ಎರಡು ಅಂತರರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ʻಅಮೃತಮತಿʼ

ಬರಗೂರು ರಾಮಚಂದ್ರಪ್ಪ ನಿರ್ದೇಶನ ಹಾಗೂ ನಟಿ ಹರಿಪ್ರಿಯಾ ನಟನೆಯ ʻಅಮೃತಮತಿʼ ಚಲನಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಲಾಸ್ ಏಂಜಲೀಸ್ ಸನ್ ಫಿಲ್ಮ್ ಫೆಸ್ಟ್ ನಲ್ಲಿ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ʻಅಮೃತಮತಿʼ ಚಲನಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ. ಅಲ್ಲದೆ, ಹಲವು ಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಬರಗೂರು ರಾಮಚಂದ್ರಪ್ಪ ಅವರಿಗೆ ಇದೇ ಮೊದಲ ಬಾರಿಗೆ ಅತ್ಯುತ್ತಮ ಚಿತ್ರಕಥೆ ಲಭಿಸಿದೆ.

ಇದನ್ನು ಓದಿ: ಲಾಸ್ ಏಂಜಲೀಸ್ ಚಿತ್ರೋತ್ಸವಕ್ಕೆ ಆಯ್ಕೆಯಾದ “ಅಮೃತಮತಿ”

ಅಲ್ಲದೆ, ಅಟ್ಲಾಂಟಾ ಅಂತರರಾಷ್ಟ್ರೀಯ ಚಿತ್ರೋತ್ಸವ ಹಾಗೂ ನೋಯ್ಡಾದ 4ನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿಯೂ ಈಗಾಗಲೇ ಪ್ರಶಸ್ತಿಯನ್ನು ಪಡೆದಕೊಂಡಿದೆ.

ನೋಯ್ಡಾದ 4ನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿ ‘ಅಮೃತಮತಿ’ ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಹರಿಪ್ರಿಯಾ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ. ಅಮೃತಮತಿ ಚಿತ್ರತಂಡಕ್ಕೆ ಮತ್ತೆರೆಡು ಪ್ರಶಸ್ತಿಗಳು ಲಭ್ಯವಾಗಿರುವುದು ಆನಂದವನ್ನುಂಟು ಮಾಡಿದೆ. ಈ ಚಿತ್ರಕ್ಕೆ ವಿದೇಶಿ ಚಿತ್ರೋತ್ಸವಗಳಲ್ಲಿಯೂ ಅಪಾರವಾದ ಜನಮನ್ನಣೆ ಗಳಿಸಿದೆ.

ಜನ್ನನ ಯಶೋಧರ ಚರಿತೆ ಕಥೆ ಆಧಾರಿತ ಚಿತ್ರವಾಗಿದ್ದು ಅನ್ಯಪುರುಷನ ಸಂಬಂಧ ಮತ್ತು ಮಹಿಳಾ ಮನಸ್ಸಿನ ತಲ್ಲಣಗಳ ಸೂಕ್ಷ್ಮ ಸಂದರ್ಭಗಳನ್ನು ಅನಾವರಣಗೊಳಿಸಲಾಗಿದೆ.

ಈಗಾಗಲೇ ಹತ್ತು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪುಟ್ಟಣ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ʻಚಲನಚಿತ್ರಗಳಿಗೆ ನಾನು ರಚಿಸಿದ ಕತೆ, ಗೀತೆ, ಸಂಭಾಷಣೆಗಳಿಗೆ ಪ್ರಶಸ್ತಿಗಳು ಬಂದಿದ್ದವು. ಆದರೆ, ಇಲ್ಲಿಯವರೆಗೆ ನಾನು ರಚಿಸಿದ ಚಿತ್ರಕಥೆಗೆ ಪ್ರಶಸ್ತಿ ಬಂದಿರಲಿಲ್ಲ. ಮೊಟ್ಟಮೊದಲ ಬಾರಿಗೆ ಚಿತ್ರಕಥೆಗಾಗಿ ನನಗೆ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ. ಇದನ್ನು ಚಿತ್ರತಂಡಕ್ಕೆ ಅರ್ಪಿಸುತ್ತೇನೆ. ಈ ಮೂಲಕ ಇಡೀ ಚಿತ್ರತಂಡದ ಸಹಕಾರವನ್ನು ಗೌರವಿಸುತ್ತೇನೆ’ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಅಮೃತಮತಿ ಚಿತ್ರವನ್ನು ಮುಂಬೈನ ಸಂಸ್ಥೆಯೊಂದು ಪ್ರದರ್ಶನದ ಹಕ್ಕುಗಳನ್ನು ಪಡೆದಿದ್ದು, ಕೋವಿಡ್‌ ಕಡಿಮೆಯಾದ ಮೇಲೆ ಚಿತ್ರವು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಶೋಧರನ ಪಾತ್ರದಲ್ಲಿ ನಟ ಕಿಶೋರ್‌ ನಟಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *