ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಒಣ ಮೆಣಸಿನ ಕಾಯಿ ಬೆಳೆಯನ್ನು ವ್ಯಾಪಕವಾಗಿ ಬೆಳೆಯಲು ರಾಜ್ಯದ ರೈತರು ಉತ್ಸುಕರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಹಿಂದಿನ ದಿನ ಮಾನಗಳಿಗೆ ಹೋಲಿಸಿದರೇ ಸ್ವಲ್ಪ ಮಟ್ಟಿಗೆ ಹೆಚ್ಚಿನ ಇಳುವರಿ ಹಾಗೂ ಪರವಾಗಿಲ್ಲ ಎಂಬಂತ ದರವೂ ಸಿಗುತ್ತಲಿರುವುದರಿಂದ ಮತ್ತು ಇತರೆ ಬೆಳೆಗಳಿಗೆ ಹೋಲಿಸಿದರೇ, ಈ ಎರಡೂ ರೀತಿಯಲ್ಲೂ ಇದು ಪರವಾಗಿಲ್ಲ ಎಂಬ ಭಾವನೆ ರೈತ ಬೆಳೆಗಾರರಲ್ಲಿ ಇದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ರಾಜ್ಯ ಸಮಿತಿಯು ತಿಳಿಸಿದೆ.
ಇತ್ತೀಚಿಗೆ ಬಳ್ಳಾರಿ ಜಿಲ್ಲೆಯ ತೋಟಗಾರಿಕೆ ಕಚೇರಿ ಮುಂಭಾಗ ರೈತರು ಮೆಣಸಿಕಾಯಿ ಬೀಜ ಖರೀದಿಗೆ ಬಂದಿದ್ದ ಸಂದರ್ಭದಲ್ಲಿ ಏಕಾಏಕಿ ನೂಕು ನುಗ್ಗಲು ಉಂಟಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿತ್ತು. ಈ ಬಗ್ಗೆ ಕೆಪಿಆರ್ಎಸ್ ಸಂಘಟನೆಯು ಮೆಣಸಿನಕಾಯಿ ಬೀಜದ ಕಾಳಸಂತೆ ಮಾರಾಟ ತಡೆಯಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದೆ.
ಇದನ್ನು ಓದಿ: ಜೂನ್ 26ರಂದು ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ: ಎಸ್ಕೆಎಂ ಕರೆ
ಕೆಪಿಆರ್ಎಸ್ ರಾಜ್ಯಾಧ್ಯಕ್ಷರಾದ ಜಿ ಸಿ ಬಯ್ಯಾರೆಡ್ಡಿ ಅವರು ʻʻಈ ಬಾರಿ ರಾಜ್ಯದಾದ್ಯಂತ ಬಹಳ ಮುಖ್ಯವಾಗಿ ಉತ್ತರ ಕರ್ನಾಟಕದ ತುಂಗಭದ್ರ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಈ ಬೆಳೆಯ ಪ್ರದೇಶವು ದ್ವಿಗುಣಗೊಳ್ಳುವಂತಾಗಿದೆ. ಈ ರೀತಿ, ಈ ಬೆಳೆಯ ಕಡೆ ಹರಿದು ಬರುವ ರೈತರ ಪ್ರವಾಹವನ್ನು ಗಮನಿಸಿ ಮೆಣಸಿನಕಾಯಿ ಬೀಜ ಉತ್ಪಾದಕ ಕಂಪನಿಗಳು, ಕಾಳಸಂತೆಕೋರ ವ್ಯಾಪಾರಿಗಳು, ಮಾರುಕಟ್ಬೆಯಲ್ಲಿ ಬೀಜದ ಕೃತಕ ಅಭಾವ ಸೃಷ್ಠಿ ಮಾಡಿ, ಕಾಳಸಂತೆ ವ್ಯಾಪರದಲ್ಲಿ ತೊಡಗಿವೆ. ಪರಿಣಾಮವಾಗಿ, ಬೀಜದ ಅಭಾವದಿಂದಾಗಿ ಅಕ್ರೋಶಿತರಾದ ರೈತರ ಮೇಲೆ ಲಾಠಿ ಪ್ರಹಾರ ಮಾಡುವಂತಹ ಪರಿಸ್ಥಿತಿ ಬಳ್ಳಾರಿಯಲ್ಲಿ ಇತ್ತೀಚಿಗೆ ನಡೆದಿರುವುದು ಖಂಡನೀಯʼʼ ಎಂದು ತಿಳಿಸಿದ್ದಾರೆ.
ಮೆಣಸಿನ ಕಾಯಿ ಬೀಜ ಮಾರಾಟ ಮಾಡುವ ಸಿಜೆಂಟಾ ಕಂಪನಿಯು ತಳಿ 5531 ಕ್ಕೆ ನಿಗದಿಸಲಾದ ಗರಿಷ್ಠ ಮಾರಾಟ ಬೆಲೆ ಕ್ವಿಂಟಾಲ್ ಒಂದಕ್ಕೆ 76,000 ರೂ. ಗಳೆಂದಿದ್ದರೂ, ಅದು ಹೊರಗಡೆ 92,000 ರೂ. ಗಳಂತೆ ಮಾರಾಟವಾಗುತ್ತದೆ. ಅದೇ ರೀತಿ, ಅದೇ ಕಂಪನಿಯ ಮತ್ತೊಂದು ತಳಿ 2043, ಇದರ ಗರಿಷ್ಠ ಮಾರಾಟ ಬೆಲೆ 87,000 ರೂ ಗಳೆಂದಿದ್ದರೂ ಅದು ಹೊರಗಡೆ 1,51,000 ರೂಗಳಿಗೆ ಮಾರಾಟ ವಾಗುತ್ತದೆ. ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕೊಂದರಲ್ಲೆ ಸುಮಾರು 71,000 ಹೆಕ್ಟಾರ್ ಅಥವಾ 1,77,000 ಎಕರೆ ಪ್ರದೇಶದಲ್ಲಿ ಈ ತಳಿಗಳಿಗೆ ಬೇಡಿಕೆ ಇದೆಯೆಂದು ತೋಟಗಾರಿಕೆ ಇಲಾಖೆ ಗುರುತಿಸಿದೆ. ವಾಸ್ತವದಲ್ಲಿ ಅದಕ್ಕೂ ಹೆಚ್ಚಿದೆ ಎಂದು ವಿವರಿಸಿದರು.
ಅಷ್ಟನ್ನೇ ಅಂದಾಜಿಸಿದರೂ, ತಲಾ ಎಕರೆಗೆ 100 ಗ್ರಾಂ ಬಿತ್ತನೆ ಬೀಜ ಅಗತ್ಯವೆಂದು ಪರಿಗಣಿಸಿದರೂ ಕೇವಲ ಈ ಪ್ರದೇಶಕ್ಕೆ 1770 ಕ್ವಿಂಟಾಲ್ ಬೀಜಗಳ ಅವಶ್ಯಕತೆ ಇದೆ. ಕೇವಲ ಈ ಒಂದು ತಾಲೂಕಿನಿಂದಲೇ ತಳಿ 5531 ಕ್ಕೆ ಕಾಳ ಸಂತೆಯಂತೆ 15.40 ಕೋಟಿ ವಹಿವಾಟು ನಡೆಯಲಿದೆ. ಹಾಗೆ ತಳಿ 2043 ಕ್ಕೆ ಸುಮಾರು 27 ಕೋಟಿ ವಹಿವಾಟಾಗಲಿದೆ.
ಆದರೇ, ವಾಸ್ತವಿಕವಾಗಿ ಮೆಣಸಿನ ಕಾಯಿ ಬೀಜದ ಗರಿಷ್ಠ ಮಾರಾಟ ಬೆಲೆಯೇ ಬಹಳ ದೊಡ್ಡದಿದೆ. ಬೀಜ ಉತ್ಪಾದನೆ ಮತ್ತು ಅದರ ಸಂಸ್ಕರಣೆ ಎಲ್ಲಾ ಸೇರಿದರೂ ತಲಾ ಕ್ವಿಂಟಾಲ್ ಗೆ 25,000 ರೂ.ಗಳು ದಾಟದಾಗಿದೆ. ಹೀಗೆ, ಪ್ರತಿ ಎಕರೆಗೆ ಬೇಕಾದ 100 ಗ್ರಾಂ ಬೀಜಗಳ ಬೆಲೆ 250 ರೂ.ಗಳಿಗೂ ಕಡಿಮೆ ಇರುವಾಗ, ಕಾಳಸಂತೆಯಲ್ಲಿ ಅದು ಕ್ರಮವಾಗಿ 870 ಹಾಗೂ 1571 ರೂ. ಗಳಿಗೆ ಮಾರಾಟವಾಗಲು ಬಿಟ್ಟಿರುವುದು ಅತ್ಯಂತ ಹೇಯವಾಗಿದೆ.
ಇಂತಹ ಬೀಜ ಕಂಪನಿಗಳ ಲೂಟಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವುಗಳ ವಹಿವಾಟನ್ನು ನಿಯಂತ್ರಣ ಮುಕ್ತಗೊಳಿಸಿರುವುದು ಮತ್ತು ಕಾಳ ಸಂತೆಗೆ ಕ್ರಮವಹಿಸಲು ಬಿಟ್ಟಿರುವುದು ಎಲ್ಲವೂ, ಬೀಜ ಕಂಪನಿಗಳು ರೈತರನ್ನು ವ್ಯಾಪಕವಾಗಿ ಕೊಳ್ಳೆ ಹೊಡೆಯಲು ನೆರವಾಗಿವೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಅವರು ʻʻಸರಕಾರಗಳ ಇಂತಹ ರೈತ ವಿರೋಧಿ ಹಾಗೂ ಲೂಟಿಕೋರ ಕಂಪನಿಗಳ ಪರವಾದ ನಡೆಗಳನ್ನು ಬಲವಾಗಿ ಖಂಡಿಸುತ್ತದೆ ಮತ್ತು ಕೃಷಿ ಲಾಗುವಾಡುಗಳಾದ ಬೀಜ, ಗೊಬ್ಬರ, ಕ್ರಿಮಿನಾಶಕ ಹಾಗೂ ಯಂತ್ರೋಪಕರಣಗಳ ಬೆಲೆಗಳು ಹಾಗೂ ವ್ಯಾಪಾರದ ಮೇಲೆ ಈ ಹಿಂದಿನಂತೆಯೇ ಸಾರ್ವಜನಿಕ ನಿಯಂತ್ರಣವನ್ನು ಮುಂದುವರೆಸಲು ಮತ್ತು ಕಾಳಸಂತೆಯ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಲು ಬಲವಾಗಿ ಒತ್ತಾಯಿಸುತ್ತದೆ ಎಂದು ಹೇಳಿದರು.
ತಕ್ಷಣವೇ ಬೀಜದ ಬೆಲೆಗಳನ್ನು ವೈಜ್ಞಾನಿಕವಾಗಿ ಲೆಕ್ಕಿಸಿ ನಿಗದಿಸಲು ಮತ್ತು ಅಂತಹ ಲೆಕ್ಕಿಸಿದ ವಿಧಾನವು ಸಾರ್ವಜನಿಕರ ಗಮನಕ್ಕೆ ತರುವಂತೆ ಅಗತ್ಯ ಪಾರದರ್ಶಕ ಕ್ರಮಗಳನ್ನು ವಹಿಸಬೇಕು. ಸರಕಾರವೇ ತನ್ನ ಏಜೆನ್ಸಿಗಳ ಮೂಲಕ ಕಡಿಮೆ ಬೆಲೆಗೆ ಬೀಜಗಳು ದೊರೆಯುವಂತೆ ಕ್ರಮವಹಿಸಲು ಮತ್ತು ಅದಕ್ಕಾಗಿ ಬಜೆಟ್ ನಲ್ಲಿ ಅಗತ್ಯ ಅನುದಾನ ಒದಗಿಸಲು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.