ಚಿತಾಗಾರಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಅನ್‌ಲೈನ್‌ ನೋಂದಣಿ ಕಡ್ಡಾಯ

ಬೆಂಗಳೂರು: ಕೋವಿಡ್-19‌ ಸೇರಿದಂತೆ ಸಾಮಾನ್ಯವಾಗಿ ನಿಧನರಾದವರ ಅಂತ್ಯ ಸಂಸ್ಕಾರವನ್ನು ಚಿತಾಗಾರ/ಸ್ಮಶಾನಗಳಲ್ಲಿ ನೆರವೇರಿಸಲು ಆನ್‌ಲೈನ್‌ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸರಕಾರ ಆದೇಶ ನೀಡಿದೆ.

ಇದನ್ನು ಓದಿ: ಕೋವಿಡ್-19 ಬಿಕ್ಕಟ್ಟು: 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪ್ರಸ್ತುತ 16 ಚಿತಾಗಾರಗಳು ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್‌-19ರ ಹಿನ್ನೆಲೆಯಲ್ಲಿ ಮರಣ ಪ್ರಮಾಣಗಳು ಹೆಚ್ಚುತ್ತಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗ 04 ಹೊಸ ಚಿತಾಗಾರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗಿದೆ. ಚಿತಾಗಾರಗಳಲ್ಲಿ ದಿನವೊಂದಕ್ಕೆ 500 ಶವಸಂಸ್ಕಾರಕ್ಕೆ ಸಾಮರ್ಥ್ಯವನ್ನು ಹೊಂದಿದೆ.

ಚಿತಾಗಾರಗಳಲ್ಲಿ ಅಂತ್ಯಕ್ರಿಯೆಗಾಗಿ ಸಾಲುಗಟ್ಟಿ ನಿಲ್ಲುವುದನ್ನು ತಡೆಯುವ ಉದ್ದೇಶದಿಂದ ಮತ್ತು ಚಿತಾಗಾರಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿರುವ ಸರಕಾರವು ಅಂತ್ಯಕ್ರಿಯೆಗೆ ಅನ್‌ಲೈನ್‌ ಕಡ್ಡಾಯಗೊಳಿಸಿದೆ.

ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ಪಾರ್ಥಿವ ಶರೀರವನ್ನು ಶವಾಗಾರಕ್ಕೆ ಕೊಂಡ್ಯೊಯ್ಯಲು ಉಚಿತ ಆಂಬ್ಯುಲೆನ್ಸ್‌ ಸೇವೆಯನ್ನು ಒದಗಿಸಲಾಗಿದೆ. ಅಲ್ಲದೆ, ಕೋವಿಡ್‌ ನಿಂದ ಮೃತರಾದ ಅಂತ್ಯ ಸಂಸ್ಕಾರಕ್ಕೆ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.

ಇದನ್ನು ಓದಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಿ – ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ

ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 8495998495 ಗೆ ಕರೆ ಮಾಡಿ ಅಗತ್ಯ ಮಾಹಿತಿ ನೀಡುವ ಮೂಲಕ ಅಂತ್ಯಕ್ರಿಯೆಯ ಸಮಯ ಮತ್ತು ಸ್ಥಳ ನಿಗದಿ ಪಡಿಸಿಕೊಳ್ಳಬೇಕು. ಈ ಸಹಾಯವಾಣಿಯು ವಾರದ ಎಲ್ಲಾ ದಿನಗಳಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಸಹಾಯವಾಣಿ ಸ್ವೀಕರಿಸಿದ ಮಾಹಿತಿಯ ಆಧಾರದಲ್ಲಿ ತಂತ್ರಾಂಶದ ಮೂಲಕ ನಿಗದಿತ ಸಮಯ ಹಾಗೂ ಚಿತಾಗಾರದ ಹಂಚಿಕೆಯ ಬಗ್ಗೆ ಕರೆ ಮಾಡಿದ್ದ ವ್ಯಕ್ತಿಯ ಮೊಬೈಲ್‌ ಸಂಖ್ಯೆ ಟೋಕನ್‌ ಸಂಖ್ಯೆ ಮತ್ತು ಹಂಚಿಕೆ ಮಾಹಿತಿಯು ಎಸ್‌ಎಂಎಸ್‌ ಮೂಲಕ ವಿವರವನ್ನು ಕಳುಹಿಸಲು ಉದ್ದೇಶಿಸಲಾಗಿದೆ.

ನಿಗದಿಯಾದ ಸಮಯಕ್ಕೆ 30 ನಿಮಿಷ ಮುಂಚಿತವಾಗಿ ಚಿತಾಗಾರಕ್ಕೆ ಪಾರ್ಥಿವ ಶರೀರದೊಂದಿಗೆ ವ್ಯಕ್ತಿಯ ಸಂಬಂಧಿಕರು ತಲುಪಬೇಕಾಗಿ ತಿಳಿಸಲಾಗಿದೆ.

ಇದನ್ನು ಓದಿ: 10 ದಿನಕ್ಕೆ 5 ಲಕ್ಷ ರೂಪಾಯಿ ಬಿಲ್: ಕೊರೊನಾ ಸೋಂಕಿತರ ಸುಲಿಗೆ ಮಾಡುತ್ತಿರುವ ಮಂಗಳೂರು ಖಾಸಗಿ ಆಸ್ಪತ್ರೆ

ಇನ್ಯಾವುದೇ ಸಂದೇಹ ಮತ್ತು ಮಾಹಿತಿಗಳು ಬೇಕಾದಲ್ಲಿ ಇದೇ ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ವಾಟ್ಸಪ್‌ ಸಂದೇಶವನ್ನು ಕಳುಹಿಸಿ ಮಾಹಿತಿ ಪಡೆಯಬಹುದೆಂದು ತಿಳಿಸಲಾಗಿದೆ.

ಸಹಾಯವಾಣಿ ಕೇಂದ್ರವು ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರಿಂದ ಬರುವ ಎಲ್ಲಾ ಕರೆಗಳಿಗೂ ಸೂಕ್ತ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಮಾಹಿತಿಗಳೆಲ್ಲವನ್ನು ತಂತ್ರಾಂಶದಲ್ಲಿ ಅಳವಡಿಸಲು ಆದೇಶಿಸಲಾಗಿದೆ.

ಅಲ್ಲದೆ, ಸಹಾಯವಾಣಿ ಕೇಂದ್ರಗಳಲ್ಲಿ ಚಿತಾಗಾರ/ಸ್ಮಶಾನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ತಕ್ಷಣ ನಿಯಂತ್ರಣ ಕೇಂದ್ರ ಅಧಿಕಾರಿಗಳಿತೆ ವರದಿ ಸಲ್ಲಿಸಲು ಸಂಬಂಧಪಟ್ಟವರಿಗೆ ಆದೇಶಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *