ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ಎ ಮಂಜು : ರೆಡ್‌ ಸಿಗ್ನಲ್‌ ನೀಡಿದ ಸಿದ್ಧರಾಮಯ್ಯ

ಅರಕಲಗೂಡು: ಅರಕಲಗೂಡು ಮಾಜಿ ಶಾಸಕ ಎ ಮಂಜು ಬಿಜೆಪಿಗೆ ಗುಡ್ ಬೈ ಹೇಳಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂಬು ಸುದ್ದಿ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದ್ದು  ಇಷ್ಟರಲ್ಲೆ ಘರ್ ವಾಪಸ್ಸಿಗೆ ವೇದಿಕೆ ಸಿದ್ಧಗೊಳ್ಳಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಪ್ರಸ್ತುತ ಹಾಸನ ಜಿಲ್ಲಾ ಬಿಜೆಪಿಯಲ್ಲಿ ಎ ಮಂಜು ಲಿಸ್ಟ್ ಗೆ ಇಲ್ಲ ಎನ್ನುವಂತಾಗಿದೆ. ಹಾಸನ ಜಿಲ್ಲಾ ಬಿಜೆಪಿಯಲ್ಲಿ ಹಿಡಿತ ಸಾಧಿಸಿರುವ ಶಾಸಕ ಪ್ರೀತಂಗೌಡ ಅವರ ಹಾಸನದ ಒಕ್ಕಲಿಗರ ಏಕಮಾತ್ರ ಬಿಜೆಪಿ ನಾಯಕ ಆಗುವ ಬಯಕೆಯಿಂದ ಎ ಮಂಜು ತತ್ತರಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರೂ ಪ್ರೀತಂಗೌಡರ ಕಾರಣದಿಂದ ಎ ಮಂಜುಗೆ ಕ್ಯಾರೇ ಎನ್ನುತ್ತಿಲ್ಲ. ಪ್ರಜ್ವಲ್ ರೇವಣ್ಣ ಎದುರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ಮಂಜು ರಾಜಕೀಯವಾಗಿ ಕಳೆದು ಹೋಗುತ್ತಿದ್ದಾರೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯದ್ದೆ ಎ ಮಂಜುಗೆ ಚಿಂತೆಯಾಗಿದೆ. ಅರಕಲಗೂಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತರೆ ಎ ಮಂಜುಗೆ ಸೋಲು ಖಚಿತ. ಇದೇ ಕಾರಣಕ್ಕೆ ಅವರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ.

ಎ ಮಂಜು ಘರ್ ವಾಪಸಿಗೆ ಡಿಕೆಶಿ ಯೆಸ್ ಅಂದಿದ್ದಾರೆ. ಆದರೆ ಘರ್ ವಾಪಸಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಎ ಮಂಜು ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ಪಕ್ಷ ಬಿಡದಂತೆ ಎಷ್ಟು ಮನವೊಲಿಸಿದರೂ ಕೇಳಲಿಲ್ಲ. ಜೊತೆಗೆ ಲೋಕಸಭೆ ಚುನಾವಣೆ ವೇಳೆ ಹಿಗ್ಗಾಮುಗ್ಗಾ ಜಾಡಿಸಿ ಈಗ ಮಂಜು ಪರವಾಗಿ ಪ್ರಚಾರ ಮಾಡಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪಣೆ ಮಾಡಿದ್ದಾರೆ ಎನ್ನಲಾಗಿದೆ. ಸಾಲದ್ದಕ್ಕೆ ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಕೂಡ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಎ ಮಂಜುಗೆ ಘರ್ ವಾಪಸಿಗೆ ಭಾರೀ ಹಿನ್ನಡೆ ಆಗುವ ಸಾಧ್ಯತೆಯೂ ಇದೆ.

ಸಿದ್ದರಾಮಯ್ಯ ಅವರು ಎ ಮಂಜು ಪಕ್ಷ ಸೇರ್ಪಡೆ ವಿರೋಧಿಸಲು ಮೂರು ಕಾರಣಗಳಿವೆ. ಹಾಲಿ ಜೆಡಿಎಸ್ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಮೇಲೆ ಸಿದ್ದರಾಮಯ್ಯಗೆ ಒಲವು ಇರುವುದು. ಎಟಿಆರ್ ಬಗ್ಗೆ ಸಾರ್ವಜನಿಕ ಅಭಿಪ್ರಾಯವೂ ಚೆನ್ನಾಗಿದೆ. ಜೊತೆಗೆ ರಾಜಕೀಯವಾಗಿಯೂ ಕ್ಲೀನ್ ಇಮೇಜ್ ಇದೆ. ಇವರನ್ನು ಕಾಂಗ್ರೆಸ್ ಗೆ ಕರೆ ತಂದು ಟಿಕೆಟ್ ಕೊಟ್ರೆ ಗೆಲುವು ಗ್ಯಾರಂಟಿ. ಆ ಬಳಿಕ ತಮ್ಮ ಜೊತೆಗೆ ನಿಲ್ಲುತ್ತಾರೆ ಎಂಬುದು ಸಿದ್ದರಾಮಯ್ಯ ಲೆಕ್ಕಚಾರ. ಒಂದು ವೇಳೆ ಎಟಿಆರ್ ಕೈ ಹಿಡಿಯದಿದ್ದರೆ ಅವರ ಆಪ್ತ ಶಿಷ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವ ಉದ್ದೇಶ ಅವರಿಗೆ ಇದೆ. ಇದೇ ಕಾರಣಕ್ಕೆ ಎ ಮಂಜು ಘರ್ ವಾಪಸಿಗೆ ಸಿದ್ದರಾಮಯ್ಯ ಅವರು ವಿರೋಧ ತೋರುತ್ತಿದ್ದಾರೆ. ಸಿದ್ದರಾಮಯ್ಯ ವಿರೋಧದಿಂದ ಎ ಮಂಜು ಕಂಗಾಲಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ಎ ಮಂಜು ಆಪ್ತರನ್ನು ಕಳಿಸಿಕೊಟ್ಟಿದ್ದರು. ಮತ್ತೆ ಮಂಜುರನ್ನು ಪಾರ್ಟಿಗೆ ತೆಗೆದುಕೊಳ್ಳಿ ಎಂದು ಮನವಿ ಮಾಡಿಸಿದ್ದರು. ಆದರೆ, ಎ ಮಂಜು ಘರ್ ವಾಪಸಿಗೆ ಸದ್ಯಕ್ಕೆ ಸಿದ್ದರಾಮಯ್ಯ ಅವರು ರೆಡ್ ಸಿಗ್ನಲ್ ಕೊಟ್ಟಿದ್ದಾರೆ. ಎ ಮಂಜು ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದರು ಸಿದ್ದರಾಮಯ್ಯ ವಿರೋಧದಿಂದಾಗಿ ಅದು ಜಟಿಲವಾಗುತ್ತಿದೆ. ಒಂದೆಡೆ ಬಿಜೆಪಿಯಲ್ಲಿನ ನಾಯಕರು ಅಸ್ತಿತ್ವಕ್ಕಾಗಿ ಬಡಿದಾಟ ಆರಂಭಿಸಿದ್ದರೆ ಇತ್ತ ಎ.ಮಂಜು ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು  ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ. ಏನಾಗಬಹುದು ಕಾದು ನೋಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *