ಪರಿಸ್ಥಿತಿ ಗಂಭೀರವಾಗಿಯೇ ಇದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು: ಸಿದ್ದರಾಮಯ್ಯ

ಮೈಸೂರು: ‘ಕೋವಿಡ್‌ ಲಸಿಕೆ ವಿಚಾರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ 5 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಇದೆ ಎನ್ನುತ್ತಿದ್ದಾರೆ. ಲಸಿಕೆ ದಾಸ್ತಾನ ಇದ್ದರೆ, ಜನರು ಕ್ಯೂ ನಿಂತು ಲಸಿಕೆ ಸಿಗದೆ ಸರ್ಕಾರಕ್ಕೆ ಶಾಪ ಹಾಕಿಕೊಂಡು ಹೋಗುತ್ತಿರುವುದು ಏಕೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ಅವರು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಭಿಪ್ರಾಯ ಪಡೆಯದೆ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಅವರು ತುದಿಗಾಲಲ್ಲಿ ನಿಂತಿರುವುದೇಕೆ?  ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡದ ಸರಕಾರ: ಡಿ.ಕೆ. ಶಿವಕುಮಾರ್

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ‌. ಸರಿಯಾದ ಸಿದ್ಧತೆ ಮಾಡಿಕೊಳ್ಳದೆ ಜನರು ಲಸಿಕೆಗಾಗಿ ಅಲೆಯುವಂತೆ ಮಾಡಿದ್ದಾರೆ ಎಂದು ದೂರಿದರು.

‘ಕೋವಿಡ್‌ ಸಾಂಕ್ರಾಮಿಕದ ಇಂದಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು. ಪಿಯುಸಿ ಪರೀಕ್ಷೆಯನ್ನೇ ರದ್ದು ಮಾಡಿರುವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾತ್ರ ಮಾಡುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಸಚಿವರಿಗೂ ಹೇಳಿದ್ದೇನೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಅಸಮಾಧಾನಗೊಂಡರು.

‘ಬಿ.ಎಸ್‌.ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಮನ್ವಯತೆಯೇ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ನನಗೆ ಗೊತ್ತೇ ಇಲ್ಲ ಎಂದು  ಆರೋಗ್ಯ ಸಚಿವರು ಹೇಳಿದರೆ, ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಚರ್ಚಿಸಿ ತೀರ್ಮಾನಿಸಲಾಗಿದೆ ಎನ್ನುತ್ತಾರೆ. ಸಚಿವ ಸುರೇಶ್ ಕುಮಾರ್‌ ಮತ್ತು ಸುಧಾಕರ್‌ ನಡುವೆಯೇ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ’ ಎಂದರು.

ಅಧಿವೇಶನ ಕರೆಯಿರಿ:

ʻರಾಜ್ಯದಲ್ಲಿ ಅತ್ಯಂತ್ರ ಪ್ರಮುಖವಾದ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಚರ್ಚೆ ಮಾಡಲು ಅಧಿವೇಶನ ಕರೆಯಬೇಕು. ಆದರೆ, ರಾಜ್ಯದ ಬಿಜೆಪಿ ಸರಕಾರಕ್ಕೆ ಅಧಿವೇಶನ ನಡೆಸಿದರೆ ಎಲ್ಲಿ ತಮ್ಮ ಬಣ್ಣ ಬಯಲಾಗುವುದೋ ಎಂಬ ಭಯ ಕಾಡುತ್ತಿದೆ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುದ ಬಿಜೆಪಿಯವರಿಗೆ ಪ್ರಜಾಪ್ರಭತ್ವದ ಮೇಲೆ ನಂಬಿಕೆ ಇಲ್ಲವಾಗಿದೆʼ ಎಂದು ಸಿದ್ದರಾಮಯ್ಯ ಅವರು ಕಿಡಿಕಾರಿದರು.

Donate Janashakthi Media

Leave a Reply

Your email address will not be published. Required fields are marked *