ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಪ್ರಕಟಿಸಿರುವ ಪ್ಯಾಕೇಜ್ ಅರೆ ಬರೆ ಪ್ಯಾಕೇಜ್ ಆಗಿದೆ ಕೋವಿಡ್ ಸಂಕಷ್ಟದ ವೇಳೆ ಜನತೆಯ ಜೀವನ ಉಳಿಸದು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು
ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಟೀಕಿಸಿವೆ.
ಆದಾಯ ತೆರಿಗೆಯಿಂದ ಹೊರಗಿರುವ ರಾಜ್ಯದ ಪ್ರತಿ ಕುಟುಂಬಕ್ಕೆ ಮಾಸಿಕ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ಕನಿಷ್ಠ 6 ತಿಂಗಳು ನೀಡಬೇಕು ಮತ್ತು ಪ್ರತಿಯೊಂದು ಕುಟುಂಬಕ್ಕೂ ತಲಾ 10 ಕೆಜಿ ಉಚಿತ ಪಡಿತರ ನೀಡಬೇಕು ಹಾಗು ಉದ್ಯೋಗ ಖಾತ್ರಿ ಕೆಲಸವನ್ನು 600 ರೂ ಕೂಲಿಯೊಂದಿಗೆ 200 ದಿನಗಳಿಗೆ ಹೆಚ್ಚಿಸಿ ನಗರ ಪ್ರದೇಶಕ್ಕೂ ವಿಸ್ತರಿಸ ಬೇಕಂಬುದು ಸಿಪಿಐ(ಎಂ) ಮತ್ತು ಜನತೆಯ ಒತ್ತಾಯವಾಗಿದೆ.ಆದರೆ ಮುಖ್ಯ ಮಂತ್ರಿಗಳು ಪ್ರಕಟಿಸಿರುವ ಕೇವಲ 1250 ಕೋಟಿ ರೂಗಳ ಪ್ಯಾಕೇಜ್ ಅಗತ್ಯದ ಒಂದು ಶೇಕಡ ಪರಿಹಾರ ಸಹಾ ಆಗಿರುವುದಿಲ್ಲ ಎಂದು ಸಿಪಿಐಎಂ ಬೆಂ.ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಿದ ರಾಜ್ಯ ಸರಕಾರ : ರೂ 1250 ಕೋಟಿಯಲ್ಲಿ ಯಾರ ಪಾಲು ಎಷ್ಟು?
ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸದ ರಾಜ್ಯ ಬಿಜೆಪಿ ಸಕಾ೯ರವು ಅರೆಬರೆ ಲಾಕ್ಡೌನ್ ಘೋಷಿಸಿದೆ. ಇದೀಗ ಅರೆ ಬರೆ ಪ್ಯಾಕೇಜ್ ಘೋಷಿಸಿದೆ.ಹಾಗಾಗಿ ರಾಜ್ಯ ಬಿಜೆಪಿ ಸಕಾ೯ರದ ಕೋವಿಡ್ ನಿಯಂತ್ರಣ ಕ್ರಮಗಳು ಜನರ ಜೀವವನ್ನು ಉಳಿಸುವುದಿಲ್ಲ ಮಾತ್ರವಲ್ಲದೆ ಪ್ಯಾಕೇಜ್ ಜೀವನವನ್ನು ರಕ್ಷಿಸದು ಎಂದಿರುವ ಉಮೇಶ್, ಕಳೆದ ವಷ೯ದ ಪ್ಯಾಕೇಜ್ ನ ಅಧ೯ದಷ್ಟು ಸಹಾ ಇರದ ಪ್ರಸಕ್ತ ಪ್ಯಾಕೇಜ್ ಕೋವಿಡ್ 2ನೇ ಅಲೆಯ ವ್ಯಾಪಕತೆ, ಸಾವು ನೋವಿನ ಪ್ರಮಾಣಕ್ಕೆ ಅನುಗುಣವಾಗಿಲ್ಲ.ಕೇವಲ ಮೂಗಿಗೆ ತುಪ್ಪ ಸವರುವ ಪ್ಯಾಕೇಜ್ ಅನ್ನು ಜನತೆಯ ಸಿಟ್ಟನ್ನು ಶಮನ ಮಾಡಲು ರಾಜ್ಯ ಬಿಜೆಪಿ ಸಕಾ೯ರವು ಪ್ರಕಟಿಸಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೇ 21 ರಂದು ರಾಜ್ಯದ ಕಾಮಿ೯ಕರು, ರೈತರು ಮತ್ತು ಕೂಲಿಕಾರರು ಹಮ್ಮಿಕೊಂಡಿರುವ ಹಾಗೂ 24 ರಂದು ಅಸಂಘಟಿತ ಕಾಮಿ೯ಕರು ಹಮ್ಮಿಕೊಂಡಿರುವ ಮನೆಯಿಂದಲೆ ಪ್ರತಿಭಟನೆ ಪ್ರತಿರೋಧವನ್ನು ಸಿಪಿಐ(ಎಂ) ಬೆಂಬಲಿಸಿದೆ ಹಾಗೂ ಜನತೆ ಅದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದು ಉಮೇಶ್ ಮನವಿ ಮಾಡಿದ್ದಾರೆ.