ಮೂರು ತಿಂಗಳೊಳಗೆ ಶೇಕಡಾ 80ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಿ-3ನೇ ಅಲೆಯಿಂದ ರಕ್ಷಿಸಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ 3ನೇ ಅಲೆಯಿಂದ ಜನರನ್ನು ರಕ್ಷಿಸಲು ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯದ ಶೇಕಡಾ 80ರಷ್ಟು ಜನರಿಗೆ ಲಸಿಕೆ ನೀಡಲು ಸಮರೋಪಾದಿಯಲ್ಲಿ ಮುಂದಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ”ಮೂರು ತಿಂಗಳೊಳಗೆ ವಯಸ್ಕರಿಗೆ ಎರಡು ಡೋಸ್ ಲಸಿಕೆ ಹಾಕುವ ಮೂಲಕ ಕೊರೊನಾ 3ನೇ ಅಲೆಯಿಂದ ರಾಜ್ಯದ ಜನರನ್ನು ರಕ್ಷಣೆ ಮಾಡಬಹುದಾಗಿದೆ” ಎಂದು ಹೇಳಿದರು.

ಇದನ್ನು ಓದಿ: ಕೋವಿಡ್ 3ನೇ ಅಲೆ ಮತ್ತು ಮಕ್ಕಳ ಮೇಲಿನ ಪರಿಣಾಮ–ಎಂ.ಎಸ್.ಸಿ. ವತಿಯಿಂದ ನಡೆದ ವಿಚಾರ ಸಂಕಿರಣ

”ಅಕ್ಟೋಬರ್‌ ತಿಂಗಳಲ್ಲಿ ಕೊರೊನಾ 3ನೇ ಅಲೆ ತೀವ್ರವಾಗುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ಲಸಿಕೆ ವಿತರಣೆಯಿಂದ ಕೋವಿಡ್‌ ತೀವ್ರತೆ  ತಡೆಯಬಹುದು. ಆದರೆ, ಈ ಸವಾಲಿಗೆ ಸರ್ಕಾರ ಸಿದ್ದವಿದೆಯೇ?ʼʼ ಎಂದು ಪ್ರಶ್ನೆ ಮಾಡಿದರು.

”ವ್ಯಾಕ್ಸಿನೇಷನ್ ಬಗ್ಗೆ ಮಾತ್ರ ಮಾತನಾಡಿದರೆ ಸಾಲದು. ಕೇವಲ ಒಂದು ಡೋಸ್ ಲಸಿಕೆ ಹಾಕಿದರೆ ಸಾಲದು, ಕೊರೊನಾದಿಂದ ಪೂರ್ಣ ರಕ್ಷಣೆ ಸಾಧ್ಯವಾಗಲು ಎರಡೂ ಡೋಸ್ ಪಡೆದರೆ ಮಾತ್ರ ಸಾಧ್ಯವೆಂದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಸೆಪ್ಟೆಂಬರ್‌ ಅಂತ್ಯದೊಳಗೆ ಶೇಕಡಾ 80ರಷ್ಟು ವಯಸ್ಕರಿಗೆ ಎರಡೂ ಡೋಸ್ ಹಾಕುವ ಹೊಣೆಗಾರಿಕೆಯನ್ನು ಸರ್ಕಾರ ನಿರ್ವಹಿಸಲೇಬೇಕು. ಈ ಸವಾಲಿನಲ್ಲಿ ವಿಫಲವಾದರೆ, 3ನೇ ಅಲೆಯ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ” ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರ ಡಿ.ಕೆ. ಶಿವಕುಮಾರ್‌ ಅವರು ಎಚ್ಚರಿಕೆ ನೀಡಿದರು.

ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಪಕ್ಷವು ಮಕ್ಕಳಿಗಾಗಿ ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ ನಡೆಸಿದೆ. ಇದರಲ್ಲಿ 20 ಸಾವಿರಕ್ಕೂ ಹೆಚ್ಚು ಮಕ್ಕಳು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ವಿಡಿಯೋ ಮಾಡಿದ 22 ಮಕ್ಕಳಿಗೆ ಪಕ್ಷದ ವತಿಯಿಂದ ಆ್ಯಂಡ್ರಾಯ್ಡ್ ಟ್ಯಾಬ್‌ಗಳನ್ನು ಬಹುಮಾನವಾಗಿ ನೀಡಿದೆ.

ʻʻವಿದೇಶಗಳಿಗೆ ಲಸಿಕೆಯನ್ನು ರಫ್ತು ಮಾಡುವುದನ್ನು ತಗ್ಗಿಸಿ ನಮ್ಮ ಜನರಿಗೆ ಲಸಿಕೆ ವಿತರಣೆಗೆ ಒತ್ತು ಕೊಡಬೇಕು. ಬಿಜೆಪಿ ನಾಯಕರು ಲಸಿಕೆ ನೀಡಿಕೆಯಲ್ಲೂ ಅಪರ-ತಪರಾ ಮಾಡುವುದನ್ನು ನಿಲ್ಲಿಸಿ, ಎಲ್ಲರಿಗೂ ಲಸಿಕೆ ಹಾಕಿಸಿ ಜನರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು. ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅವಶ್ಯಕ ಪ್ರಮಾಣದ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವ್ಯಾಕ್ಸಿನೇಷನ್ ಬಗ್ಗೆ ಒಂದು ದಿನದ ಅಬ್ಬರದ ಪ್ರಚಾರ ಪಡೆದು ಸರ್ಕಾರ ಸುಮ್ಮನಾದರೆ ಹೇಗೆ? ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಿದೆ.  ಲಸಿಕೆ ಹಾಕುವಲ್ಲಿ ಉತ್ತರ ಕರ್ನಾಟಕದ ಜನರನ್ನು ಮಲತಾಯಿ ಮಕ್ಕಳಂತೆ ನೋಡಲಾಗುತ್ತಿದೆ. ಬೆಂಗಳೂರು ನಗರದಲ್ಲೂ ಲಸಿಕೆ ದಾಸ್ತಾನು ಕೊರತೆಯಿದೆ. ಜನ ಲಸಿಕೆಗಾಗಿ ಕ್ಯೂ ನಿಲ್ಲುವುದು ತಪ್ಪಿಲ್ಲ. ಅವಶ್ಯಕ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗಿಲ್ಲವಾದ ಕಾರಣ ದಿಲ್ಲಿಗೆ ಹೋಗುವುದಾಗಿ ಆರೋಗ್ಯ ಸಚಿವರು ಹೇಳುತ್ತಿದ್ದಾರೆ.  ಈ ಸರ್ಕಾರ ಈಗಲಾದರೂ ಎಚ್ಚೆತ್ತು ಬದ್ದತೆಯಿಂದ ಕೆಲಸ ಮಾಡುತ್ತಾ ನೋಡೋಣ” ಎಂದು ಶಿವಕುಮಾರ್ ಹೇಳಿದರು.

ಇದನ್ನು ಓದಿ: ಜುಲೈ 05 ರಿಂದ ಲಾಕ್ಡೌನ್‌ ನಿರ್ಬಂಧ ತೆರವು – ಯಾವುದೆಲ್ಲ ಸಡಿಲಿಕೆ, ಇಲ್ಲಿದೆ ಪೂರ್ಣ ಮಾಹಿತಿ

”ಕಾಂಗ್ರೆಸ್ ಪಕ್ಷದ ನಾಯಕರು ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನೇಷನ್‌ ಶಿಬಿರಗಳನ್ನು ನಡೆಸಿ, 1 ಲಕ್ಷ ಮಂದಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ. ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಲು ಅನುಮತಿ ಕೇಳಿದರೂ ಸರ್ಕಾರ ಕೊಡಲಿಲ್ಲ. ನಮ್ಮ ಸಹಾಯ ಅಗತ್ಯವಿಲ್ಲ ಎಂದರೆ ತೊಂದರೆ ಇಲ್ಲ. ಸರಕಾರವೇ ತ್ವರಿತವಾಗಿ ಎಲ್ಲರಿಗೂ ಲಸಿಕೆ ಹಾಕಿ ಜನರನ್ನು ರಕ್ಷಣೆ ಮಾಡಲಿ” ಎಂದು ಶಿವಕುಮಾರ್ ಹೇಳಿದರು.

ಲಸಿಕೆ ವಿತರಣೆ ಬಗ್ಗೆ ಸಮರೋಪಾದಿಯಲ್ಲಿ ಸರಕಾರ ಮುಂದಾಗಬೇಕೆಂದು ಸರಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್‌ ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು” ಎಂದು ಇದೇ ಸಂದರ್ಭದಲ್ಲಿ  ಡಿ.ಕೆ.ಶಿವಕುಮಾರ್ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *