ನವದೆಹಲಿ: ಹರಿಯಾಣ- ದಿಲ್ಲಿ ಗಡಿಯಲ್ಲಿರುವ ಗೋಲ್ಡನ್ ಹಟ್ ಡಾಬಾಗೆ ತಲುಪುವ ಎಲ್ಲಾ ಮಾರ್ಗಗಳನ್ನೂ ಅಲ್ಲಿನ ಪ್ರಭುತ್ವ ಬಂದ್ ಮಾಡಿ ಬ್ಯಾರಿಕೇಡುಗಳನ್ನು ಹಾಕಿದೆ. ಇದಕ್ಕೆ ಕಾರಣ ಆ ಡಾಬಾದ ಮಾಲೀಕ ರಾಮ್ ಸಿಂಗ್ ರಾಣಾ ದಿಲ್ಲಿ ಗಡಿಯಲ್ಲಿ ಚಳವಳಿ ನಿರತ ರೈತರಿಗೆ ಹಾಲು ವಗೈರಿ ಪೂರೈಸುತ್ತಿದ್ದಾನೆ. ಗೋಧಿ ಮಿಲ್ ಮಾಡಿಕೊಳ್ಳಲು ಆತನ ಡಾಬಾದಲ್ಲಿ ಅನುವು ಮಾಡಿಕೊಟ್ಟಿದ್ದಾನೆ.
ಸರ್ಕಾರದ ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ರೈತರು ಕಳೆದ ಆರೇಳು ತಿಂಗಳುಗಳಿಂದ ಚಳವಳಿ ನಡೆಸುತ್ತಿರುವುದು ಅವರ ಸಂವಿಧಾನಬದ್ಧ ಹಕ್ಕು. ಆ ಹಕ್ಕನ್ನು ಯಾರೂ ಮೊಟಕುಗೊಳಿಸುವಂತಿಲ್ಲ. ಆದಾಗ್ಯೂ ಚಳುವಳಿ ನಿರತ ರೈತರನ್ನು ಚದುರಿಸಲು ಸರ್ಕಾರ ಏನೆಲ್ಲಾ ಮಾಡಿದೆ, ಮಾಡುತ್ತಿದೆ ಎಂಬುದಕ್ಕೆ ಇಡೀ ದೇಶ ಸಾಕ್ಷಿಯಾಗಿದೆ. ಅದನ್ನು ಮತ್ತೆ ಮತ್ತೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಅದೇ ರೀತಿ ಚಳವಳಿನಿರತ ರೈತರಿಗೆ ನೆರವು ನೀಡುತ್ತಿರುವ ರಾಮ್ ಸಿಂಗ್ ರಾಣಾ ಕೂಡಾ ಕಾನೂನಾತ್ಮಕವಾಗಿ ಯಾವುದೇ ತಪ್ಪು ಮಾಡಿಲ್ಲ. ಆದಾಗ್ಯೂ ಆತನ ಡಾಬಾಗೆ ತೆರಳುವ ರಸ್ತೆಗಳನ್ನು ಬಂದ್ ಮಾಡುವ ಅಲ್ಲಿನ ಪ್ರಭುತ್ವ ಅನುಸರಿಸುತ್ತಿರುವ ಕ್ರಮವನ್ನು ಏನೆಂದು ಕರೆಯಬೇಕು? ಇದು ಅಘೋಷಿತ ತುರ್ತುಪರಿಸ್ಥಿತಿಯೇ?
ಕಳೆದ ವರ್ಷ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮೂರು ಕರಾಳ ಕೃಷಿ ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ತಂದ ಹಿನ್ನೆಲೆಯಲ್ಲಿ ದೇಶದಾದ್ಯಂತ ರೈತರು ಕಾಯಿದೆಗಳನ್ನು ವಿರೋಧಿಸಿ ಚಳವಳಿ ನಡೆಸಿದರು. ಈಗ್ಗೆ ಏಳು ತಿಂಗಳ ಹಿಂದೆ ದಿಲ್ಲಿ ಚಲೋ ಚಳವಳಿ ಮಾಡಲು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆಎಂ) ಮುಂದಾಯಿತು. ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡಲು ಕನಿಷ್ಟ ಬೆಂಬಲ ಬೆಲೆಗೆ (ಅ2+50%) ಕಾನೂನಾತ್ಮಕಗೊಳಿಸಬೇಕೆಂಬ ಬೇಡಿಕೆಯೂ ಸೇರಿದಂತೆ ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕೆಂಬ ಹಕ್ಕೊತ್ತಾಯದೊಂದಿಗೆ ಈ ಚಳವಳಿ ಆರಂಭವಾದದ್ದು. ಆಗ ರೈತರು ದಿಲ್ಲಿ ತಲುಪುವ ಮಾರ್ಗದಲ್ಲಿ ರಸ್ತೆಗಳನ್ನು ಕಡಿದದ್ದೇನು, ರಸ್ತೆಗೆ ಬೇಲಿ ಹಾಕಿದ್ದೇನು, ವಾಟರ್ ಜೆಟ್ ಗಳನ್ನು ಸಿಡಿಸಿದ್ದೇನು, ಲಾಠಿ ಪ್ರಯೋಗಿಸಿದ್ದೇನು? ಹೀಗೆ ಅನೇಕ ವಿಧವಾಗಿ ಶಾಂತಿಯುತ ಜಾಥಾದಲ್ಲಿ ನಡೆಯುತ್ತಿದ್ದ ರೈತರನ್ನು ಚದುರಿಸಲು ಭಾಜಪ ಸರ್ಕಾರ ಪ್ರಯತ್ನಿಸಿತು. ಆದರೂ ರೈತರು ಜಗ್ಗಲಿಲ್ಲ. ದಿಲ್ಲಿಯ ಗಡಿಗಳಲ್ಲಿ ಭದ್ರವಾಗಿ ಕೂತರು. ಟೆಂಟುಗಳನ್ನು ನಿರ್ಮಿಸಿ ಅಲ್ಲಿಯೇ ವಾಸ, ಚಳವಳಿ ಮುಂದುವರೆಸಿದರು.
ರೈತ ಸಂಘಟನೆಗಳ ಒಕ್ಕೂಟವನ್ನು ಒಡೆಯಲು ಇನ್ನಿಲ್ಲದ ಪ್ರಯತ್ನಗಳು ನಡೆದವು, ಇನ್ನೂ ನಡೆಯುತ್ತಿವೆ. ಇವೆಲ್ಲದರ ನಡುವೆಯೇ ಚಳವಳಿ ಮಾತ್ರ ತಣ್ಣಗೆ ಮುಂದುವರೆಯುತ್ತಿದೆ. ದಿನೇ ದಿನೇ ಗಟ್ಟಿಗೊಳ್ಳುತ್ತಿದೆ. ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಭತ್ತ ನಾಟಿ ಕಾರ್ಯ ಶೇ.65 ರಿಂದ 70 ರಷ್ಟು ಮುಗಿದಿರುವ ಹಿನ್ನೆಲೆಯಲ್ಲಿ ಸಾವಿರಾರು ರೈತರು ಮೊನ್ನೆಯಷ್ಟೇ ದಿಲ್ಲಿ ಗಡಿಗಳಿಗೆ ತಲುಪಿದ್ದಾರೆ.
ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ ಘೋಷಣೆಯ ಈ ಕಾರ್ಯಕ್ರಮ ಜೂನ್ 26 ರಂದೇ ಆಯೋಜನೆಗೊಂಡಿರುವುದಕ್ಕೆ ಐತಿಹಾಸಿಕ ಕಾರಣವಿದೆ. ಇದೇ ಜೂನ್ 26ಕ್ಕೆ ಭಾರತದಲ್ಲಿ ಎಮೆರ್ಜೆನ್ಸಿ ಹೇರಿ 46 ವರ್ಷವಾಯಿತು. (1975 ಜೂನ್ 25 ಮಧ್ಯರಾತ್ರಿ). ಈಗ ಅಘೋಷಿತ ತುರ್ತುಪರಿಸ್ಥಿತಿಯಲ್ಲೇ ಇದ್ದೇವೆ.
ಕಾಲಕಾಲಕ್ಕೆ ಚಳವಳಿಯ ಕಾರ್ಯಕ್ರಮಗಳನ್ನು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಿಸುತ್ತಾ ಬರುತ್ತಿದೆ. ಅದರಂತೆ ದೇಶದಾದ್ಯಂತ ರೈತ ಸಂಘಟನೆಗಳು ಆಯಾ ಭಾಗದಲ್ಲಿ/ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದೀಗ ಇದೇ ಜೂನ್ 26 ರಂದು ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ ಘೋಷಣೆಯೊಂದಿಗೆ ದೇಶದಾದ್ಯಂತ ಜಾಥಾಗಳನ್ನು ಏರ್ಪಡಿಸಲು ಎಸ್ ಕೆಎಂ ಕರೆಕೊಟ್ಟಿದೆ. ರೈತರು ಸಭೆಗಳನ್ನು ನಡೆಸಿ ಜಾಥಾ ಮೂಲಕ ಆಯಾ ರಾಜ್ಯದ ರಾಜ್ಯಪಾಲರ ಕಚೇರಿಗೆ ತೆರೆಳಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ರಾಜ್ಯಪಾಲರಿಗೆ ಕೊಡುವುದು ಈ ಚಳವಳಿಯ ಭಾಗವಾಗಿದೆ. ಆ ಕೆಲಸ ಎಲ್ಲಾ ರಾಜ್ಯಗಳಲ್ಲಿಯೂ ನಡೆಯುತ್ತದೆ.