ಕೋಲಾರ: ಉಪ್ಪುಕುಂಟೆ ಗ್ರಾಮಕ್ಕೆ ಸೇರಿದ ಕೆರೆಗೆ ನೀರಿನ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಮುಚ್ಚಿ ರಸ್ತೆಯನ್ನು ನಿರ್ಮಿಸಿರುವವವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ಕೆರೆಯನ್ನು ಉಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಇಂದು ಉಪ್ಪುಕುಂಟೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕೋಲಾರ ತಾಲೂಕಿನ ಸುಗಟೂರು ಹೋಬಳಿಯ ಉಪ್ಪುಕುಂಟೆ ಮತ್ತು ವಿನೋಭನಗರದ ಎರಡೂ ಗ್ರಾಮಗಳಿಗೆ ನೀರನ್ನು ಒದಗಿಸುವ ಕೆರೆ ಇದಾಗಿದೆ. ಉಪ್ಪುಕುಂಟೆ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 61 ರಲ್ಲಿ 27 ಎಕರೆ 16 ಗುಂಟೆ ಕೆರೆಯ ವ್ಯಾಪ್ತಿಯಾಗಿದೆ.
ಇದನ್ನು ಓದಿ: ರಾಜ್ಯವನ್ನು ಲಾಕ್ಡೌನ್ ಮಾಡುವುದು ಅನಿವಾರ್ಯ: ಮುಖ್ಯಮಂತ್ರಿ ಬಿಎಸ್ವೈ
ಈ ಕೆರೆಯ ಪಕ್ಕದಲ್ಲಿ ಜಿಲ್ಲೆಯ ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡನ ಮಗನಾದ ಆಕಾಶ್ ಮತ್ತು ಅವರ ಸಂಬಂಧಿಕರಾದ ರಘು ಮತ್ತು ಚಂದ್ರಶೇಖರ್ ಎಂಬವರು ಉಪ್ಪುಕುಂಟೆ ಕೆರೆಯ ಸಮೀಪದಲ್ಲೇ ಜಮೀನನ್ನು ಖರೀದಿಸಿದ್ದು ಅ ಜಮೀನಿಗೆ ಹೋಗಲು ಸೂಕ್ತವಾದ ರಸ್ತೆ ಇರಲಿಲ್ಲ. ತಮ್ಮ ರಾಜಕೀಯದ ಬೆಂಬಲವನ್ನು ಬಳಸಿಕೊಂಡು ಕೆರೆಗೆ ನೀರು ಬರುವ ರಾಜಕಾಲುವೆಗಳನ್ನು ಮುಚ್ಚಿ ರಸ್ತೆ ಮಾಡಿಕೊಂಡಿದ್ದಾರೆ ಎಂದು ದೂರಿದರು ಜಿಲ್ಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದಾರೆ.
ಎರಡು ರಾಜಕಾಲುವೆಗಳನ್ನು ಅಕ್ರಮವಾಗಿ ಮುಚ್ಚಿ ಕೆರೆಯಂಗಳದಲ್ಲಿ ಎತ್ತರವಾಗಿ ಮಣ್ಣುಹಾಕಿ ರಸ್ತೆ ನಿರ್ವಹಿಸಿಕೊಂಡು ಕೆರೆಗೆ ನೀರು ಬರದೇ ಮುಚ್ಚಿರುವುದನ್ನು ಪ್ರಶ್ನೆ ಮಾಡಿದ ಗ್ರಾಮಸ್ಥರ ಮೇಲೆ ತೋಟದ ಕೆಲಸಗಾರರು ಮತ್ತು ರೌಡಿಗಳು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದಾರೆ.
ಆಕಾಶ್ ಅವರ ತಂದೆ ಎಂಎಲ್ಸಿ ಆಗಿದ್ದು ನಿಮ್ಮ ಕೈಯಲ್ಲಿ ಏನು ಮಾಡಕ್ಕೆ ಆಗುವುದಿಲ್ಲ, ಅಡ್ಡಿಪಡಿಸಿದರೆ ನಿಮ್ಮನ್ನು ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ.
ಇದನ್ನು ಓದಿ: ಮಂತ್ರಿ ಕತ್ತಿ ರಾಜಿನಾಮೆ ಕೊಡಲಿ
ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸರಕಾರ ಚೆಕ್ ಡ್ಯಾಂ ಕೆರೆಯಲ್ಲಿ ಹೂಳು ತೆಗೆಯವಂತ ಕೆಲಸಗಳನ್ನು ಮಾಡುತ್ತಾ ಇರುವ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಂಡು ರಾಜಕಾಲುವೆಗಳನ್ನು ಮುಚ್ಚಿದ್ದಾರೆ. ಕೆರೆಗೆ ನೀರು ಹರಿಯುವುದೇ ಈ ರಾಜಕಾಲುಗಳಿಂದ ಈ ಕಾಲುವೆಗಳೇ ಮುಚ್ಚಿದರೇ ಕೆರೆಗೆ ನೀರು ಬರುವುದಿಲ್ಲ, ಜೊತೆಗೆ ಮಳೆ ಬಿದ್ದಾಗ ಕೆರೆಯ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತದೆ ಅದರಿಂದ ತೊಂದರೆಯಾಗುವ ಮೊದಲೇ ಜಿಲ್ಲಾಡಳಿತ ಕ್ರಮವಹಿಸಬೇಕಾಗಿದೆ ಎಂದರು ವಿನಂತಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳು ಈ ಕೂಡಲೇ ಸ್ಥಳವನ್ನು ಪರಿಶೀಲಿಸಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಮತ್ತು ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ, ತಹಶಿಲ್ದಾರ್, ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಉಪ್ಪುಕುಂಟೆ ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ್, ಗೋಪಾಲಗೌಡ, ಮಾಜಿ ಗ್ರಾಪಂ ಸದಸ್ಯ ವಿ.ನಾರಾಯಣರೆಡ್ಡಿ, ಗ್ರಾಮಸ್ಥರಾದ ರಾಮಾಂಜಿನಪ್ಪ, ವೆಂಕಟರಾಮ್, ಸಿಐಟಿಯು ಮುಖಂಡ ಎಂ.ವಿಜಯಕೃಷ್ಣ, ಡಿಎಚ್ಎಸ್ ಮುಖಂಡ ಪಿ.ವಿ ರಮಣ್ ಇದ್ದರು.