ಗದಗ: ಲಕ್ಷಾಂತರ ರೈತರು ದೆಹಲಿಯ ದ್ವಾರವನ್ನು ತಲುಪಿ ರೈತ ವಿರೋಧಿ ಮೂರು ಕಾನೂನುಗಳನ್ನು ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸುವ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಹಾಗೂ ಅಖಿಲ ಭಾರತ ಕೃಷಿ ಕೂಲಿಕಾರ ಸಂಘ (ಎಐಎಡಬ್ಲ್ಯೂಯು) ಗಜೇಂದ್ರಗಡ ತಾಲೂಕ ಘಟಕದಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕೃಷಿ ಕೂಲಿಕಾರರ ಸಂಘದ ತಾಲೂಕ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ ʻಕೇಂದ್ರ ಕಾರ್ಮಿಕ ಸಂಘಟನೆಗಳು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ವಾಪಸ್ ಪಡೆಯಬೇಕು ಮತ್ತು ಖಾಸಗಿಕರಣದ ಧೋರಣೆಯನ್ನು ಕೈ ಬಿಡಬೇಕುʼ ಎಂದು ಒತ್ತಾಯಿಸಿದರು.
ಇಂದು ಆ ಮಹಾನ್ ಹೋರಾಟಕ್ಕೆ 6 ತಿಂಗಳು ಕಳೆದಿದ್ದು, ಅಪಾರ ತ್ಯಾಗ, ಬಲಿದಾನವನ್ನು ರೈತರು ಕೃಷಿ ಕಾರ್ಮಿಕಾರರು ಮಾಡಿದ್ದಾರೆ. 400ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಭಾಗವಹಿಸಿ ನಿಧನರಾಗಿದ್ದಾರೆ. ಕೇಂದ್ರ ಸರ್ಕಾರ ರೈತರ ಹೋರಾಟವನ್ನು ದಮನ ಮಾಡಲು ಪ್ರಯತ್ನಿಸಿದೇ ಹೊರತು ರೈತರ ಬೇಡಿಕೆಗಳನ್ನು ಇದುವರೆಗೂ ಈಡೇರಿಸಿಲ್ಲ. ರೈತರ ಈ ಚಾರಿತ್ರಿಕಾ ಹೋರಾಟ ಮುಂದುವರೆದಿದೆ ಎಂದರು.
ಕಾರ್ಮಿಕ ಮುಖಂಡ ಪೀರು ರಾಠೋಡ ಮಾತನಾಡಿ ʻಪ್ರಧಾನಿ ನರೇಂದ್ರಮೋದಿ ಯವರು ತಮ್ಮ ಅಧಿಕರದ 7ನೇ ವರ್ಷದ ಅಧಿಕಾರವಧಿ ಪೂರ್ಣಗೊಳಿಸಲಿದ್ದಾರೆ. ಈ 7 ವರ್ಷದ ಅವಧಿಯ ದಿನಗಳು ರೈತರ, ಕಾರ್ಮಿಕರ, ಕೃಷಿ ಕೂಲಿಕಾ ರರ ಕರಾಳ ದಿನಗಳಾಗಿವೆ. ಕಾರ್ಮಿಕ ವಿರೋಧಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಮಸೂದೆ, ಹಿಂಪಡೆಯಬೇಕು. ಕೊರೊನಾ ಲಸಿಕೆಯನ್ನು ಉಚಿತವಾಗಿ ಎಲ್ಲರಿಗೂ ನೀಡಬೇಕು ಎಂದು ಆಗ್ರಹಿಸಿದರು.
ಇಂದು ದೇಶವ್ಯಾಪಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಕರಾಳ ದಿನಾಚರಣೆ ಆಚರಿಸಲು ಕೊಟ್ಟ ಕರೆಯನ್ನು ಎಲ್ಲೆಡೆ ಪ್ರತಿಭಟನೆ ಆಚರಿಸಲಾಗಿದೆ. ಪ್ರತಿಭಟನೆಯಲ್ಲಿ ಲಕ್ಷ್ಮವ್ವ ಮ್ಯಾಗೇರಿ, ಹುಲಗೇಶ ಚಿಲಝರಿ, ಆಸೀಫ ಉಟಗೂರ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ಭಾಗವಹಿಸಿದ್ದರು.
ವರದಿ: ದಾವಲಸಾಬ ತಾಳಿಕೋಟಿ