ಬೆಂಗಳೂರು : ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿದೆ. ಬೆಂಗಳೂರಿನಲ್ಲಿ ಇನ್ನೇನು ಒಂದೆರಡು ದಿನಗಳಲ್ಲಿ ಶತಕ ಬಾರಿಸಲಿದೆ. ರಾಜ್ಯದಲ್ಲಿ ಮೊದಲು ಪೆಟ್ರೋಲ್ ಶತಕ ಬಾರಿಸಿದ್ದು ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಬುಧವಾರ ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ ಪ್ರತೀ ಲೀ. ಪೆಟ್ರೋಲ್ ಗೆ 101.87 ರೂ. ಇದ್ದರೆ, ಕಡಿಮೆ ಎಂದರೆ ದಕ್ಷಿಣ ಕನ್ನಡದಲ್ಲಿ 99.09 ರೂ. ಇದೆ. ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರದಲ್ಲಿ 100 ರೂ.ಗೆ ಒಂದು ಪೈಸೆಯಷ್ಟೇ ಕಡಿಮೆ.
ಎಲ್ಲೆಲ್ಲಿ 100+ : ಬಾಗಲಕೋಟೆ (100.38), ಬಳ್ಳಾರಿ (101.92), ಬೀದರ್ (100.41), ಚಿಕ್ಕಮಗಳೂರು (100.71), ಚಿತ್ರದುರ್ಗ (101.05), ದಾವಣಗೆರೆ (101.87), ಗದಗ (100.72), ಕಲಬುರಗಿ (100.34), ಹಾಸನ (100.12), ಹಾವೇರಿ (100.35), ಕೊಡಗು (100.98), ಕೋಲಾರ (100.01), ಕೊಪ್ಪಳ (100.96), ಮಂಡ್ಯ (100.06), ರಾಯಚೂರು (100.68), ರಾಮನಗರ (100.38), ಶಿವಮೊಗ್ಗ (101.22), ತುಮಕೂರು (101.11), ಉತ್ತರ ಕನ್ನಡ (100.10), ಯಾದಗಿರಿ (100.63)
ಎಲ್ಲೆಲ್ಲಿ 99+ ಬೆಂಗಳೂರು (99.89), ಬೆಂಗಳೂರು ಗ್ರಾಮಾಂತರ (99.99), ಬೆಳಗಾವಿ (99.81), ವಿಜಯಪುರ (99.70), ಚಾಮರಾಜನಗರ (99.99), ಚಿಕ್ಕಬಳ್ಳಾಪುರ (99.89), ಧಾರವಾಡ (99.68), ಮೈಸೂರು (99.45), ಉಡುಪಿ (99.37), ದಕ್ಷಿಣ ಕನ್ನಡ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಆದರೆ ಈಗ ಕ್ರೂಡ್ ಆಯಿಲ್ ದರ ನಾಲ್ಕು ತಿಂಗಳಿಂದ ಯಥಾಸ್ಥಿತಿ ಇದೆ. ಆದರೆ ಭಾರತದಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿದೆ.
ಕೊರೋನಾ ಹೆಚ್ಚಳದಿಂದ ಜನ ಸಾಯುತ್ತಿದ್ದಾರೆ. ಲಾಕ್ಡೌನ್ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ದೇಶದ ಆರ್ಥಿಕ ಚಟುವಟಿಕೆಗೆ ಪಾರ್ಶ್ವವಾಯು ಬಡಿದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ