ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ 3,677 ಎಕರೆ ಭೂಮಿಯನ್ನು ಜೆಎಸ್ಡಬ್ಲ್ಯು ಸ್ಟೀಲ್ಸ್ ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಜಮೀನಗಳ ಕ್ರಯಪತ್ರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಗರದ ಬಿಎಂ ಲೇಔಟ್ ನ ನಿವಾಸಿ ಕೆ.ಎ.ಪಾಲ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ಆದೇಶವನ್ನು ನೀಡಿದೆ.
ಇದನ್ನು ಓದಿ: ಜಿಂದಾಲ್ ಗೆ ಮಾರಾಟ ಮಾಡಿದ ಭೂ ಬೆಲೆಯಿಂದ ಸರಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟ ಸಿಪಿಐಎಂ ಖಂಡನೆ
ಮುಖ್ಯ ಕಾರ್ಯದರ್ಶಿ, ಹಣಕಾಸು, ಗೃಹ ಮತ್ತು ಕಂದಾಯ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಕಾನೂನು, ಗಣಿ ಮತ್ತು ಭೂವಿಜ್ಞಾನ ಮತ್ತು ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗಗಳ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಾಲಯ ನೋಟಿಸ್ ನೀಡಿದೆ.
‘ಸರ್ಕಾರಿ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಜೆಎಸ್ಡಬ್ಲ್ಯು ಕಂಪನಿಗೆ ಮಾರಾಟ ಮಾಡಲಾಗಿದೆ. ಇದಕ್ಕೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದರೂ ಸಂಪುಟ ಸಭೆಯಲ್ಲಿ ಪರಿಗಣಿಸಿರಲಿಲ್ಲ’ ಎಂದು ಅರ್ಜಿದಾರರ ಪರ ವಕೀಲ ಎಸ್. ದೊರೈರಾಜು ವಾದಿಸಿದರು.