ಮುಂಬಯಿ: ನೈಋತ್ಯ ಮುಂಗಾರುಯ ಇಂದು ಮುಂಬೈಗೆ ಆಗಮಿಸಿದ್ದು, ಮುಂಜಾನೆಯಿಂದಲೇ ನಗರ ಮತ್ತು ಉಪನಗರಗಳಲ್ಲಿ ಭಾರಿ ಮಳೆಯಾಗಿದೆ. ಮುಂಬೈನ ಸಾಂತಾಕ್ರೂಜ್ನಲ್ಲಿ ಇಂದು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 2: 30 ರ ನಡುವೆ 168.8 ಮಿ.ಮೀ ಮಳೆಯಾಗಿದೆ. ಮುಂದಿನ ನಾಲ್ಕು ದಿನಗಳವರೆಗೆ ಮುಂಬೈನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅಲ್ಲದೇ ಸ್ಥಳೀಯ ಬಸ್ ಮತ್ತು ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿರುವುದಾಗಿ ಭಾರತ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈಗೆ ರೆಡ್ ಅಲರ್ಟ್ ಮತ್ತು ಮುಂದಿನ ನಾಲ್ಕು ದಿನಗಳವರೆಗೆ ಹಳದಿ ಅಲರ್ಟ್ ಘೋಷಿಸಿದೆ. ಕೊಂಕಣ ಕಿನರಪಟ್ಟಿಯ ಕೆಲವು ಜಿಲ್ಲೆಗಳಲ್ಲಿಯೂ ಸಹ ಮುಂಬರುವ ದಿನಗಳಲ್ಲಿ ಭಾರಿ ಮಳೆಯಾಗಬಹುದು ಇಲಾಖೆ ದೃಢಪಡಿಸಿದೆ.
ಇದೇ ಸಂದರ್ಭದಲ್ಲಿ ಕೊಲಾಬಾ ಪ್ರದೇಶದಲ್ಲಿ ದಾಖಲೆಯ 77 ಮಿಲಿ ಮೀಟರ್ ಮಳೆಯಾಗಿದೆ. ಮುಂದಿನ 5 ದಿನಗಳಲ್ಲಿ ಕೊಂಕಣ ಮತ್ತು ಗೋವಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆಯು ತಿಳಿಸಿದೆ. ಮುಂಬಯಿ ಮಹಾನಗರ ಪಾಲಿಕೆ ಮಾಹಿತಿ ಪ್ರಕಾರ, ಮುಂಬೈ ನಗರದಲ್ಲಿ ದಾಖಲೆಯ 48.49 ಮಿ.ಮೀಟರ್ , ಪೂರ್ವ ಉಪನಗರದಲ್ಲಿ 66.99 ಮಿಲಿ ಮೀಟರ್ ಮತ್ತು ಪಶ್ಚಿಮ ಮುಂಬಯಿ ನಗರಿಯಲ್ಲಿ 48.99 ಮಿಲಿ ಮೀಟರ್ ಮಳೆಯಾಗಿರುವುದಾಗಿ ವರದಿ ತಿಳಿಸಿದೆ.
ಕೊಂಕಣ ಕಿನರಪಟ್ಟಿಯ (ಕರಾವಳಿ ಪಟ್ಟಿ) ಕೆಲವು ಜಿಲ್ಲೆಗಳಿಗೆ ಹಳದಿ ಮತ್ತು ಕೆಂಪು ಎಚ್ಚರಿಕೆ ನೀಡಲಾಗಿದೆ. ಮುಂಬೈಗೆ ಇಂದು ರೆಡ್ ಅಲರ್ಟ್ ನೀಡಲಾಗಿದೆ ಮತ್ತು ಮುಂದಿನ 4 ದಿನಗಳವರೆಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಮುಂಬೈ ಸೇರಿದಂತೆ ಕೊಂಕಣ ಕಿನರಪಟ್ಟಿ ಮುಂದಿನ 4 ದಿನಗಳವರೆಗೆ ಭಾರಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಮುಂಬೈನ ವಿಜ್ಞಾನಿ ಶುಭಂಗಿ ಭೂಟೆ ಹೇಳಿಕೆ ನೀಡಿದ್ದಾರೆ.
ಅನೇಕ ಸ್ಥಳಗಳಲ್ಲಿ ನೀರು ತುಂಬಿದ್ದು, ಸ್ಥಳೀಯ ರೈಲು ಸೇವೆಗಳಿಗೆ ಅಡ್ಡಿಯಾಗಿದೆ. ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ಯಿಂದ ನೆರೆಯ ಥಾಣೆ ಮತ್ತು ನವೀ ಮುಂಬಯಿಯ ವಾಶಿಗೆ ಸ್ಥಳೀಯ ರೈಲು ಸೇವೆಗಳನ್ನು ಬುಧವಾರ ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ನಗರದ ನಾಗರಿಕ ಸಂಸ್ಥೆಯ ಸಾರಿಗೆ ವಿಭಾಗವನ್ನು ನಡೆಸುವ ಕೆಲವು ಬಸ್ಗಳ ಮಾರ್ಗಗಳನ್ನು ಸಹ ಬದಲಾವಣೆ ಮಾಡಲಾಗಿದೆ.
ಸೆಂಟ್ರಲ್ ರೈಲ್ವೆ (ಸಿಆರ್) ಮಾರ್ಗದಲ್ಲಿ ಸಿಯಾನ್ ಮತ್ತು ಚುನಭಟ್ಟಿ ನಿಲ್ದಾಣಗಳ ಸಮೀಪವಿರುವ ಹಳಿಗಳನ್ನು ಒಳಗೊಂಡಂತೆ ನಗರದ ಹಲವಾರು ಸ್ಥಳಗಳಲ್ಲಿ ಪ್ರವಾಹ ಉಂಟಾಗಿದೆ. ಸಂಗ್ರಹವಾದ ಮಳೆನೀರನ್ನು ಬೇಗನೆ ಹರಿಸುವುದನ್ನು ಖಚಿತಪಡಿಸಿಕೊಳ್ಳಲು ಸಾರಿಗೆ ಪುನರಾರಂಭಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಡಳಿತಕ್ಕೆ ನಿರ್ದೇಶನ ನೀಡಿದರು.
ರೆಡ್ ಅಲರ್ಟ್ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಎಚ್ಚರಿಕೆ ಘೋಷಿಸಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ‘ಹಳದಿ’ ಅಲರ್ಟ್ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ‘ಅಪ್ ಡೇಟ್ ‘ ಮಾಡಬೇಕು ಎಂದು ಸೂಚಿಸುತ್ತದೆ. ಇದಲ್ಲದೆ, ಮುಂದಿನ ಐದು ದಿನಗಳಲ್ಲಿ ಗೋವಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಟ್ವೀಟ್ ಮಾಡಿದೆ.
ಮುಂಬೈನ ನಿಯಂತ್ರಣ ಕೊಠಡಿಗಳೊಂದಿಗೆ ಥಾಣೆ, ರಾಯ್ಗಡ್, ರತ್ನಾಗಿರಿ, ಸಿಂಧುದುರ್ಗ್ ಮತ್ತು ಪಾಲ್ಘರ್ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಠಾಕ್ರೆ ಮಾತನಾಡಿದ್ದಾರೆ. ನಿರಂತರ ಮಳೆಯಿಂದಾಗಿ ಹಲವಾರು ಪ್ರದೇಶಗಳು ಮುಳುಗಿದ್ದು ಜನ ಸಾಮಾನ್ಯರ ಜೀವನ ಅಸ್ತವ್ಯಸ್ತಗೊಂಡಿದೆ.
ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ಈ ಮೊದಲು ಜೂನ್ 3ರಂದು ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು, ಜೂನ್ 10ಕ್ಕೆ ಮುಂಬಯಿಗೆ ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಒಂದು ಮುಂಚಿತವಾಗಿ ಇಂದು ಭಾರೀ ಮಳೆಯಾಗಿದೆ.
ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲೂ ಮಳೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಶುರುವಾಗಿದ್ದು, ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಇಂದಿನಿಂದ ಮತ್ತೆ ಮೂರು ದಿನ ಹೆಚ್ಚಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕೃಷಿಕರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಬೆಂಗಳೂರಲ್ಲೂ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ದೇಶಾದ್ಯಂತ ಬಹುತೇಕ ರಾಜ್ಯ, ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.