ಚೆನ್ನೈ: ಕೇಂದ್ರ ಸರ್ಕಾರದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಸಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ ಕೃಷ್ಣ ಗುರುವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ ನಿಯಮಗಳ ಮಾರ್ಗಸೂಚಿಗಳು), 2021 ಅನಿಯಂತ್ರಿತ, ಅಸ್ಪಷ್ಟ ಮತ್ತು ಅವಿವೇಕದ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಟಿ.ಎಂ ಕೃಷ್ಣ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್ ಗುರುವಾರ ಭಾರತ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಟಿ.ಎಂ.ಕೃಷ್ಣ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಕೇಂದ್ರ ಸರ್ಕಾರವು ಮೂರು ವಾರಗಳ ಒಳಗೆ ಕೌಂಟರ್ ಅಫಿಡವಿಟ್ ಸಲ್ಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂತಿಲ್ಕುಮಾರ್ ರಾಮಮೂರ್ತಿ ಅವರಿದ್ದ ನ್ಯಾಯಪೀಠ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಹೊಸ ನಿಯಮಗಳು ಅಸಂವಿಧಾನಿಕ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ಕ್ಕೆ ಅಲ್ಟ್ರಾ ವೈರಸ್ ಅಂತಾ ಘೋಷಿಸುವಂತೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಹೊಸ ನಿಯಮಗಳು ಖಾಸಗಿತನ ಹಾಗೂ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದು, ಅಸಂವಿಧಾನಿಕವಾಗಿದೆ. ಕಲಾವಿದರು ಮತ್ತು ಸಾಂಸ್ಕೃತಿಕ ವಿಮರ್ಶಾತ್ಮಕರ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಅರ್ಜಿಯಲ್ಲಿ ಕೃಷ್ಣ ಉಲ್ಲೇಖಿಸಿದ್ದಾರೆ.
ಕಲಾವಿದ ಮತ್ತು ಕಲಾ ವಿಮರ್ಶಕನಾಗಿ ನನಗಿರುವ ಹಕ್ಕುಗಳನ್ನು ಈ ನಿಯಮಗಳು ಉಲ್ಲಂಘಿಸುತ್ತವೆ ಎಂದು ಕೃಷ್ಣ ಹೇಳಿದ್ದಾರೆ. ‘ನನ್ನ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ವಾಕ್ ಸ್ವಾತಂತ್ರ್ಯಕ್ಕೂ ಧಕ್ಕೆಯುಂಟು ಮಾಡುತ್ತದೆ’ ಎಂದು ಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ : ವೆಬ್ ಮಾಧ್ಯಮಗಳ ಸೆನ್ಸಾರಿನತ್ತ ದೊಡ್ಡ ಹೆಜ್ಜೆ
ಕೇಂದ್ರದ ಅಧಿಸೂಚನೆಯಲ್ಲಿರುವ 2ನೇ ಪರಿಚ್ಛೇದ (ಸೋಷಿಯಲ್ ಮೀಡಿಯಾ ಮೇಲಿನ ನಿಯಂತ್ರಣ ಕ್ರಮಗಳು) ಹಲವು ಅಂಶಗಳು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರನಾಗಿ ನನ್ನ ಹಕ್ಕುಗಳನ್ನು ಉಲ್ಲಂಘಿಸಿದೆ. 3ನೇ ಪರಿಚ್ಛೇದ (ಡಿಜಿಟಲ್ ಸುದ್ದಿ ಮಾಧ್ಯಮ ಮತ್ತು ಒಟಿಟಿ ವೇದಿಕೆಗಳ ನಿಯಮ) ಒಬ್ಬ ಆನ್ಲೈನ್ ಕಂಟೆಂಟ್ ಕ್ರಿಯೇಟರ್ ಆಗಿ ನನಗಿರುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಎಂದು ದೂರಿದ್ದಾರೆ.
ಒಬ್ಬ ಕಲಾವಿದನಾಗಿ, ಸಾಂಸ್ಕೃತಿಕ ಮತ್ತು ರಾಜಕೀಯ ವಿಶ್ಲೇಷಕನಾಗಿ ಮುಕ್ತ ಅಭಿವ್ಯಕ್ತಿಯನ್ನು ಮತ್ತು ಸಂವಿಧಾನವು ಖಾತ್ರಿಪಡಿಸಿರುವ ಗೌಪ್ಯತಾ ಹಕ್ಕುಗಳನ್ನು ಪ್ರತಿಪಾದಿಸುತ್ತೇನೆ. ನನಗೆ ಗೌಪ್ಯತೆ ಎನ್ನುವುದು ಸಂಗೀತದಂತೆಯೇ ಒಂದು ಅನುಭವ ನಾನು ಗೌಪ್ಯತೆ ಎದು ಯೋಚಿಸಿದಾಗ ಬದುಕಿನ ಬಗ್ಗೆ, ಆತ್ಮೀಯತೆಯ ಬಗ್ಗೆ, ಅನುಭವಗಳ ಬಗ್ಗೆ, ಶೋಧನೆಗಳ ಬಗ್ಗೆ, ಭದ್ರತೆಯ ಬಗ್ಗೆ, ಸಂತೋಷದ ಬಗ್ಗೆ ಯೋಚಿಸುತ್ತೇನೆ. ಯಾವುದೇ ಭಯ ಅಥವಾ ಆತಂಕವಿಲ್ಲದ ಸ್ಥಿತಿಯಲ್ಲಿ ಮಾತ್ರ ಒಂದು ಸೃಜನಶೀಲ ಕೃತಿ ರೂಪಿಸಲು ಸಾಧ್ಯ. ನನ್ನ ಸ್ವಭಾವದ ಭಾಗವಾಗಿಯೇ ಸ್ವಾತಂತ್ರ್ಯ ಮತ್ತು ಘನತೆಯನ್ನು ಪರಿಭಾವಿಸುತ್ತೇನೆ. ಒಬ್ಬ ಕಲಾವಿದನಾಗಿ ಮಾತ್ರವಲ್ಲ, ಒಬ್ಬ ಮನುಷ್ಯನಾಗಿಯೂ ನನಗೆ ಸ್ವಾತಂತ್ರ್ಯ ಬೇಕು’ ಎಂದು ಅವರು ಹೇಳಿದ್ದಾರೆ.
ಟಿಎಂ ಕೃಷ್ಣ ಪರ ವಕೀಲ ಸುಹ್ರೀತ್ ಪಾರ್ಥಸಾರಥಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ.
Very good