ಕೇರಳ: ಒಂದು ಚಾರಿತ್ರಿಕ ಮಹತ್ವದ ವಿಜಯ

ಪ್ರಕಾಶ್ ಕಾರಟ್

ಕೇರಳದಲ್ಲಿ 1977ರ ನಂತರ ಮೊದಲ ಬಾರಿಗೆ, ಅದೂ ಹೆಚ್ಚಿನ ಜನಾದೇಶದೊಂದಿಗೆ ಮರು ಆಯ್ಕೆಗೊಂಡಿರುವುದಷ್ಟೆ  ಎಲ್‌ಡಿಎಫ್‌ನ ವಿಜಯದ ವಿಶೇಷತೆಯಲ್ಲ, ಆ ಸರ್ಕಾರ ಅನುಷ್ಠಾನಗೊಳಿಸಿದ್ದ ಒಂದು ಯೋಜನಾಬದ್ಧ ಅರ್ಥ ವ್ಯವಸ್ಥೆಯ ಎಡ ದೃಷ್ಟಿಕೋನದಿಂದ ಕೂಡಿದ ಅಭಿವೃದ್ಧಿಯ ಮಾದರಿಗೆ ಜನರಿಂದ ವ್ಯಾಪಕವಾಗಿ ಅಂಗೀಕಾರ ದೊರೆತಿದೆ. ಎಂಬುದೂ ಒಂದು ಅತ್ಯಂತ ಮಹತ್ವದ ಸಂಗತಿ. ಎಲ್‌ಡಿಎಫ್ ಸರ್ಕಾರದ ಮರು-ಆಯ್ಕೆಯು ಇಂದು ದೇಶದಲ್ಲಿ ಎಡ ಪಂಥದ ಪ್ರಸ್ತುತತೆಯನ್ನು, ದೇಶದಲ್ಲಿ ನವ-ಉದಾರವಾದಿ ಹಿಂದುತ್ವ ಆಡಳಿತಕ್ಕೆ ಒಂದು ಅತ್ಯಂತ ಮಹತ್ವದ ಪರ್ಯಾಯವನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.

ಕೇರಳದಲ್ಲಿ ಎಡ-ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್) ಸರ್ಕಾರ ದೊಡ್ಡ ಜನಾದೇಶದೊಂದಿಗೆ ಅಧಿಕಾರಕ್ಕೆ ಮರು-ಆಯ್ಕೆ ಆಗಿದೆ. ಅನೇಕ ದೃಷ್ಟಿಗಳಿಂದ ಇದೊಂದು ಮಹತ್ವದ ವಿಜಯ.

1977ರ ನಂತರ, ಅಧಿಕಾರದಲ್ಲಿರುವ ಸರ್ಕಾರವೊಂದು ಕೇರಳದಲ್ಲಿ ಮರು ಆಯ್ಕೆಯಾಗಿರುವುದು ಇದೇ ಮೊದಲ ಸಲವಾಗಿದೆ. ಇದು ಮೊದಲ ಮಹತ್ವದ ಸಂಗತಿ.

ಹಿಂದಿನ ಎಲ್‌ಡಿಎಫ್ ಸರ್ಕಾರಗಳಿಂದ ಹಿಡಿದು ಇಂದಿನವರೆಗಿನ ಯಾವುದೇ ಎಲ್‌ಡಿಎಫ್ ಸರ್ಕಾರ ರಾಜ್ಯದಲ್ಲಿ ಮರು-ಆಯ್ಕೆ ಆಗಿರಲಿಲ್ಲ. 1957ರಲ್ಲಿ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷ ಮೊದಲ ಸಚಿವ ಸಂಪುಟ ರಚಿಸಿತ್ತು. ಆಧುನಿಕ ಕೇರಳ ರಾಜ್ಯ ಸ್ಥಾಪನೆಯಾದ ನಂತರ ಆಯ್ಕೆಯಾದ ಪ್ರಥಮ ಚುನಾಯಿತ ಸರ್ಕಾರ ಅದಾಗಿತ್ತು. ಇ.ಎಂ.ಎಸ್. ನಂಬೂದರಿಪಾಡ್ ಅದರ ನೇತೃತ್ವ ವಹಿಸಿದ್ದರು. 29 ತಿಂಗಳ ನಂತರ ಕೇಂದ್ರ ಸರ್ಕಾರ ಈ ಸರ್ಕಾರವನ್ನು ವಜಾ ಮಾಡಿತು. 1967ರ ಎಡ ನೇತೃತ್ವದ ಸಂಯುಕ್ತ ರಂಗ ಸರಕಾರ ಕೂಡ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿಲ್ಲ. 1980ರ ಚುನಾವಣೆಯ ನಂತರ ಆಯ್ಕೆಯಾದ ಇ.ಕೆ. ನಾಯನಾರ್ ನೇತೃತ್ವದ ಸರ್ಕಾರ ಕೂಡ ಹೆಚ್ಚು ಕಾಲ ಬಾಳಲಿಲ್ಲ. 1987, 1996 ಮತ್ತು 2006ರ ಎಲ್‌ಡಿಎಫ್ ಸರ್ಕಾರಗಳು ಪೂರ್ಣ ಐದು ವರ್ಷ ಕಾಲದ ಅಧಿಕಾರ ನಡೆಸಿದವು. ಆದರೆ ಪುನರಾಯ್ಕೆ ಆಗಿರಲಿಲ್ಲ.  ಈ ನಮೂನೆಯನ್ನು ಮುರಿಯುವ ಐತಿಹಾಸಿಕ ದಾಖಲೆಯನ್ನು ಬರೆದು 2016ರಲ್ಲಿ ಆಯ್ಕೆಗೊಂಡ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಈಗ ಎರಡನೇ ಸಲಕ್ಕೆ ಜನಾದೇಶ ಪಡೆದಿದೆ.

ದೊಡ್ಡದಾದ ಜನಾದೇಶ

ಈ ಚುನಾವಣೆಯ ಎರಡನೇ ಮಹತ್ವದ ಸಂಗತಿಯೆಂದರೆ, ಎಲ್‌ಡಿಎಫ್ ಸರಕಾರ ಹಿಂದಿನ ಚುನಾವಣೆಗಿಂತ ದೊಡ್ಡದಾದ ಜನಾದೇಶ ಪಡೆದಿರುವುದು. 2016ರಲ್ಲಿ 140 ಸ್ಥಾನಗಳ ಪೈಕಿ 91ರಲ್ಲಿ ಗೆದ್ದಿದ್ದ ಎಲ್‌ಡಿಎಫ್, ಈ ಬಾರಿ 99 ಸ್ಥಾನಗಳನ್ನು ಗೆದ್ದಿದೆ. ಇದು ಒಟ್ಟು ಸ್ಥಾನಗಳ ಶೇಕಡ 71ರಷ್ಟಾಗುತ್ತದೆ. ಅಂದರೆ ಮೂರನೇ ಎರಡಕ್ಕಿಂತ ಹೆಚ್ಚಿನ ಬಹುಮತವಾಗಿದೆ. ಅಲ್ಲದೆ, ಎಲ್‌ಡಿಎಫ್‌ಗೆ ಹೆಚ್ಚಿನ ಜನ ಬೆಂಬಲ ದೊರಕಿದೆ: 2016ರಲ್ಲಿ 43.3% ಮತ ಪಡೆದಿದ್ದ ಎಲ್‌ಡಿಎಫ್ ಈ ಬಾರಿ 45.3% ಮತ ಗಳಿಸಿದೆ. ಜನಸಂಖ್ಯೆಯ ಎಲ್ಲ ವಿಭಾಗಗಳಿಂದ ಎಲ್‌ಡಿಎಫ್‌ಗೆ ಹೆಚ್ಚಿನ ಬೆಂಬಲ ಲಭ್ಯವಾಗಿದೆ. ಸಮಾಜದ ಮೂಲ ವರ್ಗಗಳು, ಮಹಿಳೆಯರು, ಯುವಜನರು, ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು, ಒಟ್ಟಾರೆಯಾಗಿ ಎಲ್ಲ ಜನವಿಭಾಗಗಳು ಬೆಂಬಲ ನೀಡಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಮತಗಳ ವ್ಯಾಪಾರ ನಡೆಸಿರದಿದ್ದರೆ, ಎಲ್‌ಡಿಎಫ್ ವಿಜಯದ ಪ್ರಮಾಣ ಇನ್ನೂ ಹೆಚ್ಚಾಗಿರುತ್ತಿತ್ತು. ಕನಿಷ್ಠ 10 ಕ್ಷೇತ್ರಗಳಲ್ಲಿ ಬಿಜೆಪಿ ವರ್ಗಾಯಿಸಿದ ಮತಗಳಿಂದ ಯುಡಿಎಫ್ ಜಯ ಗಳಿಸಿದೆ.

ಈ ಚುನಾವಣೆಯ ಮೂರನೇ ಮಹತ್ವದ ಸಂಗತಿಯೆಂದರೆ, ಎಲ್‌ಡಿಎಫ್ ಸರ್ಕಾರ ಅನುಷ್ಠಾನಗೊಳಿಸಿದ್ದ ಒಂದು ಯೋಜನಾಬದ್ಧ ಅರ್ಥ ವ್ಯವಸ್ಥೆಯ ಎಡ ದೃಷ್ಟಿಕೋನದಿಂದ ಕೂಡಿದ  ಅಭಿವೃದ್ಧಿಯ ಮಾದರಿಗೆ ಜನರಿಂದ ವ್ಯಾಪಕವಾಗಿ ಅಂಗೀಕಾರ ದೊರೆತಿದೆ.

ಯೋಜನಾ ಪ್ರಕ್ರಿಯೆಯನ್ನು ಮುಂದುವರೆಸಿದ ಏಕೈಕ ರಾಜ್ಯ

ಯೋಜನಾ ಆಯೋಗವನ್ನು ಭಾರತ ಸರ್ಕಾರ ರದ್ದುಪಡಿಸಿದ ನಂತರ, “ಪಂಚ ವಾರ್ಷಿಕ ಯೋಜನೆʼʼ ಮತ್ತು “ವಾರ್ಷಿಕ ಯೋಜನೆʼʼ ಪ್ರಕ್ರಿಯೆಯನ್ನು ಮುಂದುವರಿಸಿದ ಏಕೈಕ ರಾಜ್ಯವಾಗಿದೆ ಕೇರಳ. ರಾಜ್ಯ ಸರ್ಕಾರವು ಕೇರಳ ರಾಜ್ಯದ ಸಾಮಾಜಿಕ ಅಭಿವೃದ್ಧಿ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸಮಾಜ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರಂಪರೆ ಆಧರಿಸಿದ ನೀತಿ ಚೌಕಟ್ಟನ್ನು ಮುಂದುವರೆಸಿತು ಮತ್ತು ಬಲಪಡಿಸಿತು. ಮಾನವ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಬಲಪಡಿಸುವುದರ ಜೊತೆಗೆ ಈ ಸಾಧನೆಗಳನ್ನು ವಿಶೇಷವಾಗಿ ಯುವಜನರಿಗೆ ಹೊಸ ಉದ್ಯೋಗ ಸೃಷ್ಟಿಗೆ ಅವಕಾಶ ಸೃಷ್ಟಿಸುವುದು ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಅಡಿಗಲ್ಲನ್ನಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿತು. ಇಡೀ ದೇಶದಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳ ಖಾಸಗೀಕರಣ ಪ್ರಕ್ರಿಯೆಯ ಧಾವಂತವನ್ನು ಎದುರಿಸಿಯೂ, ಈ ಕ್ಷೇತ್ರಗಳನ್ನು ಬಲಪಡಿಸಿದ್ದು ಒಂದು ಗಣನೀಯ ಸಾಧನೆಯಾಗಿದೆ. ಒಂದು ರಾಜ್ಯ ಸರ್ಕಾರದ ಸಂಪನ್ಮೂಲಗಳ ತೀವ್ರ ಮಿತಿಗಳ ನಡುವೆಯೂ, ಎಲ್‌ಡಿಎಫ್ ಸರ್ಕಾರ ಸಂಪನ್ಮೂಲ ಕ್ರೋಡೀಕರಿಸಿದ್ದು ಹಾಗೂ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕೆಐಐಎಫ್‌ಬಿ)ಯಂಥ ಸಂಸ್ಥೆಯ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಹೂಡಿದ್ದು ಗಮನಾರ್ಹವಾಗಿದೆ.

ಎಲ್‌ಡಿಎಫ್ ಸರ್ಕಾರದ ಅಭಿವೃದ್ಧಿ ನೀತಿಯ ಇನ್ನೊಂದು ಮಹತ್ವದ ಲಕ್ಷಣವೆಂದರೆ, ಯೋಜನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜನತೆಯ ಪಾಲ್ಗೊಳ್ಳುವಿಕೆಯ ಪಾತ್ರ ಮತ್ತು  ಅಭಿವೃದ್ಧಿಯಲ್ಲಿ ಸ್ಥಳೀಯ ಸರ್ಕಾರದ ಸಂಸ್ಥೆಗಳ ಪಾತ್ರ. ಉದಾಹರಣೆಗೆ, ‘ಕುಡುಂಬಶ್ರೀ’ ಮಹಿಳಾ ಗುಂಪುಗಳು ರಾಜ್ಯದಲ್ಲಿ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರ ವಹಿಸಿವೆ.

ಎಲ್‌ಡಿಎಫ್ ಸರ್ಕಾರದ ಆಡಳಿತಾವಧಿ ಜಾತ್ಯತೀತತೆಗೆ ಒಂದು ದೃಢವಾದ ಬದ್ಧತೆ ಮತ್ತು ಎಲ್ಲ ಕೋಮುವಾದಿ ಶಕ್ತಿಗಳ ವಿರುದ್ಧದ ರಾಜಿಯಿಲ್ಲದ ಹೋರಾಟಕ್ಕೆ ಸಾಕ್ಷಿಯಾಗಿದೆ.

ಹೆಚ್ಚಿನ ಎಲ್‌ಡಿಎಫ್ ಅಭ್ಯರ್ಥಿಗಳು ಭಾರೀ ಅಂತರದಿಂದ ಗೆದ್ದಿದ್ದಾರೆ; ಕೆಲವು ಅಭ್ಯರ್ಥಿಗಳು ಬಹಳ ಕಡಿಮೆ ಅಂತರದಿಂದ ಸೋತಿದ್ದಾರೆ, ವಿಶೇಷವಾಗಿ ಬಿಜೆಪಿ ತನ್ನ ಮತಗಳನ್ನು ಯುಡಿಎಫ್‌ಗೆ ವರ್ಗಾಯಿಸಿದ ಕ್ಷೇತ್ರಗಳಲ್ಲಿ.

  • 60% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ 5 ಅಭ್ಯರ್ಥಿಗಳು
  • ಕೆ.ಕೆ.ಶೈಲಜಾ (61.96%); ಎಂ ಎಂ ಮಣಿ(63.94%); ಟಿ ಐ ಮಧುಸೂಧನನ್(62.67%); ಎ.ಎನ್. ಷಂಶೀರ್(61.51%); ಮತ್ತು ಎಂ ವಿಜಿನ್ (60.29%)
  • ಮುಖ್ಯಮಂತ್ರಿ ಪಿಣರಾಯಿ ವಿಜಯನ್ 59.24% ಮತ ಗಳಿಸಿದರು.
  • ಇತರ 17 ಅಭ್ಯರ್ಥಿಗಳೂ 50%ಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿದ್ದಾರೆ.

***

  • ಎಲ್‌ಡಿಎಫ್‌ನಿಂದ ಸ್ಪರ್ಧಿಸಿದ್ದ 15 ಮಹಿಳಾ ಅಭ್ಯರ್ಥಿಗಳಲ್ಲಿ 10 ಮಂದಿ ಭಾರೀ ಅಂತರದಿಂದ ಗೆದ್ದಿದ್ದಾರೆ. ಇವರಲ್ಲಿ 8 ಮಹಿಳೆಯರು ಸಿಪಿಐ(ಎಂ)ನಿಂದ ಮತ್ತು ಇಬ್ಬರು ಸಿಪಿಐನಿಂದ ಸ್ಪರ್ಧಿಸಿದವರು.
  • ಯುಡಿಎಫ್‌ನಿಂದ ಏಕೈಕ ಮಹಿಳ ಅಭ್ಯರ್ಥಿ ಗೆದ್ದಿದ್ದಾರೆ.

***

  • ಮೀನುಗಾರಿಕಾ ಮಂತ್ರಿಯಾಗಿದ್ದ ಜೆ ಮರ್ಸಿಕುಟ್ಟಿ ಅಮ್ಮ ಕುಂದರ ಕ್ಷೇತ್ರದಿಂದ ಸೋಲಲು ಕಾರಣ ಬಿಜೆಪಿ ತನ್ನ ಮತಗಳನ್ನು ಯುಡಿಎಫ್‌ಗೆ ವರ್ಗಾಯಿಸಿದ್ದರಿಂದ ಎಂಬುದು ಸ್ಪಷ್ಟ. ಇಲ್ಲಿ ಬಿಜೆಪಿ ಅಭ್ಯರ್ಥಿಗೆ 20,257 ಮತಗಳು ಸಿಕ್ಕಿದ್ದವು, ಈ ಬಾರಿ ಅದು 6,100ಕ್ಕೆ ಇಳಿಯಿತು ಎಂಬುದು ಇದನ್ನು ತೋರಿಸುತ್ತದೆ.

***

  • ಮತ ವ್ಯಾಪಾರ ನಡೆದಿರುವುದು ಇಲ್ಲಿ ಮಾತ್ರವೇ ಅಲ್ಲ. ತ್ರಿಪುನಿತುರದಲ್ಲಿ ಹಾಲಿ ಶಾಸಕ ಎಂ.ಸ್ವರಾಜ್ ಕೇವಲ 1050 ಮತಗಳಿಂದ ಸೋತರು. ಇಲ್ಲಿ ಬಿಜೆಪಿ ಅಭ್ಯರ್ಥಿಯ ಮತಗಳು ಕಳೆದ ಬಾರಿಗೆ ಹೋಲಿಸಿದರೆ 6057ರಷ್ಟು ಇಳಿದಿದೆ.
  • ಒಟ್ಟು 90 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಯುಡಿಎಫ್‌ಗೆ ಮತಗಳ ವರ್ಗಾವಣೆಯಾಗಿದ್ದು, ಸುಮಾರು 10 ಯುಡಿಎಫ್ ಅಭ್ಯರ್ಥಿಗಳು ಈ ರೀತಿ ಮತ ವ್ಯಾಪಾರದಿಂದಲೇ ಗೆದ್ದಿರುವುದು ನಡೆದಿರುವುದು ಕಾಣ ಬಂದಿದೆ.
  • ಥವನೂರ್ ಕ್ಷೇತ್ರದಲ್ಲೂ ಇಂತಹ ಪ್ರಯತ್ನ ನಡೆದಿದೆ. ಆದರೂ ಮಂತ್ರಿಯಾಗಿದ್ದ ಡಾ.ಕೆ.ಟಿ.ಜಲೀಲ್ ಕೇವಲ 2564 ಮತಗಳಿಂದಲಾದರೂ ಗೆದ್ದಿದ್ದಾರೆ.

ಉತ್ಕೃಷ್ಟತೆಯ ಒರೆಗಲ್ಲಿನಲ್ಲಿ

ಅಂತಿಮವಾಗಿ, 2017ರಲ್ಲಿ ರಾಜ್ಯಕ್ಕೆ ಅಪ್ಪಳಿಸಿದ ಓಖ್ಲಿ ಚಂಡಮಾರುತ, 2018 ಮತ್ತು 2019ರಲ್ಲಿ ಸಂಭವಿಸಿದ ಭಾರಿ ಮಳೆ ಹಾಗೂ ಭೂ ಕುಸಿತ, 2018ರ ನಿಫಾ ವೈರಸ್ ರೋಗ ಮತ್ತು 2020-21ರಲ್ಲಿ ಕೊವಿಡ್-19 ವೈರಸ್ ಮಹಾಸೋಂಕು ಮುಂತಾದ ಒಂದಾದ ಮೇಲೊಂದು ಬಂದೆರಗಿದ ಬಿಕ್ಕಟ್ಟುಗಳನ್ನು ಪಿಣರಾಯಿ ವಿಜಯನ್ ಸರ್ಕಾರ ಎದುರಿಸಿದ ರೀತಿಯು ಆಡಳಿತದ ಒಂದು ವಿಭಿನ್ನ ಉತ್ಕೃಷ್ಟತೆ ಮತ್ತು ಆಡಳಿತದ ಗುಣಮಟ್ಟವನ್ನು ತೋರಿಸಿತು. ಜನತೆಗೆ ಸಂಬಂಧಿಸಿದಂತೆ ಒಂದು ಸರಕಾರಕ್ಕೆ ಒರೆಗಲ್ಲು ಎಂದರೆ ಜನಗಳ ಜೀವನವನ್ನು ಹಾಗೂ ಜೀವನೋಪಾಯಗಳನ್ನು ಕಾಡುವ ಬಿಕ್ಕಟ್ಟುಗಳನ್ನು ಸರ್ಕಾರ ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ ಎನ್ನುವುದು.  ಎಲ್‌ಡಿಎಫ್ ಸರ್ಕಾರ ಈ ಪರೀಕ್ಷೆಯಲ್ಲಿ ಉನ್ನತ ಶ್ರೇಯಾಂಕದೊಂದಿಗೆ ಉತ್ತೀರ್ಣವಾಗಿದೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿಯ ವಿರುದ್ಧ ಎಲ್‌ಡಿಎಫ್ ಚುನಾವಣಾ ಹೋರಾಟ ನಡೆಸಿತ್ತು. ಈ ಎರಡೂ ಶಕ್ತಿಗಳು ಎಲ್‌ಡಿಎಫ್ ವಿರುದ್ಧ ವಿಷಮಯ ಅಪಪ್ರಚಾರ ನಡೆಸಿದವು. ಸರ್ಕಾರಕ್ಕೆ, ಅದರಲ್ಲೂ ವಿಶೇಷವಾಗಿ ಸಿಪಿಐ(ಎಂ)ಗೆ ಮಸಿ ಬಳಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸುವುದರ ಸಹಿತ  ಎಲ್ಲ ರೀತಿಯ ಅನೀತಿಯುತ ಪ್ರಯತ್ನಗಳನ್ನು ನಡೆಸಲಾಯಿತು.

1980ರಲ್ಲಿ ಒಂದು ಎಡ-ವಿರೋಧಿ ಕೂಟವಾಗಿ ರೂಪುಗೊಂಡ ಯುಡಿಎಫ್, ಈಗ ರಾಜಕೀಯವಾಗಿ ಮುಂದೆ ದಾರಿಯಿಲ್ಲದ ಸ್ಥಿತಿಯನ್ನು ತಲುಪಿದೆ. ಭಾರಿ ಬೊಗಳೆ ಕೊಚ್ಚಿಕೊಂಡ ಹಾಗೂ ಅಪಾರ ಪ್ರಮಾಣದಲ್ಲಿ ಹಣಬಲ ಬಳಸಿದ ಬಿಜೆಪಿಗೆ ಈ ಹಿಂದೆ ಇದ್ದ ತನ್ನ ಏಕೈಕ  ಸ್ಥಾನವನ್ನೂ  ಒಬ್ಬ ಸಿಪಿಐ(ಎಂ) ಅಭ್ಯರ್ಥಿ ಗೆದ್ದುಕೊಳ್ಳುವಂತಹ ದುರ್ದೆಸೆ ಬಂದಿದೆ.

ಸಾಮೂಹಿಕ ಕೆಲಸ ಮತ್ತು ವೈಯಕ್ತಿಕ ಹೊಣೆಗಾರಿಕೆಯ ಪರಂಪರೆ

ಈ ಐತಿಹಾಸಿಕ ವಿಜಯವನ್ನು ಕೇವಲ ಪಿಣರಾಯಿ ವಿಜಯನ್‌ರ ವ್ಯಕ್ತಿತ್ವ ಹಾಗೂ ಪಾತ್ರದ ಪರಿಣಾಮ ಎಂದು ಹೇಳಿ ಅದರ ಮಹತ್ವವನ್ನು ಕಡೆಗಣಿಸಲು ಮಾಧ್ಯಮದ ಒಂದು ವಿಭಾಗ ಮತ್ತು ಕೆಲವು ರಾಜಕೀಯ ವೀಕ್ಷಕರು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ, ಒಬ್ಬ “ಸರ್ವೋಚ್ಚ  ನಾಯಕ’ ಅಥವಾ “ಬಲಾಢ್ಯ ವ್ಯಕ್ತಿ’ಯ ಉದಯವಾಗಿರುವುದೇ  ಎಲ್‌ಡಿಎಫ್‌ನ ಚುನಾವಣಾ ಯಶಸ್ಸಿಗೆ ಮುಖ್ಯ ಕಾರಣ. ಒಬ್ಬ ವ್ಯಕ್ತಿ ಸರ್ಕಾರ ಮತ್ತು ಪಕ್ಷದಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಎಂದವರು ಹೇಳುತ್ತಾರೆ.

ಒಬ್ಬ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ನೀತಿ ನಿರೂಪಣೆಗೆ ರಾಜಕೀಯ ಮಾರ್ಗದರ್ಶನ ಒದಗಿಸುವಲ್ಲಿ ಒಂದು ಹೊಸ ಮಾನಕವನ್ನು ರೂಪಿಸಿದರು ಎನ್ನುವುದರಲ್ಲಿ ಅನುಮಾನವಿಲ್ಲ. ಅವರು ಸದಾ ಜನರ ಹಿತವನ್ನು ಮನಸ್ಸಲ್ಲಿಟ್ಟುಕೊಳ್ಳುವ ಮತ್ತು ನೀತಿಗಳನ್ನು ಅನುಷ್ಠಾನಗೊಳಿಸುವ ಆಡಳಿತಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಆದಾಗ್ಯೂ ಈ ವಿಜಯವು ವೈಯಕ್ತಿಕ ಹಾಗೂ ಸಾಮೂಹಿಕ ಹೀಗೆ ಎರಡೂ ಪ್ರಯತ್ನಗಳ ಫಲವಾಗಿದೆ. ಸಿಪಿಐ(ಎಂ) ಮತ್ತು ಎಲ್‌ಡಿಎಫ್, ಸಾಮೂಹಿಕ ಕೆಲಸ ಮತ್ತು ವೈಯಕ್ತಿಕ ಹೊಣೆಗಾರಿಕೆಯ ಪರಂಪರೆಯನ್ನು ಮುಂದುವರಿಸಲಿವೆ.

ಪ್ರತಿಕೂಲ ಸನ್ನಿವೇಶದಲ್ಲಿ ಕೆಲಸ

ಕೇರಳದ ಎಲ್‌ಡಿಎಫ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ತೀರಾ ಪ್ರತಿಕೂಲ ರಾಜಕೀಯ ವಾತಾವರಣದ ನಡುವೆ ಕೆಲಸ ಮಾಡಬೇಕಾಗಿತ್ತು. ದೇಶದಾದ್ಯಂತ ಬಲಪಂಥೀಯ ಆಕ್ರಮಣದಿಂದಾಗಿ ಎಡ ಶಕ್ತಿಗಳು ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ತಮ್ಮ ಭದ್ರ ಕೋಟೆಯನ್ನು ಕಳೆದು ಕೊಂಡಿವೆ. ಸಂಸತ್ತಿನಲ್ಲಿ ಕೂಡ ಎಡ ಶಕ್ತಿ ಅತ್ಯಂತ ಕಡಿಮೆ ಪ್ರಾತಿನಿಧ್ಯ ಹೊಂದಿದೆ. ಎಲ್‌ಡಿಎಫ್ ಸರ್ಕಾರದ ಅವಧಿಯ ಕೊನೆಯ ವರ್ಷವಂತೂ ಸರ್ಕಾರವನ್ನು ಬಲಪಂಥೀಯ ಹಾಗೂ ಕಮೂನಿಸ್ಟ್-ವಿರೋಧಿ ಶಕ್ತಿಗಳು ಅಕ್ಷರಶಃ ಮುತ್ತಿಗೆ ಹಾಕಿದಂತಿತ್ತು. ಆದರೆ ಇದ್ಯಾವುದಕ್ಕೂ ಜಗ್ಗದೆ ಎಲ್‌ಡಿಎಫ್ ಸರ್ಕಾರ ಜನ-ಕೇಂದ್ರಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಶಕ್ತವಾಗಿ ಅನುಷ್ಠಾನಗೊಳಿಸಿತು.

ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರದ ಮರು-ಆಯ್ಕೆಯು ಇಂದು ದೇಶದಲ್ಲಿ ಎಡ ಪಂಥದ ಪ್ರಸ್ತುತತೆಯನ್ನು ಸಕಾಲಿಕವಾಗಿ ನೆನಪಿಸಿಕೊಟ್ಟಿದೆ. ಈ ಸರ್ಕಾರದ ನೀತಿಗಳು ದೇಶದಲ್ಲಿ ನವ-ಉದಾರವಾದಿ ಹಿಂದುತ್ವ ಆಡಳಿತಕ್ಕೆ ಒಂದು ಅತ್ಯಂತ ಮಹತ್ವದ ಪರ್ಯಾಯವನ್ನು ಪ್ರತಿನಿಧಿಸುತ್ತವೆ.

ಹೊಸ ಎಲ್‌ಡಿಎಫ್ ಸರ್ಕಾರಕ್ಕೆ, ಅದು ಜನತೆಯ ಆಶೋತ್ತರಗಳನ್ನು ಈಡೇರಿಸುವ ಹಾಗೂ ಕೇರಳವನ್ನು ಒಂದು ಉತ್ತಮ ಸಮಾಜವಾಗಿ ರೂಪಿಸುವತ್ತ ಸಾಗುವಲ್ಲಿ   ದೇಶದ ಎಲ್ಲ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳ ಶುಭ ಹಾರೈಕೆ ಮತ್ತು ಬೆಂಬಲವಿರುತ್ತದೆ.

ಅನು: ವಿಶ್ವ

  • ಗೆದ್ದಿರುವ ಪ್ರಮುಖ ಎಲ್‌ಡಿಎಫ್ ಅಭ್ಯರ್ಥಿಗಳಲ್ಲಿ ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷರಾದ ಪಿ.ಎ.ಮುಹಮ್ಮದ್ ರಿಯಾಸ್ ಮತ್ತು ಎಸ್‌ಎಫ್‌ಐ ರಾಜ್ಯ ಕಾರ್ಯದಶಿ ಕೆ ಎಂ ಸಚಿನ್ ದೇವ್, ದೇಶಾಭಿಮಾನಿ ಮುಖ್ಯ ಸಂಪಾದಕರು ಮತ್ತು ಮಾಜಿ ರಾಜ್ಯ ಸಭಾ ಸದಸ್ಯರಾದ ಪಿ ರಾಜೀವ್, ಇನ್ನೊಬ್ಬ ಮಾಜಿ ಸಂಸದ್‌  ಸದಸ್ಯ ಎಂ ಬಿ ರಾಜೇಶ್ ಸೇರಿದ್ದಾರೆ.

***

  • ಬಿಜೆಪಿ ಕಳೆದ ವಿಧಾನಸಭೆಯಲ್ಲಿ ಹೊಂದಿದ್ದ ಏಕೈಕ ಕ್ಷೇತ್ರವಾದ ತಿರುವನಂತಪುರದ ನೇಮಂನಲ್ಲಿ ಸಿಪಿಐ(ಎಂ)ನ ವಿ. ಶಿವನ್ ಕುಟ್ಟಿ ಗೆದ್ದಿದ್ದಾರೆ. 2016ರಲ್ಲಿ ಯುಡಿಎಫ್ ಮತ ವರ್ಗಾವಣೆಯಿಂದ ಬಿಜೆಪಿಯ ಕುಮ್ಮನಂ ರಾಜಶೇಖರನ್ ಗೆದ್ದಿದರು. ಯುಡಿಎಫ್ ಲೋಕಸಭಾ ಸದಸ್ಯ ಕೆ. ಮುರಳೀಧರನ್ ಅವರನ್ನು ಅಭ್ಯರ್ಥಿಯಾಗಿ ಇಳಿಸಿತ್ತು. ಅವರು ಮೂರನೇ ಸ್ಥಾನದಲ್ಲಿದ್ದಾರೆ.

***

  • ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಇ.ಶ್ರೀಧರನ್ ಪಾಲಕ್ಕಾಡ್‌ನಲ್ಲಿ ಸೋತಿದ್ದಾರೆ.

ಉತ್ತಮ ಆಳ್ವಿಕೆ ಮತ್ತು ಕಲ್ಯಾಣ ಕ್ರಮಗಳನ್ನು ಮತದಾರರು ಪುರಸ್ಕರಿಸಿದರು, ಭ್ರಷ್ಟಾಚಾರದ ಅಪಪ್ರಚಾರವನ್ನು ತಿರಸ್ಕರಿಸಿದರು

ಇವು ಲೋಕನೀತಿ-ಸಿಎಸ್‌ಡಿಎಸ್ ಮತದಾನದ ನಂತರ ನಡೆಸಿದ ಸರ್ವೆಯಲ್ಲಿ ಕಂಡು ಬಂದ ಅಂಶಗಳು(ದಿ ಹಿಂದು, ಮೇ 7, 2021)

ಈ ಸರ್ವೆಯಲ್ಲಿ ಪಾಲ್ಗೊಂಡ 73%ರಷ್ಟು ಮಂದಿ ಎಲ್‌ಡಿಎಫ್ ಸರಕಾರದ ಕೆಲಸದಿಂದ ಸಂತುಷ್ಟರಾಗಿದ್ದರು. ಮುಖ್ಯವಾಗಿ ಸರಕಾರೀ ಆಸ್ಪತ್ರೆಗಳಲ್ಲಿನ ಸೌಕರ್ಯಗಳು(73%), ಸರಕಾರೀ ಶಾಲೆಗಳಲ್ಲಿನ ಸೌಕರ್ಯಗಳು(72%), ರಸ್ತೆಗಳ ಸ್ಥಿತಿ-ಗತಿ(66%),ವಿದ್ಯುತ್ ಪೂರೈಕೆ(65%), ಕುಡಿಯುವ ನೀರಿನ ಪೂರೈಕೆ(52%), ಸಾರ್ವಜನಿಕ ಸಾರಿಗೆ(51%) ಕಳೆದ 5 ವರ್ಷಗಳಲ್ಲಿ ಉತ್ತಮಗೊಂಡಿವೆ ಎಂದಿದ್ದಾರೆ.

ಯುಡಿಎಫ್ ಮತ್ತು ಬಿಜೆಪಿ ಮತ್ತು ಮಾಧ್ಯಮಗಳು ಚುನಾವಣಾ ಪ್ರಚಾರದ ವೇಳೆಯಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳೆಂದು ಬೊಬ್ಬೆ ಹಾಕಿದರೂ ಕೇವಲ 2% ಮಂದಿಗೆ ಇದೊಂದು ಚುನಾವಣಾ ಪ್ರಶ್ನೆ ಎಂದನಿಸಿತ್ತು.

ಅದೇ ರೀತಿ ಶಬರಿಮಲೆ ಪ್ರಶ್ನೆಯನ್ನು ಕೆದಕಿ ಗರಿಷ್ಟ ಲಾಭ ಪಡೆಯುವ ಬಿಜೆಪಿ ಪ್ರಯತ್ನಗಳನ್ನೂ ಮತದಾರರು ಸಂಪೂರ್ಣವಾಗಿ ಉಪೇಕ್ಷಿಸಿದರು. ಕೇವಲ 17% ಮಂದಿಗೆ ಮಾತ್ರ ಇದೊಂದು ಸಮಸ್ಯೆಯಾಗಿ ಕಂಡಿದೆ.

ಕುತೂಹಲಕಾರಿ ಸಂಗತಿಯೆಂದರೆ ಶಬರಿಮಲೆ ಇರುವ ಪತ್ತನಂತಿತ್ತ ಜಿಲ್ಲೆಯ ಎಲ್ಲ 5 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಅಭ್ಯರ್ಥಿಗಳು ಗೆದ್ದಿದ್ದಾರೆ.

ಸಮಾಜದ ಎಲ್ಲ ವಿಭಾಗಗಳಿಂದ ಎಲ್‌ಡಿಎಫ್ ಬೆಂಬಲ ಪಡೆದಿದೆ. ವಿಶೇಷವಾಗಿ ದಲಿತ, ಒಬಿಸಿ ಮತ್ತು ಅಲ್ಪಸಂಖ್ಯಾತರು ಎಲ್‌ಡಿಎಫ್‌ನ ಈ ಬೃಹತ್ ವಿಜಯದಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ಈ ಸರ್ವೆಯಲ್ಲಿ ಕಂಡು ಬಂದಿದೆ.

ಒಟ್ಟಾರೆಯಾಗಿ, ಹಿಂದುಗಳ ನಡುವೆ ಎಲ್‌ಡಿಎಫ್ ಬೆಂಬಲದಲ್ಲಿ 2% ಹೆಚ್ಚಳವಾಗಿದ್ದರೆ, ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ತಲಾ 1% ದಷ್ಟು ಕಳಕೊಂಡಿದ್ದಾರೆ ಎಂಬುದು ಗಮನಾರ್ಹ. ದಲಿತರ ಬೆಂಬಲದಲ್ಲಿ 18%ದಷ್ಟು ಹೆಚ್ಚಳ ಕಂಡು ಬಂದಿದ್ದರೆ, ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ತಲಾ 4% ದಷ್ಟು ಬೆಂಬಲ ಪ್ರಮಾಣ ಹೆಚ್ಚಿದೆ, ಈ ಸಮುದಾಯಗಳ ಬಡವಿಭಾಗಗಳ ನಡುವೆ ಇದು ಅನುಕ್ರಮವಾಗಿ 11% ಮತ್ತು 8%ದಷ್ಟು ಹೆಚ್ಚಿದೆ ಎಂದು ಈ ಸರ್ವೆ ಹೇಳುತ್ತದೆ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಎಲ್‌ಡಿಎಫ್‌ಗೆ ಮತ ನೀಡಿದವರಲ್ಲಿ 18-55 ವಯೋ ಗುಂಪಿನ ಮತದಾರರ ಪ್ರಮಾಣದಲ್ಲಿ 28%ದಷ್ಟು ಹೆಚ್ಚಳವಾಗಿದ್ದರೆ, ಎನ್‌ಡಿಎ 20%ದಷ್ಟು ಬೆಂಬಲವನ್ನು ಕಳಕೊಂಡಿದೆ. ಯುಡಿಎಫ್  26-45 ವಯೋ ಗುಂಪಿನವರ ನಡುವೆ 14%ದಷ್ಟು ಬೆಂಬಲ ಕಳಕೊಂಡಿದೆ.

ಕಾಲೇಜು ಮತ್ತು ಅದಕ್ಕಿಂತ ಉನ್ನತ ಶಿಕ್ಷಣ ಪಡೆದವರ ನಡುವೆ ಎನ್‌ಡಿಎ ಗೆ ಬೆಂಬಲ 7%ದಷ್ಟ್ಟು ಕಡಿಮೆಯಾಗಿರುವುದು, ಅದೇ ವೇಳೆಯಲ್ಲಿ ಎಲ್‌ಡಿಎಫ್‌ಗೆ ಬೆಂಬಲ 10%ದಷ್ಟು ಹೆಚ್ಚಿದೆ ಎಂದು ಈ ಸರ್ವೆಯಲ್ಲಿ ಕಂಡು ಬಂದಿರುವುದು ಕೂಡಾ ಕುತೂಹಲಕಾರಿ.

Donate Janashakthi Media

Leave a Reply

Your email address will not be published. Required fields are marked *