200ಕ್ಕೂ ಹೆಚ್ಚು ವಿಜ್ಞಾನಿಗಳು, ಡಾಕ್ಟರುಗಳು, ಅಕೆಡೆಮಿಕ್‌ಗಳ ಅನುಮೋದನೆ
ಭಾರತದಲ್ಲಿ ಕೊವಿಡ್-19 ಮಹಾಸೋಂಕನ್ನು ಎದುರಿಸಲು ಅತ್ಯಗತ್ಯವಾದ ಲಸಿಕೆಗಳ ಸದ್ಯದ ಉತ್ಪಾದನೆಯ ಸ್ವರೂಪವನ್ನು ಕಂಡರೆ ದೇಶದ ಇಡೀ ಜನಸಂಖ್ಯೆಗೆ ಲಸಿಕೆ ನೀಡುವುದು ಬಹಳ ದೂರದ ಕನಸು; ಇದು ಕೈಗೂಡಬೇಕಾದರೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಉತ್ಪಾದನೆಯನ್ನು ತುರ್ತಾಗಿ ವಿಸ್ತರಿಸುವುದು ಅತ್ಯಗತ್ಯ, ಲಸಿಕೆ ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಆದಷ್ಟು ಬೇಗನೇ ವಿಸ್ತರಿಸಬೇಕು ಎಂದು ‘ಅಖಿಲ ಭಾರತ ಜನವಿಜ್ಞಾನ ಜಾಲ’(ಎ.ಐ.ಪಿ.ಎಸ್.ಎನ್.) ಮೇ 27ರಂದು ಪ್ರಕಟಿಸಿರುವ ಹೇಳಿಕೆ ಆಗ್ರಹಿಸಿದೆ.
2000ದ ದಶಕದವರೆಗೆ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ 80%ದಷ್ಟು ಭಾರತದ ಲಸಿಕೆ ಸಾರ್ವಜನಿಕ ವಲಯದ ಮೂಲದಿಂದ ಉತ್ಪಾದನೆಯಾಗಿತ್ತು. ಇಂದು, 90%ದಷ್ಟು, ಅದೂ ದುಬಾರಿ ಬೆಲೆಗೆ ಖಾಸಗಿ ವಲಯದಿಂದ ಪೂರೈಕೆಯಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿರುವ ಎ.ಐ.ಪಿ.ಎಸ್.ಎನ್. ಹೇಳಿಕೆ, ಲಸಿಕೆಗಳ ಸ್ಥಳೀಯ ಉತ್ಪಾದನೆಯನ್ನು ವಿಸ್ತರಿಸಲು ಕೊಡುಗೆ ನೀಡಬಲ್ಲ ಹಲವು ಸಾರ್ವಜನಿಕ ವಲಯದ ಮತ್ತು ಖಾಸಗಿ ವಲಯದ ಘಟಕಗಳನ್ನು ಭಾರತ ಹೊಂದಿದೆ, ಇವನ್ನು ತುರ್ತಾಗಿ ಬಳಸಿಕೊಳ್ಳಬೇಕು ಎಂದಿದೆ.
ಲಸಿಕೆಗಳ ದೇಶೀಯ ಉತ್ಪಾದನೆಯನ್ನು ತುರ್ತಾಗಿ ಹೆಚ್ಚಿಸಲು ಹಾಗೂ, ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತಮಪಡಿಸಲು, ಶೀಘ್ರವಾಗಿ ನೀತಿಯನ್ನು ಘೋಷಿಸಲು ಸರ್ಕಾರಕ್ಕೆ ಏಳು ನಿರ್ದಿಷ್ಟ ಸಲಹೆಗಳನ್ನು ಈ ಹೇಳಿಕೆ ನೀಡಿದೆ.
ಇದನ್ನು ಓದಿ: ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?
ಈ ಹೇಳಿಕೆಗೆ ದೇಶದ ಪ್ರಖಾತ ವೈರಾಣು ತಜ್ಞೆ ಗಗನ್‌ದೀಪ್ ಕಂಗ್, ಪುಣೆಯ ಐ.ಐ.ಎಸ್.ಇ.ಆರ್.ನ ವಿಜ್ಞಾನಿ ಸತ್ಯಜಿತ್ ರಥ್, ಜಾಗತಿಕ ಜನಾರೋಗ್ಯ ಆಂದೋಲನದ ಟಿ.ಸುಂದರರಾಮನ್, ದಿಲ್ಲಿ ಸೈನ್ಸ್ ಫೋರಂನ ಡಿ.ರಘುನಂದನ್, ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ತೇಜಲ್ ಕಾನಿಟ್ಕರ್, ವಿಜ್ಞಾನಿ ಗೌಹರ್ ರಝಾ ಮುಂತಾದ 214 ವಿಜ್ಞಾನಿಗಳು, ಡಾಕ್ಟರುಗಳು ಮತ್ತು ವಿವಿಧ ಉನ್ನತ ಅಧ್ಯಯನ ಸಂಸ್ಥೆಗಳ ಚಿಂತಕರು ಅನುಮೋದನೆ ವ್ಯಕ್ತಪಡಿಸಿ ಸಹಿ ಮಾಡಿದ್ದಾರೆ. ಈ ಹೇಳಿಕೆಯ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:
ಭಾರತದ ಲಸಿಕೆ ಅಗತ್ಯವನ್ನು ಪೂರೈಸಲು ಸಂಶೋಧನೆ ಮತ್ತು
ಉತ್ಪಾದನೆಯನ್ನು ತುರ್ತಾಗಿ ವಿಸ್ತರಿಸಬೇಕು
ಹೊಸ ರಣನೀತಿಗಳು ಅಗತ್ಯ
ಪ್ರಸ್ತುತ ಭಾರತದ ಜನಸಂಖ್ಯೆ 130 ಕೋಟಿಗೂ ಅಧಿಕವಿದ್ದು, ಪೂರ್ಣ ಪ್ರಮಾಣದ ಜನಸಂಖ್ಯೆಗೆ ಲಸಿಕೆಯನ್ನು ನೀಡಲು 310 ಕೋಟಿ ಡೋಸೇಜ್ (3.1 ಬಿಲಿಯನ್ ಡೋಸೇಜ್) ಅಥವಾ (ಪ್ರಕ್ರಿಯೆಯಲ್ಲಿ ಪ್ರತಿಶತ 15%ಷ್ಟು ಪೋಲಾಗುವುದು ಎಂದಿಟ್ಟುಕೊಂಡು) 18 ಮೇಲ್ಪಟ್ಟು ವಯಸ್ಕರಿಗೆ 218.5 ಕೋಟಿ ಡೋಸೇಜ್ ಆದರೂ ಅಗತ್ಯವಿದೆ. ಇದು ಸುಲಭದ ಕೆಲಸವಲ್ಲ. ಹಾಗಾಗಿ ಲಸಿಕೆಯ ಪ್ರಮುಖ ರಫ್ತುದಾರನಾಗಿದ್ದ ಮತ್ತು ಪ್ರಸಕ್ತ ಸಾಂಕ್ರಾಮಿಕಕ್ಕೆ ಮುಂಚಿನಿಂದಲೂ ಬೃಹತ್ ಪ್ರಮಾಣದ ಲಸಿಕೆ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದ್ದ ಭಾರತ, ಕೋವಿಡ್-19 ಲಸಿಕೆಗಳನ್ನು ಉತ್ಪಾದಿಸಲು ಕೇವಲ ಎರಡು ಖಾಸಗಿ ದೇಶೀ ಕಂಪನಿಗಳಾದ, ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ (ಎಸ್.ಐ.ಐ) ಮತ್ತು ಭಾರತ್ ಬಯೋಟೆಕ್ ಮೇಲೆ ಏಕೆ ಅವಲಂಬಿಸಬೇಕಾಗಿತ್ತು – ಎಂಬುದನ್ನು ಭಾರತೀಯರು ತಿಳಿಯಬೇಕಾಗಿದೆ. ಇದು ದೇಶಕ್ಕೆ ತ್ರಾಸದಾಯಕ ತೊಡಕು ಆಗಿದೆ.
ಇಂದು ಭಾರತದಲ್ಲಿ ಲಸಿಕೆಯ ಸ್ಥಳೀಯ ಉತ್ಪಾದನೆಯನ್ನು ವಿಸ್ತರಿಸಲು ಕೊಡುಗೆಯನ್ನು ನೀಡಬಹುದಾದ ಹಲವು ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಉತ್ಪಾದನಾ ಘಟಕಗಳಿವೆ. ಸದ್ಯ ಭಾರತದಲ್ಲಿ ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ (ಎಸ್.ಐ.ಐ), ಪುಣೆಯ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ (ಬಿ.ಬಿ), ಹೈದರಬಾದ್ ನ ಕೋವಾಕ್ಸಿನ್ ಪೂರೈಕೆಯಾಗುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐ.ಸಿ.ಎಂ.ಆರ್)ಯಡಿಯ ಸಾರ್ವಜನಿಕ ವಲಯದ ಸಂಶೋಧನಾ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಸಂಸ್ಥೆಯು ಭಾರತ್ ಬಯೋಟೆಕ್ ಮತ್ತು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ (ಎನ್.ಐ.ವಿ)ಯ ಸಹಯೋಗದೊಂದಿಗೆ ಕೋವ್ಯಾಕ್ಸಿನ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ಆದ್ದರಿಂದ, ಸಾರ್ವಜನಿಕ ಘಟಕಗಳನ್ನು (ಉತ್ಪಾದನೆಗೆ) ಬೆಂಬಲಿಸಲು ಕೇಂದ್ರ ಸರ್ಕಾರಕ್ಕೆ (ಮಾರ್ಚ್-ಇನ್-ರೈಟ್ಸ್ ಎಂದು ಕರೆಯಲಾಗುವ ಕಾನೂನುಬದ್ಧ) ಅಧಿಕಾರವಿರುವುದರಿಂದಲೇ, ಭಾರತ್ ಬಯೋಟೆಕ್ ಮೂರು ಸಾರ್ವಜನಿಕ ವಲಯದ ಘಟಕಗಳಿಗೆ ತಂತ್ರಜ್ಞಾನವನ್ನು ವರ್ಗಾಯಿಸಲು ಮೌನವಾಗಿ ಸಮ್ಮತಿಸಿತು.
ಇದನ್ನು ಓದಿ: ಕೋವಿಡ್ ಲಸಿಕೆಯ ಪೂರೈಕೆಯಲ್ಲೂ ‘ಉದಾರೀಕರಣ’ದ ಗೀಳು!!
2000ದ ದಶಕದವರೆಗೆ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ಪ್ರತಿಶತ 80ರಷ್ಟು ಭಾರತದ ಲಸಿಕೆ ಸಾರ್ವಜನಿಕ ವಲಯದ ಮೂಲದಿಂದ ಉತ್ಪಾದನೆಯಾಗಿತ್ತು. ಇಂದು, 90%ರಷ್ಟು, ಅದೂ ದುಬಾರಿ ಬೆಲೆಗೆ ಖಾಸಗಿ ವಲಯದಿಂದ ಪೂರೈಕೆಯಾಗುತ್ತಿದೆ. ಬ್ರೆಜಿಲ್, ಕ್ಯೂಬಾ ಮತ್ತು ಚೀನಾ ದೇಶಗಳು ತಮ್ಮ ಜನಸಂಖ್ಯೆಗೆ ಲಸಿಕೆಯನ್ನು ನೀಡಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸಲು ರಫ್ತಿಗಾಗಿ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಯ ಸಂಯೋಜಿತ ಯೋಜನೆಗಳನ್ನು ಕೈಗೊಳ್ಳಲು, ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತ ತನ್ನ ಸಾರ್ವಜನಿಕ ವಲಯದ ಘಟಕಗಳನ್ನು ನಿರ್ಲಕ್ಷಿಸಿದೆ. ಭಾರತವು, ಬಹುಸಂಖ್ಯೆಯ ಕೆಲವು ದಶಕಗಳಷ್ಟು ಹಳೆಯ ಘಟಕಗಳ ಜೊತೆಗೆ, ಸೂಕ್ತ ಆಧುನಿಕ ಮೂಲ ಸೌಕರ್ಯವಿರುವ ಹೊಸ ಘಟಕಗಳನ್ನು ಸಹ ಹೊಂದಿದೆ. ಪ್ರಸ್ತುತ ಭಾರತದಲ್ಲಿ ಹನ್ನೊಂದು ಸಾರ್ವಜನಿಕ ವಲಯದ ಘಟಕಗಳಿವೆ. ಕೆಲವು ಉತ್ಪಾದನೆಯನ್ನು ಆರಂಭಿಸಲು ಬಹುತೇಕ ಸಿದ್ಧವಾಗಿವೆ. 2016ರಲ್ಲಿ ಇತ್ತೀಚೆಗೆ ನಿರ್ಮಾಣ ಪೂರ್ಣಗೊಂಡಿರುವ ಚೆಂಗಾಲಪಟ್ಟುವಿನಲ್ಲಿರುವ, ‘ಸಮಗ್ರ ಲಸಿಕಾ ಸಂಕೀರ್ಣ’ಕ್ಕೆ ಕೋವಿಡ್ ಲಸಿಕೆಯ ದೇಶೀ ಉತ್ಪಾದನೆಯನ್ನು ಪ್ರಾರಂಭಿಸಲು ಸ್ವಲ್ಪ ಬೆಂಬಲ ಮತ್ತು ಕೇವಲ ರೂ. 100 ಕೋಟಿಯ ಅವಶ್ಯಕತೆಯಿದೆ.
ಕೋವಿಡ್ ಲಸಿಕೆಯ ದೇಶೀಯ ಉತ್ಪಾದನೆಗೆ ಕೊಡುಗೆಯನ್ನು ನೀಡಬಹುದಾದಂತಹ ಬಯೋಲಾಜಿಕಲ್-ಇ ಹೈದರಾಬಾದ್, ಪನೆಶಿಯಾ ಬಯೋಟೆಕ್, ಸೋಲಾನ್ ಮಂತಾದ ಹಲವಾರು ಖಾಸಗಿ ವಲಯದ ಘಟಕಗಳೂ ಇವೆ. ಲಸಿಕೆಯನ್ನು ತಯಾರಿಸುವ ಕಂಪನಿಗಳ ಜೊತೆಗೆ, ಲಸಿಕೆ ಉತ್ಪಾದನೆಗಾಗಿ ಪುನರ್-ರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ಬಯೋಲಾಜಿಕ್ಸ್(ಜೈವಿಕ)ನ್ನು ಉತ್ಪಾದಿಸುವ ಕಂಪನಿಗಳೂ ಇವೆ. ಈಗಾಗಲೇ ಡಾ. ರೆಡ್ಡಿಸ್ ಪ್ರಯೋಗಾಲಯ ಮತ್ತು ಕನಿಷ್ಟ ಐದು ಬಯೋಲಾಜಿಕ್ಸ್ ರಷ್ಯಾದೊಂದಿಗೆ ಕೂಡಿ ದೇಶದಲ್ಲಿ ಸ್ಪುಟ್ನಿಕ್–ವಿ ಯನ್ನು ತರಿಸಲು ತಯಾರಿ ನಡೆಸಿವೆ. ಕೋವಿಡ್ ಲಸಿಕೆ ಉತ್ಪಾದನೆಯಲ್ಲಿ ತೊಡಗಬಹುದಾದ ಒಟ್ಟಾರೆ, ಸರಿಸುಮಾರು ಮೂವತ್ತು ಘಟಕಗಳಿವೆ. ಭಾರತದಲ್ಲಿ ಇಂತಹ ವಿಸ್ತೃತ ಉತ್ಪಾದನೆಯು ದೇಶದ ಅವಶ್ಯಕತೆಯನ್ನು ಪೂರೈಸುವುದಷ್ಟೇ ಅಲ್ಲದೆ, ಭಾರತ, (ಅದರಲ್ಲೂ ನಿರ್ದಿಷ್ಟವಾಗಿ, ಎಸ್.ಐ.ಐ, ಮುಂಗಡ ಪಾವತಿಯನ್ನು ಸಹ ಪಡೆದಿರುವ) ಅಂತರರಾಷ್ಟ್ರೀಯ ಒಪ್ಪಂದಗಳ ಅಗತ್ಯಗಳನ್ನು ಪೂರೈಸಲು ಸಹಾಯಕವಾಗಬಹುದು. ಖಾಸಗಿ ವಲಯದ ಘಟಕಗಳಿಂದ ಅನುಮೋದಿತ ವಿದೇಶಿ ಲಸಿಕೆಗಳನ್ನು ತರಿಸುವುದು ಒಂದು ಆಯ್ಕೆ.
ಇದನ್ನು ಓದಿ: ಕುಸಿದ ಲಸಿಕೆ ಅಭಿಯಾನ – ಲಸಿಕೆ ಕೊರತೆ ಇನ್ನಷ್ಟು ಹೆಚ್ಚಳ ಸಾಧ್ಯತೆ
ಬಹಳ ತಡವಾಗಿ ಆದರೂ ಖಾಸಗಿ ವಲಯವು ಸರ್ಕಾರದಿಂದ ಸಾಕಷ್ಟು ಧನ ಸಹಾಯವನ್ನು ಪಡೆಯುತ್ತಿದೆ. ಆದರೆ ಸಾರ್ವಜನಿಕ ವಲಯಗಳಿಗೆ ಇನ್ನೂ ಅಗತ್ಯ ಬೆಂಬಲ ದೊರೆಯುತ್ತಿಲ್ಲ. ರಾಜ್ಯ ಸರ್ಕಾರಿ ಸ್ವಾಮ್ಯಗಳಿಗೆ ಪರವಾನಿಗೆಯಡಿಯಲ್ಲಿ ಇತ್ತೀಚೆಗಷ್ಟೇ ಸಾಪೇಕ್ಷವಾಗಿ ಸ್ವಲ್ಪ ಪ್ರಮಾಣದ ಸರ್ಕಾರಿ ಅನುದಾನವನ್ನು ಕೋವ್ಯಾಕ್ಸಿನ್ ಉತ್ಪಾದನೆಗೆ ಇಂಡಿಯನ್ ಇಮ್ಯೂನೋಲಾಜಿಕಲ್ಸ್ ಲಿಮಿಟೆಡ್, ಹೈದರಾಬಾದ್, ಭಾರತ್ ಇಮ್ಯೂನೋಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಕಾರ್ಪೋರೇಶನ್ ಲಿಮಿಟೆಡ್, ಬುಲಂದ್‌ಶಹರ್, ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಯಿಂದ ಸಾರ್ವಜನಿಕ ವಲಯ ಘಟಕ ಎಂದು ಕರೆಯಲ್ಪಟ್ಟ ಹಾಫ್ಕಿನ್ ಸಂಸ್ಥೆಯಂತಹ ಕಂಪನಿಗಳಿಗೆ ನೀಡಲಾಗಿದೆ. ಆಸ್ಟ್ರಾ-ಝೆನೆಕಾ ಕಂಪನಿಯಿಂದ ಲೈಸೆನ್ಸ್ ಪಡೆದು ಎಸ್.ಐ.ಐ ಕೋವಿಶೀಲ್ಡ್ ಉತ್ಪಾದಿಸುತ್ತಿರುವುದರಿಂದ, ಅದು ತಾನಾಗಿ ತಂತ್ರಜ್ಙಾನವನ್ನು ವರ್ಗಾಯಿಸಲು ಸಾಧ್ಯವಿಲ್ಲ. ಆದರೆ, ಖಂಡಿತವಾಗಿ ಇತರೆ ಘಟಕಗಳಿಗೆ ಸಹ-ಗುತ್ತಿಗೆಯನ್ನು ನೀಡುವಂತೆ ಭಾರತ ಸರಕಾರ ಒತ್ತಾಯಿಸಬಹುದಾಗಿತ್ತು. ಭಾರತ ಸರ್ಕಾರ ಮತ್ತು ಸಾರ್ವಜನಿಕ ವಲಯಗಳಿಗೆ ತಮ್ಮ ದೀರ್ಘಕಾಲದ ಕೃತಜ್ಞತೆಯ ಸಂದಾಯವಾಗಿ, ಇತರ ಘಟಕಗಳಲ್ಲಿ ಲಸಿಕೆ ಉತ್ಪಾದನೆಗೆ ಬೆಂಬಲಿಸಲು, ಎಸ್.ಐ.ಐ. ಮತ್ತು ಭಾರತ್ ಬಯೋಟೆಕ್ ಎರಡನ್ನೂ, ಭಾರತ ಸರಕಾರ ಸೂಕ್ತವಾಗಿ ಒಪ್ಪಿಸಬಹುದಾಗಿತ್ತು.
ಲಸಿಕೆಗಳ ದೇಶೀಯ ಉತ್ಪಾದನೆಯನ್ನು ತುರ್ತಾಗಿ ಹೆಚ್ಚಿಸಲು ಹಾಗೂ, ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತಮಪಡಿಸಲು, ಶೀಘ್ರವಾಗಿ ನೀತಿಯನ್ನು ಘೋಷಿಸಲು ಸರ್ಕಾರಕ್ಕೆ ನಿರ್ದಿಷ್ಟ ಸಲಹೆಗಳು ಈ ಕೆಳಕಂಡಂತಿವೆ.
- ಅಸ್ತಿತ್ವದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವುದು.
- ಚೆಂಗಲಪಟ್ಟುವಿನಲ್ಲಿರುವ ಸಮಗ್ರ ಲಸಿಕೆ ಸಂಕೀರ್ಣದ ಬಳಕೆಯನ್ನು – ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಈ ಸಂಕೀರ್ಣದಲ್ಲಿರುವ ಸೌಲಭ್ಯವನ್ನು ಬಳಸಿಕೊಂಡು ಕೋವಿಡ್ ಲಸಿಕೆಗಳ ಉತ್ಪಾದನೆಗೆ ಅವಕಾಶ ಕಲ್ಪಿಸುವ ಸ್ಪಷ್ಟ ಕರಾರಿನೊಂದಿಗೆ – ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವುದು.
- ಕೋವಿಡ್-19 ಲಸಿಕೆಗಳ ಉತ್ಪಾದನೆಯಲ್ಲಿ ಆಸಕ್ತರನ್ನು ಉತ್ತೇಜಿಸಲು ಅಗತ್ಯವಿರುವೆಡೆಯಲ್ಲಿ ಕಡ್ಡಾಯ ಪರವಾನಿಗೆ ನೀಡುವುದು. ಅಥವಾ ಸೂಕ್ತ ಕಾನೂನನ್ನು ಮಾಡುವುದು.
- ಸಾರ್ವಜನಿಕ ವಲಯದ ಘಟಕಗಳು, ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಇತರ ಘಟಕಗಳಿಗೆ ದೇಶೀಯ ಬಳಕೆಗಾಗಿ ಲಸಿಕೆಗಳನ್ನು ಉತ್ಪಾದಿಸಲು ಸಮರ್ಥಗೊಳಿಸಲು ಭಾರತ್ ಬಯೋಟೆಕ್ ನಿಂದ ಸಹಕಾರ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ಖಚಿತಗೊಳಿಸಲು ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಭಾರತ ಸರ್ಕಾರ ಮತ್ತು ಐ.ಸಿ.ಎಂ.ಆರ್.ಗೆ ಲಭ್ಯವಿರುವ ಮಾರ್ಚ್-ಇನ್-ರೈಟ್ಸ್ ಉಪಯೋಗಿಸುವುದು.
- ಸ್ಪುಟ್ನಿಕ್-ವಿ ತಯಾರಿಕೆಗೆ ಸಿದ್ಧವಾಗುತ್ತಿರುವ ಕಂಪನಿಗಳಿಗೆ ಉತ್ಪಾದನೆ ವಿಸ್ತರಿಸಲು ಅಗತ್ಯಬಿದ್ದರೆ ಸಹಾಯ ಮಾಡುವುದು.
- ವಿಶೇಷವಾಗಿ (ವಿಶ್ವಸಂಸ್ಥೆಯ ಯೋಜನೆಯಾದ) ಕೋವ್ಯಾಕ್ಸ್ ಗೆ ರಫ್ತು ಮತ್ತು ಗೃಹ ಬಳಕೆಯೆರಡಕ್ಕೂ ಸೂಕ್ತ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳೊಂದಿಗೆ ಜಂಟಿ ಉದ್ಯಮ ಅಥವಾ ಇತರೆ ಸಹಯೋಗಗಳ ಮೂಲಕ ಭಾರತದಲ್ಲಿ ಉತ್ಪಾದನೆಯನ್ನು ವಿಸ್ತರಿಸಲು ಎಸ್.ಐ.ಐ., ಆಸ್ಟ್ರಾ-ಝೆನೆಕಾ ಮತ್ತು ನೊವವ್ಯಾಕ್ಸ್‌ಗಳನ್ನು ಒಪ್ಪಿಸುವುದು.
- ಸಂಶೋಧನಾ ಪ್ರಯೋಗಾಲಯಗಳು, ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಸಂಸ್ಥೆಗಳಲ್ಲಿ ಅನೇಕ ಲಸಿಕೆಗಳ ಅಭಿವೃದ್ಧಿ ಮತ್ತು ಹೊಸ ಲಸಿಕೆ ಅಭಿವೃದ್ಧಿ ತಂತ್ರಗಳ ಮೇಲಿನ ಸಂಶೋಧನೆಯನ್ನು ಬಲಗೊಳಿಸುವುದು ಮತ್ತು ಉತ್ತೇಜಿಸುವುದು. ಜೆನೋಮಿಕ್ ಕಣ್ಗಾವಲನ್ನು ಗಮನಾರ್ಹವಾಗಿ ಹೆಚ್ಚಿಸುವುದು ಮತ್ತು ಸೋಂಕುಶಾಸ್ತ್ರ ಅಧ್ಯಯನ ಹಾಗು ವೈರಾಣು-ವಿರುದ್ಧ ಪರಿಣಾಮಕಾರಿತನ ಹೆಚ್ಚಿಸುವುದರ ಜೊತೆಗೆ ಜೋಡಿಸುವುದು. ಅದರಿಂದಾಗಿ, ವಿಶೇಷವಾಗಿ ಹೊರಹೊಮ್ಮುತ್ತಿರುವ ರೂಪಾಂತರಗಳನ್ನು ಮತ್ತು ಮಕ್ಕಳಂತಹ ಭಿನ್ನ ಜನಸಂಖ್ಯಾ ವಿಭಾಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಗತ್ಯವಿರುವ, ಉತ್ಪಾದಕರಲ್ಲಿ ಸಹಯೋಗಾತ್ಮಕ ಮಾರ್ಪಾಡುಗಳನ್ನು ಬಲಗೊಳಿಸುವ ಮೂಲಕ, ರೂಪಾಂತರಗಳ ವಿರುದ್ಧ ಪರಿಣಾಮಕಾರಿತನಕ್ಕಾಗಿ ಲಸಿಕೆಗಳನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸಬಹುದು.