ಮಂಗಳೂರು: ರಾಜ್ಯಕ್ಕೆ ಕೊಡಬೇಕಾದ ಎಲ್ಲಾ ಬಾಕಿ ಹಣವನ್ನು ಮತ್ತು ಕೋವಿಡ್ ನೆರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮತ್ತು ರಾಜ್ಯಗಳ ಜನತೆಗೆ ಉಚಿತ ಕೋವಿಡ್ ಲಸಿಕೆಯನ್ನು ಕೇಂದ್ರ ಸರಕಾರ ಒದಗಿಸಬೇಕೆಂದು ಸಿಪಿಐ(ಎಂ) ಪಕ್ಷದ ವತಿಯಿಂದ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಿದೆ.
ಈ ಬಗ್ಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಅವರು ಮಾತನಾಡಿ ʻʻಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಇಡೀ ದೇಶವೇ ಸಂಕಷ್ಟದಲ್ಲಿದೆ. ರಾಜ್ಯಗಳಿಗೆ ನೀಡಬೇಕಾದ ಕೋವಿಡ್ ಪರಿಹಾರದ ನೆರವು ಹಾಗೂ ಜಿ.ಎಸ್.ಟಿ. ಬಾಕಿ ಹಣವನ್ನು ಕೇಂದ್ರ ಸರಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ವಿನಂತಿಸುತ್ತದೆ ಎಂದು ಹೇಳಿದರು.
ಇದನ್ನು ಓದಿ: ಕೋವಿಡ್ ಬಿಕ್ಕಟ್ಟು: ಜನವಾದಿಯಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ
ಕೇಂದ್ರ ಸರಕಾರಕ್ಕೆ ಕೇವಲ 150 ರೂ. ಗಳಿಗೆ ಸಿಗುವ ಕೋವಿಡ್ ಲಸಿಕೆಯು ರಾಜ್ಯಗಳು 400 ರೂ.ಗಳಿಗೆ ತಲಾ ಡೋಸ್ ಖರೀದಿಸುವಂತೆ ಒತ್ತಾಯಿಸುವ ಧೋರಣೆ ಸರಿಯಾದ ಕ್ರಮವಲ್ಲ ಎಂದು ಸಿಪಿಐ(ಎಂ) ಮುಖಂಡರು ಆಗ್ರಹಿಸಿದ್ದಾರೆ.
ದೇಶದಲ್ಲಿ ಕೋವಿಡ್ ನಿವಾರಣೆಗಾಗಿ ದೇಶದಾದ್ಯಂತ ಸಂಗ್ರಹಿಸಲಾದ ಸಾವಿರಾರು ಕೋಟಿ ರೂ.ಗಳ ಭಾರೀ ಮೊತ್ತದ ʻಪಿಎಂ ಕೇರ್ಸ್ ಫಂಡ್ʼನ್ನು ಕೂಡಲೇ ಬಳಸಬೇಕೆಂದು ಪ್ರಧಾನ ಮಂತ್ರಿಗಳಿಗೆ ಆಗ್ರಹಿಸಿದ್ದಾರೆ.
ತಜ್ಞರ ನೀಡಿದ್ದ ಮುನ್ನೆಚ್ಚರಿಕೆ ಸೂಚನೆಯ ನಡುವೆಯೂ, ಆಳುವ ಸರಕಾರದ ಜವಾಬ್ದಾರಿ ರಹಿತ ನಡೆಯಿಂದ ಕೋವಿಡ್ ಎರಡನೇ ಅಲೆಗೆ ಜನತೆ ದೊಡ್ಡ ಸಂಖ್ಯೆಯಲ್ಲಿ ಸಾವಿಗೀಡಾಗುವಂತಾಗಿದೆ ಮತ್ತು ಅದು ಅತ್ಯಂತ ವೇಗವಾಗಿ ಹರಡಲು ಕಾರಣವಾಗಿದೆ.
ಇದನ್ನು ಓದಿ: ಉಚಿತ ಲಸಿಕೆ ಹಾಗೂ ಅಗತ್ಯ ನೆರವನ್ನು ಕೇಂದ್ರ ಸರಕಾರ ಒದಗಿಸಬೇಕೆಂದು ಸಿಪಿಐಎಂ ಒತ್ತಾಯ
ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯ ವೇಗವನ್ನು ಗಮನಿಸಿದಲ್ಲಿ ರಾಜ್ಯದಲ್ಲಿನ ಈಗಿನ ಆಸ್ಪತ್ರೆ ಮತ್ತು ಶುಶ್ರೂಷೆಯ ವ್ಯವಸ್ಥೆ ಸಾಲದಾಗಿದೆ. ಅದಕ್ಕಾಗಿ, ಶಾಲೆ, ಕಾಲೇಜ್, ಹಾಸ್ಟೆಲ್ ಮತ್ತು ಕಲ್ಯಾಣ ಮಂಟಪ, ಹೋಟೆಲ್ ಮುಂತಾದವುಗಳನ್ನು ಬಳಸಿಕೊಳ್ಳಲು ಕೇಂದ್ರ ಸರಕಾರದ ನೆರವು ಅಗತ್ಯವಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಹಾಗೂ ರೋಗಿಗಳಿಗೆ ನೆರವಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೆಲವು ಕ್ರಮಗಳನ್ನು ಕೈಗೊಂಡಿರುವುದು ಅದಕ್ಕಾಗಿ ಸಿಪಿಐ(ಎಂ) ಪಕ್ಷವು ಕೂಡಾ ಅವರೊಂದಿಗೆ ಕೈಜೋಡಿಸಿ ಕೋವಿಡ್ ನಿವಾರಣೆಗೆ ಶ್ರಮವಹಿಸಿ ದುಡಿಯಲಿದೆ ಎಂದು ತಿಳಿಸಿರುವ ಪಕ್ಷವು ಈ ಮುಂದಿನ ಕೆಲವು ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
- ಕರ್ಫ್ಯೂನಿಂದಾಗಿ ಉದ್ಯೋಗಕ್ಕೆ ಹೋಗಲಾಗದ ಕಟ್ಟಡ ಕಾರ್ಮಿಕರೇ ಮೊದಲಾದ ಹಲವಾರು ಕಾರ್ಮಿಕ ವರ್ಗದವರಿಗೆ ಆಹಾರ ಲಭ್ಯತೆ, ವಾಸ್ತವ್ಯದ ಸಮಸ್ಯೆ ಎದುರಾಗಿದೆ. ಅವರಿಗೆ ಸ್ವಯಂ ಸೇವಕ ನೆಲೆಯಲ್ಲಿ ಆಹಾರದ ಕಿಟ್, ಔಷಧಿ ಪೂರೈಕೆ ಒದಗಿಸಲು ಸಿಪಿಐ(ಎಂ) ಕಾರ್ಯಕರ್ತರು ಹಾಗೂ ಡಿವೈಎಫ್‌ಐ ಇದರ ಯುವಜನ ಕಾರ್ಯಕರ್ತರನ್ನು ನಾವು ಒದಗಿಸಬಲ್ಲೆವು. ಇವರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಪಾಸ್ ಒದಗಿಸಬೇಕೆಂದು ವಿನಂತಿಸುವೆವು. ಅವರುಗಳ ಹೆಸರಿನ ಪಟ್ಟಿಯನ್ನು ನಾವು ತಮಗೆ ಒದಗಿಸುತ್ತೇವೆ.
- ಜಿಲ್ಲೆಯ 8 ತಾಲೂಕುಗಳಲ್ಲಿ ಸಿಪಿಐ(ಎಂ) ಪಕ್ಷದ ಪ್ರಮುಖ ಮುಖಂಡರಿಗೆ ತಾಲೂಕಿಗೆ ತಲಾ ಮೂರರಂತೆ ಪಾಸ್ ನೀಡಿದಲ್ಲಿ, ಸೋಂಕಿತರನ್ನು ಹಾಗೂ ಸಂತ್ರಸ್ತರನ್ನು ಚಿಕಿತ್ಸೆಗೆ ಕರೆದೊಯ್ಯಲು ನಾವು ಸಿದ್ಧರಿದ್ದೇವೆ. ನಾವು ಒದಗಿಸುವ ಪಟ್ಟಿಯ ಹೆಸರಿಗೆ ಪಾಸ್ ನೀಡಿದಲ್ಲಿ ನಾವು ಜಿಲ್ಲಾಡಳಿತಕ್ಕೆ ಈ ನಿಟ್ಟಿನಲ್ಲಿ ಸೇವೆ ಸಲ್ಲಿಸಲು ಬದ್ಧರಿದ್ದೇವೆ.
- ಖಾಸಗೀ ಆಸ್ಪತ್ರೆಗಳಲ್ಲಿ ಅನೇಕ ಹಾಸಿಗೆಗಳು ಲಭ್ಯವಿದ್ದು, ಅವುಗಳನ್ನು ಕೋವಿಡ್ ಸಂತ್ರಸ್ತರಿಗಾಗಿ ಬಳಕೆ ಮಾಡಲು ಅವಕಾಶವಿದೆ. ಅವುಗಳನ್ನು ಜಿಲ್ಲಾಡಳಿತವು ವಶಕ್ಕೆ ತೆಗೆದುಕೊಂಡು ಕೋವಿಡ್ ಪೀಡಿತರಿಗೆ ಬಳಕೆ ಅವಕಾಶ ಮಾಡಿಕೊಡಬೇಕೆಂದು ನಾವು ಆಗ್ರಹಿಸುತ್ತೇವೆ.
- ಬೀಡಿ ಗುತ್ತಿಗೆದಾರರು ಬೀಡಿ ಕಾರ್ಮಿಕರಿಂದ ಕಟ್ಟಿಸಿ ಸಂಗ್ರಹಿಸಿದ ಬೀಡಿಯನ್ನು ಬೀಡಿ ಮಾಲಕರಿಗೆ ತಲುಪಿಸಲು ಸಧ್ಯ ಅಡಚಣೆಯಾಗಿದ್ದು, ಇದರಿಂದಾಗಿ ಲಕ್ಷ ಸಂಖ್ಯೆಯ ಬೀಡಿ ಕಾರ್ಮಿಕರು ಉದ್ಯೋಗ ಇಲ್ಲದೇ ಇರುವ ಪರಿಸ್ಥಿತಿ ಇದೆ. ಆದುದರಿಂದ ಬೀಡಿ ಗುತ್ತಿಗೆದಾರರಿಗೆ ಸಂಗ್ರಹಿಸಿದ ಬೀಡಿಯನ್ನು ಬೀಡಿ ಮಾಲಕರಿಗೆ ತಲಪಿಸಲು ಜಿಲ್ಲಾಡಳಿತವು ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ದೊಡ್ಡ ಮಾಲೀಕರ ಕೆಳಗೆ ಕೆಲಸ ಮಾಡುವವರು ಕಡಿಮೆ. ಅವರು ಬಿಡಿ ಸಂಖ್ಯೆಯಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದಾರೆ. ಅವರಲ್ಲಿ ಕಟ್ಟಡ ಕಾರ್ಮಿಕರ ಗುರುತು ಚೀಟಿ ಇದ್ದರೂ ಕೂಡಾ ಈ ಹಿಂದೆ ಕೋವಿಡ್ ಸಂತ್ರಸ್ತರ ಕಿಟ್ ಇತ್ಯಾದಿ ಸವಲತ್ತು ಪಡೆಯಲು ಸಾಧ್ಯವಾಗಿರಲಿಲ್ಲ. ಆದುದರಿಂದ ಗುರುತು ಚೀಟಿ ಇರುವ ಎಲ್ಲಾ ಕಟ್ಟಡ ಕಾರ್ಮಿಕರಿಗೂ ಸರಕಾರದಿಂದ ಲಭಿಸುವ ಆಹಾರ ಕಿಟ್ ಮತ್ತಿತರ ಸೌಲಭ್ಯಗಳನ್ನು ಯಾವ ಅಡಚಣೆಯೂ ಇಲ್ಲದೆ ಪಡೆಯುವುದಕ್ಕೆ ಅವಕಾಶ ಕಲ್ಪಿಸಬೇಕೆಂದು ವಿನಂತಿಸುತ್ತೇವೆ.
ಸರಕಾರಕ್ಕೆ ಸಲ್ಲಿಸುವ ಮನವಿ ಪತ್ರದ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹಾಗೂ ಕೆ.ಯಾದವ ಶೆಟ್ಟಿ, ಜೆ.ಬಾಲಕೃಷ್ಣ ಶೆಟ್ಟಿ, ಕೆ.ಕೃಷ್ಣಪ್ಪ ಸಾಲಿಯಾನ್, ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ, ಯು.ಬಿ.ಲೋಕಯ್ಯ ಮತ್ತಿತರರು ಉಪಸ್ಥಿತರಿದ್ದರು.