ನಟ ಹಾಗೂ ಹಿರಿಯ ಪತ್ರಕರ್ತರಾದ ಲಿಂಗೇನಹಳ್ಳಿ ಸುರೇಶ್ಚಂದ್ರ ನಿಧನ

ಬೆಂಗಳೂರು: ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ರಂಗದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತರಾದ ಲಿಂಗೇನಹಳ್ಳಿ ಸುರೇಶ್ಚಂದ್ರ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಕೋವಿಡ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

ಪತ್ರಿಕೋದ್ಯಮದಲ್ಲಿ ಸ್ನಾತಕ್ಕೋತ್ತರ ಪದವಿಯಗಳಿಸಿದ್ದ ಸುರೇಶ್ಚಂದ್ರ ಅವರು  ’ಸಂಜೆವಾಣಿ’ ಹಾಗೂ ಕೆಲದಿನಗಳ ಕಾಲ ’ಈ ಸಂಜೆ’ಯಲ್ಲಿ ಸೇವೆ ಸಲ್ಲಿಸಿದ್ದ ಸುರೇಶ್ಚಂದ್ರರವರು ಕೆಲವು ಚಲನಚಿತ್ರಗಳಲ್ಲೂ ಅಭಿನಯಿಸಿ ಜನಮನಗೆದ್ದಿದ್ದರು.

ನಾಟಕ, ಸಾಹಿತ್ಯ, ಸಂಗೀತ ಅದರಲ್ಲೂ ಭಾವಗೀತೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಸುರೇಶ್ಚಂದ್ರರವರು ಸಂಜೆವಾಣಿ ಬೆಂಗಳೂರಿನಲ್ಲಿ ಪ್ರಾರಂಭವಾದ ದಿನದಿಂದಲೂ ಸೇವೆ ಸಲ್ಲಿಸಿದ್ದರು. ವಿದ್ಯಾಭ್ಯಾಸದ ಸಂದರ್ಭದಲ್ಲೇ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಸಂಜೆವಾಣಿಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು 2019ರಂದು ನಿವೃತ್ತಿಯಾಗಿದ್ದರು.

ಚಂದನ ಮಾಸಿಕ ಪತ್ರಿಕೆಯಲ್ಲಿ ನರಹಂತಕ ವೀರಪ್ಪನ್ ಕುರಿತಂತೆ ಸುರೇಶ್ಚಂದ್ರರವರು ಬರೆಯುತ್ತಿದ್ದ ಲೇಖನ ಹೆಚ್ಚು ಜನಪ್ರಿಯವಾಗಿತ್ತು.

ಕಾಡುಗಳ್ಳ ವೀರಪ್ಪನ್‌ನ ಹುಟ್ಟು, ಬದುಕು, ಕಾರುಗಳ್ಳನಾಗಿ ಮಾರ್ಪಾಡಾದ ವಿವರಗಳನ್ನೆಲ್ಲಾ ಸಂಗ್ರಹಿಸಿ, ಬರೆಯುತ್ತಿದ್ದ ಅವರ ಅಂಕಣ ಹೆಚ್ಚು ಜನಪ್ರಿಯವಾಯಿತು. ಪೊಲೀಸರಿಗೂ ಸಿಗದ ಮಾಹಿತಿಯನ್ನು ಹೆಕ್ಕಿ ತೆಗೆಯುವಲ್ಲಿ ನಿಸ್ಸೀಮರಾಗಿದ್ದರು.

ಸಿನಿಮಾ ಕ್ಷೇತ್ರದ ಬಗ್ಗೆ ವಿಶೇಷವಾದ ಲೇಖನಗಳನ್ನು ಅವರು ಬರೆಯುತ್ತಿದ್ದರು.

ಕುವೆಂಪು ಅವರ ಬಗ್ಗೆ ಸಾಕಷ್ಟು ಓದಿಕೊಂಡಿದ್ದ ಅವರು ಹಲವಾರು ಕಡೆಗಳಲ್ಲಿ ಸಂದರ್ಭ ಸಿಕ್ಕಕಡೆಗಳಲ್ಲೆಲ್ಲ ಕುವೆಂಪು ಅವರ ಸಾಹಿತ್ಯದ ಬಗ್ಗೆ ಅಪಾರವಾದ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದರು.

ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದ ಸುರೇಶ್ಚಂದ್ರ ಅವರು ಅಭಿನಯಸಿದ್ದರು. ಹಲವು ಚಿತ್ರಗಳಲ್ಲಿ ಅತಿಥಿ ಕಲಾವಿದರಾಗಿಯೂ ಅಭಿನಯಿಸಿದ್ದಾರೆ. ಎಸ್‌. ನಾರಾಯಣ್‌ ಅವರ ನಿರ್ದೇಶನದ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಚಲನಚಿತ್ರಗಳಿಗೆ ಪೂರ್ಣ ಪ್ರಮಾಣದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಸುಮಾರು 25 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಪತ್ರಿಕಾರಂಗದಲ್ಲಿರುವಾಗಲೇ ವಿಷ್ಣುವರ್ಧನ್‌, ಅಂಬರೀಶ್‌ ಸೇರಿದಂತೆ ಹಲವಾರು ನಟರೊಂದಿಗೆ ಅತ್ಯಂತ ಆತ್ಮೀಯವಾದ ಗೆಳೆತನವನ್ನು ಬೆಳೆಸಿಕೊಂಡಿದ್ದರು.

ತುಮಕೂರು ಜಿಲ್ಲೆಯ ಮಧುಗಿರಿಯ ಲಿಂಗೇನಹಳ್ಳಿಯವರಾದ ಸುರೇಶ್ಚಂದ್ರ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಮಧುಗಿರಿ ತಾಲ್ಲೂಕಿನ ಲಿಂಗೇನಹಳ್ಳಿಯಲ್ಲಿ ಇಂದು ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *