ಕರ್ನಾಟಕದ ಆದಿವಾಸಿಗಳು ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟಗಳ ಹಿನ್ನೆಲೆಯಲ್ಲಿ ತಮ್ಮ ‘ಜೀವ ಮತ್ತು ಜೀವನ’ವನ್ನು ಉಳಿಸಲು ಆಗ್ರಹಿಸಿ ರಾಜ್ಯದಾದ್ಯಂತ ತೀವ್ರತರ ಪ್ರತಿಭಟನೆ ನಡೆಸಲು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ನಿರ್ಧರಿಸಿದೆ.
ಜೂನ್ 7ರಂದು ಕೋವಿಡ್ ನಿಯಮಗಳನ್ನು ಪಾಲಿಸಿ ಆದಿವಾಸಿಗಳು ಮನೆ, ಮನೆಗಳು, ಹಾಡಿ, ಅವರ ನೆಲೆಗಳಿಂದಲೇ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಆದಿವಾಸಿಗಳು ವಾಸಿಸುವ ಪ್ರದೇಶಗಳಿಗೆ ಜೀವನಾವಶ್ಯಕ ರೇಷನ್ ಮತ್ತು ಪೌಷ್ಟಿಕ ಆಹಾರ ಒದಗಿಸಬೇಕು, ಪ್ರತಿ ಕುಟುಂಬಕ್ಕೆ ರೂ 10,000 ಪರಿಹಾರ ಧನ ನೀಡಿಕೆ, ಆಹಾರ, ಅಗತ್ಯ ಔಷಧಿ ಚಿಕಿತ್ಸೆ, ಎಲ್ಲಾ ಆದಿವಾಸಿಗಳಿಗೆ ಉಚಿತ ಲಸಿಕೆ ನೀಡಬೇಕು ಹೀಗೆ ಅನೇಕ ಬೇಡಿಕೆಗಳನ್ನು ಒಳಗೊಂಡು ತಮ್ಮ ಹಕ್ಕೊತ್ತಾಯ ಸರಕಾರಕ್ಕೆ ಮಂಡಿಸಲು ಆದಿವಾಸಿಗಳು ನಿರ್ಧರಿಸಿದ್ದಾರೆ.
ಮನೆ ಮುಂದೆ ನಿಂತು ಅವರ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸಿ ಮತ್ತು ಖಾಲಿ ತಟ್ಟೆಗಳನ್ನು ಪ್ರದರ್ಶಿಸುವುದರ ಮೂಲಕ ಪ್ರತಿಭಟನಾ ಧ್ವನಿ ಮೊಳಗಿಸಲಿದ್ದಾರೆ.
ಇದನ್ನು ಓದಿ: ಹಳ್ಳಿಗಾಡ ಬಡವರನ್ನು ಕಡೆಗಣಿಸದಿರಿ
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾದ ವೈ.ಕೆ.ಗಣೇಶ್ ಅವರು ಕೋವಿಡ್ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಆದಿವಾಸಿ ಸಮುದಾಯಗಳು, ಅಲೆಮಾರಿ ಸಮುದಾಯಗಳು ಅತೀವ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರವು ಜನತೆಗೆ ಪರಿಹಾರ ನೀಡಲೆಂದು ನಡೆಸಿದ ಸಭೆಗಳು, ಪರಿಹಾರ ಪ್ಯಾಕೇಜ್ಗಳಲ್ಲಿ ಆದಿವಾಸಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಆದಿವಾಸಿಗಳ ರಕ್ಷಣೆಗೆ ಸಂಬಂಧಿಸಿ ಯಾವ ಸೂಚನೆ ನೀಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಇರುವ ಎಸ್ಸಿಪಿ, ಟಿಎಸ್ಪಿ ಅನುದಾನ ಖರ್ಚು ಮಾಡದ ಒಟ್ಟು ಹಣ 26,005 ಕೋಟಿ ರೂಪಾಯಿ ಇದೆ. ಅದರಲ್ಲಿ ಆದಿವಾಸಿಗಳಿಗೆ ಮೀಸಲಿರಿಸಿದ ಹಣ ರೂ. 7673.46 ಕೋಟಿ ಇದ್ದರೂ ಕೋವಿಡ್ ಸಂಕಷ್ಟದ ಸಂದರ್ಭ ಆದಿವಾಸಿಗಳ ನೆರವಿಗೆ ಸರಕಾರ ಬಾರದಿರುವುದು ವಿಷಾದನೀಯ. ಆದಿವಾಸಿಗಳ 90 ಶೇಕಡಾ ಜನ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಸರಕಾರಕ್ಕೂ ಗೊತ್ತಿದೆ. ಹಾಗಾಗಿ ಇವರಿಗೆ ಪೌಷ್ಟಿಕ ಆಹಾರವನ್ನು ನೀಡುವ ಯೋಜನೆ ಬೇಕಿದೆ. ಅದನು ಸಹ ವರ್ಷದ ಆರು ತಿಂಗಳು ಸಿಗಬೇಕಾದ ಆಹಾರ ಕೇವಲ ಮೂರು ಬಾರಿ ಮಾತ್ರ ನೀಡಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಸರಕಾರ ಇವರಿಗೆ ಬದುಕಿಗೆ ಬೇಕಾದ ಅಗತ್ಯ ಆಹಾರವನ್ನು ಒದಗಿಸದೆ ಸಂಕಷ್ಟಕ್ಕೆ ತಳ್ಳಿದೆ. ಹಲವು ಜಿಲ್ಲೆಗಳಲ್ಲಿ ಟೆಂಡರನ್ನು ಕರೆದು ಇತ್ಯರ್ಥ ಮಾಡಿಲ್ಲ ಎನ್ನುವುದು ದಾರುಣ ಸ್ಥಿತಿಯಾಗಿದೆ ಎಂದು ತಿಳಿಸಿದ್ದಾರೆ.
ಸಹ ಸಂಚಾಲಕರಾದ ಎಸ್ ವೈ ಗುರುಶಾಂತ್ ಅವರು ಆದಿವಾಸಿಗಳ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಸಂಪೂರ್ಣ ನಶಿಸಿವೆ. ಕಾರಣ ಸರಕಾರದ ಅರಣ್ಯ, ಆಹಾರ ಸೇರಿದಂತೆ ಹಲವಾರು ಕಾಯ್ದೆಗಳಿಂದ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಪಡೆಯುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇವರಿಗೆ ರಕ್ತ ಹಿನತೆ, ಅಪೌಷ್ಟಿಕತೆ ಇದೆ. ಬದಲಾದ ಕಾಲಘಟ್ಟದಲ್ಲಿ ಆಹಾರ ಪದ್ದತಿ ಬದಲಾಯಿಸಿಕೊಂಡು ಅರಣ್ಯದ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಿಕೊಳ್ಳಬೇಕು. ಆದರೆ ಇವರಿಗೆ ಪರ್ಯಾಯ ಗುಣಮಟ್ಟದ ಆಹಾರ, ಆರೋಗ್ಯ ಒದಗಿಸುವುದು ಸರ್ಕಾರದ ಮುಖ್ಯ ಕರ್ತವ್ಯ. ಅರಣ್ಯ ಆಧಾರಿತ ಕೇವಲ ಬೆರಳೆಣಿಕೆಯಷ್ಟು ಆದಿವಾಸಿಗಳಿಗೆ ಮಾತ್ರ ಪೌಷ್ಟಿಕ ಆಹಾರವನ್ನು ನೀಡುವ ಯೋಜನೆ ತರಲಾಗಿದೆ. ಇನ್ನು ಹಲವಾರು ಸಮುದಾಯಗಳು ಆಹಾರದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಇಂದು ಆದಿವಾಸಿಗಳಲ್ಲಿ ಒಂದಾಗಿರುವ ಸೋಲಿಗ ಸಮುದಾಯ ಅವರಿಗೆ ವಂಶವಾಹಿನಿಯಾಗಿ ಬಂದಿರುವ ಸಿಕ್ಕಿಲ್ ಎನಿಮಿಯಾ ಡಿಸೀಜ್ ಈಗ ಪಣಿಯ ಯರವರು ನಂತಹ ಬೇರೆ, ಬೇರೆ ಆದಿವಾಸಿಗಳಲ್ಲೂ ಕಂಡು ಬಂದಿದೆ. ರಾಜ್ಯದ ಆದಿವಾಸಿಗಳ ವಂಶವೆ ನಶಿಸುವ ಕಾಲ ಬಹುದೂರವಿಲ್ಲ ಅನಿಸುತ್ತದೆ. ಆದ್ದರಿಂದ ಅವರ ಜೀವವನ್ನು ಉಳಿಸಬೇಕಾದರೆ ಆಹಾರದ ಭದ್ರತೆ, ಸಕಾಲಿಕ ನೀಡಿಕೆ ಅತ್ಯಂತ ಅವಶ್ಯಕವಾಗಿದೆ. ಎಂದು ಎಸ್ ವೈ ಗುರುಶಾಂತ್ ಅವರು ಹೇಳಿದರು.
ಇದನ್ನು ಓದಿ: ಲಕ್ಷದ್ವೀಪದ ಜನರಿಗೆ ಬೆಂಬಲ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ
ಇಂತಹ ಸ್ಥಿತಿಯಲ್ಲಿ ಆದಿವಾಸಿಗಳು ಪ್ರತಿರೋಧಕ ಶಕ್ತಿ ಇಲ್ಲದೆ ಸುಲಭವಾಗಿ ಕೋವಿಡ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಮೊದಲ ಆದ್ಯತೆಯಲ್ಲಿ ಆದಿವಾಸಿಗಳಿಗೆ ಉಚಿತ ಲಸಿಕೆ ನೀಡಿ ಅವರನ್ನು ರಕ್ಷಣೆ ಮಾಡಿಕೊಳ್ಳುವುದು ಇಂದಿನ ಅಗತ್ಯ. ಅದಕ್ಕಾಗಿ ಅನಿವಾರ್ಯ ಎನಿಸಿದರೆ ಟಿಎಸ್ಪಿ ಅನುದಾನವನ್ನು ಬಳಸಿಕೊಳ್ಳಬಹುದು.
ರಾಜ್ಯ ಸಹ ಸಂಚಾಲಕರಾದ ಶ್ರೀಧರ ನಾಡ ಅವರು ಬಹುತೇಕ ಜಿಲ್ಲೆಗಳಲ್ಲಿರುವ ಆದಿವಾಸಿಗಳು ಅದರಲ್ಲೂ ಪಶ್ಚಿಮ ಘಟ್ಟದ ಉದ್ದಕ್ಕೂ ಕೋವಿಡ್ ಲಸಿಕೆ, ತುರ್ತು ಆರೋಗ್ಯ ಚಿಕಿತ್ಸೆಗೆ 30 ರಿಂದ 40 ಕಿ.ಮೀ ಹೋಗಬೇಕಾದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರು ವಾಸಿಸುವ 5 ಕಿ.ಮಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಕೋವಿಡ್ ಆರೈಕೆ ಕೇಂದ್ರ ತೆರೆಯಬೇಕು. ಇವರು ಕೋವಿಡ್ ಗೆ ತುತ್ತಾದರೂ ವಸತಿ ಸಮಸ್ಯೆಯಿಂದಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರಲೂ ಸಾಧ್ಯವೇ ಇಲ್ಲ. ಉಳಿದವರಿಗೂ ರೋಗ ಹಬ್ಬುತ್ತದೆ. ಸಾಂಕ್ರಾಮಿಕತೆಯ ಗಂಭೀರ ಸ್ವರೂಪದ ಪರಿಸ್ಥಿತಿ ಎದುರಿಸುವ ಮೊದಲು ಸರಕಾರ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತ ಆಗಬೇಕು.
ಕೈ ಕಸುಬು, ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಇವರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲವಾಗಿದೆ. ಮತ್ತು ಅಡಿಕೆ, ಕಾಫಿ ತೋಟಗಳಲ್ಲಿ ಕೂಲಿಯನ್ನೇ ನಂಬಿ ದಿನದ ಬದುಕು ಸಾಗಿಸುವ ಇವರಿಗೆ ಕೆಲಸವಿಲ್ಲದೇ ಇಂದು ಊಟಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ. ಯುವಜನರನ್ನು ಒಳಗೊಂಡು ಗ್ರಾಮೀಣ ನಿರುದ್ಯೋಗ ವಿಪರೀತವಾಗಿ ಹೆಚ್ಚಿದೆ.
ಇಷ್ಟೊಂದು ಗಂಭೀರ ಪರಿಸ್ಥಿತಿಯಲ್ಲಿ ಆದಿವಾಸಿಗಳು ಬದುಕು ನಡೆಸುತ್ತಿದ್ದರೂ ಸರ್ಕಾರ ನೋಡಿಯೂ ನೋಡದ ರೀತಿಯಲ್ಲಿ ವರ್ತಿಸುವುದು ಒಂದು ರೀತಿಯಲ್ಲಿ ಈ ಸರಕಾರಕ್ಕೆ ಆದಿವಾಸಿಗಳ ಕುರಿತು ಸಂವೇದನೆ ಇಲ್ಲ ಎಂಬುದು ತಿಳಿಯುತ್ತದೆ.
ಇದನ್ನು ಓದಿ: ವಿಧ್ವಂಸದ ಎರಡು ಯಾತನಾಮಯ ವರ್ಷಗಳು
ಹೋರಾಟಗಳ ರೂಪುರೇಷೆಗಳ ಕುರಿತು ಚರ್ಚಿಸಲು 2021ರ ಮೇ 30ರಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಂಘಟನಾ ಸಮಿತಿಯ ಸಭೆ ನಡೆಯಿತು. ಅಲ್ಲಿ ಆದಿವಾಸಿಗಳ ಜೀವ ಮತ್ತು ಜೀವನ ಉಳಿಸಲು ಆಗ್ರಹಿಸಿ ಹೋರಾಟ ನಡೆಸಲು ತೀರ್ಮಾನ ಮಾಡಿದ ಸಮಿತಿಯು ಹೋರಾಟ ದಿನದಂದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಬೇಡಿಕೆಗಳ ಈಡೇರಿಕೆಗಾಗಿ ಹಕ್ಕೊತ್ತಾಯದ ಸಂದೇಶಗಳನ್ನು ಸಲ್ಲಿಸಲು ಕೋರಲಾಗಿದೆ. ಅಲ್ಲದೆ, ಆದಿವಾಸಿಗಳ ಸಂಘಟನಾ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಭಾಗವಹಿಸಿ ತಮ್ಮ ಜಿಲ್ಲೆಗಳಲ್ಲಿ ಆದಿವಾಸಿಗಳ ಇಂದಿನ ಸ್ಥಿತಿಯನ್ನು ವಿವರಿಸಿದರು.
ಸಭೆಯಲ್ಲಿ ವಿಶೇಷವಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಯು. ಬಸವರಾಜ ರವರು ಆದಿವಾಸಿಗಳ ಹೋರಾಟಕ್ಕೆ ಬೆಂಬಲಿಸಿದರು. ಆದಿವಾಸಿ- ಅಲೆಮಾರಿ ಸಮುದಾಯಗಳ ಸಂಶೋಧಕರೂ, ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಮಾನ್ಪಡೆಯವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಮುಖ್ಯವಾಗಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಘಟನಾ ಸಮಿತಿಯ ರಾಜ್ಯ ಸಂಚಾಲಕರಾದ ವೈ. ಕೆ ಗಣೇಶ, ಸಹ ಸಂಚಾಲಕರು ಆದ ಡಾ. ಎಸ್. ವೈ. ಗುರುಶಾಂತ, ಜೆ.ಆರ್.ಪ್ರೇಮಾ ಕೊಡಗು, ಅಶೋಕ ಕೊಡಗು. ವಿ ಬಸವರಾಜು, ಜೆ.ಕೆ.ತಿಮ್ಮ ಮೈಸೂರು. ಶ್ರೀಧರ ನಾಡ ಉಡುಪಿ. ಎಲ್. ಶೇಖರ , ಜಯಾನಂದ ಮಲೆಕುಡಿಯ ಬೆಳ್ತಂಗಡಿ-ದಕ್ಷಿಣ ಕನ್ನಡ. ಮಂಜುಳಾ, ನಾಗರಾಜ ಶಿವಮೊಗ್ಗ. ಪ್ರೇಮನಂದ ವೆಳಿಪ, ಲಕ್ಮೀ ಸಿದ್ದಿ-ಉ.ಕನ್ನಡ, ಹಾಸನದ ಯುವ ವಕೀಲರಾದ ಮಹೇಶ ಸಾಲಿಯಾನ ಮುಂತಾದವರು ಸಮಿತಿಯಲ್ಲಿದ್ದಾರೆ.