ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯ ನಂತರ ಚುನಾವಣೆ ನಡೆಸಲಾಗುವುದು. ಚುನಾಯಿತ ಸರ್ಕಾರ ಇದ್ದರೆ ಅಭಿವೃದ್ಧಿಗೆ ವೇಗ ದೊರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಪೀಪಲ್ಸ್ ಕಾನ್ಫರೆನ್ಸ್ ಮುಖಂಡ ಮುಜಪ್ಫರ್ ಹುಸೇನ್ ಬೇಗ್ ಹೇಳಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಗುರುವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಬಹಳಷ್ಟು ವಿಷಯಗಳು ಚರ್ಚೆಯಾಗಿವೆ. ಇದೇ ವೇಳೆ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದ್ದು ಜಮ್ಮು ಮತ್ತು ಕಾಶ್ಮೀರದ ಒಂದು ಸಾವು ಕೂಡ ನೋವು ಉಂಟು ಮಾಡುತ್ತದೆ. ಯುವ ಪೀಳಿಗೆಯನ್ನು ರಕ್ಷಿಸುವುದು ನಮ್ಮೆಲ್ಲರ ಸಾಮೂಹಿಕ ಕರ್ತವ್ಯವಾಗಿದೆ. ಯುವಜನತೆಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ ಎಂದು ಹುಸೇನ್ ಬೇಗ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ನಂತರ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರದ ನಾಯಕರ ನಡುವೆ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ಮಾತುಕತೆ ಇದಾಗಿದೆ.
‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ಮರಳಿ ನೀಡಬೇಕು.370 ನೇ ವಿಧಿ ಮರುಸ್ಥಾಪನೆಯಾಗಬೇಕು. ಜಮ್ಮು – ಕಾಶ್ಮೀರ ಜನರ ಭೂ ಹಕ್ಕು ರಕ್ಷಣೆಯಾಗಬೇಕು. ಗೃಹಬಂಧನದಲ್ಲಿರುವ ನಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಗುಪ್ಕಾರ್ ಕೂಟದ ಸದಸ್ಯರೂ ಸೇರಿದಂತೆ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೂ ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಲಿರುವ ನಾಯಕರಲ್ಲಿ ಕಾಂಗ್ರೆಸ್ ನ ಗುಲಾಮ್ ನಬಿ ಆಜಾದ್, ತಾರಾ ಚಂದ್ ಮತ್ತು ಜಿ.ಎ.ಮಿರ್, ರಾಷ್ಟ್ರೀಯ ಸಮ್ಮೇಳನದ ಡಾ.ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಜೆ-ಕೆ ಅಪ್ನಿ ಪಕ್ಷದ ಅಲ್ತಾಫ್ ಬುಖಾರಿ, ಬಿಜೆಪಿಯ ರವೀಂದರ್ ರೈನಾ, ನಿರ್ಮಲ್ ಸಿಂಗ್ ಮತ್ತು ಕವಿಂದರ್ ಗುಪ್ತಾ, ಸಿಪಿಐ (ಎಂ) ನ ಎಂ ವೈ ತರಿಗಮಿ, ನ್ಯಾಷನಲ್ ಪ್ಯಾಂಥರ್ಸ್ ಪಕ್ಷದ ಪ್ರೊಫೆಸರ್ ಭೀಮ್ ಸಿಂಗ್ ಮತ್ತು ಪೀಪಲ್ಸ್ ಕಾನ್ಫರೆನ್ಸ್‌ನ ಸಜಾದ್ ಗಣಿ ಲೋನ್, ಕೇಂದ್ರ ಗೃಹಸಚಿವ ಅಮಿತ್ ಶಾ,ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.