ಬೆಂಗಳೂರು: ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಆದ್ಯತೆ ನೀಡಬೇಕಾದ ನಿಯಮವನ್ನು ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಸಂಸ್ಥೆ (ಎಂಆರ್ಪಿಲ್)ಯ ನೇಮಕಾತಿಯಲ್ಲಿ ಗಾಳಿಗೆ ತೂರಲಾಗಿದೆ, 400ರಲ್ಲಿ ಕೇವಲ 10 ಮಂದಿ ಕನ್ನಡಿಗರಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗಿದೆ, ಇದು ಖಂಡನೀಯ. ಈ ನೇಮಕಾತಿಯನ್ನು ತಡೆಹಿಡಿಯಬೇಕೆಂದು ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ ವಿಷಯ ಪ್ರಸ್ತಾಪಿಸಿದ ಡಿ ಕೆ ಶಿವಕುಮಾರ್ ಅವರು ನೇಮಕಾತಿ ಆದೇಶವನ್ನು ತಡೆಹಿಡಿದು ಕನ್ನಡಿಗರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಇದನ್ನು ಓದಿ: ಎಂಆರ್ಪಿಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗವಿಲ್ಲ ಇದಕ್ಕೆ ಸಂಸದ ಶಾಸಕರೇ ಕಾರಣ
ಅಲ್ಲದೆ, ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಔದ್ಯೋಗಿಕ ನ್ಯಾಯವನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಹಾಗೂ ಕನ್ನಡಿಗರಿಗೆ ನ್ಯಾಯ ಒದಗಿಸಬೇಕೆಂದು ರಾಜ್ಯದವರೇ ಅದ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರಿಗೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಎಂಆರ್ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸಬೇಕು. ಸರೋಜಿನ್ ಮಹಿಷಿ ವರದಿ ಅನುಸಾರ ನೇಮಕಾತಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಎಂಆರ್ ಪಿಎಲ್ ಮಂಗಳೂರಿಗೆ ಬಂದಾಗ ಆರಂಭದಲ್ಲಿ ಪರ – ವಿರೋಧ ವ್ಯಕ್ತವಾಗಿತ್ತು. ಆದರೆ ಊರು ಒಳ್ಳೆಯದಾಗುತ್ತದೆ, ಉದ್ಯೋಗ ಸಿಗುತ್ತದೆ ಎಂಬ ಜನರ ನಿರೀಕ್ಷೆಗೆ ಮೋಸವಾಗಿದೆ ಎಂದರು.
ಈಚೇಗಷ್ಟೆ, ನಡೆದ 233 ನೇಮಕಾತಿಯಲ್ಲಿ ಕರ್ನಾಟಕದವರು 13 ಮಂದಿ ಮಾತ್ರ ಇದ್ದಾರೆ. ಅದರಲ್ಲಿ ಕರಾವಳಿ ನಾಲ್ಕು ಮಂದಿಗೆ ಮಾತ್ರ ಸ್ಥಾನ ಸಿಕ್ಕಿರೋದು. ಇಲ್ಲಿ ವಿದ್ಯಾವಂತರಿಲ್ಲವೇ, ಸ್ಥಳೀಯ ಮಂದಿಗೆ ಯಾಕೆ ಆದ್ಯತೆ ಕೊಟ್ಟಿಲ್ಲ. ಸರೋಜಿನಿ ಮಹಿಷಿ ವರದಿಗೆ ಯಾಕೆ ಮಾನ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಇದನ್ನು ಓದಿ: ಮೇ 26ರ ರೈತರ ಪ್ರತಿಭಟನೆಗೆ 12 ಪ್ರತಿಪಕ್ಷಗಳ ಬೆಂಬಲ
ಕಳೆದ 15 ವರ್ಷಗಳಿಂದಲೂ ಲಕ್ಷಾಂತರ ಉದ್ಯೋಗಗಳು ಪರರಾಜ್ಯದ ಪಾಲಾಗಿವೆ. ಕರಾವಳಿ ಭಾಗದಲ್ಲಿ ಸ್ಥಳೀಯರ ಉದ್ಯೋಗವನ್ನೂ ಎಂಆರ್ಪಿಎಲ್ ಕಿತ್ತುಕೊಂಡಿದೆ.
2007 ರಿಂದಲೂ ಪ್ರತೀ ವರ್ಷ ಉದ್ಯೋಗ ನೇಮಕಾತಿಯನ್ನು ಎಂಆರ್ಪಿಎಲ್, ಒಎನ್ಜಿಸಿ ಮಾಡುತ್ತದೆ. ಅದರಲ್ಲಿ ಯಾವತ್ತೂ ಭೂಮಿ ಕಳೆದುಕೊಂಡವರಿಗೆ ಮತ್ತು ಸ್ಥಳೀಯರಿಗೆ ಪ್ರಾಧಾನ್ಯತೆ ಕೊಡಲೇ ಇಲ್ಲ. 2011ರ ಜನವರಿ 21ರಂದು 1,800 ಎಕರೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬದ ನೂರಾರು ಯುವಕ- ಯುವತಿಯರು ಎಸ್ಇಝಡ್ ಕಚೇರಿ ಎದುರು ಉದ್ಯೋಗಕ್ಕಾಗಿ ನಿರಂತರ ಹೋರಾಟ ನಡೆಸಿದ್ದರು.