ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 28 ರಿಂದ 29 ಪೈಸೆ ಮತ್ತು ಡೀಸೆಲ್ ದರ 26 ರಿಂದ 28 ಪೈಸೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಭಾನುವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದು ಒಂದಲ್ಲ, ಎರಡಲ್ಲ, ಐದಲ್ಲ, ಹತ್ತಲ್ಲ ಬರೊಬ್ಬರಿ 16 ಬಾರಿ. ತಿಂಗಳ ಕಡೆಯ ದಿನವಾದ ಇಂದು ಕೂಡ ಪ್ರತಿ ಲೀಟರ್ ಪೆಟ್ರೋಲ್ ದರ 28 ರಿಂದ 29 ಪೈಸೆ ಮತ್ತು ಡೀಸೆಲ್ ದರ 26 ರಿಂದ 28 ಪೈಸೆ ಏರಿಕೆಯಾಗಿದೆ.
ಒಟ್ಟು ಈ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3.83 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 4.42 ರೂಪಾಯಿ ಬೆಲೆ ಏರಿಸಿದೆ. ಮುಂಬೈ, ಭೋಪಾಲ್ ಮತ್ತು ಜೈಪುರ, ಶ್ರೀಗಂಗಾನಗರ, ರೇವಾ, ಪರಬಾನಿ ನಗರಗಳಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿ ಮುನ್ನುಗ್ಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ ಎಂಬುದು ಗೊತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಉದಾರತೆ ತೋರುತ್ತಿಲ್ಲ.
ಕೊರೋನಾ ಸೋಂಕಿನಿಂದ ಜನ ಸಾಯುತ್ತಿದ್ದಾರೆ. ಲಾಕ್ಡೌನ್ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ಸರವಾಗಿದೆ. ಈ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ನೀಡಿ ನೆರವಾಗಬೇಕು. ಜೊತೆಗೆ ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಳ್ಳಲು ಕ್ರಮ ಕೈಗೊಳ್ಳಬೇಕು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಕಡು ಕಷ್ಟದ’ ಈ ದಿನಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿ ಈಗಾಗಲೇ ನೊಂದಿರುವ ದೇಶವಾಸಿಗಳನ್ನು ಇನ್ನಷ್ಟು ಕಷ್ಟಕ್ಕೆ ದೂಡುತ್ತಿದೆ. ಅಗತ್ಯ ವಸ್ತುಗಳಾದ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ದಿನಸಿ ಪದಾರ್ಥಗಳ ದರ ಹೆಚ್ಚಳ ಮಾಡಿದ್ದು ಏಳು ವರ್ಷದ ಸಾರ್ಥಕ ಸಾಧನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ
ಬೆಂಗಳೂರು- ಪೆಟ್ರೋಲ್ 97.37 ರೂ., ಡೀಸೆಲ್ 90.27 ರೂ.
ಅನುಪ್‌ನಗರ- ಪೆಟ್ರೋಲ್ 104.94 ರೂ., ಡೀಸೆಲ್ 96.03 ರೂ.
ರೇವಾ- ಪೆಟ್ರೋಲ್ 104.55 ರೂ., ಡೀಸೆಲ್ 95.70 ರೂ.
ಪರಭಾನಿ- ಪೆಟ್ರೋಲ್ 102.83 ರೂ., ಡೀಸೆಲ್ 93.30 ರೂ.
ಭೂಪಾಲ್- ಪೆಟ್ರೋಲ್ 102.34 ರೂ., ಡೀಸೆಲ್ 93.65 ರೂ.
ಜೈಪುರ – ಪೆಟ್ರೋಲ್ 100.75 ರೂ., ಡೀಸೆಲ್ 93.95 ರೂ.
ಮುಂಬೈ- ಪೆಟ್ರೋಲ್ 100.47 ರೂ., ಡೀಸೆಲ್ 92.45 ರೂ.
ಪಾಟ್ನಾ- ಪೆಟ್ರೋಲ್ 96.38 ರೂ., ಡೀಸೆಲ್ 90.42 ರೂ.
ಚೆನ್ನೈ- ಪೆಟ್ರೋಲ್ 95.76 ರೂ., ಡೀಸೆಲ್ 89.90 ರೂ.
ಕೋಲ್ಕತ್ತಾ- ಪೆಟ್ರೋಲ್ 94.25 ರೂ., ಡೀಸೆಲ್ 88 ರೂ.
ದೆಹಲಿ- ಪೆಟ್ರೋಲ್ 94.23 ರೂ., ಡೀಸೆಲ್ 85.15 ರೂ.
ಲಕ್ನೋ- ಪೆಟ್ರೋಲ್ 91.63 ರೂ., ಡೀಸೆಲ್ 85.54 ರೂ.
ರಾಂಚಿ- ಪೆಟ್ರೋಲ್ 90.84 ರೂ., ಡೀಸೆಲ್ 89.91 ರೂ.