ಒಂದೇ ಕುಟುಂಬದ ಆರು ಜನರ ಸಾವು: ಸ್ಥಳಕ್ಕೆ ನಿಯೋಗ ಭೇಟಿ

ಯಾದಗಿರಿ : ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಒಂದೇ ಕುಟುಂಬದ ಆರು ಜನರ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇಲ್ಲಿಗೆ ಮಹಿಳಾ-ಕೃಷಿ ಕೂಲಿಕಾರರು ಮತ್ತು ರೈತ ಸಂಘಟನೆಯ ಮುಖಂಡರು ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿದರು.

ಮೃತ ಪಟ್ಟಿರುವವರು ಭೀಮರಾಯ್ ಸುರಪುರ,  ಶಾಂತಮ್ಮ ಇವರ ಕುಟುಂಬದ ಸದಸ್ಯರ ಪರಸ್ಥಿತಿಯ ಬಗ್ಗೆ ಭೇಟಿ ಮಾಡಿ ಸಾಂತ್ವನ ಹೇಳಲಾಯಿತು. ಮೃತ ಭೀಮರಾಯನ ವೃದ್ಧ ತಾಯಿ ಶರಣಮ್ಮ  (ತೊಂಬತ್ತಕ್ಕೂ ಹೆಚ್ಚು ವಯೋಮಾನವುಳ್ಳವರು) ಮತ್ತು ಮಗಳು ಚಂದ್ರಕಲಾ ಹಾಗೂ ಸಹೋದರ ಸಹೋದರಿಯರ ದುಃಖದ ಕಟ್ಟೆ ಒಡೆದು ಹೋಗಿತ್ತು. ಸಾಮೂಹಿಕವಾದ ಈ ದಾರುಣ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ಕೊಡುವ ಒತ್ತಡ ಹೇರಿ 26%-30% ವರೆಗೆ ಬಡ್ಡಿ ವಸೂಲಿ ಮಾಡಿ ಸಾಲಗಾರರನ್ನು ಇನ್ನಷ್ಟು ಸಂಕಟದ ಕೂಪಕ್ಕೆ ತಳ್ಳುತ್ತಿರುವುದು ನಿಯೋಗವು ಗಮನಿಸಿತು. NEXTRU RBL bank ಎಂಬ ಸಂಸ್ಥೆಯು ಮೃತ ಶಾಂತಾಬಾಯಿಗೆ ರೂ. 30,000 ಸಾಲ ಕೊಟ್ಟಿದೆ. ಸಾಲ ಕೊಡುವಾಗಲೇ 2,000 ರೂ ಬಡ್ಡಿ ಕಡಿತವೂ ಮಾಡಿಕೊಂಡಿದೆ. ಈ ಸಾಲವು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಲಾಯಿತು.

ತೀವ್ರ ಸಾಲದ ಹಿನ್ನೆಲೆಯಲ್ಲಿ  ಈ ಸಾವುಗಳು ಘಟಿಸಿವೆ. ಸರಕಾರವು ಇಂತಹ ಸಾವುಗಳಿಂದ ಜನತೆಯನ್ನು ರಕ್ಷಿಸಬೇಕಿದೆ. ಕೇರಳ ಸರಕಾರದ ಮಾದರಿಯಲ್ಲಿ ಖಾಸಗಿ ಮತ್ತು ಸರಕಾರಿ ಸಾಲವನ್ನು ಮನ್ನಾ ಮಾಡಬೇಕು.

ಇದನ್ನು ಓದಿ: ಲಾಕ್‍ಡೌನ್ ಪರಿಣಾಮ: ಸಾಲಬಾಧೆ ತಾಳದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಮೃತ ಭೀಮರಾಯ, ಶಾಂತಾಬಾಯಿ ದಂಪತಿಗಳ ಮಗಳೊಬ್ಬಳು ಮಾತ್ರ ಉಳಿದಿದ್ದಾಳೆ. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅವಳಿಗೆ ಉದ್ಯೋಗ ಕೊಡಲು ಸಾಧ್ಯವಾಗಬೇಕು. ಅವರ ವಯೋವೃದ್ಧ ತಾಯಿಗೆ ವೃದ್ಧಾಪ್ಯ ವೇತನವು ದೊರೆಯುವಂತೆ ಮಾಡಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ನಿಯೋಗವು ಆಗ್ರಹಿಸಿದೆ.

ನಿಯೋಗವು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಚೇರಿಗೂ ಭೇಟಿ ಮಾಡಿ. ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಚರ್ಚಿಸಲಾಯಿತು. ಕೂಡಲೇ ಸಾಮಾಜಿಕ ನ್ಯಾಯ ಸಮಿತಿ ಸಭೆ ಸೇರಿ ಸಾಮೂಹಿಕ ಸಾವಿನ ಕುರಿತು ಚರ್ಚಿಸಿ ಆ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಅಂಗನವಾಡಿ ಅಕ್ಕಂದಿರರ ಮೂಲಕ ಸ್ತ್ರೀ ಶಕ್ತಿ ಸಂಘಗಳನ್ನು ಪುನರುಜ್ಜೀವನಗೊಳಿಸಬೇಕೆಂದು ಆಗ್ರಹಿಸಲಾಯಿತು.

ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘ, ಸ್ವ ಸಹಾಯ ಸಂಘಗಳ ಪುನರುಜ್ಜೀವನ ಮಾಡಿ ಖಾಸಗಿ ಹಣಕಾಸು ಏಜೆನ್ಸಿಗಳ ಅಗಾಧ ಬಡ್ಡಿ ವಸೂಲಾತಿಯಿಂದ ಬಚಾವು ಮಾಡಬೇಕು. ಸರಕಾರಿ ಬ್ಯಾಂಕುಗಳಿಂದಲೇ ಜನತೆಗೆ ಸಾಲ ಸೌಲಭ್ಯ ದೊರಕುವಂತೆ ಕ್ರಮ ವಹಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಸಗರ ನಾಡಿನ ಬೆಳೆಗಳಾದ ಹತ್ತಿ, ತೊಗರಿ, ಭತ್ತ, ಶೇಂಗಾ ಮತ್ತು ತೋಟಗಾರಿಕೆ ಬೆಳೆಗಳಾದ ಹಣ್ಣು ಹಂಪಲಗಳ ಬೆಲೆಯ ತೀವ್ರ ಕುಸಿತದಿಂದ ರೈತರು ಸಾಲಗಾರರಾಗಿದ್ದಾರೆ, ಸಾಲ ಕಟ್ಟಲಾಗದೆ ಅಸಹಾಯಕರಾಗಿದ್ದಾರೆ ಮತ್ತು ಕಂಗಾಲಾಗಿದ್ದಾರೆ. ಇದಕ್ಕೆಲ್ಲ ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳೇ ಕಾರಣವಾಗಿವೆ. ಈ ಸಾವುಗಳು ಪ್ರಭುತ್ವದ ಹತ್ಯೆಗಳೇ ಆಗಿವೆ. ಇದಕ್ಕೆ ಕೇಂದ್ರ ಮತ್ತು ಸರಕಾರಗಳೇ ಹೊಣೆಯಾಗಿವೆ ಎಂದು ತಿಳಿಸಿದರು.

ನಿಯೋಗದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ ನೀಲಾ, ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಉಪಾಧ್ಯಕ್ಷರಾದ ಚನ್ನಪ್ಪ ಆನೆಗುಂದಿ, ಜಿಲ್ಲಾ ಕಾರ್ಯದರ್ಶಿ ಎಸ್ ಎಂ ಸಾಗರ್, ಕರ್ನಾಟಕ ಪ್ರಾಂತ ಕೃಷಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ದಾವುಲಸಾಬ್, ಸಿಐಟಿಯು ತಾಲ್ಲೂಕು ಸಂಚಾಲಕ ಮಲ್ಲಯ್ಯ ಪೋಲಂಪಳ್ಳಿ ಮುಂತಾದವರು ಭೇಟಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *