ವಸಂತರಾಜ ಎನ್.ಕೆ
ಕ್ಯಾಸ್ಟಿಲೊ ಅವರು ಪೆರು ನ ಮೊದಲ ಎಡಪಂಥೀಯ ಅಧ್ಯಕ್ಷರಾಗಲಿದ್ದು, ಅವರಿಗೆ ತೀವ್ರ ಸವಾಲುಗಳು ಎದುರಾಗಲಿವೆ. ಅವರ ಆಯ್ಕೆಯ ಅನಧಿಕೃತ ಸುದ್ದಿಯಿಂದಲೇ ಶೇರು ಮಾರುಕಟ್ಟೆ ಕುಸಿತ ಕಂಡಿದೆ. ಪಾರ್ಲಿಮೆಂಟು (ಅವರ ಪಕ್ಷಕ್ಕಾಗಲಿ ಎಡ-ಪ್ರಗತಿಪರ ಪಕ್ಷಗಳಿಗೆ ಸ್ಪಷ್ಟ ಬಹುಮತವಿಲ್ಲ), ದೇಶದ ಸಿರಿವಂತರು, ಮಾಧ್ಯಮಗಳು, ಬಹುರಾ಼ಷ್ಟ್ರೀಯ ಕಂಪನಿಗಳು, ಯು.ಎಸ್ ಸರಕಾರ ಎಲ್ಲವೂ ಅವರ ಸರಕಾರಕ್ಕೆ ತೀವ್ರ ಪ್ರತಿರೋಧ ಒಡ್ಡಲಿವೆ. ಅವರ ಪ್ರತಿರೋಧ ಮುರಿಯಲು ಎದುರಿಸಲು ಕ್ಯಾಸ್ಟಿಲೊ ಬಡಜನರನ್ನು ರಾಜಕೀಯವಾಗಿ ಅಗತ್ಯ ಬಿದ್ದರೆ ವೆನೆಜುವೇಲಾ, ಬೊಲಿವಿಯ ಗಳಂತೆ ಬೀದಿಗಳಲ್ಲಿ ಇಳಿದು ಹೋರಾಡಲು ಅಣಿನೆರೆಸುವುದು ಅಗತ್ಯವಾಗಬಹುದು. ಆದರೆ ವೆನೆಜುವೇಲಾ, ಬೊಲಿವಿಯ ಮುಂತಾದ ಲ್ಯಾಟಿನ್ ಅಮೆರಿಕದ ಎಡಪಂಥೀಯ ಸರಕಾರಗಳು ಅವರನ್ನು ಬೆಂಬಲಿಸಲಿವೆ.
ಪೆರು ನಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯು, ಮಾಜಿ ಶಾಲಾಶಿಕ್ಷಕ, ಟ್ರೇಡ್ ಯೂನಿಯನ್ ಮತ್ತು ಸಮಾಜವಾದಿ ನಾಯಕ ಪೆದ್ರೋ ಕ್ಯಾಸ್ಟಿಲೊ ಹಾಗೂ ಈಗ ಜೈಲಿನಲ್ಲಿರುವ ಮಾಜಿ ಸರ್ವಾಧಿಕಾರಿ ಅಲ್ಬರ್ಟೊಫುಜುಮೋರಿಯ ಮಗಳು, ಸ್ವತಃ ಭ್ರಷ್ಟಾಚಾರದ ಆಪಾದನೆ ಎದುರಿಸುತ್ತಿರುವ ಶ್ರೀಮಂತ ವರ್ಗದ ನಾಯಕಿ ಕೀಕೋಫುಜುಮೋರಿಯ ನಡುವೆ ತೀವ್ರ ಹಣಾಹಣಿಯದ್ದಾಗಿತ್ತು. ಶುಕ್ರವಾರ (ಜೂನ್ 11) ಬೆಳಿಗ್ಗೆಯ ವರದಿಗಳ ಪ್ರಕಾರ ಕ್ಯಾಸ್ಟಿಲೊ ಸುಮಾರು 60 ಸಾವಿರ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಎಡಪಂಥೀಯ “ಫ್ರೀ ಪೆರು” ಪಕ್ಷದ ಕ್ಯಾಸ್ಟಿಲೊ 88.17 ಲಕ್ಷ (50.18%) ಮತ್ತು “ಪೊಪ್ಲುಲರ್ ಫೋರ್ಸ್” ಪಕ್ಷದ ಫುಜಿಮೋರಿ 87.57 ಲಕ್ಷ (49.82%) ಮತಗಳಿಸಿದ್ದಾರೆ. ಆದರೆ ಸೋತ ಫುಜಿಮೋರಿ ಚುನಾವಣಾ ಅಕ್ರಮಗಳ ಹಲವು ದೂರುಗಳನ್ನು ಕೊಟ್ಟಿರುವುದರಿಂದ ಫಲಿತಾಂಶವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಪೆರು ಚುನಾವಣಾ ನಿಯಮಗಳ ಪ್ರಕಾರ ಮರುಎಣಿಕೆ ಇಲ್ಲ, ಆದರೆ ಮತಗಟ್ಟೆಗಳ ಮತಗಳನ್ನು ರದ್ದುಮಾಡಬಹುದು!. ಇಂತಹ 800ಕ್ಕೂ ಹೆಚ್ಚು ದೂರುಗಳು ಬಂದಿವೆ. ಹಲವನ್ನು ಈಗಾಗಲೇ ಪರಿಶೀಲಿಸಿ ತಿರಸ್ಕರಿಸಲಾಗಿದೆ. ಅವೆಲ್ಲವನ್ನೂ ಪರಿಶೀಲಿಸಿ ತೀರ್ಪು ಕೊಡಲು ಹಲವು ದಿನಗಳೇ ಹಿಡಿಯಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ನಡುವೆ ಫುಜಿಮೋರಿ ಬೆಂಬಲಿಗರು ಟ್ರಂಪ್ ಶೈಲಿಯಲ್ಲಿ “ಚುನಾವಣಾ ಅಕ್ರಮಗಳು ನಡೆದಿವೆ” ಎಂದು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸುತ್ತಿದ್ದರೆ, ಕ್ಯಾಸ್ಟಿಲೊ ಬೆಂಬಲಿಗರು ಸಹ ಪ್ರತಿಭಟನಾರ್ಥ ವಿಜಯೋತ್ಸವಗಳನ್ನು ಆಚರಿಸುತ್ತಿದ್ದಾರೆ.ಫುಜಿಮೋರಿ ದೂರುಗಳಲ್ಲಿ “ಅಕ್ರಮಗಳ” ಯಾವುದೇ ಪ್ರಬಲ ಪುರಾವೆಯನ್ನು ಮಂಡಿಸಿಲ್ಲ.. ಚುನಾವಣಾ ವೀಕ್ಷಣೆಗೆ ಬಂದಿದ್ದ ಅಂತರರಾಷ್ಟ್ರೀಯ ತಂಡಗಳು ಸಹ ಚುನಾವಣೆಯು ನ್ಯಾಯಯುತವಾಗಿ ನಡೆದಿದೆ ಎಂದು ಹೇಳಿವೆ. ಆದ್ದರಿಂದ ಆಕೆಯ ದೂರುಗಳು ಫಲಿತಾಂಶವನ್ನು ವಿಳಂಬ ಮಾಡಬಹುದಷ್ಟೆ, ಬದಲಾಯಿಸುವ ಸಾಧ್ಯತೆ ಬಹಳ ಕಡಿಮೆ.
ಫುಜಿಮೋರಿ ನವ-ಉದಾರವಾದಿ ಸಂವಿಧಾನ ಬದಲು
ಕ್ಯಾಸ್ಟಿಲೊ ಹಿಂದೆ ಯಾವುದೇ ರಾಜಕೀಯ ಅಧಿಕಾರ ಪಡೆದವರಲ್ಲ. ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರು ಎರಡನೆಯ ಸುತ್ತಿಗೆ ಬಂದು ಗೆದ್ದುಬಿಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪೆರು ನಲ್ಲಿ ಹಿಂದೆ ಯಾವುದೇ ಎಡಪಂಥೀಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಗೆದ್ದದ್ದಿಲ್ಲ. ಆದರೆ ಬಡರೈತರ ಮನೆಯ ಮಗನಾದ ಕ್ಯಾಸ್ಟಿಲೊ ತಮ್ಮ ಚುನಾವಣಾ ರ್ಯಾಲಿಗಳಲ್ಲಿ ರೈತರ ದೊಡ್ಡ ಹ್ಯಾಟ್ ಮತ್ತು ದೊಡ್ಡ ಪೆನ್ಸಿಲ್ (ಅವರ ಚುನಾವಣಾ ಚಿಹ್ನೆ) ನೊಂದಿಗೆ ತಾವು ಗೆದ್ದರೆ ಈ “ಶ್ರೀಮಂತ ದೇಶದಲ್ಲಿ ಇನ್ನೆಂದೂ ಬಡವರು ಇರುವುದಿಲ್ಲ” ಎಂಬ ದಿಟ್ಟ ಹೇಳಿಕೆ ಸಾಕಷ್ಟು ಗಮನವನ್ನು ಸೆಳೆದಿತ್ತು. ಅವರು ದೇಶದ ಸಂಪನ್ಮೂಲಗಳನ್ನು (ಪೆರು ತಾಮ್ರದ ಗಣಿಗಳನ್ನು ಹೊಂದಿದ್ದು ಜಗತ್ತಿನ ಎರಡನೆ ಅತಿ ದೊಡ್ಡ ತಾಮ್ರ ಉತ್ಪಾದಕ) ಬಳಸುವ “ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ” ಮೇಲೆ ಕಡಿವಾಣ ಇರಬೇಕು, ಅವು ತಮ್ಮ ”ಆದಾಯದ ಒಂದು ಭಾಗ”ವನ್ನು ತೆರಿಗೆಗಳ ಮೂಲಕ ದೇಶದ ಬೆಳವಣಿಗೆಗೆ ಕೊಡಬೇಕೆಂದು ಮತ್ತು ಈಗಿನ ನವ-ಉದಾರವಾದಿ ನೀತಿಗಳ ತೀವ್ರ ಪುನರ್ವಿಮರ್ಶೆ ಅಗತ್ಯ ಎಂದು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ. ಬಡವರು ಮತ್ತು ಶ್ರೀಮಂತರು ಮಾತ್ರವಲ್ಲ, ನಗರ ಮತ್ತು ಗ್ರಾಮೀಣ ಪ್ರದೇಶಗಳ, ಬುಡಕಟ್ಟು ಮತ್ತು ಇತರರ ನಡುವಿನ ಭಾರಿ ಅಸಮಾನತೆಗಳನ್ನು ನಿವಾರಿಸಲು ಕ್ರಮಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಅವರು ಚುನಾವಣಾ ಪ್ರಚಾರದಲ್ಲಿ 1993ರಲ್ಲಿ ಮಾಜಿ ಸರ್ವಾಧಿಕಾರಿ ಅಲ್ಬರ್ಟೋ ಫುಜಿಮೋರಿ ಜಾರಿಗೆ ತಂದ (ಸಾರ್ವಜನಿಕ ಹಿತಾಸಕ್ತಿಗಳ ಬದಲು ಖಾಸಗಿ ಹಿತಾಸಕ್ತಿಗಳಿಗೆ, ಜೀವನದ ಬದಲು ಲಾಭಕ್ಕೆ ಆದ್ಯತೆ ನೀಡುವ) ನವ-ಉದಾರವಾದಿ ಚೌಕಟ್ಟನ್ನು ಒಳಗೊಂಡ ಸಂವಿಧಾನವನ್ನು ಬದಲಾಯಿಸಲು ಜನಮತಸಂಗ್ರಹ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೊಸ ಸಂವಿಧಾನ ಆಹಾರ, ಆರೋಗ್ಯ, ಶಿಕ್ಷಣ, ವಸತಿ ಗಳ ಹಕ್ಕನ್ನು ಖಾತರಿಗೊಳಿಸಬೇಕುಎಂದಿದ್ದಾರೆ. ವಿದೇಶೀ ನೀತಿಯಲ್ಲಿ ಯು.ಎಸ್ ಪರ ಲಿಮಾ ಗುಂಪನ್ನು ಪೆರು ತೊರೆಯುವುದಾಗಿ ಘೋಷಿಸಿದ್ದಾರೆ. ಲ್ಯಾಟಿನ್ ಅಮೆರಿಕದ ಹಲವು ದೇಶಗಳ ಈ“ಲಿಮಾ ಗುಂಪು” ವೆನೆಜುವೇಲಾ ದ ಸರಕಾರ ಉರುಳಿಸಲು ಬದ್ಧವಾಗಿವೆ.ಯು.ಎಸ್ ಪರ ಒ.ಎ.ಎಸ್ (OAS) ಕೂಟವನ್ನು ವಿರೋಧಿಸುವ, ಸಾಮ್ರಾಜ್ಯಶಾಹಿ-ವಿರೋಧಿ CELACಮತ್ತು UNASUR ಗಟ್ಟಿಗೊಳಿಸುವುದಾಗಿ ಕ್ಯಾಸ್ಟಿಲೊ ಹೇಳಿದ್ದಾರೆ. 2017ರಲ್ಲಿ ದೇಶವ್ಯಾಪಿ ಶಾಲಾಶಿಕ್ಷಕರ ಮುಷ್ಕರದಲ್ಲಿ ಶಿಕ್ಷಣದ ವೆಚ್ಚವನ್ನು ಜಿಡಿಪಿಯ ಶೇ. 3.5ರಿಂದ ಶೇ.6ಕ್ಕೆ ಏರಿಸುವುದು ಒಂದು ಹಕ್ಕೊತ್ತಾಯವಾಗಿತ್ತು. ಅದನ್ನು ಅಧ್ಯಕ್ಷನಾದರೆ ಪೂರೈಸುವುದಾಗಿ ಕ್ಯಾಸ್ಟಿಲೊ ಭರವಸೆ ಕೊಟ್ಟಿದ್ದಾರೆ.
ಮಾನವ-ಹಕ್ಕು ವಿಧ್ವಂಸಕ ಫುಜಿಮೋರಿ ಬಿಡುಗಡೆ ಭರವಸೆ!
ಇದಕ್ಕೆ ಪ್ರತಿಯಾಗಿ ಕಿಕೊ ಫುಜಿಮೋರಿ,ಯಥಾಸ್ಥಿತಿ ಕಾಪಾಡುವುದು, ವಿದೇಶೀ ಕಂಪನಿಗಳ ಮತ್ತು ದೇಶೀಯ ಆಸ್ತಿವಂತರ ಸವಲತ್ತುಗಳನ್ನು ರಕ್ಷಿಸುವುದು ದೇಶದ ‘ಬೆಳವಣಿಗೆಗಾಗಿ ಅಗತ್ಯ” ಎಂದಿದ್ದರು. ಕ್ಯಾಸ್ಟಿಲೊ ಪ್ರತಿಪಾದಿಸುವ ನೀತಿಗಳು “ಬಂಡವಾಳದ ಪಲಾಯನ” ಮತ್ತು ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಬಹುದೆಂದು ಎಚ್ಚರಿಸಿದ್ದರು. ಪೆರು ನಲ್ಲಿ (ವಾಸ್ತವದಲ್ಲಿ ಎಲ್ಲ ಅಸಮಾನತೆಗಳನ್ನು ಉಲ್ಬಣಿಸಿದ ಈಗಿನ ತೀವ್ರ ಸಂಕಷ್ಟಗಳಿಗೆ ಕಾರಣವಾದ) ತನ್ನ ತಂದೆ ಅಲ್ಬರ್ಟೋ ಫುಜಿಮೋರಿ ತಂದ ನೀತಿಗಳು ಮತ್ತು ದೃಢವಾದ ಕಟ್ಟುನಿಟ್ಟಿನ ಆಡಳಿತ ದೇಶದ ಅಭಿವೃದ್ಧಿಗೆ ಕಾರಣವಾದವು. ತಾನು ಆಯ್ಕೆಯಾದರೆ ಅವರನ್ನು ಬಿಡುಗಡೆ ಮಾಡುತ್ತೇನೆ ಎಂಬುದು ಫುಜಿಮೋರಿ “ಭರವಸೆ”ಯಾಗಿತ್ತು.
ತಾನು ಆಯ್ಕೆಯಾದರೆ ಜನರಿಗೆ ಏನು ಮಾಡುತ್ತಾರೆ ಎನ್ನುವ ಬದಲು ಕ್ಯಾಸ್ಟಿಲೊ ವಿರುದ್ಧ ಅಪಪ್ರಚಾರವೇ ಅವರ ಪ್ರಮುಖ ಅಸ್ತ್ರವಾಗಿತ್ತು. ಈ ವ್ಯಾಪಕ ಆಕ್ರಾಮಕ ಅಪಪ್ರಚಾರದಲ್ಲಿ ಪೆರು ವಿನ 80% ಪತ್ರಿಕೆಗಳನ್ನು ನಿಯಂತ್ರಿಸುವ ಮಾಧ‍್ಯಮ ದೈತ್ಯ ಕಂಪನಿ ಸಮೂಹ “ಗ್ರೂಪೊ ಎಲ್ ಕಮರ್ಸಿಯೊ” ಕೈಜೋಡಿಸಿತು. ಪೆರು ನಲ್ಲಿ ಹಿಂದೆ ಪ್ರಬಲವಾಗಿದ್ದ “ಶೈನಿಂಗ್ ಪಾಥ್” ಉಗ್ರ-ಎಡಪಂಥೀಯ ಸಂಘಟನೆ ಜತೆ ಕ್ಯಾಸ್ಟಿಲೊ ಗೆ ಸಂಬಂಧವಿದೆ ಎಂದು ಆಪಾದಿಸಲಾಯಿತು. ಅವರು ಗೆದ್ದರೆ “ಕ್ಯೂಬಾ ಮತ್ತು ವೆನೆಜುವೇಲಾದಂತಹ ಸರ್ವಾಧಿಕಾರ” ಜಾರಿಗೆ ಬರುತ್ತದೆ. ಚುನಾವಣೆಯ ಎರಡು ವಾರಗಳ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ನಡೆದ 18 ಜನರ ನರಮೇಧವನ್ನು ಕ್ಯಾಸ್ಟಿಲೊ ಮೇಲೆ ಆಪಾದಿಸಿ, ಅವರು ಅಧಿಕಾರಕ್ಕೆ ಬಂದರೆ ಇಂತಹ ನರಮೇಧಗಳು ಸಾಮಾನ್ಯವಾಗುತ್ತವೆ ಎಂದೆಲ್ಲ ಸ್ಥಿತಿವಂತರು ಮತ್ತು ಮಧ್ಯಮವರ್ಗೀಯರನ್ನು ಬೆದರಿಸಲು ಪ್ರಯತ್ನಿಸಲಾಯಿತು. ಆದರೆ, ಈಗಾಗಲೇ ಕಪ್ಪು ಹಣದ ದುರ್ವ್ಯವಹಾರಗಳಿಗೆ ಕ್ರಿಮಿನಲ್ ಕೇಸುಗಳನ್ನು ಎದುರಿಸಿ ಬೈಲ್ ಮೇಲೆ ಇರುವ ಫುಜಿಮೋರಿಯ ಭ್ರಷ್ಟಾಚಾರದ ಕುರಿತು ಮಾಧ್ಯಮಗಳುಉಸಿರೆತ್ತಲಿಲ್ಲ. ಆ ಮೂಲಕ ತಮ್ಮ ರಾಜಕೀಯ ತಾರತಮ್ಯದ ನೀತಿಯನ್ನು ಪ್ರದರ್ಶಿಸಿವೆ. ಹಾಗೆನೇ ತಂದೆ ಫ್ಯುಜಿಮೋರಿಯ ಸರ್ವಾಧಿಕಾರಿ ಆಡಳಿತದಲ್ಲಿ ನಡೆದ ಮಾನವ ಹಕ್ಕುಗಳ ದಮನ ಮತ್ತು ಭ್ರಷ್ಟಾಚಾರದ ಪ್ರಕರಣಗಳಿಗೆ ‘ಮೊದಲ ಮಹಿಳಾ ಪ್ರಜೆ’ಯಾಗಿ ಮಗಳು ಫುಜಿಮೋರಿಯ “ನೈತಿಕ ಜವಾಬ್ದಾರಿ”ಯ ಮತ್ತು ಅಂತಹವರಿಗೆ ಕ್ಷಮಾದಾನ ಕೊಡುತ್ತೇನೆ ಎಂದು ಹೇಳುವುದನ್ನು ವಿಮರ್ಶೆಗೆ ಒಳಪಡಿಸುವುದು ಇರಲಿ, ಆ ಕುರಿತು ಮಾತನಾಡಲೇ ಇಲ್ಲ.
ಕ್ಯಾಸ್ಟಿಲೊ ವಿಜಯ ಹೇಗೆ ಸಾಧ್ಯವಾಯಿತು?
ಫುಜಿಮೋರಿಯ ಚುನಾವಣಾ ಪ್ರಚಾರಯಂತ್ರ ಹಣವನ್ನು ನೀರಿನಂತೆ ಖರ್ಚು ಮಾಡಿ ಭಾರೀ ಪ್ರಚಾರ ಮಾಡಿಯೂ ಕ್ಯಾಸ್ಟಿಲೊ ಮೊದಲ ಸುತ್ತಿನಲ್ಲಿ ಅತ್ಯಧಿಕ ಮತ (18.92%) ಗಳಿಸಿ, ಫುಜಿಮೋರಿ 13.4 % ಮತಗಳಿಸಿ ದೂರದ ಎರಡನೆಯ ಸ್ಥಾನ ಪಡೆದದ್ದು ಬಲಪಂಥೀಯ ಶಕ್ತಿಗಳನ್ನು ಕಂಗೆಡಿಸಿತ್ತು. ಮೊದಲ ಸುತ್ತಿನಲ್ಲಿ 18 ಅಭ್ಯರ್ಥಿಗಳು ಭಾಗವಹಿಸಿದ್ದು ಶೇ. 70.1 (2016ರ ಕಳೆದ ಚುನಾವಣೆಗಿಂತ ಶೇ. 11.7 ಕಡಿಮೆ ಮತದಾನವಾಗಿತ್ತು). ಇದರಿಂದ ಎರಡನೆಯ ಸುತ್ತಿನಲ್ಲಿ ಸ್ಪರ್ಧೆ ತೀವ್ರವಾಗಿದ್ದು, ಎಡ-ಬಲ ಧ್ರುವೀಕರಣ ಹೆಚ್ಚಿತ್ತು. ಮತದಾನದ ಪ್ರಮಾಣ ಸಹ ಶೇ. 74.7ಕ್ಕೇರಿತ್ತು. ನಗರ ಪ್ರದೇಶದ ಸ್ಥಿತಿವಂತರು, ಮಧ್ಯಮ ವರ್ಗದವರು ಫುಜಿಮೋರಿಯತ್ತ ವಾಲಿದರೆ ಗ್ರಾಮೀಣ ಪ್ರದೇಶದ ಬಹುಸಂಖ್ಯಾತರು, ಎಲ್ಲೆಡಯ ಬಡವರು ಕ್ಯಾಸ್ಟಿಲೊ ರತ್ತ ವಾಲಿದ್ದರು. ಚುನಾವಣಾ ಫಲಿತಾಂಶಗಳು, ಮಾಧ್ಯಮದ ಆಟ ನಡೆದಿಲ್ಲ, ಬ್ಯೂಮರಾಂಗ್ ಸಹ ಆಗಿರಬಹುದೆಂದು ತೋರಿಸುತ್ತದೆ. ಜೊತೆಗೆ ನಡೆದ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಸಹ ಕ್ಯಾಸ್ಟಿಲೊ ಅವರ “ಫ್ರೀ ಪೆರು” 130ರಲ್ಲಿ 37 ಸ‍್ಥಾನಗಳನ್ನು ಪಡೆದಿದೆ. ಈ ಮೊದಲು ಅದಕ್ಕೆ ಯಾವುದೇ ಸ್ಥಾನಗಳಿರಲಿಲ್ಲ.
ಈ ಚುನಾವಣೆಗಳು ಪೆರು ಎದುರಿಸಿದ ತೀವ್ರ ರಾಜಕೀಯ, ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಂಕಷ್ಟಗಳ ಹಿನ್ನೆಲೆಯಲ್ಲಿ ನಡೆದಿತ್ತು. ಪೆರು ಆಳುವವರ ಭ್ರಷ್ಟಾಚಾರದ ಹಗರಣಗಳ ಸರಣಿಯನ್ನು ಕಂಡಿದ್ದು,ಕಳೆದ 3 ವರ್ಷಗಳಲ್ಲಿ 4ಸರಕಾರಗಳನ್ನು ಕಂಡಿತ್ತು. ಕಳೆದ ಏಳು ಅಧ‍್ಯಕ್ಷರುಗಳಲ್ಲಿ ಐವರು ಭ್ರಷ್ಟಾಚಾರ ಹಗರಣಗಳ ಆಪಾದಿತರಾಗಿದ್ದರು. ಲ್ಯಾಟಿನ್ ಅಮೆರಿಕದಲ್ಲೇ ಅತ್ಯಂತ ಹೆಚ್ಚು ಬಡತನ, ಅಸಮಾನತೆ, ಹಸಿವು, ನಿರುದ್ಯೋಗ ಇರುವ ಪೆರು ನಲ್ಲಿ ಆರ್ಥಿಕ ಅಭಿವೃದ್ಧಿಗೆ ಕೊರತೆ ಇಲ್ಲದಿದ್ದರೂ, ಬಡವರ ಪರಿಸ್ಥಿತಿ ತೀರಾ ಹದಗೆಡುತ್ತಾ ಬಂದಿತ್ತು. ಕೇವಲ ಶೇಕಡಾ 1 ರಷ್ಟು ಜಮೀನುದಾರರು ಶೇ.77ರಷ್ಟು ಕೃಷಿಯೋಗ್ಯ ಜಮೀನಿನ ಒಡೆಯರಾಗಿದ್ದಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದುರ್ಬಲವಾಗಿರುವ ಪೆರು ಮೇಲೆ ಕೊರೊನಾ ಎರಗಿದಾಗ ಪರಿಸ್ಥಿತಿ ತೀರಾ ಅಸಹನೀಯವಾಗಿತ್ತು. ಅದರಆರ್ಥಿಕತೆ 11% ಕುಸಿದಿತ್ತು, 30 ಲಕ್ಷಜನರುಬಡತನದ ರೇಖೆಯ ಕೆಳಗೆ ಬಂದರು. ಜನಸಂಖ‍್ಯೆಯ ಆಧಾರದಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ತಲಾ ಕೊರೊನಾ ಸಾವುಗಳನ್ನು ಕಂಡಿತು. ಪೆರು ನ ಜನಸಂಖ್ಯೆ 3.2 ಕೋಟಿಯಲ್ಲಿ 1.8 ಲಕ್ಷ ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. ಇಡೀ ದೇಶದಲ್ಲಿ ಕೇವಲ 1600 ಐಸಿಯು ಹಾಸಿಗೆಗಳನ್ನು ಹೊಂದಿದೆ. ವ್ಯಾಕ್ಸೀನ್ ಪಡೆದವರ ಪ್ರಮಾಣ (ಶೇ.4) ಸಹ ಲ್ಯಾಟಿನ್ ಅಮೆರಿಕದಲ್ಲೇ ಅತ್ಯಂತ ಕಡಿಮೆ. ಪೆರು ನಲ್ಲೇ.
1990-2000 ರ ಅವಧಿಯಲ್ಲಿ ಇಡೀ ಲ್ಯಾಟಿನ್ ಅಮೆರಿಕದಲ್ಲೇ ಅತ್ಯಂತ ಕ್ರೂರ ನವ-ಉದಾರವಾದಿ (ಜಾಗತೀಕರಣದ) ಸರ್ವಾಧಿಕಾರಿ ನೀತಿಗಳನ್ನು ಅಧ್ಯಕ್ಷರಾಗಿದ್ದ ಅಲ್ಬರ್ಟೊ ಫುಜಿಮೋರಿ ಜಾರಿ ಮಾಡಿದ್ದರು. ಆ ನೀತಿಗಳನ್ನು ವಿರೋಧಿಸಿದವರನ್ನು ಅತ್ಯಂತ ಕ್ರೂರವಾಗಿ ದಮನ ಮಾಡಲಾಗಿತ್ತು. ಸುಮಾರು 2.7 ಲಕ್ಷ ಹೆಚ್ಚಾಗಿ ಬುಡಕಟ್ಟುಗಳ, ಗ್ರಾಮೀಣ, ಬಡ ಹೆಂಗಸರನ್ನು, ಆ ಅವಧಿಯಲ್ಲಿ ಬಲಾತ್ಕಾರವಾಗಿ ಸಂತಾನಹರಣ ಆಪರೇಷನ್ ಗೆ ಒಳಪಡಿಸಲಾಗಿತ್ತು. “ಶೈನಿಂಗ್ ಪಾಥ್” ಎಂಬ “ಉಗ್ರ ಎಡಪಂಥೀಯ ಭಯೋತ್ಪಾದಕರನ್ನು ದಮನಿಸುವ” ಹೆಸರಲ್ಲಿ 70 ಸಾವಿರದಷ್ಟು ಜನರನ್ನು ಕೊಲ್ಲಲಾಗಿತ್ತು, ಇಲ್ಲವೇ ಅವರು ಕಾಣೆಯಾಗಿದ್ದರು. ಇವರಲ್ಲಿ ಶೇ. 80 ಗ್ರಾಮೀಣ ಬಡವರು ಮತ್ತು ಸ್ಥಳಿಯ ಬುಡಕಟ್ಟಿನ ಜನರು. ಈ ಮಾನವ ಹಕ್ಕುಗಳ ವಿರುದ್ಧವಾದ ಅಪರಾಧಿ ಕೃತ್ಯಗಳಿಗಾಗಿ ತಂದೆ ಫುಜಿಮೋರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂತಹ ತಂದೆಯನ್ನು ಬಿಡುಗಡೆ ಮಾಡಬಯಸುವ ಮಗಳನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದು ಪೆರು ನ ಬಡಜನರು ದೃಢನಿಶ್ಚಯ ಮಾಡಿದ್ದರು. ಕಳೆದ ಎರಡು ಚುನಾವಣೆಗಳಲ್ಲಿ ಆಕೆ ಸ್ಪರ್ಧಿಸಿದ್ದು ಸೋತಿದ್ದಾರೆ ಎಂದು ಇಲ್ಲಿ ಗಮನಿಸಬೇಕು. ಬಡವರ ಪರವಾಗಿರುವ ಸೂಕ್ತ ಎಡಪಂಥೀಯ ಅಭ್ಯರ್ಥಿ ಇದ್ದಿದ್ದರಿಂದ ಅವರ ಉತ್ಸಾಹ ಇಮ್ಮಡಿಸಿತ್ತು.
ಮುಂದೇನು?
ಕ್ಯಾಸ್ಟಿಲೊ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿತವಾಗಿ, ಪೆರುದೇಶದರಾಜಕೀಯಚಿತ್ರಣವೇ ಬದಲಾಗಿ ಅದಕ್ಕೆ ಹೊಸಸ್ವರೂಪಬರುವ ಎಲ್ಲಾಸಾಧ್ಯತೆಗಳಿವೆ.ಕ್ಯಾಸ್ಟಿಲೊ ಅವರು ಪೆರು ನ ಮೊದಲ ಎಡಪಂಥೀಯ ಅಧ್ಯಕ್ಷರಾಗಲಿದ್ದು, ಅವರಿಗೆ ತೀವ್ರ ಸವಾಲುಗಳು ಎದುರಾಗಲಿವೆ. ಅವರ ಆಯ್ಕೆಯ ಅನಧಿಕೃತ ಸುದ್ದಿಯಿಂದಲೇ ಶೇರು ಮಾರುಕಟ್ಟೆ ಕುಸಿತ ಕಂಡಿದೆ. ಪಾರ್ಲಿಮೆಂಟು (ಅವರ ಪಕ್ಷಕ್ಕಾಗಲಿ ಎಡ-ಪ್ರಗತಿಪರ ಪಕ್ಷಗಳಿಗೆ ಸ್ಪಷ್ಟ ಬಹುಮತವಿಲ್ಲ), ದೇಶದ ಸಿರಿವಂತರು, ಉದ್ಯಮಗಳು, ಮಾಧ್ಯಮಗಳು, ಬಹುರಾ಼ಷ್ಟ್ರೀಯ ಕಂಪನಿಗಳು, ಯು.ಎಸ್ ಸರಕಾರ ಎಲ್ಲವೂ ಅವರ ಸರಕಾರಕ್ಕೆ ತೀವ್ರ ಪ್ರತಿರೋಧ ಒಡ್ಡಲಿವೆ. ಅವರ ಪ್ರತಿರೋಧ ಮುರಿಯಲು ಎದುರಿಸಲು ಕ್ಯಾಸ್ಟಿಲೊ ಬಡಜನರನ್ನು ರಾಜಕೀಯವಾಗಿ, ಅಗತ್ಯ ಬಿದ್ದರೆ ವೆನೆಜುವೇಲಾ, ಬೊಲಿವಿಯ ಗಳಂತೆ ಬೀದಿಗಳಲ್ಲಿ ಇಳಿದು ಹೋರಾಡಲು ಅಣಿನೆರೆಸುವುದು ಅಗತ್ಯವಾಗಬಹುದು. ಆದರೆ ವೆನೆಜುವೇಲಾ, ಬೊಲಿವಿಯ ಮುಂತಾದ ಲ್ಯಾಟಿನ್ ಅಮೆರಿಕದ ಎಡಪಂಥೀಯ ಸರಕಾರಗಳು ಅವರನ್ನು ಬೆಂಬಲಿಸಲಿವೆ.
ಪೆರು ನ ಈ ಫಲಿತಾಂಶವನ್ನು ಲ್ಯಾಟಿನ್ ಅಮೆರಿಕದ ಮತ್ತು ಉತ್ತರ ಅಮೆರಿಕದ ಆಳರಸರೂ ಗಮನಿಸುತ್ತಿದ್ದಾರೆ. ಕ್ಯಾಸ್ಟಿಲೊ ಅಧ್ಯಕ್ಷರಾದರೆ, ಅದು ಯು.ಎಸ್ ಆಳುವ ವಲಯಗಳಿಗೆ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಲ್ಯಾಟಿನ್ ಅಮೆರಿಕದ ಹೆಚ್ಚುತ್ತಿರುವ ‘ಎಳೆಗೆಂಪು ಅಲೆ’ (ಎಡಪಂಥೀಯ ಸರಕಾರಗಳು ಚುನಾಯಿತವಾಗುವುದು) ಗೆ ಕುಮ್ಮಕ್ಕು ಸಿಗಲಿದೆ. ಮುಂಬರುವ ಚಿಲಿ, ಬ್ರೆಜಿಲ್, ಕೊಲಂಬಿಯ ಚುನಾವಣೆಗಳಲ್ಲಿ ಎಡ-ಪ್ರಗತಿಪರ ಶಕ್ತಿಗಳಿಗೆ ಸ್ಫೂರ್ತಿಯಾಗಲಿದೆ.