ಹುಟ್ಟೂರಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಭುವನ್‌-ಹರ್ಷಿಕಾ

ಕೊಡಗು : ಕೊರೊನಾ ಎರಡನೇ ಅಲೆಯಿಂದ ಸಾವಿರಾರು ಜನರು ಇಂದು ಸಂತ್ರಸ್ಥರಾಗಿದ್ದಾರೆ. ನೂರಾರು ಜನ ತಮ್ಮ ಕುಟುಂಬಸ್ಥರು ಬಂಧು ಮಿತ್ರರನ್ನು ಕಳೆದುಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಸೆಲೆಬ್ರಿಟಿಗಳು ಜನರ ಸೇವೆ ಮಾಡಲು ಮುಂದೆ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಕೊಡಗು ಮೂಲದ ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್‌ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗಿನ ಜನತೆಗೆ ಇದೀಗ ಸಹಾಯ ಹಸ್ತ ಚಾಚಿದ್ದಾರೆ.

ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊರೊನಾ ವಾರಿಯರ್‌ ಗಳಾಗಿ ಜನಸೇವೆಗೆ ಧುಮುಕಿದ್ದಾರೆ. ಭುವನ್‌ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ‘ಭುವನಂ ಕೋವಿಡ್ ಹೆಲ್ಪ್‌ 24/7’ ಎಂಬ ಟ್ರಸ್ಟ್ ಆರಂಭಿಸಿ ಸೋಂಕಿತರಿಗೆ ನೆರವನ್ನು ನೀಡುತಿದ್ದಾರೆ. ಈ ಲಾಕ್ ಡೌನ್ ಸಂದರ್ಭದಲ್ಲಿ ಫೌಂಡೇಷನ್ ಮೂಲಕ ಕೊಡಗಿನ ಜನರ ನೆರವಿಗೆ ನಿಂತಿದ್ದು, ಬಡವರು, ನಿರ್ಗತಿಕರಿಗೆ ಹದಿನೈದು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್‌ ಗಳನ್ನು ವಿತರಣೆ ಮಾಡುತ್ತಿದ್ದಾರೆ. ಎರಡು ವಾರಗಳ ಕಾಲ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿರುವ ‘ಭುವನಂ ಫೌಂಡೇಷನ್’ಗೆ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಚಾಲನೆ ನೀಡಲಾಯಿತು. ಸ್ಥಳೀಯರಿಗೆ ಮತ್ತು ಹೋಂ ಗಾರ್ಡ್‍ಗಳಿಗೆ ಆಹಾರ ಪದಾರ್ಥಗಳ ಕಿಟ್ ಮತ್ತು ಮಾಸ್ಕ್ ಅನ್ನು ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ವಿತರಣೆ ಮಾಡಿದ್ದಾರೆ.

ಈ ಸಂದರ್ಭ ಮಡಿಕೇರಿ ನಗರ ಸಭೆ ಆಯುಕ್ತ ರಾಮದಾಸ್ ಜೊತೆಗಿದ್ದು, ನಗರದಲ್ಲಿ ಆಹಾರ ಪದಾರ್ಥಗಳ ಕಿಟ್ ಬೇಕಾಗಿರುವ ಏರಿಯಾಗಳಿಗೆ ಕರೆದೊಯ್ದು ಖುದ್ದು ನಿಂತು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಸಿದರು. ಈ ಸಂದರ್ಭ ಮಾತನಾಡಿದ ಭುವನ್ ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಔಷಧಿ ಕೊಳ್ಳಲು 15, 20 ಕಿಲೋಮೀಟರ್ ಹೋಗಬೇಕಾಗಿದೆ. ಇನ್ನು ಕೋವಿಡ್ ಎಂದ ಕೂಡಲೇ ಯಾರೂ ಆಟೋದವರು ಬರುವುದಿಲ್ಲ. ಹೀಗಾಗಿಯೇ ನಮ್ಮದೇ ತಂಡ ಇಂತಹವರ ನೆರವಿಗೆ ಧಾವಿಸಲಿದೆ. ಅಲ್ಲದೆ ಆಹಾರ ಪದಾರ್ಥಗಳು ಬೇಕಾದಲ್ಲಿ ಒದಗಿಸಲಿದೆ ಎಂದರು. ನಟಿ ಹರ್ಷಿಕಾ ಪೂಣಚ್ಚ, ಕೊಡಗಿನಲ್ಲಿ ನೆರೆ ಆಗುತ್ತಿದ್ದಂತೆ ಫೀಡ್ ಕರ್ನಾಟಕ ಆರಂಭಿಸಿದ್ದೇವೆ. ಕೊಡಗಿನ ಜನರಿಗೆ ಔಷಧಿ ಅಗತ್ಯ ಇರುವುದರಿಂದ ಸೇವೆಯನ್ನು ಒದಗಿಸಲಿದ್ದೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್19 ಎರಡನೇ ಅಲೆಯಿಂದ ಒದ್ದಾಡುವ ರೋಗಿಗಳಿಗಾಗಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಎರಡು ಆಕ್ಸಿಜನ್ ಕಾನ್ಸಂಟ್ರೇಟರ್‌ ಇರುವ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ‘ಶ್ವಾಸ’ ಹೆಸರಿನ ಯೋಜನೆಯ ಈ ಎರಡು ಬಸ್ಸುಗಳು ಇಂದಿನಿಂದ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳ ಹೊರಗೆ ಕಾರ್ಯ ನಿರ್ವಹಿಸಲಿದೆ. ಹೀಗೆ ಸಿನೆಮಾ ದಂಪತಿಗಳಿಬ್ಬರು ಜನರ ಸೇವೆಗೆ ತಮ್ಮನ್ನು  ತಾವು ತೊಡಗಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *