18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ: ಇಂದಿನಿಂದ ನೋಂದಣಿ‌ ಆರಂಭ

ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡುವ ಅಭಿಯಾನವು ಮೇ 1 ರಿಂದ ಆರಂಭವಾಗಲಿದೆ. ಲಸಿಕೆ ಪಡೆಯಲು ಇಂದಿನಿಂದಲೇ (ಏಪ್ರಿಲ್ 28) ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಗಳನು ಆರಂಭವಾಗಿದೆ. ಸರ್ಕಾರಿ ಆಸ್ಪತ್ರೆಯಾದರೂ, ಖಾಸಗಿ ಆಸ್ಪತ್ರೆಯಾದರೂ ಕೋವಿನ್ ಜಾಲತಾಣದಲ್ಲಿ, ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.

ಹೆಸರು ನೋಂದಾಯಿಸುವ ಪ್ರಕ್ರಿಯೆ ಇಂದು ಸಂಜೆ 4 ಗಂಟೆಗೆ ಚಾಲನೆ ದೊರೆಯಾಗಲಿದೆ. 18 ವರ್ಷ ಮೇಲ್ಪಟ್ಟ ಅರ್ಹ ಎಲ್ಲಾ ಫಲಾನುಭವಿಗಳಿಗೆ ಕೋವಿಡ್-19 ಲಸಿಕೆ ಪಡೆಯಲು cowin.gov.in ಹಾಗೂ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.

ಲಸಿಕಾ ಕೇಂದ್ರಗಳ ಬಳಿ ಜನದಟ್ಟಣೆಯಾಗದಂತೆ ಮಾಡಬೇಕಾದ ಅನಿವಾರ್ಯತೆಯಿಂದಾಗಿ ಸರ್ಕಾರ ಅನ್‌ಲೈನ್‌ ನೋಂದಣಿ ಮಾಡುವ  ನಿಯಮವನ್ನು ಜಾರಿಗೆ ತಂದಿದೆ. ಆನ್’ಲೈನ್ ಮೂಲಕ ಹೆಸರು ನೊಂದಾಯಿಸಿದವರಿಗೆ ಮಾತ್ರವೇ ಲಸಿಕೆ ನೀಡಲಾಗುವುದು.

ಇದನ್ನು ಓದಿ: ಕೋವಿಶೀಲ್ಡ್ ಜಾಗತಿಕ ದರ : ಭಾರತದಲ್ಲಿ ಮಾತ್ರ ದುಬಾರಿ

ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ

  1. ಕೋವಿನ್ ಜಾಲತಾಣದಲ್ಲಿ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನಮೂದಿಸಬೇಕು. ಒಂದು ಬಾರಿಯ ಪಾಸ್‌ವಾರ್ಡ್ (ಒಟಿಪಿ) ಬರುವವರೆಗೆ ಕಾಯಬೇಕು.
  2. ಒಟಿಪಿ ಬಂದ ನಂತರ ಅದನ್ನು ನಮೂದಿಸಬೇಕು. ನಂತರ ವೈಯಕ್ತಿಕ ವಿವರಗಳನ್ನು ದಾಖಲಿಸಬೇಕು.
  3. ಕೋವಿನ್‌ ಪೋರ್ಟಲ್‌ನಲ್ಲಿ ಚಿತ್ರವಿರುವ ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡಬೇಕು. ಆಧಾರ್‌ ಚೀಟಿ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌ ಯಾವುದಾದರೂ ಬಳಸಬಹುದು.
  4. ನಂತರ ಲಸಿಕೆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಯಾವುದಾದರೂ ಆಗಿರಬಹುದು
  5. ಲಸಿಕೆ ಪಡೆಯಬೇಕಿರುವ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ದಿನಾಂಕ ಮತ್ತು ಸಮಯದಂದು ಲಸಿಕೆ ಹಾಕಿಸಿಕೊಳ್ಳಲು ಅಲ್ಲಿ ಅವಕಾಶ ಇಲ್ಲದೇ ಇದ್ದರೆ ಬೇರೆ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಪರಿಶೀಲಿಸಬೇಕು.
  6. ಲಸಿಕೆ ಪಡೆಯುವ ದಿನಾಂಕ ಮತ್ತು ಸಮಯ ನಿಗದಿಯಾದ ಪತ್ರವು ಜನರೇಟ್ ಆಗುತ್ತದೆ. ಅದರಲ್ಲಿ ನಮೂದಾಗಿರುವ ದಿನಾಂಕ ಮತ್ತು ಸಮಯದಂದು ಲಸಿಕಾ ಕೇಂದ್ರಕ್ಕೆ ಹೋಗಿ, ಲಸಿಕೆ ಹಾಕಿಸಿಕೊಳ್ಳಬೇಕು. ಜತೆಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು

ಕೋವಿನ್ಜಾಲತಾಣ: https://www.cowin.gov.in/home

ಗಮನದಲ್ಲಿ ಇರಬೇಕಾದ ಅಂಶಗಳು

* ಲಸಿಕೆ ಹಾಕಿಸಿಕೊಳ್ಳಲು ನಿಗದಿಯಾದ‌ ದಿನದಂದು ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದೇ ಇದ್ದರೆ, ಬೇರೆ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ನಿಗದಿತ ದಿನಕ್ಕಿಂತ ಒಂದು ದಿನ ಮೊದಲು ಇದನ್ನು ಬದಲಿಸಬೇಕು. ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದೇ ಇದ್ದರೆ, ನಂತರದ ದಿನಗಳಲ್ಲಿ ಲಭ್ಯವಿರುವ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನು ಓದಿ: ವಿಫಲಗೊಂಡಿರುವ ‘ವಿಶ್ವ ಗುರು’

* ಎರಡನೇ ಡೋಸ್‌ ಪಡೆಯಲು ಮತ್ತೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮೊದಲ ಡೋಸ್‌ ಪಡೆದ ದಿನ ಮತ್ತು ಸಮಯಕ್ಕೆ ಅನುಗುಣವಾಗಿ, ಎರಡನೇ ಡೋಸ್‌ ಪಡೆಯುವ ದಿನ ಮತ್ತು ಸಮಯ ಸ್ವಯಂಚಾಲಿತವಾಗಿ ನಿಗದಿ ಆಗುತ್ತದೆ. ಈ ಬಗ್ಗೆ ಸಂದೇಶ ಬರುತ್ತದೆ.

* ಒಂದು ಲಾಗಿನ್ ಐಡಿಯಲ್ಲಿ ಗರಿಷ್ಠ ನಾಲ್ಕು ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ಆದರೆ, ನೋಂದಣಿ ಮಾಡಿಕೊಳ್ಳುವವರ ಗುರುತಿನ ಚೀಟಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲೇಬೇಕು

* ಕೋವಿನ್ ಪೋರ್ಟಲ್ ಅಲ್ಲದೆ, ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ

* ಲಸಿಕೆ ಪಡೆದ ಒಂದು ತಿಂಗಳವರೆಗೂ ರಕ್ತದಾನ ಮಾಡುವಂತಿಲ್ಲ.

ಕೊರೊನಾ ಎರಡನೇ ಅಲೆಯ ಉಲ್ಬಣ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿದೆ.  3 ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿ ಹೇಳಿಕೊಂಡಿದೆ. ಇಲ್ಲಿಯವರೆಗೆ ದೇಶದಲ್ಲಿ 24 ಕೋಟಿ ಡೋಸ್​ ಲಸಿಕೆ ನೀಡಿದ್ದಾರೆ ಆರೋಗ್ಯ ಸಚಿವಾಲಯ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *