ಲಸಿಕೆ ವಿಚಾರವಾಗಿ ಅಪಪ್ರಚಾರ ಮಾಡಿದ್ದು ಬಿಜೆಪಿ: ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್‌ ತಡೆಯುವಲ್ಲಿ ಲಭ್ಯವಿರುವ ಲಸಿಕೆಗಳು, ಆಕ್ಸಿಜನ್‌, ವೆಂಟಿಲೇಟರ್‌ ಹಾಗೂ ಇತರ ಸೌಲಭ್ಯಗಳ ಕುರಿತು ರಾಜ್ಯದ ಬಿಜೆಪಿ ಸರಕಾರವು ಕೂಡಲೇ ಶ್ವೇತಪತ್ರವನ್ನು ಹೊರಡಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ನವರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನ ಪ್ರಾರಂಬವಾಗಿ ಮೂರು ವಾರ ಕಳೆದಿದೆ ಆದರೆ ರಾಜ್ಯದಲ್ಲಿ ಲಸಿಕೆಗಳ ಕೊರತೆ ಎದುರಾಗಿದೆ. ಬಿಜೆಪಿಯೇ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದು ಈಗ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದೆ ಎಂದು ಸಿದ್ದಾರಾಮಯ್ಯ ತಿರುಗೇಟು ನೀಡಿದರು.

ಇದನ್ನು ಓದಿ: ಕೋವಿಡ್: ಬೆಂಗಳೂರಿನ ಚಿತಾಗಾರ ಹಾಗು ರುದ್ರಭೂಮಿ ಕಾರ್ಮಿಕರಲ್ಲಿ ತೀವ್ರಗೊಂಡ ದುಸ್ಥಿತಿ

ಕಾಂಗ್ರೆಸ್‌ನಿಂದ ಲಸಿಕೆಯ ವಿಚಾರದ ಬಗ್ಗೆ ಅಪಪ್ರಚಾರ ಏನು ಮಾಡುತ್ತಿಲ್ಲ. ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರಮೋದಿ ಅವರು, ರಾಜ್ಯಕ್ಕೆ ಲಸಿಕೆ ವಿತರಣೆ ಮಾಡುತ್ತಿಲ್ಲ. ಸರಕಾರ ಜನರಿಗೆ ಸಿಗುತ್ತಿಲ್ಲವೆಂದರೆ ಅಪಪ್ರಚಾರ ಹೇಗಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೋವಿಡ್‌ ರೋಗಿಗಳಿಗೆ ತುರ್ತು ಅಗತ್ಯವಿರುವ ಆಕ್ಸಿಜನ್, ಆಸ್ಪತ್ರೆ, ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರೆ ಪ್ರಧಾನಿ ನರೇಂದ್ರಮೋದಿ ಅವರು ಕಣ್ಣೀರು ಹಾಕಿ ನಾಟಕ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತೇ? ಕಣ್ಣೀರು ಹಾಕೋದರಿಂದ ಹೋದ ಜೀವಗಳು ವಾಪಾಸ್ಸು ಬರೊದಿಲ್ಲ, ಇನ್ನಾದರೂ ಜನರಿಗೆ ವೈದ್ಯಕೀಯ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸಿದ್ದರು.

ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ತಲಾ ಒಂದು ಕೋಟಿ ನೀಡಿದರೆ ಲಸಿಕೆಯನ್ನು ಖರೀದಿ ಮಾಡಿ ಜನರಿಗೆ ಹಂಚುತ್ತೇವೆ ಎಂದರೆ ಅದಕ್ಕೂ ಸರಕಾರ ಒಪ್ಪಿಗೆ ನೀಡುತ್ತಿಲ್ಲ. ಸರಕಾರದ ಹಣದಲ್ಲಿ ಲಸಿಕೆ ವಿತರಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಎಂಆರ್‌ಪಿಎಲ್‌ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಬೇಕು: ಡಿ ಕೆ ಶಿವಕುಮಾರ್‌

ಕಪ್ಪು ಶಿಲೀಂಧ್ರ ಕಾಯಿಲೆಗೆ ಅಗತ್ಯ ಚುಚ್ಚುಮದ್ದು ದೊರೆಯುತ್ತಿಲ್ಲ. ಮಾರಣಾಂತಿಕ ಕಾಯಿಲೆಗೆ ಔಷಧ ಇಲ್ಲ ಎಂದರೆ ಅದು ಕೊಲೆಗೆ ಸಮಾನವಲ್ಲವೇ.  ಲಾಕ್‌ಡೌನ್‌ ಸಂಕಷ್ಟದಿಂದ ತೊಂದರೆಗೊಳಗಾದ ಬಡ ಕುಟುಂಬಗಳು ಹಾಗೂ ದುಡಿಯುವ ವರ್ಗದವರಿಗೆ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯಿಸಿದೇವು. ರಾಜ್ಯದ ಬಿಜೆಪಿ ಸರಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಈ ಪ್ಯಾಕೇಜ್ ಯಾರ ಉಪಯೋಗಕ್ಕೂ ಬರುವಂತದಲ್ಲ ಎಂದು ಆರೋಪಿಸಿದರು.

ಕಷ್ಟಕಾಲದಲ್ಲಿ ಕಾಂಗ್ರೆಸ್‌ ಶಾಸಕರು ನೆರವಿನ ಹಸ್ತ ಚಾಚಿರುವ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು ಲಾಕ್‌ಡೌನ್‌ ಮುಗಿಯುವವರೆಗೆ ಹೀಗೆ ಮುಂದುವರೆಯಲಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಇಂದು ಚಾಮರಾಜಪೇಟೆ ಶಾಸಕ ಬಿ.ಝಡ್‌.ಜಮೀರ್‌ ಅಹಮ್ಮದ್‌ ಖಾನ್‌ ಅವರು ಕ್ಷೇತ್ರದಲ್ಲಿ ಚಲನಚಿತ್ರ ರಂಗದ ಕಾರ್ಮಿಕರಿಗೆ ಉಚಿತ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಸಕರಾದ ಬೈರತಿ ಸುರೇಶ್‌, ಪ್ರಕಾಶ್‌ ರಾಥೋಡ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಾ ರಾಮಯ್ಯ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *