ಹೀಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಹಸೈನರ್. ಇವರು ಹೊಳೆ ಸ್ವಚ್ಛತೆ ಮಾಡುವುದು ಅಷ್ಟೇ ಅಲ್ಲ, ಹಲವು ವರ್ಷಗಳಿಂದ ನದಿಗೆ ಬಿದ್ದು ಸತ್ತವರನ್ನು ಮೇಲೆತ್ತುವ ಕಾಯಕ ಮಾಡುತ್ತಿದ್ದಾರೆ. ಇವರ ಈ ಕೆಲಸಕ್ಕೆ ನಾವು ಇನ್ನಷ್ಟು ಒತ್ತಾಸೆಯಾಗಿ ನಿಲ್ಲುತ್ತೇವೆ ಎನ್ನುವರು ಪಂಚಾಯಿತಿ ಪ್ರತಿನಿಧಿಗಳು.