ಉಚಿತ ಲಸಿಕೆ ಹಾಗೂ ಅಗತ್ಯ ನೆರವನ್ನು ಕೇಂದ್ರ ಸರಕಾರ ಒದಗಿಸಬೇಕೆಂದು ಸಿಪಿಐಎಂ ಒತ್ತಾಯ

ಬೆಂಗಳೂರು: ಇಡೀ ದೇಶವೇ ಸಂಕಷ್ಠದಲ್ಲಿದೆ. ರಾಜ್ಯಗಳಿಗೆ ನೀಡಬೇಕಾದ ಕೋವಿಡ್ ಪರಿಹಾರದ ನೆರವನ್ನು ಮತ್ತು ಜಿ.ಎಸ್.ಟಿ ಬಾಕಿ ಹಣವನ್ನು ಕೇಂದ್ರ ಸರಕಾರ ನೀಡದೇ ಸತಾಯಿಸುತ್ತಿರುವುದನ್ನು ಮತ್ತು  ಇದೀಗ ಕೇಂದ್ರ ಸರಕಾರಕ್ಕೆ ಕೇವಲ 150 ರೂ.ಗಳಿಗೆ ಸಿಗುವ ಕೋವಿಡ್ ಲಸಿಕೆಯನ್ನು ರಾಜ್ಯಗಳು 400 ರೂ.ಗಳಿಗೆ ತಲಾ ಡೋಸ್ ಖರೀದಿಸುವಂತೆ ಒತ್ತಾಯಿಸುವ ಕೇಂದ್ರ ಸರಕಾರದ ದೌರ್ಜನ್ಯದ ಕ್ರಮಗಳನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ಈ ಕುರಿತು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಅವರು ಪತ್ರಿಕಾ ಹೇಳಿಕೆ ನೀಡಿದ್ದು ʻʻರಾಜ್ಯಕ್ಕೆ ಕೊಡಬೇಕಾದ ಎಲ್ಲ ಬಾಕಿ ಹಣವನ್ನು ಮತ್ತು ಕೋವಿಡ್ ನೆರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತದೆ ಮತ್ತು ರಾಜ್ಯಗಳ ಜನತೆಗೆ ಉಚಿತ ಕೋವಿಡ್ ಲಸಿಕೆಯನ್ನು ಕೇಂದ್ರ ಸರಕಾರವೇ ಒದಗಿಸಬೇಕೆಂದು ಪ್ರಧಾನ ಮಂತ್ರಿಗಳನ್ನು ಬಲವಾಗಿ ಆಗ್ರಹಿಸುತ್ತದೆ. ಇದಕ್ಕಾಗಿ ದೇಶದಾದ್ಯಂತ ಸಂಗ್ರಹಿಸಲಾದ ಸಾವಿರಾರು ಕೋಟಿ ರೂಗಳ ಭಾರೀ ಮೊತ್ತ ಪ್ರಧಾನ ಮಂತ್ರಿ ಕೇರ್ಸ್ ನಿಧಿಯನ್ನು ಬಳಸಬೇಕೆಂದು ಒತ್ತಾಯಿಸಿದ್ದಾರೆ.

ತಜ್ಞರ ಮುನ್ನೆಚ್ಚರಿಕೆಯ ಸೂಚನೆಯ ನಡುವೆಯೂ, ತಮ್ಮ ಸರಕಾರದ ಜವಾಬ್ದಾರಿ ರಹಿತ ನಡೆಯಿಂದ ಕೋವಿಡ್ ಎರಡನೇ ಅಲೆಗೆ ಜನತೆ ದೊಡ್ಡ ಸಂಖ್ಯೆಯಲ್ಲಿ ಸಾವಿಗೀಡಾಗುವಂತಾಗಿದೆ ಮತ್ತು ಅದು ಅತ್ಯಂತ ವೇಗವಾಗಿ ಹರಡಲು ಕಾರಣವಾಗಿದೆ. ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯ ವೇಗವನ್ನು ಗಮನಿಸಿದಲ್ಲಿ ರಾಜ್ಯದಲ್ಲಿನ ಈಗಿನ ಆಸ್ಪತ್ರೆ ಮತ್ತು ಶೂಶೃಸೆಯ ವ್ಯವಸ್ಥೆ ಸಾಲದಾಗಿದೆ. ಅದಕ್ಕಾಗಿ, ಶಾಲಾ, ಕಾಲೇಜ್, ಹಾಸ್ಟೆಲ್ ಮತ್ತು ಕಲ್ಯಾಣ ಮಂಟಪ, ಹೋಟೆಲ್ ಮುಂತಾದವುಗಳನ್ನು ಬಳಸಿಕೊಳ್ಳಲು ಕೇಂದ್ರ ಸರಕಾರದ ನೆರವು ಅಗತ್ಯವಿದೆ.

ರಾಜ್ಯದ ಎಂಪಿಗಳ ಮೌನ ಅಕ್ಷಮ್ಯ ಅಪರಾಧ ಮೌನ ಮುರಿಯಲು ಸಿಪಿಐಎಂ ಒತ್ತಾಯ

ರಾಜ್ಯದ ಜನತೆ ತೀವ್ರ ಸಂಕಷ್ಠದಲ್ಲಿರುವಾಗ ಮತ್ತು ಕೇಂದ್ರ ಸರಕಾರ ರಾಜ್ಯಗಳ ಮೇಲೆ ದೌರ್ಜನ್ಯ ಎಸಗುತ್ತಿರುವಾಗ ರಾಜ್ಯದ ಪಾರ್ಲಿಮೆಂಟ್ ಸದಸ್ಯರ ಬಾಯಿ ಮುಚ್ಚಿಕೊಂಡಿರುವುದು ರಾಜ್ಯದ ಜನತೆಯ ಸಂಕಷ್ಠದ ಕುರಿತು ಅವರಿಗಿರುವ ಕಳಕಳಿಯನ್ನು ತೋರುತ್ತಿದೆಯೆಂದು ಸಿಪಿಐಎಂ ಕುಟುಕಿದೆ. ಕೂಡಲೇ ರಾಜ್ಯದ ಎಲ್ಲಾ ಎಂಪಿಗಳು ಕೇಂದ್ರ ಸರಕಾರವನ್ನು ಈ ಕುರಿತು ಬಲವಾಗಿ ಒತ್ತಾಯಿಸಿ ಅಗತ್ಯ ನೆರವು ಪಡೆಯಲು ಮತ್ತು ರಾಜ್ಯದ ಜನತೆಯನ್ನು ರಕ್ಷಿಸಲು ಮೌನ ಮುರಿಯಬೇಕೆಂದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *