ಟಿ.ಎಲ್.ಕೃಷ್ಣೇಗೌಡ
ನಾವು ಉತ್ತರ ಕಂಡುಕೊಳ್ಳಲೇಬೇಕಾದ ಪ್ರಶ್ನೆ ಏನೆಂದರೆ, ಎಲ್ಲರಿಗೂ ಯಾವಾಗ ಲಸಿಕೆ ನೀಡಲಾಗುತ್ತದೆ ಎಂಬುದು. ಎಲ್ಲರಿಗೂ ಲಸಿಕೆ ನೀಡಬೇಕಾದ ಅಗತ್ಯ ಏಕೆಂದರೆ, ಲಸಿಕೆ ಪಡೆಯದ ಒಂದು ಸಣ್ಣ ಜನ ವಿಭಾಗ ಉಳಿದರೂ ಲಸಿಕೆ ಪಡೆದವರೂ ಸುರಕ್ಷಿತವಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ, ಎಷ್ಟೇ ಶ್ರೀಮಂತ ದೇಶದಲ್ಲಿದ್ದರೂ ಲಸಿಕೆಯಿಂದ ವಂಚಿತರಾದ ಯಾವುದೇ ವಿಭಾಗ ಲಸಿಕೆ ಪಡೆದವರಿಗೂ ಸೋಂಕು ಹರಡಿಸುತ್ತಾರೆ. ಏಕೆಂದರೆ ಒಮ್ಮೆ ಲಸಿಕೆ ಪಡೆದವರ ದೇಹದಲ್ಲಿ ಉಂಟಾದ ಪ್ರತಿಕಾಯಗಳು ಹೆಚ್ಚೆಂದರೆ ಆರೇಳು ತಿಂಗಳು ಉಳಿಯಬಹುದು. ಆದ್ದರಿಂದ ಲಸಿಕೆ ಪಡೆದವರಲ್ಲಿ ಉಂಟಾದ ಪ್ರತಿಕಾಯಗಳು ನಿಷ್ಕ್ರಿಯಗೊಳ್ಳುವ ಮೊದಲೇ ಉಳಿದ ಎಲ್ಲ ಜನರಿಗೂ ಲಸಿಕೆ ನೀಡಿ ಪ್ರತಿಕಾಯಗಳನ್ನು ಸೃಷ್ಟಿ ಮಾಡಿದರೆ ಮಾತ್ರ ಲಸಿಕೆ ಪಡೆದವರೆಲ್ಲರೂ ಸುರಕ್ಷಿತ. ಇಲ್ಲದಿದ್ದರೆ ಕೊನೆಯೇ ಇಲ್ಲದ ವಿಷ ವರ್ತುಲವೊಂದು ಸೃಷ್ಟಿಯಾಗುತ್ತದೆ.
ಕರೋನಾ ವೈರಾಣುವಿನಿಂದ ಉಂಟಾದ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಇಡೀ ಜಗತ್ತು ತಲ್ಲಣಗೊಂಡಿದೆ. ಸಮಾಜವಾದಿ ದೇಶಗಳನ್ನು ಹೊರತುಪಡಿಸಿ, ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಗೊಂಡ ಬಂಡವಾಳಶಾಹಿ ದೇಶಗಳೆಲ್ಲ ಕೋವಿಡ್-19ರ ಎದುರು ಸೋತು ನಿಂತಿವೆ. ಜನಗಳ ತಲೆಗಳು ತರಗೆಲೆಯಂತೆ ಉದುರಿ ಉರಿದು ಹೋಗಿವೆ. ಭಾರತದಲ್ಲಿ ಅಧಿಕೃತವಾಗಿ ನಾಲ್ಕು ಲಕ್ಷ ಜನರ ಉಸಿರು ನಿಂತಿದ್ದರೆ , ಅಂತರರಾಷ್ಟ್ರೀಯ ಮಾಧ್ಯಮಗಳು ಮತ್ತು ಸಂಸ್ಥೆಗಳ ಲೆಕ್ಕಾಚಾರದಂತೆ ನಲವತ್ತು ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ, ನದಿ – ಗಟಾರಗಳಲ್ಲಿ ಹೆಣಗಳ ಪ್ರವಾಹವೇ ಹರಿದು ಹೋಗಿದೆ. ರೋಗದಿಂದ ಲಕ್ಷಾಂತರ ಜನರು ಸತ್ತು ಹೋದರೆ ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್ ಮತ್ತು ತನಗೆ ಮತ ನೀಡಿದ ಜನತೆಯ ಬಗ್ಗೆ ಸರ್ಕಾರ ತೋರಿದ ದಿವ್ಯ ಉದಾಸೀನದಿಂದ ಕೋಟ್ಯಂತರ ಜನರು ಬಳಲಿ ಹೋಗಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ.17ರಷ್ಟು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರೆ, ಅಮೆರಿಕದಲ್ಲಿ ಶೇ.19ರಷ್ಟು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಕೋವಿಡ್ ಮತ್ತು ಸರ್ಕಾರದ ಸುಲಿಗೆಕೋರತನದಿಂದಾಗಿ ಭಾರತದಲ್ಲಿ ಹೊಸದಾಗಿ 23ಕೋಟಿ ಜನರು ಬಡವರ ಪಡೆಗೆ ಸೇರ್ಪಡೆಯಾಗಿದ್ದಾರೆ. ಬಡವರು ಸರಿಯಾಗಿ ಇಣುಕಿ ನೋಡಿದರೆ ಸುರಂಗದ ಕೊನೆಯಲ್ಲಿ “ಪೆರು” ಎಂಬ ಉರಿಯುವ ನಕ್ಷತ್ರದ ಬೆಳಕು ಗೋಚರಿಸುತ್ತದೆ.
ಯಾವುದೇ ಲಾಕ್‌ಡೌನ್, ವೈಯಕ್ತಿಕ ಅಂತರವೂ ಮುಂತಾದ ಪ್ರಸಾರ ತಡೆ ಕ್ರಮಗಳು ಮಾತ್ರ ಕೋವಿಡ್ ಸೋಂಕಿನಿಂದ ಜನತೆಯನ್ನು ಪಾರುಮಾಡಲಾರವು ಎಂಬುದು ಸಾಬೀತಾಗಿರುವ ಸತ್ಯ. ಕರೋನಾ ವೈರಾಣುವಿನಿಂದ ರಕ್ಷಣೆ ಸಿಗಬೇಕಾದರೆ ಒಂದೋ ಸಮುದಾಯ ಪ್ರತಿರೋಧ ಶಕ್ತಿ (Herd Immunity) ಬೆಳೆಯಬೇಕು, ಇಲ್ಲವೇ ಇಡೀ ಜನತೆಗೆ ಕೋವಿಡ್ ಲಸಿಕೆ ನೀಡಬೇಕು. ಸಮುದಾಯದಲ್ಲಿ ಪ್ರತಿರೋಧ ಶಕ್ತಿ ಬೆಳೆಯುವಂತೆ ಮಾಡುವ ಯಾವ ತಂತ್ರಜ್ಞಾನವೂ ಇಲ್ಲ. ಪ್ರತಿರೋಧ ಬೆಳೆಯಲಿ ಎಂದು ಸಮುದಾಯಕ್ಕೆಲ್ಲ ವೈರಸ್ ಹರಡಿಸಲೂ ಸಾಧ್ಯವಿಲ್ಲ. ಒಂದು ವೇಳೆ ಆಕಸ್ಮಿಕವಾಗಿ ಸಮುದಾಯದಲ್ಲಿ ಪ್ರತಿರೋಧ ಶಕ್ತಿ ಬೆಳೆದು ಬಿಟ್ಟರೆ ಖುಷಿ ಪಡಬಹುದೇ ಹೊರತು ಬೆಳೆಯುತ್ತದೆ ಎಂದು ನಿರೀಕ್ಷೆ ಮಾಡಲಾಗದು. ಸಮುದಾಯ ಪ್ರತಿರೋಧ ಶಕ್ತಿಯು ಯಾವುದೋ ಒಂದು ದೇಶದಲ್ಲಿ ಅಥವಾ ದೇಶದ ಒಂದು ಪ್ರದೇಶದಲ್ಲಿ ಉಂಟಾಗುವ ಸಾಧ್ಯತೆಯೂ ಇಲ್ಲ.
ಎಲ್ಲರಿಗೂ ಲಸಿಕೆ ಅತ್ಯಗತ್ಯ
ಹಾಗಾಗಿ ಕರೋನಾ ವೈರಾಣುವನ್ನು ನಿಗ್ರಹಿಸಿ, ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕಾದರೆ ಸಮುದಾಯಕ್ಕೆ ಇಡಿಯಾಗಿ ಲಸಿಕೆ ನೀಡಬೇಕು. ನಮ್ಮ ವಿಜ್ಞಾನಿಗಳು ಮತ್ತು ಜಾಗತಿಕ ವೈಜ್ಞಾನಿಕ ಸಮುದಾಯವು ಮಿಂಚಿನ ವೇಗದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿ ಕೊಟ್ಟಿದ್ದಾರೆ ನಿಜ. ಆದರೆ ನಾವು ಉತ್ತರ ಕಂಡುಕೊಳ್ಳಲೇಬೇಕಾದ ಪ್ರಶ್ನೆ ಏನೆಂದರೆ, ಎಲ್ಲರಿಗೂ ಯಾವಾಗ ಲಸಿಕೆ ನೀಡಲಾಗುತ್ತದೆ ಎಂಬುದು. ಎಲ್ಲರಿಗೂ ಲಸಿಕೆ ನೀಡಬೇಕಾದ ಅಗತ್ಯ ಏಕೆಂದರೆ, ಲಸಿಕೆ ಪಡೆಯದ ಒಂದು ಸಣ್ಣ ಜನ ವಿಭಾಗ ಉಳಿದರೂ ಲಸಿಕೆ ಪಡೆದವರೂ ಸುರಕ್ಷಿತವಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ, ಎಷ್ಟೇ ಶ್ರೀಮಂತ ದೇಶದಲ್ಲಿದ್ದರೂ ಲಸಿಕೆಯಿಂದ ವಂಚಿತರಾದ ಯಾವುದೇ ವಿಭಾಗ ಲಸಿಕೆ ಪಡೆದವರಿಗೂ ಸೋಂಕು ಹರಡಿಸುತ್ತಾರೆ. ಏಕೆಂದರೆ ಒಮ್ಮೆ ಲಸಿಕೆ ಪಡೆದವರ ದೇಹದಲ್ಲಿ ಉಂಟಾದ ಪ್ರತಿಕಾಯಗಳು ಹೆಚ್ಚೆಂದರೆ ಆರೇಳು ತಿಂಗಳು ಉಳಿಯಬಹುದು. ಆದ್ದರಿಂದ ಲಸಿಕೆ ಪಡೆದವರಲ್ಲಿ ಉಂಟಾದ ಪ್ರತಿಕಾಯಗಳು ನಿಷ್ಕ್ರಿಯಗೊಳ್ಳುವ ಮೊದಲೇ ಉಳಿದ ಎಲ್ಲ ಜನರಿಗೂ ಲಸಿಕೆ ನೀಡಿ ಪ್ರತಿಕಾಯಗಳನ್ನು ಸೃಷ್ಟಿ ಮಾಡಿದರೆ ಮಾತ್ರ ಲಸಿಕೆ ಪಡೆದವರೆಲ್ಲರೂ ಸುರಕ್ಷಿತ. ಇಲ್ಲದಿದ್ದರೆ ಕೊನೆಯೇ ಇಲ್ಲದ ವಿಷ ವರ್ತುಲವೊಂದು ಸೃಷ್ಟಿಯಾಗುತ್ತದೆ. ಲಸಿಕೆ ನೀಡಿಕೆ ವಿಳಂಬವಾದಷ್ಟೂ ವೈರಾಣುಗಳು ಲಸಿಕೆ ಪ್ರತಿರೋಧ ಬೆಳೆಸಿಕೊಂಡು ಹೊಸ,ಹೊಸ ರೂಪ ತಳೆಯುತ್ತವೆ. ಅಂತಹ ಸಂದರ್ಭದಲ್ಲಿ ಈಗ ಮಾರುಕಟ್ಟೆಯಲ್ಲಿ ಇರುವ ಲಸಿಕೆಗಳು ನಿಷ್ಪ್ರಯೋಜಕ ಆಗಬಹುದು. ಎಲ್ಲರಿಗೂ ಲಸಿಕೆ ನೀಡುವ ವರೆಗೂ ಯಾರೂ ಸುರಕ್ಷಿತ ಅಲ್ಲ ಎಂಬುದನ್ನು ಲಸಿಕೆಯನ್ನು ವ್ಯಾಪಾರಕ್ಕಿಟ್ಟು ಲಾಭ ದೋಚಲು ನಿಂತಿರುವ ಶ್ರೀಮಂತ ದೇಶಗಳು ಮತ್ತು ಅವರ ಬಲಾಢ್ಯ ಲಸಿಕಾ ಕಂಪನಿಗಳೂ ಅರ್ಥ ಮಾಡಿಕೊಳ್ಳಬೇಕು.
ಇದನ್ನು ಓದಿ: ಕಾಣದಂತೆ ಮಾಯವಾದವೋ ಕೋವಿಡ್ ಲಸಿಕೆಗಳು!
ಒಮ್ಮೆ ಸೋಂಕು ತಗುಲಿದವರಿಗೆ ಮತ್ತೊಮ್ಮೆ ಸೋಂಕು ತಗುಲುವುದಿಲ್ಲ ಎಂಬುದು ಕೂಡಾ ಮಿಥ್ಯೆ. ನಿಗದಿತ ಕಾಲಾವಧಿಯಲ್ಲಿ ತಗುಲದಿರಬಹುದು, ಆದರೆ ವ್ಯಕ್ತಿಯೊಬ್ಬ ಪುನಃ ಸೋಂಕಿಗೆ ಒಳಗಾಗದಂತೆ ತಡೆಯುವುದು ಸಾಧ್ಯವೇ ಇಲ್ಲ. ಹೇಗೆಂದರೆ ನಮಗೆ ಬರುವ ಸಾಮಾನ್ಯ ನೆಗಡಿಯೂ ಕೂಡ ಕರೋನಾ ವೈರಸ್ ಕುಟುಂಬದ ಮತ್ತೊಬ್ಬ ಸದಸ್ಯನಿಂದಲೇ ಹರಡುವುದು. ಒಮ್ಮೆ ನೆಗಡಿಯಾದವರಿಗೆ ಮತ್ತೊಮ್ಮೆ ನೆಗಡಿಯಾಗದಿರಲು ಸಾಧ್ಯವೆ? ಹಾಗೆಯೇ ಒಮ್ಮೆ ಕೋವಿಡ್ ಸೋಂಕಿಗೆ ಒಳಗಾದವರು ಇನ್ನೊಮ್ಮೆ, ಮತ್ತೊಮ್ಮೆ ಸೋಂಕಿಗೆ ಒಳಗಾಗುತ್ತಲೇ ಇರುತ್ತಾರೆ. ಸೋಂಕಿಗೆ ಒಳಗಾದ ವ್ಯಕ್ತಿ ಮತ್ತೊಮ್ಮೆ ಸೋಂಕಿಗೆ ಒಳಗಾದರೆ ಸೋಂಕಿನ ತೀವ್ರತೆ ಗಂಭೀರವಾಗಿರುತ್ತದೆ ಮತ್ತು ಮೃಗೀಯವಾಗಿರುತ್ತದೆ. ಹಾಗಾಗಿ ಎಷ್ಟು ಕಡಿಮೆ ಅವಧಿಯಲ್ಲಿ ಇಡೀ ಜನತೆಗೆ ಲಸಿಕೆ ನೀಡುತ್ತೇವೆ ಎಂಬುದರ ಆಧಾರದ ಮೇಲೆ ಜನರ ಮತ್ತು ದೇಶದ ಭವಿಷ್ಯ ತೀರ್ಮಾನವಾಗುತ್ತದೆ.
ಪ್ರಧಾನ ಮಂತ್ರಿಗಳು ದೇಶವನ್ನುದ್ದೇಶಿಸಿ ಮಾತಾನಾಡುತ್ತಾ ಜೂನ್ 07,2021 ರಂದು ಹೊಸ ಲಸಿಕೆ ನೀತಿಯೊಂದನ್ನು ಘೋಷಿಸಿದರು. ತಮ್ಮ ಹಿಂದಿನ ಕುಖ್ಯಾತ ಲಸಿಕೆ ನೀತಿಗೆ ಕೆಲವು ಮಾರ್ಪಾಡುಗಳನ್ನು ಮಾಡಿ, ಅಂದರೆ 50% ಕೇಂದ್ರ ಸರ್ಕಾರ, 25% ರಾಜ್ಯ ಸರ್ಕಾರ, 25% ಖಾಸಗಿಯವರ ಪಾಲು ಎಂಬ ನೀತಿಯನ್ನು ಮಾರ್ಪಡಿಸಿ, ಇನ್ನು ಮುಂದೆ 75% ಕೇಂದ್ರ ಸರ್ಕಾರದ ಮತ್ತು 25% ಖಾಸಗೀ ಆಸ್ಪತ್ರೆಗಳ ಪಾಲು ಎಂದು ಘೋಷಿಸಿದರು. ಈ ಪರಿಷ್ಕೃತ ನೀತಿಯಂತೆ ಜೂನ್ 21, 2021ರಿಂದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡುತ್ತೇವೆ ಎಂದು ಹೇಳಿದ್ದಾರೆ. 18 ವರ್ಷ ಮೀರಿದ ಎಲ್ಲರಿಗೂ ಸರ್ಕಾರವೇ ಲಸಿಕೆ ನೀಡುವುದಾದರೆ 25% ಲಸಿಕೆಯನ್ನು ಖಾಸಗೀ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಏಕೆ ಕೊಡಬೇಕು ಎಂಬುದಕ್ಕೆ, ಕಾರ್ಪೊರೇಟ್ ಆಸ್ಪತ್ರೆಗಳು ಲಾಭ ದೋಚಲು ಹಾದಿ ಮಾಡಿಕೊಡುವ ದುರಾಲೋಚನೆಯೊಂದನ್ನು ಬಿಟ್ಟು, ಬೇರೆ ಯಾವ ಸಮರ್ಥನೆಗಳೂ ಇಲ್ಲ. ಭಾರತದ (ಬಹುಶಃ ಜಗತ್ತಿನ ಯಾವುದೇ ದೇಶದ) ಚರಿತ್ರೆಯಲ್ಲಿ ಲಸಿಕೆಯೊಂದನ್ನು ಲಾಭವನ್ನೇ ಉಸಿರಾಡುವ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಒಪ್ಪಿಸಿರಲಿಲ್ಲ.
ಲಸಿಕೆ ಬೇಡಿಕೆ-ಪೂರೈಕೆಗಳ ನಡುವಿನ ಅಂತರ ಅಗಾಧ
18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ನೀಡಲು ಸುಮಾರು 200 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ. ಆದರೆ ಇದುವರೆಗೆ (ಅಂದರೆ ಜೂನ್ 9 ಕ್ಕೆ) ದೇಶದ ಶೇ. 3.5 ಜನರಿಗೆ ಅಂದರೆ ಅಂದಾಜು 3.5 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದ್ದರೆ, 14% ಜನರಿಗೆ ಒಂದೇ ಒಂದು ಡೋಸ್ ಲಸಿಕೆ ನೀಡಲಾಗಿದೆ. ಅಂದರೆ ನಾವಿನ್ನೂ 96.5% ಜನರಿಗೆ ಲಸಿಕೆ ನೀಡಬೇಕಾಗಿದೆ. ಅಂದರೆ ಡಿಸೆಂಬರ್ ತಿಂಗಳೊಳಗೆ 18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ನೀಡಲು 190 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ. ಈಗಾಗಲೇ ನೀಡಲಾಗಿರುವ ಲಸಿಕೆಯನ್ನೂ ಕೂಡ ದೇಶದ ಎಲ್ಲಾ ಭಾಗಗಳಲ್ಲಿ ಒಂದೇ ರೀತಿಯಲ್ಲಿ ನೀಡಲಾಗಿಲ್ಲ. ರಾಜ್ಯ-ರಾಜ್ಯಗಳ, ಜಿಲ್ಲೆ-ಜಿಲ್ಲೆಗಳ, ನಗರ-ಗ್ರಾಮೀಣ ಪ್ರದೇಶಗಳ ನಡುವೆ ವಿಪರೀತ ಅಸಮಾನತೆಯಿದೆ. (ಚಿತ್ರ-2 ನೋಡಿ) ಉತ್ತರಪ್ರದೇಶ ಮತ್ತು ಬಿಹಾರದಲ್ಲಿ 2% ಜನರಿಗೆ ಮಾತ್ರ ಎರಡು ಡೋಸುಗಳ ಲಸಿಕೆ ನೀಡಲಾಗಿದ್ದರೆ, ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ದೇಶದ ಸರಾಸರಿಗಿಂತ ಹೆಚ್ಚು ಅಂದರೆ 5% ಜನರಿಗೆ ಲಸಿಕೆ ನೀಡಲಾಗಿದೆ.
ನಮಗೆ ಅಗತ್ಯವಿರುವ 190 ಕೋಟಿ ಡೋಸ್ ಡೋಸ್ ಲಸಿಕೆಯನ್ನು ಪೂರೈಸಲು ಯಾವ ಸಿದ್ಧತೆಗಳನ್ನು ನಡೆಸಲಾಗಿದ? ಹಾಲಿ ನಮ್ಮ ಉತ್ಪಾದನಾ ಸಾಮರ್ಥ್ಯ ಎಷ್ಟು? ಇರುವ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಅಗತ್ಯಕ್ಕೆ ಬೇಕಾದಷ್ಟು ಹೆಚ್ಚಿಸಿಕೊಳ್ಳಲು ಯಾವ ಸಿದ್ಧತೆಗಳು ನಡೆದಿವೆ ಎಂದು ಪರಿಶೀಲಿಸೋಣ.
ಏಪ್ರಿಲ್ ತಿಂಗಳಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಲಸಿಕೆ ಕೋವಿಶೀಲ್ಡ್ ತಿಂಗಳಿಗೆ 6.5 ಕೋಟಿ ಡೋಸ್ ಮತ್ತು ಭಾರತ್ ಬಯೋಟೆಕ್‌ನ ಲಸಿಕೆ ಕೊವ್ಯಾಕ್ಸಿನ್ ತಿಂಗಳಿಗೆ 2 ಕೋಟಿ ಡೋಸ್ ಉತ್ಪಾದನೆ ಆಗುತ್ತಿದ್ದವು. ಎರಡೂ ಸಂಸ್ಥೆಗಳು ಸೇರಿ ಮೇ ತಿಂಗಳಲ್ಲಿ 9.5 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದನೆ ಮಾಡಿವೆ. ಆಗಸ್ಟ್-ಡಿಸೆಂಬರ್ ತಿಂಗಳ ಹೊತ್ತಿಗೆ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡು ಕೋವಿಶೀಲ್ಡ್ ತಿಂಗಳಿಗೆ 15 ಕೋಟಿ ಡೋಸ್ ಲಸಿಕೆಯನ್ನು, ಕೊವ್ಯಾಕ್ಸಿನ್ 11 ಕೋಟಿ ಡೋಸ್ ಲಸಿಕೆಯನ್ನು ಮತ್ತು ರಷ್ಯಾದ ಸ್ಪೂಟ್ನಿಕ್ V 3 ಕೋಟಿ ಡೋಸ್ ಲಸಿಕೆಯನ್ನು ಮತ್ತು ಇತರೆ ಮೂಲಗಳಿಂದ 7 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸಿ ನೀಡುತ್ತೇವೆ ಎಂಬ ಆಶ್ವಾಸನೆ ನೀಡಲಾಗಿದೆ. ಆದರೆ ಇಲ್ಲಿಯವರೆಗೆ ತಮ್ಮ ಸಾಮರ್ಥ್ಯದಲ್ಲಿ ಯಾವುದೇ ಹೆಚ್ಚಳ ಮಾಡಿಕೊಳ್ಳದ ಮತ್ತು ಇರುವ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿ ಕೊಳ್ಳದ ಈ ಮೇಲಿನ ಕಂಪನಿಗಳು ದಿಢೀರ್ ಎಂದು ಹತ್ತಾರು ಪಟ್ಟು ವೃದ್ಧಿಸಿ ಕೊಳ್ಳುವುದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅದರಲ್ಲೂ ದಿನಾಂಕ 10.06.2021 ರಂದು ಅಮೆರಿಕದ ಎಫ್.ಡಿ.ಎ (FDA) ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೊಡಲು ನಿರಾಕರಿಸಿರುವ, ಡಬ್ಲ್ಯೂ.ಎಚ್.ಒ ವಿಶ್ವ ಆರೋಗ್ಯ ಸಂಸ್ಥೆ (WHO) ಮಂಜೂರಾತಿ ಇನ್ನೂ ಸಿಗದಿರುವ, ಹಾಗೂ ವೈರಾಣುಗಳ ರೂಪಾಂತರವನ್ನು ವೇಗವಾಗಿ ಎದುರಿಸಲು ಬೇಕಾದ ಹಲವು ತಂತ್ರಜ್ಞಾನಗಳ ಅಭಿವೃದ್ಧಿಯು ಅಗತ್ಯವಾಗಿರುವ ಹಿನ್ನೆಲೆಯಲ್ಲಿ, ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಅವಲಂಬಿಸುವುದು ಯಾವುದೇ ಕಾರಣಕ್ಕೂ ಜಾಣ ನಡೆಯಾಗುವುದಿಲ್ಲ. ಹೀಗಿರುವಾಗ ನಮ್ಮ ಅಗತ್ಯಕ್ಕೆ ಅನುಗುಣವಾಗಿ ಬೇಕಾದಷ್ಟು ಲಸಿಕೆಯನ್ನು ಹೇಗೆ ಉತ್ಪಾದಿಸಿ ಸರಬರಾಜು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ. 18 ವಯಸ್ಸಿಗೆ ಮೇಲ್ಪಟ್ಟ 100% ಜನರಿಗೆ ಲಸಿಕೆ ನೀಡಬೇಕಾದರೆ ಈಗಿರುವ ಉತ್ಪಾದನೆಯ ಹಲವು ಪಟ್ಟು ಹೆಚ್ಚಾಗಬೇಕು. ಕೊವ್ಯಾಕ್ಸಿನ್ ಇಲ್ಲದಿದ್ದರೆ ಬೇರೆ ಸಂಸ್ಥೆಗಳು ಮತ್ತಷ್ಟು ಉತ್ಪಾದನೆಯನ್ನು ಹೆಚ್ಚಿಸಬೇಕು. ಈಗಿನ ದರದ ಇಮ್ಮಡಿ ದರದಲ್ಲಿ ಲಸಿಕೆ ಉತ್ಪಾದನೆ ಮತ್ತು ವಿತರಣೆ ಮಾಡಿದರೂ ಸಹ ಇಡೀ ದೇಶದಲ್ಲಿ ಡಿಸೆಂಬರ್ 2023 ಕ್ಕೆ ಮುನ್ನ ಲಸಿಕೆ ನೀಡುವ ಕಾರ್ಯಕ್ರಮ ಮುಗಿಯುವುದಿಲ್ಲ. (ಚಿತ್ರ-1 ನೋಡಿ) ಹಾಕಿರುವ ಲಸಿಕೆಯೂ ಕೆಲಸಕ್ಕೆ ಬರುವುದಿಲ್ಲ. ಎಲ್ಲವನ್ನೂ ನುಂಗಿ ನೊಣೆದು ಬಿಸಾಡುವ ಸುಳಿಯಂತಾಗುತ್ತದೆ ಭಾರತ ಸರ್ಕಾರದ ಲಸಿಕಾ ಕಾರ್ಯಕ್ರಮ.
ಚಿತ್ರ-1 ದೇಶದ ಮ್ಯಾಪ್ ನಲ್ಲಿ ಈಗಿನ ಲಸಿಕೆ ಉತ್ಪಾದನೆ-ವಿತರಣೆ ದರ ಇಮ್ಮಡಿಗೊಳಿಸಿದಾಗ ಪ್ರತಿ ರಾಜ್ಯಕ್ಕೆ 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 70 ಜನರಿಗೆ ಜೂನ್ 2021ರಿಂದ ಲಸಿಕೆ ಕೊಡಲು ಬೇಕಾಗುವ ತಿಂಗಳುಗಳ ಸಂಖ್ಯೆ ರಾಜ್ಯದ ಮ್ಯಾಪ್ ಒಳಗೆ ಕೊಡಲಾಗಿದೆ.
ಲಸಿಕಾ ಕಾರ್ಯಕ್ರಮ ಹಳ್ಳ ಹಿಡಿದದ್ದು ಏಕೆ?
ಈ ರೀತಿಯಲ್ಲಿ ಲಸಿಕೆ ಉತ್ಪಾದನೆ ಮತ್ತು ವಿತರಣೆಯಲ್ಲಿ ವಿಳಂಬವಾಗುವುದು ನಮ್ಮ ದೇಶದ ಜನರ ತಲೆಯ ಮೇಲೆ ಎಳೆಯುವ ಚಪ್ಪಡಿ ಕಲ್ಲು ಮಾತ್ರವೇ ಅಲ್ಲ, ನಮ್ಮಲ್ಲಿ ಉತ್ಪಾದನೆ ಆಗುವ ಲಸಿಕೆಯನ್ನೇ ಅವಲಂಭಿಸಿ ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸುವ ಲಸಿಕಾ ಕಾರ್ಯಕ್ರಮ ಕೊವ್ಯಾಕ್ಸ್ ಕೂಡ ದಿಕ್ಕು ತಪ್ಪುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಕೊವ್ಯಾಕ್ಸ್ ಲಸಿಕೆಯನ್ನೇ ನಂಬಿಕೊಂಡಿರುವ 92 ಬಡ ದೇಶಗಳ ತಲೆಯ ಮೇಲೂ ಚಪ್ಪಡಿ ಕಲ್ಲು ಎಳೆದಂತಾಗುತ್ತದೆ. ಈಗಾಗಲೇ ಆಫ್ರಿಕಾದ, ಲ್ಯಾಟಿನ್ ಅಮೆರಿಕದ ಅನೇಕ ದೇಶಗಳು ಲಸಿಕೆ ಸರಬರಾಜಿಲ್ಲದೆ ಲಸಿಕಾ ಕಾರ್ಯಕ್ರಮವನ್ನೇ ಆರಂಭಿಸಿಲ್ಲ.
ಲಸಿಕಾ ಕಾರ್ಯಕ್ರಮ ಈ ರೀತಿಯಲ್ಲಿ ಹಳ್ಳ ಹಿಡಿದದ್ದು ಏಕೆ? ಏಕೆಂದರೆ ಅಂತಿಮ ಗೆರೆ ಮುಟ್ಟುವ ಮೊದಲೇ ಓಟಗಾರನೊಬ್ಬ ಗೆಲುವನ್ನು ಆಚರಿಸಿ ಅವಮಾನಕ್ಕೀಡಾದಂತೆ ಕೇಂದ್ರ ಸರ್ಕಾರ ನಡೆದುಕೊಂಡಿತು. ಈಗ ಮೋದಿ ಮತ್ತವರ ಸರ್ಕಾರದ ಕತೆ ಸೀಟಿ ಊದುವ ಮೊದಲೇ ಓಟ ಮುಗಿಸಿದಂತಾಗಿದೆ.
ಇದನ್ನು ಓದಿ: ಕೋವಿಡ್-19: ಲಸಿಕೆಯೇ ಅಂತಿಮ ಅಸ್ತ್ರ
ದಿಢೀರ್ ಎಂದು ಬೇಡಿಕೆ ಹೆಚ್ಚಾಯಿತು, ಹಾಗಾಗಿ ಪೂರೈಕೆ ಕಷ್ಟವಾಯಿತು ಎಂಬ ಸಬೂಬುಗಳನ್ನು ಹೇಳಲಾಗುತ್ತಿದೆ. ಆದರೆ ಎಲ್ಲ ವಿಜ್ಞಾನಿಗಳು, ತಜ್ಞರು, ವೈದ್ಯಕೀಯ ಸಮುದಾಯ ಬಾಯಿ ಬಡಿದುಕೊಂಡರೂ ಕಿವಿಗೆ ಹಾಕಿಕೊಳ್ಳದ ಕೇಂದ್ರ ಸರ್ಕಾರ ಸೋಂಕು ಹರಡುವುದನ್ನು ತಡೆಯಲು ಮತ್ತು ಲಸಿಕೆ ನೀಡುವುದಕ್ಕೆ ಸಜ್ಜಾಗಲು ಬೇಕಾದ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಕೇಂದ್ರ ಸರ್ಕಾರ ವಾಸ್ತವವಾಗಿ ಡಿಸೆಂಬರ್ 2021 ಅಂತ್ಯದವರೆಗೆ ಪೂರೈಸಲು ಕೇಳಿಕೊಂಡಿದ್ದ ಲಸಿಕೆಯ ಪ್ರಮಾಣವೇ ಕೇವಲ 44 ಕೋಟಿ ಡೋಸ್‌ಗಳು. ಅದರಲ್ಲಿ ಜನವರಿಯಲ್ಲಿ 1.1 ಕೋಟಿ ಡೋಸ್‌ಗಳಿಗೆ ಆರ್ಡರ್ ಮಾಡಿದ್ದರೆ, ಮಾರ್ಚ್‌ನಲ್ಲಿ 12 ಕೋಟಿ ಡೋಸ್ ಲಸಿಕೆಗೆ ಆರ್ಡರ್ ನೀಡಲಾಗಿದೆ. ಈ ಲಸಿಕೆಯ ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಇಲ್ಲದೆ, ಎಷ್ಟು ಉತ್ಪಾದನೆ ಆಗಿದೆ, ಎಷ್ಟು ಪೂರೈಕೆ ಆಗಿದೆ, ಎಷ್ಟು ವಿತರಣೆ ಆಗಿದೆ ಎಂಬ ಯಾವುದೇ ಮಾಹಿತಿ ಲಭ್ಯವಿಲ್ಲದೆ ಎಲ್ಲವೂ ಕತ್ತಲೆಯಲ್ಲಿ ಕಲಸು ಮೆಲೋಗರವಾಗಿದೆ.
ಜೂನ್ 7 ರಂದು ಎರಡನೇ ಲಸಿಕಾ ಯೋಜನೆಯನ್ನು ಪ್ರಕಟಿಸುತ್ತಾ ಪ್ರಧಾನ ಮಂತ್ರಿಗಳು, ಈ ಹಿಂದೆ ಪೋಲಿಯೋ, ದಡಾರ, ಹೆಪಟೈಟಿಸ್ ಬಿ. ಸೋಂಕುಗಳಿಗೆ ಲಸಿಕೆಗಳು ದಶಕಗಳ ನಂತರ ಬಂದವು, ನಾವು ಅಧಿಕಾರಕ್ಕೆ ಬಂದಾಗ 2014 ರಲ್ಲಿ ದೇಶದ 60% ಭಾಗಕ್ಕೆ ಮಾತ್ರ ಲಸಿಕೆ ತಲುಪಿತ್ತು. ಇದು ನಮಗೆ ದಿಗಿಲು ಹುಟ್ಟಿಸಿತ್ತು. ಇದೇ ದರದಲ್ಲಿ ಲಸಿಕೆ ನೀಡಿಕೆ ಮುಂದುವರೆದರೆ ಎಲ್ಲರಿಗೂ ಲಸಿಕೆ ನೀಡಲು 40 ವರ್ಷಗಳೇ ಬೇಕಾದೀತು ಎಂದೆಲ್ಲಾ ಹೇಳಿದರು. ಮುಂದುವರಿದು ಈಗಾಗಲೇ 23 ಕೋಟಿ ಡೋಸ್ ಲಸಿಕೆ ನೀಡಿದ್ದೇವೆ, ಇನ್ನು ಕೆಲವೇ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡುವ ವಿಶ್ವಾಸವಿದೆ ಎಂದು ಎದೆ ತಟ್ಟಿಕೊಂಡರು.
ಭಾರತದ ಲಸಿಕಾ ಉತ್ಪಾದನಾ ಸಾಮರ್ಥ್ಯ
ಜನವರಿ 2 ರಂದು ಸುಪ್ರೀಂ ಕೋರ್ಟ್ ಬೀಸಿದ ಚಾಟಿಗೆ ಬೆಚ್ಚಿ ಬಿದ್ದ ಸರ್ಕಾರ ದಡಬಡನೆ ತಡವರಿಸಿ ಏನೇನೋ ಮಾತನಾಡಿದೆ. ಆದರೆ ಲಸಿಕೆ ತಯಾರಿಯೂ ಸೇರಿದಂತೆ ಸ್ವಾವಲಂಬನೆಯ ಕಣ್ಣೋಟ ಬೆಳೆದು ಬಂದದ್ದು ನಮ್ಮ ವಸಾಹತುಶಾಹಿ-ವಿರೋಧಿ ಸ್ವಾತಂತ್ರ್ಯ ಚಳವಳಿಯ ಜೊತೆ, ಜೊತೆಯಲ್ಲಿ. ಅಂದರೆ ದೇಶದ ಆರ್ಥಿಕತೆಯನ್ನು ಸಾಮ್ರಾಜ್ಯಶಾಹಿ ಹಿಡಿತದಿಂದ ಬಿಡುಗಡೆಗೊಳಿಸಲು ಕೈಗಾರಿಕೆ ಸೇರಿದಂತೆ ಇನ್ನಿತರೆ ಸಂಸ್ಥೆಗಳನ್ನು ನಮ್ಮ ಜನರ ಸಾಮರ್ಥ್ಯದಲ್ಲೇ ಬೆಳೆಸುವುದು ಎಂದು ಅರ್ಥ. ಈ ರೀತಿಯಲ್ಲಿ ಸ್ವಾವಲಂಬನೆ ಸಾಧಿಸಿದ ಭಾರತ ಅಗತ್ಯ ಔಷಧ ಉತ್ಪಾದನೆಯಲ್ಲಿ ಪಾರಮ್ಯ ಸಾಧಿಸಿ, ಈ ಕ್ಷೇತ್ರದಲ್ಲಿದ್ದ ಬಹುರಾಷ್ಟ್ರೀಯ ಔಷಧ ಕಂಪನಿಗಳ ಏಕಸ್ವಾಮ್ಯ ಮುರಿದು ಭಾರತ ಇಂದು ಜಗತ್ತಿನ ಬಡವರ ಔಷಧ ಕಣಜ ಎಂದು ಹೆಸರು ಮಾಡಿದೆ. 1970 ರ ಭಾರತೀಯ ಪೇಟೆಂಟ್ ಕಾಯಿದೆಯ ಬಲ ಪಡೆದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ಪ್ರಯೋಗಾಲಯಗಳು ನಡೆಸಿದ ಸಂಶೋಧನೆಗಳಿಂದ ಔಷಧ ಕ್ಷೇತ್ರದಲ್ಲಿ (ವಿಶೇಷವಾಗಿ ಪ್ರಮುಖ ಅಗತ್ಯ ಔಷಧಿಗಳಲ್ಲಿ) ನಾವು ಬಹುಪಾಲು ಸ್ವಾವಲಂಬಿಗಳಾಗಿದ್ದೇವೆ. ಸಾರ್ವಜನಿಕ ಕ್ಷೇತ್ರ ಮತ್ತು ಇತರೆ ದೇಶಿ ಕಂಪನಿಗಳು ಎಡಬಿಡದೆ ದುಡಿದು ಭಾರತವನ್ನು ಜಗತ್ತಿನ ಅತಿ ದೊಡ್ಡ ಔಷಧ ಉತ್ಪಾದಕನ ಸ್ಥಾನದಲ್ಲಿ ನಿಲ್ಲಿಸಿವೆ
ಇದನ್ನು ಓದಿ: ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?
ಲಸಿಕೆ ಉತ್ಪಾದನೆಯಲ್ಲಿ ಭಾರತಕ್ಕೆ ದೊಡ್ಡ ಇತಿಹಾಸವಿರುವುದರಿಂದ ಮತ್ತು ಲಸಿಕೆ ಉತ್ಪಾದನೆಗೆ ಬೇಕಾದ ಬಹುದೊಡ್ಡ ಮೂಲ ಸೌಕರ್ಯಗಳನ್ನು ಹೊಂದಿರುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮುನ್ನ ಜಗತ್ತಿಗೆ ಬೇಕಾದ ಇತರೆ ಲಸಿಕೆಗಳ 60% ನ್ನು ಭಾರತವೇ ಉತ್ಪಾದನೆ ಮಾಡಿದೆ. CDSCO (Central Drug Standard Control Organisation) ಪ್ರಕಾರ ಭಾರತದಲ್ಲಿ 21 ಲಸಿಕೆ ಉತ್ಪಾದನಾ ಸಂಸ್ಥೆಗಳಿದ್ದು, ಅವುಗಳ ಒಟ್ಟು ಉತ್ಪಾದನಾ ಸಾಮರ್ಥ್ಯ ವಾರ್ಷಿಕವಾಗಿ 800 ಕೋಟಿ ಡೋಸ್‌ಗಳಿಗೂ ಹೆಚ್ಚು. ಈ ಸಂಸ್ಥೆಗಳು ಕೊವ್ಯಾಕ್ಸಿನ್ ಮಾದರಿಯ ಲಸಿಕೆಯನ್ನು ತಯಾರು ಮಾಡುವುದರಲ್ಲಿ ಪರಿಣತಿ ಹೊಂದಿವೆ.
ಇದರ ಜೊತೆಗೆ ಕೋವಿಶೀಲ್ಡ್ ಮಾದರಿಯ ಲಸಿಕೆ ಉತ್ಪಾದನೆ ಮಾಡುವ 30 ಕ್ಕೂ ಹೆಚ್ಚು ಕಂಪನಿಗಳು ನಮ್ಮ ದೇಶದಲ್ಲಿವೆ. ಆಕ್ಸ್‌ಫರ್ಡ್- ಆಸ್ಟ್ರಜೆ಼ನಿಕಾ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಅನೇಕ ಕಂಪನಿಗಳಿವೆ. ಭಾರತದ ಐದು ಕಂಪನಿಗಳು ಗಮಲೇಯಾ ಎನ್ನುವ ಸಂಸ್ಥೆಗೆ 850 ದಶಲಕ್ಷ ಸ್ಪೂಟ್ನಿಕ್ V ಲಸಿಕೆ ತಯಾರಿಸಿ ಕೊಡಲು, ಜಾನ್ಸನ್ ಮತ್ತು ಜಾನ್ಸನ್‌ನ ಒಂದೇ ಡೋಸ್ ಮಾದರಿಯ ಲಸಿಕೆಯನ್ನು 400 ದಶಲಕ್ಷ ಡೋಸ್ ತಯಾರಿಸಿ ಕೊಡಲು ಬಯಾಲಾಜಿಕ್ -E ಎನ್ನುವ ಕಂಪನಿ ಒಡಂಬಡಿಕೆ ಮಾಡಿಕೊಂಡಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ನೋವಾವ್ಯಾಕ್ಸ್ ಎನ್ನುವ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡು ಅಮೆರಿಕಾಗೆ 100 ಕೋಟಿ ಡೋಸ್ ಲಸಿಕೆ ತಯಾರು ಮಾಡಿಕೊಡುತ್ತಿದೆ.
ನಮ್ಮ ದೇಶದಲ್ಲಿ ಇಷ್ಟೆಲ್ಲಾ ಸಾಮರ್ಥ್ಯ, ಮೂಲಸೌಕರ್ಯಗಳು ಇದ್ದರೂ ತಿಂಗಳಿಗೆ ಕೇವಲ 60-70 ದಶಲಕ್ಷ ಡೋಸ್ ಲಸಿಕೆಗಳನ್ನು ಮಾತ್ರ ಏಕೆ ಉತ್ಪಾದನೆ ಮಾಡಲಾಗುತ್ತಿದೆ? ಏಕೆಂದರೆ ಮೋದಿ ಸರ್ಕಾರ ಕೋವಿಡ್ ಸಾಂಕ್ರಾಮಿಕ ರೋಗವನ್ನು ಗೆದ್ದೇಬಿಟ್ಟೆವು ಎಂದು ಬೀಗಿಕೊಂಡು, ನಮಗೆ ಲಸಿಕೆ ನೀಡಲು ಸಾಕಷ್ಟು ಸಮಯವಿದೆ ಅಥವಾ ಲಸಿಕೆ ನೀಡದಿದ್ದರೂ ನಡೆಯುತ್ತದೆ ಎಂಬ ಉಮೇದಿನಲ್ಲಿ ಲಸಿಕೆ ತಯಾರು ಮಾಡಲು ಬೇಕಾದ ಆದೇಶವನ್ನೇ ನೀಡದೆ ಭಾಷಣ ಹೊಡೆದು ಕೊಂಡು ತಿರುಗಾಡಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಕೇಂದ್ರ ಸರ್ಕಾರವೇ ಹೇಳಿದಂತೆ “ಕೋವಿಶೀಲ್ಡ್ ಲಸಿಕೆಗಳು ತಿಂಗಳಿಗೆ 70 ರಿಂದ 100 ದಶಲಕ್ಷ ಡೋಸ್‌ಗಳು ಮತ್ತು ಕೊವ್ಯಾಕ್ಸಿನ್ ತಿಂಗಳಿಗೆ 12.5 ದಶಲಕ್ಷ ಡೋಸ್‌ಗಳು ಲಭ್ಯವಾಗುತ್ತಿವೆ. ಇವು ನಮ್ಮ ಆಂತರಿಕ ಬಳಕೆಗೆ ಮತ್ತು ವಿದೇಶಗಳಿಗೆ ರಫ್ತು ಮಾಡಲು ಸಾಕಾಗುತ್ತವೆ” ಎಂದು ಹೇಳಿ ಕ್ರಿಮಿನಲ್ ಉದಾಸೀನ ಮಾಡಿತು. ವಾಸ್ತವವಾಗಿ ನಮಗೆ ಈಗ ಸರ್ಕಾರ ನಂಬಿಕೊಂಡಷ್ಟೂ ಪ್ರಮಾಣದ ಲಸಿಕೆಯೂ ಲಭ್ಯವಾಗುತ್ತಿಲ್ಲ. ಈಗ ಎರಡೂ ಲಸಿಕೆಗಳು ಸೇರಿ ತಿಂಗಳಿಗೆ ಕೇವಲ 60 ದಶಲಕ್ಷ ಲಸಿಕೆಗಳು ಮಾತ್ರ ಲಭ್ಯವಾಗುತ್ತಿವೆ.
ಏನು ಮಾಡಬಹುದಾಗಿತ್ತು? ಮಾಡಬೇಕಾಗಿದೆ?
ಇದೇ ವೇಗದಲ್ಲಿ ಲಸಿಕೆ ಉತ್ಪಾದನೆ ಮುಂದುವರೆದರೆ ಕೇಂದ್ರ ಸರ್ಕಾರ ತಾನೇ ಗುರಿ ನಿಗದಿಪಡಿಸಿಕೊಂಡಿರುವ ಜನರಿಗೆ ಲಸಿಕೆ ನೀಡಲು ಬೇಕಾಗುವ 200 ಕೋಟಿ ಡೋಸ್ ಲಸಿಕೆ ತಯಾರಿಸಲು ಎರಡು ವರ್ಷಗಳು ಬೇಕಾಗುತ್ತದೆ. ರಫ್ತು ಮಾಡಲು ಬೇಕಾಗುವ ಲಸಿಕೆಯನ್ನು ಗಮನಕ್ಕೆ ತೆಗೆದುಕೊಂಡರೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಸರ್ಕಾರದ ಇಂತಹ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಭಾರತವು ಕೋವಿಡ್ ಸೋಂಕಿನ ಮೂರು ಮತ್ತು ನಾಲ್ಕನೇ ಅಲೆಗೂ ತುತ್ತಾಗಬಹುದು ಹಾಗೂ ಜಾಗತಿಕ ಲಸಿಕೆ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಕಣ್ಮರೆಯಾಗಬೇಕಾಗಬಹುದು.
ಇದನ್ನು ಓದಿ: ಕೋವಿಡ್ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು
ಇದಕ್ಕಿಂತ ಭಿನ್ನವಾಗಿ ಭಾರತ ಮಾಡಬಹುದಾಗಿದ್ದು ಏನು? ಏನೆಂದರೆ ಚೀನಾ ಮತ್ತು ಅಮೆರಿಕಾ ಮಾಡಿದಂತೆ ತನಗಿದ್ದ ಎಲ್ಲಾ ಸಾಮರ್ಥ್ಯವನ್ನು ಬಳಸಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕಿತ್ತು. ಅಮೆರಿಕಾ ಒಂದು ರೀತಿಯಲ್ಲಿ ಕಾರ್ಯ ಪ್ರವೃತ್ತವಾದರೆ, ಚೀನಾ ಮೂರು ಲಸಿಕೆಯನ್ನು ಅಭಿವೃದ್ಧಿಪಡಿಸಿ ಉತ್ಪಾದನೆಯನ್ನು ಆರಂಭಿಸಿತು. ಸಾಂಕ್ರಾಮಿಕದ ಆರಂಭಕ್ಕೂ ಮುನ್ನ ಲಸಿಕೆ ಉತ್ಪಾದನೆಯಲ್ಲಿ ಭಾರತಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದ ಚೀನಾ ತನ್ನ ದೇಶದಲ್ಲೇ ಹಲವಾರು ಕಡೆ ಉತ್ಪಾದನೆ ಆರಂಭಿಸಿತಲ್ಲದೆ, ಜಗತ್ತಿನ ಬೇರೆ, ಬೇರೆ ಕಡೆಗಳಲ್ಲೂ ಉತ್ಪಾದನೆ ಆರಂಭಿಸಲು ಬೇಕಾದ ಒಡಂಬಡಿಕೆ ಮತ್ತು ಸಿದ್ಧತೆಗಳನ್ನು ಮಾಡಿಕೊಂಡಿತು.
ಬದಲಾಗಿ ಸಾಂಕ್ರಾಮಿಕವನ್ನು ಗೆದ್ದೇ ಬಿಟ್ಟಿರುವುದಾಗಿ ಭಾವಿಸಿದ ಭಾರತ ಸರ್ಕಾರ ಮುಂಗಡವಾಗಿ ಲಸಿಕೆ ಉತ್ಪಾದನೆಗೆ ಬೇಡಿಕೆ ಸಲ್ಲಿಸಲಿಲ್ಲ. ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಲಸಿಕಾ ಕಂಪನಿಗಳಿಗೆ ಸಾಲ, ಸಹಕಾರ ನೀಡಲಿಲ್ಲ. ಬ್ಯಾಂಕುಗಳಿಂದಲೂ ಸಾಲ ಕೊಡಿಸಲಿಲ್ಲ. ಜನತೆಯ ತೆರಿಗೆ ಹಣದಲ್ಲಿ ಭಾರತದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯ ತಂತ್ರಜ್ಞಾನವನ್ನು ಭಾರತ್ ಬಯೋಟೆಕ್ ಎಂಬ ಖಾಸಗಿ ಕಂಪನಿಗೆ ನೀಡಿತೇ ಹೊರತು ಸಾರ್ವಜನಿಕ ವಲಯದ ಕಂಪನಿಗಳಲ್ಲಿ ತಯಾರಿಸಲು ಕ್ರಮ ಕೈಗೊಳ್ಳಲಿಲ್ಲ. ಅದೂ ಒಂದೇ ಕಂಪನಿಗೆ ತಂತ್ರಜ್ಞಾನ ನೀಡಿ ಆ ಕಂಪನಿಯ ಸೀಮಿತ ಲಸಿಕೆಗಳಿಗೆ ಕಾದು ಕುಳಿತದ್ದು ಬಿಟ್ಟರೆ ದೇಶದ ಇತರೆ ಕಂಪನಿಗಳ ಜೊತೆ ತಂತ್ರಜ್ಞಾನ ಹಂಚಿಕೊಂಡು ವ್ಯಾಪಕವಾಗಿ ಉತ್ಪಾದನೆ ಮಾಡಲು ಕ್ರಮ ವಹಿಸಲಿಲ್ಲ. ಸೋಂಕು ವ್ಯಾಪಕವಾಗಿ ಹರಡಿ, ರೋಗ ಉಲ್ಬಣಿಸಿ ಬೀದಿಯಲ್ಲೆಲ್ಲಾ ಹಾಹಾಕಾರ ಶುರುವಾದ ಮೇಲೆ ಸಣ್ಣ ಪ್ರಮಾಣದಲ್ಲಿ ಲಸಿಕೆಗೆ ಬೇಡಿಕೆ ಸಲ್ಲಿಸಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ.
ಇದನ್ನು ಓದಿ: ಕೋವಿಡ್ ಲಸಿಕೆ : ಡೋಸ್‌ಗಳ ನಡುವಿನ ಅಂತರಕ್ಕೆ ಭಾರತೀಯ ವಿಜ್ಞಾನಿಗಳ ಬೆಂಬಲ ಇರಲಿಲ್ಲವೆ?
ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರಕ್ಕೆ ತಗಲುತ್ತಿದ್ದ ವೆಚ್ಚವಾದರೂ ಎಷ್ಟು? ಈಗಿರುವ ಮೂಲಸೌಕರ್ಯಗಳ ಜೊತೆಗೆ 3000 ಕೋಟಿ ರೂಪಾಯಿ ಹಣ ತೊಡಗಿಸಿದ್ದರೆ ಹೆಚ್ಚುವರಿಯಾಗಿ 100 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದನೆ ಮಾಡಬಹುದಿತ್ತು. 6000 ಕೋಟಿ ರೂಪಾಯಿ ತೊಡಗಿಸಿದ್ದರೆ ಹೆಚ್ಚುವರಿಯಾಗಿ 200 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದನೆ ಮಾಡಬಹುದಿತ್ತು. ಒಂದು ವೇಳೆ 9000 ಕೋಟಿ ರೂಪಾಯಿ ತೊಡಗಿಸಿದ್ದರೆ 300 ಕೋಟಿ ಡೋಸ್ ಲಸಿಕೆಯನ್ನು ಹೆಚ್ಚುವರಿಯಾಗಿ ಉತ್ಪಾದನೆ ಮಾಡಬಹುದಿತ್ತು. ಒಂದೇ ವರ್ಷದಲ್ಲಿ ನಮ್ಮೆಲ್ಲಾ ಜನಗಳಿಗೆ ಬೇಕಾದಷ್ಟು ಲಸಿಕೆಯನ್ನು ಬಳಸಿ ವಿದೇಶಗಳಿಗೂ ರಫ್ತು ಮಾಡಬಹುದಿತ್ತು. ಲಸಿಕೆ ಉತ್ಪಾದನೆ ಮತ್ತು ವಿತರಣೆಯಲ್ಲಿ ಜಾಗತಿಕ ಸಮ್ರಾಟನಾಗಬಹುದಿತ್ತು. ಆದರೆ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳು ಲಸಿಕೆ ಹೆಸರಿನಲ್ಲಿ ತೆಗೆದಿಟ್ಟುಕೊಂಡಿರುವ ಸಾರ್ವಜನಿಕರ ತೆರಿಗೆ ಹಣ 35,000 ಕೋಟಿ ರೂಪಾಯಿಗಳ ಮೂಟೆಯ ಮೇಲೆ ಕುಳಿತುಕೊಂಡು ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ನವ-ಉದಾರವಾದದಿಂದ ಬಿಡಿಕೊಳ್ಳದ ಹೊಸ ಲಸಿಕಾ ನೀತಿ
ಈ ಎಲ್ಲಾ ಕೊರತೆಗಳ ಜೊತೆಗೆ ಕೇಂದ್ರ ಸರ್ಕಾರ ತನ್ನ ಕುತ್ಸಿತ ಲಸಿಕೆ ನೀತಿಯನ್ನು ಹಿಂದೆಗೆದುಕೊಂಡಿದೆ. ಆದರೂ ಈಗಲೂ ಖಾಸಗೀ ಕಾರ್ಪೊರೇಟ್ ಆಸ್ಪತ್ರೆಗಳಿಗೆ 25% ಲಸಿಕೆಯನ್ನು ಮೀಸಲಿಟ್ಟಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಲಸಿಕೆಗೆ ಭಿನ್ನವಾದ ಮತ್ತು ದುಬಾರಿ ದರವನ್ನು ನಿಗದಿ ಮಾಡಿದೆ. ಖಾಸಗಿ ಆಸ್ಪತ್ರೆಗಳು ಕೊವ್ಯಾಕ್ಸಿನ್ ಪ್ರತಿ ಡೋಸ್‌ಗೆ 1260 ರೂಪಾಯಿ, ಕೋವಿಶೀಲ್ಡ್ ಪ್ರತಿ ಡೋಸ್‌ಗೆ 600 ರೂಪಾಯಿ, ಸ್ಪೂಟ್ನಿಕ್ ಪ್ರತಿ ಡೋಸ್‌ಗೆ 995 ರೂಪಾಯಿ ದರದಲ್ಲಿ ಖರೀದಿಸಲು ಸರ್ಕಾರ ಆದೇಶ ಮಾಡಿದೆ. ಭಾರತ್ ಬಯೋಟೆಕ್‌ನ CEO ಮಾದ್ಯಮ ಸಂದರ್ಶನದಲ್ಲಿ ಮಾತನಾಡುತ್ತಾ ಪ್ರತಿ ಡೋಸ್ ಲಸಿಕೆ ತಯಾರು ಮಾಡಲು ಅರ್ಧ ಲೀಟರ್ ನೀರಿನ ಬಾಟಲಿಗಿಂತಲೂ ಕಡಿಮೆ ಖರ್ಚಾಗುತ್ತದೆ ಎಂದು ಹೇಳಿದ್ದರು. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ CEO ಆದಾರ್ ಪೂನಾವಾಲಾ ಕೇಂದ್ರ ಸರ್ಕಾರಕ್ಕೆ ಸರಬರಾಜು ಮಾಡುವ ಪ್ರತಿ ಡೋಸ್‌ನ ದರ 150 ರೂಪಾಯಿಯಲ್ಲೇ ಲಾಭ ಸಿಗುತ್ತದೆ ಎಂದು ಹೇಳಿದ್ದರು. ಹೀಗಿದ್ದಾಗ್ಯೂ ಇಷ್ಟೊಂದು ದುಬಾರಿ ಬೆಲೆ ನಿಗದಿ ಮಾಡಿರುವುದು ಏಕೆ? ಪ್ರಧಾನಿಗಳೇನಾದರೂ ಲಸಿಕೆ ಕಂಪನಿಗಳ ಕಮೀಷನ್ ಏಜೆಂಟರಾದರೆ? ಅಥವಾ ಲಾಭದಲ್ಲಿ ಪಾಲುದಾರಿಕೆಯೆ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಲೇ ಬೇಕಾಗುತ್ತದೆ.
ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಸಹಜವಾಗಿಯೇ ಎಲ್ಲಿ ಗರಿಷ್ಠ ಲಾಭ ಸಿಗುತ್ತದೆಯೋ ಅಲ್ಲಿಗೆ ವಸ್ತುಗಳು ಸರಬರಾಜು ಆಗುತ್ತವೆ. ಅದರಂತೆ ಲಸಿಕೆಯೂ ಕೂಡ, ಕಾರ್ಪೊರೇಟ್ ಆಸ್ಪತ್ರೆಗಳಿಗೆ 25% ಎಂದು ಇದ್ದಾಗಲೂ, ಹೆಚ್ಚಿನ ಪ್ರಮಾಣದಲ್ಲಿ, ಹವಾಲ ಮಾರ್ಗಗಳ ಮೂಲಕ ಸರಬರಾಜಾಗುತ್ತದೆ. ಅದನ್ನು ನಿಯಂತ್ರಿಸಲು ದಿನ ನಿತ್ಯದ ಲೆಕ್ಕ ಪಡೆಯಲು ಯಾವ ವ್ಯವಸ್ಥೆಯೂ ಇಲ್ಲದಿರುವುದರಿಂದ ಮತ್ತು ಈಗಾಗಲೇ ನೋಡುತ್ತಿರುವಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಇಲ್ಲದಿದ್ದರೂ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿರುವಂತೆ ಮುಂದೆಯೂ ಆಗಲಿದೆ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಸಿಗುವಂತಾದರೆ ಆಶ್ಚರ್ಯವೇನೂ ಇಲ್ಲ. ಮಾಡೆರ್ನಾ,ಫೈಜರ್ ಕಂಪನಿಗಳು ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಸರಬರಾಜು ಮಾಡುವುದಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ನೀಡುತ್ತೇವೆ, ಅದೂ ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಮಾತ್ರ ನೀಡುತ್ತೇವೆ ಎಂದು ಘೋಷಣೆ ಮಾಡಿರುವುದರ ಹಿಂದೆ ಇಂತಹ ಲಾಭಕೋರತನವೇ ಕೆಲಸ ಮಾಡುತ್ತಿದೆ.
ಈ ರೀತಿಯಾಗಿ ದುಬಾರಿ ದರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಯನ್ನು ಮೀಸಲಿಟ್ಟ ಪರಿಣಾಮ ಬಹುವಿಧದಲ್ಲಿ ಆಗಲಿದೆ. ಈಗಾಗಲೇ ಖಾಸಗೀ ಆಸ್ಪತ್ರೆಗಳಿಗೆ ಮೀಸಲಿಟ್ಟ ಲಸಿಕೆಯಲ್ಲಿ 50% ಲಸಿಕೆಯನ್ನು ಕೇವಲ 9 ಕಾರ್ಪೋರೇಟ್ ಆಸ್ಪತ್ರೆಗಳು ಕಬಳಿಸಿಕೊಂಡವೆ. ಎಲ್ಲಾ ಕಾರ್ಪೋರೇಟ್ ಆಸ್ಪತ್ರೆಗಳು ಮುಂಬಯಿ, ಕೊಲ್ಕತ್ತಾ, ಬೆಂಗಳೂರಿನಂತಹ ಮಹಾನಗರಗಳಲ್ಲೇ ಇರುವುದರಿಂದ ಈ 25% ಲಸಿಕೆಯಲ್ಲಿ ಗ್ರಾಮೀಣ, ಹಿಂದುಳಿದ ರಾಜ್ಯ ಅಥವಾ ಪ್ರದೇಶಗಳ ಭಾರತೀಯರಿಗೆ ಯಾವ ಪಾಲೂ ಸಿಗುವುದಿಲ್ಲ. ಖಾಸಗೀ ಆಸ್ಪತ್ರೆಗಳಲ್ಲಿ ನೀಡುವ ಲಸಿಕೆ ದುಬಾರಿಯಾಗಿರುವುದರಿಂದ ಮಹಾನಗರಗಳಲ್ಲೇ ಇರುವ ಸ್ಲಂ ನಿವಾಸಿಗಳಿಗೆ, ದಲಿತರಿಗೆ, ಅಸಂಘಟಿತ ವಲಯದ ಕಾರ್ಮಿಕರಿಗೆ, ಮಹಿಳೆಯರಿಗೆ ಲಸಿಕೆ ನಿರಾಕರಣೆಯೇ ಆಗಿದೆ. ಆ ಮೂಲಕ ಬದುಕಿನ ನಿರಾಕರಣೆಯೂ ಆಗಿದೆ. ಸಂವಿಧಾನದ ಸಮಾನತೆಯ ಆಶಯಗಳ ಉಲ್ಲಂಘನೆಯೂ ಆಗಿದೆ. ಭಾರತ ಸರ್ಕಾರ ಲಸಿಕೆ ಎಂಬ ಉಸಿರನ್ನು ಎಲ್ಲಾ ಭಾರತೀಯರಿಗೂ ನೀಡಲು ನಿರಾಕರಿಸುತ್ತಿದೆ.