ಮಂಗಳೂರು: ತೌಕ್ತೆ ಚಂಡಮಾರುತದ ಪ್ರಭಾವದಿಂದ ವಿಪರೀತವಾಗಿ ಬೀಸಿದ ಬಿರುಗಾಳಿ, ಮಳೆಗೆ ಹೊಯಿಗೆ ಬಜಾರ್ ಸರಕಾರಿ ಜಮೀನಿನಲ್ಲಿ ಟೆಂಟ್ ಹಾಕಿ ಬದುಕುತ್ತಿದ್ದ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳ ಗುಡಿಸಲುಗಳಿಗೆ ತೀವ್ರತರವಾದ ಹಾನಿಗೊಳಲಾಗಿದೆ.
ಬೀಸಿದ ವಿಪರೀತ ಗಾಳಿ, ಮಳೆಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಕ್ಕೆ ಬಹಳ ಸಂಕಷ್ಟ ಎದುರಾಗಿದೆ.
ಕೊರೊನಾ ರೋಗದ ಈ ಕಾಲಘಟ್ಟದಲ್ಲಿ ಉಂಟಾದ ಸಮಸ್ಯೆ ಮತ್ತು ಲಾಕ್ಡೌನ್ ನಿಯಮದಿಂದಾಗಿ ತಮ್ಮ ಬದುಕಿನ ಮೂಲ ಆಧಾರವಾಗಿದ್ದ ಕುಲ ಕಸುಬನ್ನೇ ಕಸಿದುಕೊಂಡಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ನಮ್ಮ ಸಮುದಾಯಕ್ಕೆ ಜಿಲ್ಲಾಡಳಿತ ಕೂಡಲೇ ಮದ್ಯಪ್ರವೇಶಿಸಿ ನೆರವು ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ನಮಗೆ ಆಹಾರ ಭದ್ರತೆ ಸಹಿತ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಆರ್ಥಿಕ ನೆರವು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಗಮನಹರಿಸಿದ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಹೊಯಿಗೆ ಬಜಾರ್ ನ ಶಿಳ್ಳೆಕ್ಯಾತ ಸಮುದಾಯ ವಾಸವಿರುವ ಸ್ಥಳಕ್ಕೆ ಭೇಟಿಕೊಟ್ಟು ಅವರ ಸಮಸ್ಯೆಗಳನ್ನು ಆಲಿಸಿರುತ್ತಾರೆ.
ಅದೇ ರೀತಿ ಚಂಡಮಾರುತದಿಂದಾದ ಸಮಸ್ಯೆ ಮತ್ತು ಅವರ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆಯನ್ನಿತ್ತರು.
ಈ ಸಂದರ್ಭದಲ್ಲಿ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷರು, ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಅಲೆಮಾರಿ ನಿಗಮದ ಅಧಿಕಾರಿ ಸೋಮಪ್ಪ ಉಪಸ್ಥಿತರಿದ್ದರು.