ನವದೆಹಲಿ: ಕೋವಿಡ್ ಲಸಿಕೆ ವಿತರಣೆಗೆ ಕೆಲವು ರಾಜ್ಯಗಳಿಂದ ವಿಕೇಂದ್ರಿಕರಣಕ್ಕೆ ಒತ್ತಾಯ ಕೇಳಿಬಂದಿದ್ದು ರಾಜ್ಯಗಳಿಗೆ ಈಗ ಸಮಸ್ಯೆ ಏನೆಂದು ಗೊತ್ತಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ವ್ಯಾಕ್ಸಿನ್ ಉತ್ಪಾದನೆ ಮಾಡಲಾಗಿದೆ. ಇನ್ನು ಮುಂದೆ ಕೇಂದ್ರ ಸರಕಾರವೇ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ಪೂರೈಸಲಿದೆ ಎಂದು ಇಂದು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮುಂದಿನ 2 ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ. ಲಸಿಕಾಕರಣದ ರಾಜ್ಯಗಳ ಶೇ.25ರಷ್ಟು ಭಾಗವನ್ನೂ ಭಾರತ ಸರಕಾರವೇ ವಹಿಸಿಕೊಂಡಿದ್ದು, ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೇರಿಕೊಂಡು ಹೊಸ ಮಾರ್ಗಸೂಚಿ ಅನುಸರಿಸಬೇಕಿದೆ. ರಾಜ್ಯ ಸರಕಾರಗಳ ಲಸಿಕೆ ಬೇಡಿಕೆಯನ್ನು ಕೇಂದ್ರ ಈಡೇರಿಸಲಿದೆ ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಈ ಹಿಂದೆ ಲಸಿಕೆಗಳ ಹಂಚಿಕೆಯಲ್ಲಿ ಶೇಕಡಾ 50ರಷ್ಟು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಶೇಕಡಾ 25ರಂತೆ ಖರೀದಿಸಲು ತೀರ್ಮಾನಿಸಲಾಗಿತ್ತು. ಇಂದು ಪ್ರಧಾನಮಂತ್ರಿ ಹೇಳಿಕೆಯ ಪ್ರಕಾರ ಶೇಕಡಾ 75ರಷ್ಟು ಲಸಿಕೆಗಳನ್ನು ಕೇಂದ್ರ ಸರಕಾರವೇ ಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡಲಿದೆ.
ಇದನ್ನು ಓದಿ: ಹ್ರಾಂ ಹ್ರೂಂ ವಿಜ್ಞಾನ ಮತ್ತು ಹ್ರಾಂ ಹ್ರೂಂ ಅರ್ಥಶಾಸ್ತ್ರ
ಅದೇ ರೀತಿಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ದೀಪಾವಳಿಯ ತನಕ ದೇಶದ 80 ಕೋಟಿ ಬಡ ಜನತೆಗೆ ಉಚಿತವಾಗಿ ಆಹಾರ ಧಾನ್ಯ ನೀಡಲಾಗುವುದು ಎಂದು ಮೋದಿ ಘೋಷಿಸಿದ್ದಾರೆ.
ಶೇ.25ರಷ್ಟು ಕೋವಿಡ್ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು. ಆಸ್ಪತ್ರೆಗಳು ರೂ.150 ಮಾತ್ರ ಸೇವಾ ಶುಲ್ಕ ಪಡೆಯಬೇಕು. ದೇಶಾದ್ಯಂತ ಲಸಿಕೆ ನೀಡಿಕೆ ವೇಗವಾಗಿ ನಡೆಯುತ್ತಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸರಕಾರ ಪ್ರಯತ್ನಿಸುತ್ತಿದೆ. ದೇಶದ 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ದೊಡ್ಡ ಸವಾಲಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಲಸಿಕೆ ನೀಡಿಕೆ ನಿಧಾನಗತಿಯಲ್ಲಿದೆ. 23 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. ಲಸಿಕೆಯು ಕೊರೊನಾ ವಿರುದ್ಧ ಹೋರಾಟದಲ್ಲಿ ಏಕೈಕ ಅಸ್ತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನು ಓದಿ: ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?
ಕೊರೋನ ಈ ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ. ಆಧುನಿಕ ಜಗತ್ತು ಈ ಹಿಂದೆಂದೂ ಇಂತಹ ಸಂಕಷ್ಟ ಎದುರಿಸಿರಲಿಲ್ಲ. ಕೊರೋನ ಇಡೀ ಜಗತ್ತನೇ ಕಂಗೆಡಿಸಿದೆ. ಭಾರತ ಶಕ್ತಿಮೀರಿ ಕೊರೋನ ವಿರುದ್ಧ ಹೋರಾಡಿದೆ. ಕೊರೋನದಿಂದಾಗಿ ನಮ್ಮ ಜೊತೆಗಿದ್ದ ಹಲವರನ್ನು ಕಳೆದುಕೊಂಡಿದ್ದೇವೆ. ಹೊಸ ಆರೋಗ್ಯ ಸೌಕರ್ಯ ಮಾಡಲಾಗಿದೆ. ರೈಲು, ವಿಮಾನಗಳ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಕೊರೋನ ರೂಪಾಂತರಿ ಅದೃಶ್ಯ ವೈರಿಯಾಗಿದೆ. ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆ ಮಾಡಿದ್ದರಿಂದ ಕೆಲವು ಜೀವ ಉಳಿದಿದೆ. ವಿದೇಶದಲ್ಲಿ ಲಸಿಕೆ ಉತ್ಪಾದನೆ ಯಾದರೂ ನಮಗೆ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಕೆಲವು ಮುಖ್ಯ ಅಂಶಗಳು
- ದೇಶದ ಎಲ್ಲ ಜನರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆಯನ್ನು ನೀಡಲಿದೆ.
- ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನ. ಅಂದಿನಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.
- ಯಾವುದೇ ರಾಜ್ಯ ಸರ್ಕಾರಗಳಿಗೆ ಲಸಿಕಾಕರಣಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಕಿಲ್ಲ.
- ಖಾಸಗಿ ಆಸ್ಪತ್ರೆಗಳಿಗೂ ಶೇ.25 ಲಸಿಕೆಗಳನ್ನು ಖರೀದಿಸಬಹುದು. ಅವರು ಗರಿಷ್ಠ 150 ರೂ. ಸೇವಾ ಶುಲ್ಕ ಮಾತ್ರ ಪಡೆಯಬೇಕು.
- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 80 ಕೋಟಿ ಮಂದಿಗೆ ಉಚಿರ ರೇಷನ್ ಒದಗಿಸಲಾಗಿತ್ತು.
- ಈ ವರ್ಷವೂ ಮೇ ಹಾಗೂ ಜೂನ್ ತಿಂಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.
- ಈ ಯೋಜನೆಯು ದೀಪಾವಳಿವರೆಗೂ ಮುಂದುವರಿಯಲಿದೆ.
- ಪ್ರತಿಯೊಬ್ಬ ಬಡ ನಾಗರಿಕರ ಜತೆಗೆ ಸರ್ಕಾರವೂ ಇದೆ. ನವೆಂಬರ್ವರೆಗೆ ಎಲ್ಲ 80 ಕೋಟಿ ಮಂದಿಗೆ, ಉಚಿತವಾಗಿ ಧಾನ್ಯ ವಿತರಿಸಲಾಗುತ್ತದೆ.
- ಬೇರೆ ದೇಶಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಗಳಿಗೆ ವೇಗ ನೀಡಲಾಗಿದೆ.
- ಭಾರತದಲ್ಲಿ ಲಸಿಕೆ ತಯಾರಿಸುವ ಕಂಪನಿಗಳಿಗೆ ಎಲ್ಲ ರೀತಿಯಲ್ಲೂ ಸರ್ಕಾರವು ನೆರವು ನೀಡಿ, ಭುಜಕ್ಕೆ ಭುಜ ಕೊಟ್ಟು ಗಟ್ಟಿಯಾಗಿ ನಿಂತಿದೆ.
- ಇಂದು, ದೇಶಗಳಲ್ಲಿ 7 ಕಂಪನಿಗಳು ವಿಭಿನ್ನ ರೀತಿಯ ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಿವೆ.
- ಇದೀಗ ಮೂರನೇ ಅಲೆಯ ಆತಂಕವಿರುವುದರಿಂದಾಗಿ, ಮಕ್ಕಳಿಗಾಗಿ ಎರಡು ಲಸಿಕೆಗಳ ಪ್ರಯೋಗವೂ ವೇಗವಾಗಿ ನಡೆಯುತ್ತಿದೆ.
ದೇಶದ ಹಲವು ರಾಜ್ಯಗಳು ಹಾಗೂ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಒಳಗೊಂಡ ಪ್ರತಿಪಕ್ಷಗಳು ಹಲವಾರು ಬಾರಿ ಉಚಿತ ಲಸಿಕೆ ವಿತರಣೆ ಹಾಗೂ ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ಸಾರ್ವತ್ರಿಕ ಪಡಿತರ ಮೂಲಕ ಆಹಾರಧ್ಯಾನ್ಯಗಳನ್ನು ಉಚಿತವಾಗಿ ವಿತರಿಸಬೇಕೆಂದು ಆಗ್ರಹಿಸಿದ್ದವು.
ಇದನ್ನು ಓದಿ: ಕೇರಳ: ಕೋವಿಡ್ ಎರಡನೇ ಅಲೆ ಎದುರಿಸಲು ರೂ.20 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
ಇತ್ತೀಚಿಗೆ ಅಷ್ಟೇ ಕೇರಳದ ವಿಧಾನಸಭಾ ಅಧಿವೇಶನದಲ್ಲಿ ದೇಶವ್ಯಾಪಿ ಉಚಿತ ಲಸಿಕೆ ವಿತರಿಸಬೇಕೆಂದು ಕೇಂದ್ರ ಸರಕಾರವು ಕ್ರಮಕೈಗೊಳ್ಳಬೇಕೆಂದು ನಿರ್ಣಯವನ್ನು ಅಂಗೀಕರಿಸಿದ್ದವು. ಅಲ್ಲದೆ, ಹಲವು ಬಿಜೆಪಿಯೇತರ ರಾಜ್ಯಗಳು ಉಚಿತ ಲಸಿಕೆಗಾಗಿ ಆಗ್ರಹಿಸಿದ್ದವು.
ದೇಶದೆಲ್ಲೆಡೆಯಿಂದ ಭಾರೀ ಪ್ರಮಾಣದಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಬಂದ ಪರಿಣಾಮವಾಗಿ ಒಂದು ಕೇಂದ್ರದ ಬಿಜೆಪಿ ಸರಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಗೂ ಉಚಿತ ಆಹಾರ ಧಾನ್ಯಗಳ ವಿತರಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದೆ.