ಇತ್ತೀಚಿನ ಕೆಲವು ದಿನಗಳಲ್ಲಿ ಉಚ್ಛ ನ್ಯಾಯಾಲಯಗಳು ಹಾಗೂ ಸರ್ವೋಚ್ಛ ನ್ಯಾಯಾಲಯವು ಸರಕಾರದ ನೀತಿಗಳನ್ನು, ತೀರ್ಮಾನಗಳನ್ನು ಕಠಿಣವಾಗಿ ಪ್ರಶ್ನಿಸಿವೆ. ಹೀಗಾಗಿ ಈ ವರೆಗೆ ಇದೇ ನ್ಯಾಯಾಲಯದ ಬೆಂಬಲದಿಂದ ತನ್ನ ಸರ್ವಾಧಿಕಾರಿ ಧೋರಣೆಗಳನ್ನು ಚಲಾಯಿಸುತ್ತಿದ್ದ ಕೇಂದ್ರ ಸರಕಾರಕ್ಕೆ ಇದು ಬಹುದೊಡ್ಡ ಅಪಾಯವಾಗಿ ಕಂಡಿದೆ. ಅಲ್ಲದೆ ಸರ್ವೋಚ್ಛ ನ್ಯಾಯಾಲಯವೇ ಕ್ರಿಯಾ ಸಮಿತಿಗಳನ್ನು ರಚಿಸುವ ಮೂಲಕ ಸರಕಾರದ ಅಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ ಎನ್ನುವ ಆತಂಕವೂ ಅದಕ್ಕಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ನ್ಯಾಯಾಂಗ ಮತ್ತು ಶಾಸಕಾಂಗಗಳ ಮಧ್ಯ ಸಾರ್ವಜನಿಕ ವಿವಾದವನ್ನು ಹುಟ್ಟಿಸಿ ಅದರ ಮೂಲಕ ನ್ಯಾಯಾಂಗವು “ಸ್ವಲ್ಪ ಮೆತ್ತಗಾಗಲಿ” ಎಂದು ಪ್ರಯತ್ನಿಸುತ್ತಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯವು ಕೊರೊನಾ ವ್ಯಾಕ್ಸೀನ್ ಕುರಿತು ಕೇಂದ್ರಕ್ಕೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿತ್ತಲ್ಲದೆ ಸಂಬಂಧಪಟ್ಟ ಆಕ್ಸಿಜನ್ ವಿತರಣೆ ಇತ್ಯಾದಿಗಳ ಬಗ್ಗೆ ಒಂದು ರಾಷ್ಟ್ರೀಯ ಕ್ರಿಯಾ ಸಮಿತಿಯನ್ನೂ ರಚಿಸಿತ್ತು. ಈ ಬಗ್ಗೆ ಕೋರ್ಟಿನಲ್ಲಿ ತನ್ನ ವಿರೋಧವನ್ನು ಸೂಚಿಸಿದ ಕೇಂದ್ರವು ಶನಿವಾರ 9 ರಂದು ಒಂದು ಅಫಿಡಾವಿಟ್ ಸಲ್ಲಿಸಿದೆ. ಇದರ ವಿವರಗಳನ್ನು ನಂಬಲರ್ಹವಾದ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕೂಲಂಕಷವಾಗಿ ಓದಿದಾಗ ನನಗೆ ಆಶ್ಚರ್ಯವಾಯಿತು. ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ಚುನಾಯಿತವಾದ ಒಂದು ಕೇಂದ್ರ ಸರಕಾರವು ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ಇಂಥ ಉದ್ಧಟತನದ, ಧಾರ್ಷ್ಟ್ಯದ ಭಾಷೆಯನ್ನು ಬಳಸಬಹುದೆ ಎನ್ನುವುದೇ ಈ ಆಶ್ಚರ್ಯಕ್ಕೆ ಕಾರಣ. ಕೇಂದ್ರದ ಹೇಳಿಕೆಯು ಕೆಲವು ವಾಕ್ಯಗಳ ಅನುವಾದವನ್ನು ನೋಡಿ.
“ಜಾಗತಿಕ ಮಟ್ಟದ ಪಿಡುಗಿನ ಸಂದರ್ಭದಲ್ಲಿ ರಾಷ್ಟ್ರದ ಪ್ರತಿಕ್ರಿಯೆ ಮತ್ತು ತಂತ್ರೋಪಾಯಗಳು ಪರಿಣಿತ ಮತ್ತು ವೈಜ್ಞಾನಿಕ ಅಭಿಪ್ರಾಯದಿಂದ ರೂಪಿತವಾಗಿರುವುದರಿಂದಾಗಿ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಹೆಚ್ಚಿನ ಅವಕಾಶವಿರುವುದಿಲ್ಲ. ಸದುದ್ದೇಶವನ್ನು ಹೊಂದಿದ್ದರೂ ಅತಿ ಉತ್ಸಾಹದ ನ್ಯಾಯಾಂಗದ ಪ್ರವೇಶವು ಊಹಿಸಲಾಗದ ಮತ್ತು ಉದ್ದೇಶಿತವಲ್ಲದ ಪರಿಣಾಮಗಳನ್ನು ಉಂಟುಮಾಡಬಹುದು.”
ಈ ವಾಕ್ಯಗಳಲ್ಲಿ ಮೊದಲು ಬಳಸಲಾದ ಪದವು ‘interference’ ಅಂದರೆ ಅನಪೇಕ್ಷಿತ ಹಸ್ತಕ್ಷೇಪ, ಸರಕಾರದ ಕ್ರಿಯೆಗಳಿಗೆ ಅಡ್ಡಿಯಾಗುವುದು ಎನ್ನುವ ಅರ್ಥಗಳಿವೆ. ಇದು ಇಂಗ್ಲಿಷ್ನಲ್ಲಿ ಸಂಪೂರ್ಣವಾಗಿ ಋಣಾತ್ಮಕ (negative) ಅರ್ಥವನ್ನು ಹೊಂದಿದೆ. ಎರಡನೇಯ ಪದವು intervention. ಇದರ ಅರ್ಥವು ಮಧ್ಯಪ್ರವೇಶವಾಗಿದೆ. ಕೇಂದ್ರದ ಹೇಳಿಕೆಯಲ್ಲಿ ಮತ್ತೆ ಬಳಕೆಯಾಗುವುದು interference ಎನ್ನುವ ಪದ. ವಾಕ್ಯದ ಶೈಲಿ ಮತ್ತು ಧ್ವನಿ ಸರ್ವೋಚ್ಛ ನ್ಯಾಯಾಲಯಕ್ಕೆ ಎಚ್ಚರಿಸುವ ಬಗೆಯದಾಗಿದೆ. ನ್ಯಾಯಾಲಯವು ಸ್ಪಷ್ಟವಾಗಿಯೇ ಹೇಳಿದ್ದೆಂದರೆ “ದೇಶದ ಈ ಮಹಾ ಸಂಕಷ್ಟದಲ್ಲಿ ನಾವು ಮೂಕ ಸಾಕ್ಷಿಗಳಾಗಿ ಇರಲಾರೆವು” ಎಂದು. ಇದನ್ನು ಕೇಂದ್ರವು ಹಸ್ತಕ್ಷೇಪವೆಂದು ತಳ್ಳಿಹಾಕುತ್ತದೆ. ಈ ಧಾರ್ಷ್ಟ್ಯ ಹಾಗೂ ಸುಳ್ಳಿನ ಹಿಂದೆ ಇರುವ ಸಂಗತಿಗಳನ್ನು ಗಮನಿಸೋಣ.
ಕೇಂದ್ರದ ಹೇಳಿಕೆಯ ಪ್ರಕಾರ ಕೊರೊನಾ ಪಿಡುಗಿನಲ್ಲಿ ದೇಶದ ನೀತಿಯು ಪರಿಣಿತರು, ವೈದ್ಯಕೀಯ ಪರಿಣಿತರು ಹಾಗೂ ವಿಜ್ಞಾನಿಗಳಿಂದ ರೂಪಿತವಾಗಿರಬೇಕು. ಹೌದಲ್ಲವೆ? ಹಾಗಿದ್ದರೆ ಕೇಂದ್ರವೇ ರಚಿಸಿದ ಪರಿಣಿತರ ಸಮಿತಿಯು ಕೊರೊನಾ ಎರಡನೇ ಅಲೆಗೆ ಕೇಂದ್ರದ ನೀತಿ, ಕಾರ್ಯಗಳನ್ನೇ ಯಾಕೆ ತಪ್ಪಿತಸ್ಥವಾಗಿಸಿದೆ? ದೇಶದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯಾಕೆ ಅತ್ಯಂತ ಕಟುವಾದ ಮಾತುಗಳಲ್ಲಿ ಮೋದಿಯವರ, ಕೇಂದ್ರದ ನೀತಿಯನ್ನು, ಕಾರ್ಯಗಳನ್ನು ಟೀಕಿಸಿದೆ? ಸರ್ವೋಚ್ಛ ನ್ಯಾಯಾಲಯದ ಮುಖ್ಯ ಪ್ರಶ್ನೆ ವ್ಯಾಕ್ಸೀನ್ಗಳ ತಾರತಮ್ಯದ ದರ ನಿಗದಿಯ ಬಗ್ಗೆ ಇತ್ತು (differential pricing). ಇಂಥ ದರನೀತಿಯನ್ನು ಯಾವ ಪರಿಣಿತರು ಕೇಂದ್ರಕ್ಕೆ ಸೂಚಿಸಿದರು? ಈ ಪರಿಣಿತರ ಅಭಿಪ್ರಾಯದ ದಾಖಲೆ ಎಲ್ಲಿದೆ? ಈ ಪ್ರಶ್ನೆಗೆ ಸುಳ್ಳನ್ನು ಬಿಟ್ಟರೆ ಉತ್ತರವಿಲ್ಲದ್ದರಿಂದ ಕೇಂದ್ರವು ನ್ಯಾಯಾಂಗ ಹಸ್ತಕ್ಷೇಪದ ಬಗ್ಗೆ ಮಾತನಾಡುತ್ತಿದೆ.
ಇದು ಅವಸರದ ಹೇಳಿಕೆಯಲ್ಲ. ಇತ್ತೀಚಿನ ಕೆಲವು ದಿನಗಳಲ್ಲಿ ಉಚ್ಛ ನ್ಯಾಯಾಲಯಗಳು ಹಾಗೂ ಸರ್ವೋಚ್ಛ ನ್ಯಾಯಾಲಯವು ಸರಕಾರದ ನೀತಿಗಳನ್ನು, ತೀರ್ಮಾನಗಳನ್ನು ಕಠಿಣವಾಗಿ ಪ್ರಶ್ನಿಸಿವೆ. ಹೀಗಾಗಿ ಈ ವರೆಗೆ ಇದೇ ನ್ಯಾಯಾಲಯದ ಬೆಂಬಲದಿಂದ ತನ್ನ ಸರ್ವಾಧಿಕಾರಿ ಧೋರಣೆಗಳನ್ನು ಚಲಾಯಿಸುತ್ತಿದ್ದ ಕೇಂದ್ರ ಸರಕಾರಕ್ಕೆ ಇದು ಬಹುದೊಡ್ಡ ಅಪಾಯವಾಗಿ ಕಂಡಿದೆ. ಅಲ್ಲದೆ ಸರ್ವೋಚ್ಛ ನ್ಯಾಯಾಲಯವೇ ಕ್ರಿಯಾ ಸಮಿತಿಗಳನ್ನು ರಚಿಸುವ ಮೂಲಕ ಸರಕಾರದ ಅಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ ಎನ್ನುವ ಆತಂಕವೂ ಅದಕ್ಕಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ನ್ಯಾಯಾಂಗ ಮತ್ತು ಶಾಸಕಾಂಗಗಳ ಮಧ್ಯ ಸಾರ್ವಜನಿಕ ವಿವಾದವನ್ನು ಹುಟ್ಟಿಸಿ ಅದರ ಮೂಲಕ ನ್ಯಾಯಾಂಗವು “ಸ್ವಲ್ಪ ಮೆತ್ತಗಾಗಲಿ” ಎಂದು ಪ್ರಯತ್ನಿಸುತ್ತಿದೆ. ನನ್ನ ಊಹೆಯೆಂದರೆ ಇನ್ನು ಒಂದು ರಾಷ್ಟ್ರ, ಒಂದು ಚುನಾವಣೆಯ ಬದಲು ಜನಪ್ರತಿನಿಧಿ ಕಾರ್ಯಾಂಗ/ಶಾಸಕಾಂಗ Vs ನ್ಯಾಯಾಂಗ ಹಸ್ತಕ್ಷೇಪವೆನ್ನುವ ವಿಷಯವೇ ನಮ್ಮ ಸಾರ್ವಜನಿಕ ಚರ್ಚೆಯ ವಿಷಯವಾಗುತ್ತದೆ. ಅಲ್ಲದೆ ಸಂವಿಧಾನದ ಬಗ್ಗೆ ಮೂಲತಃ ನಂಬಿಕೆಯೇ ಇಲ್ಲದ ಕೇಂದ್ರ ಸರಕಾರವು ಇನ್ನು ಮೇಲೆ ಸಂವಿಧಾನವು ಶಾಸಕಾಂಗ/ಕಾರ್ಯಾಂಗಗಳ ಸ್ವಾಯತ್ತತೆಯ ಪರವಾಗಿದೆ ಎಂದು ವಾದಿಸತೊಡಗುತ್ತದೆ. ಸರ್ವೋಚ್ಛ ನ್ಯಾಯಾಲಯವನ್ನು ಚುನಾವಣಾ ಪ್ರಚಾರದಲ್ಲಿ ಪ್ರಧಾನಿಗಳು ಪ್ರತಿಪಕ್ಷಗಳ ಬಗ್ಗೆ ಬಳಸುವ ವ್ಯಂಗ್ಯದ ಧಾಟಿಯಲ್ಲಿ ಈ ಹೇಳಿಕೆಯಲ್ಲಿ “The wisdom of the executive should be trusted” ಎಂದು ಛೇಡಿಸುತ್ತದೆ. ನಿಜವಾದ ವ್ಯಂಗ್ಯವೆಂದರೆ ಸರ್ವೋಚ್ಛ ನ್ಯಾಯಾಲಯವು ಪ್ರಶ್ನೆ ಮಾಡುತ್ತಿರುವುದು ಈ “wisdom of the executive” ಅನ್ನುವುದನ್ನೇ. ಅದರ ಅದಕ್ಷತೆಯಿಂದಾಗಿ ಲಕ್ಷಾನುಗಟ್ಟಲೆ ಸಾವುಗಳು, ನೋವು, ಸಂಕಟ, ದುರಂತಗಳು ನಮ್ಮ ಎದುರಿಗಿವೆ.
ಈ ಹೇಳಿಕೆಯ ಇನ್ನೊಂದು ಭಾಗವೆಂದರೆ ವ್ಯಾಕ್ಸೀನ್ನ ದರವನ್ನು ಸ್ಪರ್ಧಾತ್ಮಕ ಮಾರುಕಟ್ಟೆ, ಖಾಸಗಿ ಭಾಗಿದಾರರು (player), ವಿದೇಶೀ ಕಂಪನಿಗಳು ಇವೆಲ್ಲ ಸೇರಿ ತೀರ್ಮಾನಿಸಬೇಕು. ಆಗ ಮಾತ್ರ ಉತ್ಪಾದನೆ ಜಾಸ್ತಿಯಾಗಿ, ವ್ಯಾಕ್ಸೀನ್ಗಳು ಕಡಿಮೆ ದರದಲ್ಲಿ ಲಭ್ಯವಾಗುತ್ತವೆ. ಅಂದರೆ ಕೊರೊನಾ ಮತ್ತು ವ್ಯಾಕ್ಸೀನ್ಗಳು ಮಾರುಕಟ್ಟೆಯ ಸಂಗತಿಗಳು. ಈ ಮಾರುಕಟ್ಟೆಯೇ ಸರಕಾರದ ನೀತಿಯನ್ನು ರೂಪಿಸಬೇಕು. ಹೇಳಿಕೆಯ ಈ ಭಾಗಕ್ಕೆ ಬರುವ ಹೊತ್ತಿಗೆ ಪರಿಣಿತರು, ವೈದ್ಯರು ಎಲ್ಲರೂ ಕಣ್ಮರೆಯಾಗಿದ್ದಾರೆ. ಮುಕ್ತ, ಸ್ಪರ್ಧಾತ್ಮಕ ಮಾರುಕಟ್ಟೆಯೇ ನಿರ್ಧಾರಕವಾಗುತ್ತದೆ. ಈ ವಾದವು ಎಷ್ಟು ಕ್ರೂರವಾಗಿದೆಯೆಂದರೆ ಕೊರೊನಾ ಅದರೆದುರಿಗೆ ದಯಾಳುವಾಗಿ ಕಾಣುತ್ತದೆ. ಇಷ್ಟೆಲ್ಲ ಟೀಕೆಗಳ ಮಧ್ಯ ಕೇಂದ್ರ ಸರಕಾರವು ಯಾಕೆ ತನ್ನ ನಿಲುವನ್ನು ಬದಲಾಯಿಸುತ್ತಿಲ್ಲ ಎನ್ನುವುದಕ್ಕೆ ಉತ್ತರ ಈ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಭಾರತವೇ ಸ್ಮಶಾನವಾದರೂ ಕೇಂದ್ರ ಸರಕಾರವು ಬಂಡವಾಳಶಾಹಿಗೆ, ಮಾರುಕಟ್ಟೆಗೆ ಬದ್ಧವೇ ಹೊರತು ಪ್ರಜೆಗಳಿಗೆ ಅಲ್ಲ. ಚುನಾವಣೆಯ ಮೊದಲು ಪ್ರಧಾನಿಗಳು ಮುಳುಗೆದ್ದ ಗಂಗಾ ನದಿಯಲ್ಲಿ ಈಗ ಕೋವಿಡ್ ಮೃತರ ಹೆಣಗಳೇ ತೇಲುತ್ತಿವೆ.
ಈ ಲೇಖನವನ್ನು ಬರೆದು ಮುಗಿಸುವಷ್ಟರಲ್ಲಿ Scroll ನಲ್ಲಿ ಪ್ರಕಟವಾದ TISS ಸಂಸ್ಥೆಯ ಸಂಶೋಧಕರೊಬ್ಬರ ಲೇಖನವು ನೋಡಲು ಸಿಕ್ಕಿತು. ಇದರಲ್ಲಿ ಕೇಂದ್ರ ಸರಕಾರದ ಅಫಿಡಾವಿಟ್ನಲ್ಲಿರುವ ಇನ್ನೊಂದು ಆಘಾತಕಾರಿ ವಿಷಯದ ಚರ್ಚೆ ಇದೆ. ಇಲ್ಲಿಯವರೆಗೆ ಕೇಂದ್ರವು ಶೇಕಡಾ 50 ರಷ್ಟು ವ್ಯಾಕ್ಸಿನ್ಗಳನ್ನು ರಾಜ್ಯ ಸರಕಾರಗಳು ನೇರವಾಗಿ ಕೊಳ್ಳಬಹುದು ಎಂದು ಹೇಳುತ್ತ ಬಂದಿತ್ತು. ಆದರೆ ಈ ಹೇಳಿಕೆಯಲ್ಲಿ ಸತ್ಯವು ಹೊರಬಂದಿದೆ. ಕೇಂದ್ರ ಸರಕಾರವು ಶೇ. 50 ರಷ್ಟು ವ್ಯಾಕ್ಸೀನ್ ಪಡೆದರೆ ಉಳಿದ ಶೇ. 50ರಲ್ಲಿ ಕೇವಲ ಶೇಕಡಾ 25 ಮಾತ್ರ ರಾಜ್ಯ ಸರಕಾರಗಳಿಗೆ, ಇನ್ನುಳಿದ 25% ಖಾಸಗಿ ಆಸ್ಪತ್ರೆಗಳಿಗೆ! ಲೇಖಕರ ಲೆಕ್ಕದ ಪ್ರಕಾರ ವಾಸ್ತವವಾಗಿ ರಾಜ್ಯ ಸರಕಾರಗಳಿಗೆ ದೊರೆಯುವುದು 23% ಮತ್ತು ಖಾಸಗಿ ಆಸ್ಪತ್ರೆಗಳು ಈಗಾಗಲೇ ವ್ಯಾಕ್ಸೀನ್ಗಳಿಗೆ ವಿಧಿಸುತ್ತಿರುವ ಶುಲ್ಕವು ರೂ. 1500 ರಿಂದ 1800ರವರೆಗೂ ದಾಟಿದೆ ಎನ್ನುವುದು ನಮ್ಮಲ್ಲಿ ಬಹಳ ಜನರಿಗೆ ಗೊತ್ತಿಲ್ಲ. ಸಾಮಾಜಿಕ ತಾಣಗಳಲ್ಲಿ ಹುಡುಕಿ ನೋಡಿದರೆ ಖಾಸಗಿ ಆಸ್ಪತ್ರೆಗಳು ರಾಜಾರೋಷವಾಗಿ ವ್ಯಾಕ್ಸೀನ್ ಶುಲ್ಕವನ್ನು ಪ್ರಕಟಿಸಿವೆ. ಆದರೆ ಕೇಂದ್ರದ ಅಫಿಡಾವಿಟ್ equitable and differential pricing ಎಂದು ಸರ್ವೋಚ್ಛ ನ್ಯಾಯಾಲಯಕ್ಕೇ ಮೋಸ ಮಾಡುತ್ತಿವೆ. ಇದು ಕ್ರಿಮಿನಲ್ ನಡುವಳಿಕೆ ಅಲ್ಲವೆ?
ಈ ಅಫಿಡಾವಿಟ್ನ ಇನ್ನೊಂದು ಭಾಗವು ಅತ್ಯಂತ ಕುತೂಹಲಕಾರಿಯಾಗಿದೆ. ಕೊರೊನಾ ಪಿಡುಗಿನ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ Patents Act ನ ಕೆಲವು ಅಂಶಗಳನ್ನು ಯಾಕೆ ಬಳಸಿಕೊಂಡು ವ್ಯಾಕ್ಸೀನ್ ಸಮಸ್ಯೆಗೆ ಪರಿಹಾರ ಹುಡುಕಬಾರದು ಎಂದು ನ್ಯಾಯಾಲಯವು ಕೇಳಿತ್ತು. ಇದಕ್ಕೆ ಕೇಂದ್ರದ ಉತ್ತರವೆಂದರೆ Patents Act ಅಥವಾ ತುರ್ತು ಅಧಿಕಾರ ಇವುಗಳ ಚರ್ಚೆ ಇರಲಿ ಆ ಪದಗಳ ಬಳಕೆಯೇ ಅಪಾಯಕಾರಿಯಂತೆ! (Even a mention ಎನ್ನುವುದು ಮೂಲದಲ್ಲಿದೆ). ಏಕೆಂದರೆ ಕೇಂದ್ರದ ಪ್ರಕಾರ TRIPS ಹಾಗೂ ಬೌದ್ಧಿಕ ಆಸ್ತಿ, WTO ಇವುಗಳ ಚರ್ಚೆ ನಡೆಯುತ್ತಿರುವಾಗ ಇಂಥ ಪ್ರಸ್ತಾಪದಿಂದಾಗಿ ಅತ್ಯಂತ ಪ್ರತಿಕೂಲ ಪರಿಣಾಮವಾಗಬಹುದು. ಇಂದು ಬುಧವಾರ ಶ್ರೀಮಂತ ರಾಷ್ಟ್ರಗಳು ವ್ಯಾಕ್ಸೀನ್ಗೆ ಸಂಬಂಧಿಸಿದ ಹಾಗೆ ಪೇಟೆಂಟ್ ವಿಷಯವನ್ನು ಚರ್ಚಿಸಲಿವೆ. ಅಮೇರಿಕವು ಕೊರೊನಾ ವ್ಯಾಕ್ಸೀನ್ಗೆ ಸಂಬಂಧಿಸಿದ ಹಾಗೆ ಮಾತ್ರ ಪೇಟೆಂಟ್ ನೀತಿಯನ್ನು ತಾತ್ಕಾಲಿಕವಾಗಿ ಕೈಬಿಡುವುದಕ್ಕೆ ತನ್ನ ನಿಬಂಧನೆ ನೀಡಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ವಿಶ್ವದ ಬಹುರಾಷ್ಟ್ರೀಯ ಕಂಪನಿಗಳು ಇದನ್ನು ಪ್ರಬಲವಾಗಿ ವಿರೋಧಿಸುತ್ತಿವೆ. ಈ ಸಂದರ್ಭದಲ್ಲಿ Patent ಕೈಬಿಡುವ ಬಗ್ಗೆ ಜಾಗತಿಕವಾಗಿ ಮಾತನಾಡಲು ಹೊರಟ ಕೇಂದ್ರ ಸರಕಾರವು ತನ್ನ ಇಡೀ ಅಫಿಡಾವಿಟ್ ಅನ್ನು TRIPS, WTO ಗಳ ಭಾಷೆಯಲ್ಲಿಯೇ ಸಿದ್ಧಪಡಿಸಿದೆ. ಅಲ್ಲದೆ ಭಾರತದಲ್ಲಿ ವ್ಯಾಕ್ಷೀನ್ ಉತ್ಪಾದನೆ ಮಾಡುವ ಸಂಸ್ಥೆಗಳಿಗೆ ವ್ಯಾಕ್ಸೀನ್ಗಳಿಂದ 2000% ರಿಂದ 2500% ಲಾಭ ಬರುವಂತೆ ಈಗಾಗಲೇ ನೋಡಿಕೊಂಡಿದೆ. (ಇಲ್ಲಿಯ ಸಂಖ್ಯೆ ಮುದ್ರಣ ದೋಷವಲ್ಲ!) ಇದು ಸಾಲದೆಂಬಂತೆ ಅಫಿಡಾವಿಟ್ನಲ್ಲಿ “ಖಾಸಗಿ ಹಿತಾಸಕ್ತಿಗಳು ಶ್ರೀಮಂತಗೊಳ್ಳದಂತೆ” ನಮ್ಮ ನೀತಿಯಿದೆ ಎಂದು ಹೇಳಿಕೊಂಡಿದ್ದು ಸ್ಪರ್ಧಾತ್ಮಕ ಮಾರುಕಟ್ಟೆಯೆಂದರೆ ಏನು ಎಂದು ಈಗ ಗೊತ್ತಾಯಿತಲ್ಲವೆ?
ಇನ್ನೊಂದು ಕ್ರೂರವಾದ ವ್ಯಂಗ್ಯ ಕೇಂದ್ರದ ಹೇಳಿಕೆಯಲ್ಲಿದೆ. ಅದೇನೆಂದರೆ ಹೇಗಿದ್ದರೂ ಎಲ್ಲಾ ರಾಜ್ಯಗಳು ಪ್ರಜೆಗಳಿಗೆ ಉಚಿತವಾಗಿ ವ್ಯಾಕ್ಸೀನ್ ಕೊಡುತ್ತಿರುವುದರಿಂದ ಯಾವ ನಾಗರೀಕರಿಗೂ ತೊಂದರೆ ಇಲ್ಲ! ಹೇಗಿದೆ ವರಸೆ? ರಾಜ್ಯಗಳಿಗೆ ಬರಬೇಕಾದ ಆರ್ಥಿಕ ಪಾಲನ್ನು ಕೊಡದ ಕೇಂದ್ರ ರಾಜ್ಯಗಳೇ ಈ ಖರ್ಚನ್ನು ಭರಿಸಲಿ ಎನ್ನುತ್ತದೆ. ಅಲ್ಲದೆ ವ್ಯಾಕ್ಸೀನ್ ಕೊರತೆಯನ್ನು ತಾನೇ ಸೃಷ್ಟಿಸಿ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಖರೀದಿ ಮಾಡಿ ಮತ್ತೆ ಖಾಸಗಿ ಹಿತಾಸಕ್ತಿಗಳ ಬೊಕ್ಕಸವನ್ನು ತುಂಬುತ್ತದೆ. ಒಟ್ಟು 218 ಪುಟಗಳ ಅಫಿಡಾವಿಟ್ನ ಕೆಲಸಕ್ಕೆ ಬಾರದ ಬೊಗಳೆಗಳ ನಡುವೆ ಪ್ರಭುತ್ವದ ಕ್ರೌರ್ಯವು ಅಡಗಿ ಕುಳಿತಿದೆ. ಸರ್ವೋಚ್ಛ ನ್ಯಾಯಾಲಯವು ಈ ಹೇಳಿಕೆಯನ್ನು ಮನ್ನಿಸಿದರೆ ಭಾರತವು ಜೀವಂತ ನರಕವಾಗುವುದರಲ್ಲಿ ಸಂಶಯವೇ ಇಲ್ಲ.