ತಮಿಳುನಾಡು ಆರ್ಥಿಕ ಪುನಶ್ಚೇತನ ಸಲಹಾ ಸಮಿತಿ ರಚನೆ: ಸಮಿತಿಯಲ್ಲಿ ರಘುರಾಮ್ ರಾಜನ್, ಎಸ್ತರ್ ಡುಫ್ಲೊ, ಅರವಿಂದ್ ಸುಬ್ರಹ್ಮಣಿಯನ್

ಚೆನ್ನೈ: ತಮಿಳುನಾಡಿನ ರಾಜ್ಯ ಸರಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಸಮಿತಿಯೊಂದನ್ನು ಡಿಎಂಕೆ ನೇತೃತ್ವದ ಎಂ.ಕೆ. ಸ್ಟಾಲಿನ್‌ ಅವರ ಸರಕಾರ ರಚನೆ ಮಾಡಿದೆ.  ಈ ಆರ್ಥಿಕ ಸಲಹಾ ಸಮಿತಿಯಲ್ಲಿ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ, ಅಮೆರಿಕದ ಎಂಐಟಿಯ ಪ್ರೊಫೆಸರ್ ಎಸ್ತರ್ ಡುಫ್ಲೊ, ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣಿಯನ್, ಅಭಿವೃದ್ಧಿ ಆರ್ಥಿಕ ತಜ್ಞ ಪ್ರೊಫೆಸರ್ ಜೀನ್ ಡ್ರೀಜ್,  ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಡಾ. ಎಸ್. ನಾರಾಯಣ್ ಇರಲಿದ್ದಾರೆ.

ರಾಜ್ಯದ 16ನೇ ಶಾಸನಸಭೆಯ ಮೊದಲ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸರ್ಕಾರದ ಈ ನಿರ್ಧಾರವನ್ನು ಪ್ರಕಟಿಸಿದರು. ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಆರ್ಥಿಕ ತಜ್ಞರ ನೆರವು, ಸಲಹೆಗಳನ್ನು ಪಡೆಯುವುದಕ್ಕೆ ಡಿಎಂಕೆ ಸರ್ಕಾರ ಮುಂದಾಗಿದೆ.

“ಸರ್ಕಾರ ತಮಿಳುನಾಡನ್ನು ಸ್ವಾಭಿಮಾನ, ಸಬಲ ನಾಗರಿಕರ, ಎಲ್ಲಾ ರೀತಿಯಲ್ಲೂ ಸಮೃದ್ಧವಾಗಿ ನಿರ್ಮಿಸುವ ಪೆರಿಯಾರ್ ಕಲ್ಪನೆಯ ಸಮಾಜದ ರಾಜ್ಯವನ್ನಾಗಿ ಮಾಡುವುದಕ್ಕೆ ನಿರ್ಧರಿಸಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಆರ್ಥಿಕ ಸಲಹಾ ಸಮಿತಿ ಶಿಫಾರಸು ಮಾಡಿದ ಕ್ರಮಗಳ ಅನ್ವಯ ರಾಜ್ಯದಲ್ಲಿ ಆರ್ಥಿಕ ಪುನರುಜ್ಜೀವನ ಮಾಡಲು ಸರ್ಕಾರ ಮುಂದಾಗಲಿದೆ. ಹಾಗೇ, ಆರ್ಥಿಕ ಅಭಿವೃದ್ಧಿಯ ಅನುಕೂಲಗಳು ಸಮಾಜದ ಎಲ್ಲ ವಿಭಾಗಗಳಿಗೂ ತಲುಪುವಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದಿದ್ದಾರೆ.

ಬಲಿಷ್ಠ ರಾಜ್ಯಗಳಿಗೆ ಬಲಿಷ್ಠ ಒಕ್ಕೂಟಗಳ ಸೃಷ್ಟಿಯ ಅಗತ್ಯವಿದೆ. ರಾಜ್ಯಗಳ ಹಕ್ಕುಗಳ ರಕ್ಷಣೆಗೆ ಹಾಗೂ ಇಂತಹ ಹಕ್ಕುಗಳಿಗೆ ಹಸ್ತಕ್ಷೇಪ ಮಾಡುವುದನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಇದೇ ವೇಳೆ ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನೂ ಬಲಿಷ್ಠಗೊಳಿಸಿ, ಪುನಶ್ಚೇತನ ನೀಡುವ ಭರವಸೆಯನ್ನೂ ಸರ್ಕಾರ ನೀಡಿದೆ.

ಸಲಹಾ ಸಮಿತಿಯಲ್ಲಿರುವ ರಘುರಾಮ್​ ರಾಜನ್ ಅವರು 2013ರಿಂದ 2016ರವರೆಗೆ ಆರ್​ಬಿಐನ ಗವರ್ನರ್​ ಆಗಿದ್ದರು. ಅದಕ್ಕೂ ಮೊದಲು ಇದ್ದ ಕಾಂಗ್ರೆಸ್​ ಸರ್ಕಾರದಲ್ಲಿ ಮನಮೋಹನ್​ ಸಿಂಗ್​ ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು.

ಅರವಿಂದ್ ಸುಬ್ರಹ್ಮಣಿಯನ್ ಅವರು 2014 ರಿಂದ 2018ರವರೆಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು.

ಎಸ್ತರ್ ಡುಫ್ಲೋ, ಫ್ರೆಂಚ್-ಅಮೇರಿಕನ್​ ಅರ್ಥಶಾಸ್ತ್ರಜ್ಞರಾಗಿದ್ದಾರೆ. ನೊಬೆಲ್​ ಪುರಸ್ಕೃತ ಅಭಿಜಿತ್​ ಬ್ಯಾನರ್ಜಿಯವರ ಪತ್ನಿಯಾದ ಡುಫ್ಲೋ, ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ಬಡತನ ನಿವಾರಣೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಬೋಧನೆ ಮಾಡುವ ಪ್ರಾಧ್ಯಾಪಕರು. 2003ರಲ್ಲಿ ಸ್ಥಾಪನೆಯಾದ ಅಬ್ದುಲ್ ಲತೀಫ್​ ಜಮೀಲ್ ಪವರ್ಟಿ ಆ್ಯಕ್ಷನ್​ ಲ್ಯಾಬ್​ನ ಸಹ ಸಂಸ್ಥಾಪಕಿ ಮತ್ತು ಸಹ ನಿರ್ದೇಶಕಿಯಾಗಿದ್ದಾರೆ.

ಜೀನ್ ಡ್ರೆಜ್ ಮತ್ತು ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಎಸ್. ನಾರಾಯಣ್ ಕೂಡ ಆರ್ಥಿಕತೆ ಅಧ್ಯಯನ, ವಿಶ್ಲೇಷಣೆಯಲ್ಲಿ ಪಳಗಿದವರು.

ಕೇಂದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ಅಗ್ರಗಣ್ಯ ಆರ್ಥಿಕ ತಜ್ಞರನ್ನು ಒಳಗೊಂಡ ಆರ್ಥಿಕ ಸಲಹಾ ಸಮಿತಿಯನ್ನು ತಮಿಳುನಾಡು ಸರ್ಕಾರ ರಚಿಸಿದೆ.

Donate Janashakthi Media

Leave a Reply

Your email address will not be published. Required fields are marked *