ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಆಮ್ಲಜನಕ, ಅಗತ್ಯ ಔಷಧಗಳು ಮತ್ತು ಲಸಿಕೆ ಪೂರೈಕೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ನಿಂದ ಅಮಿಕಸ್ ಕ್ಯೂರಿ ಆಗಿ ನೇಮಕಗೊಂಡಿದ್ದ ಹಿರಯ ವಕೀಲ ಹರೀಶ್ ಸಾಳ್ವೆ ಅವರು ಹಿಂದೆ ಸರಿದಿದ್ದಾರೆ.
ಹರೀಶ್ ಸಾಳ್ವೆ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಮಾನ್ಯ ಮಾಡಿದೆ.
ಇದನ್ನು ಓದಿ: ಕೋವಿಡ್ ನಿರ್ವಹಣೆಯಲ್ಲಿ ಹಿನ್ನಡೆ: ಕೇಂದ್ರಕ್ಕೆ ಪ್ರಶ್ನೆ ಮಾಡಿದ ಸುಪ್ರೀಂ
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹರೀಶ್ ಸಾಳ್ವೆ ಅವರನ್ನು ನ್ಯಾಯಾಲಯ ನೇಮಕ ಮಾಡಿತ್ತು. ಸಾಳ್ವೆ ಅವರ ನೇಮಕಕ್ಕೆ ಸಂಬಂಧಿಸಿದಂತೆ ಇತರ ಹಿರಿಯ ವಕೀಲರು ಆಪ್ಷೇಪ ವ್ಯಕ್ತಪಡಿದ್ದಾರೆ.
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರಿದ್ದ ನ್ಯಾಯಪೀಠ ನೀಡಿದ್ದ ಆದೇಶವನ್ನು ಸರಿಯಾಗಿ ಓದದೇ ಇರುವು ಹಿರಿಯ ವಕೀಲರು ನೀಡುತ್ತಿರುವ ಹೇಳಿಕೆಗಳು ನೋವುಂಟು ಮಾಡಿದೆ ಎಂದು ಸ್ವತಃ ಎಸ್.ಎ.ಬೋಬ್ಡೆ ಅವರು ಹೇಳಿದ್ದಾರೆ.
‘ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ನನಗೆ ಶಾಲಾ, ಕಾಲೇಜು ದಿನಗಳಿಂದಲೂ ತಿಳಿದವರು. ಇದೇ ಸಲುಗೆ, ಸ್ನೇಹ ಈ ಪ್ರಕರಣದ ವಿಚಾರಣೆಯ ವೇಳೆ ಅಡ್ಡಿಯಾಗದಿರಲಿ ಎಂಬ ಕಾರಣಕ್ಕೆ ಅಮಿಕಸ್ ಕ್ಯೂರಿ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು ಹರೀಶ್ ಸಾಳ್ವೆ ಹೇಳಿದ್ದರು.
ಇದನ್ನು ಓದಿ: ಅಸಹಾಯಕರು ಹಣ ಕೊಟ್ಟು ಕೋವಿಡ್ ಲಸಿಕೆ ಪಡೆಯಲಾಗದು: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಕಳಕಳಿ
ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ ಅವರು ಸಹ ‘ದಯವಿಟ್ಟು ಅಮಿಕಸ್ ಕ್ಯೂರಿ ನೇಮಕಾತಿಯಿಂದ ಹಿಂದೆ ಸರಿಯಬೇಡಿʼ ಎಂದು ವಕೀಲ ಹರೀಶ್ ಸಾಳ್ವೆ ಅವರಿಗೆ ವಿನಂತಿಸಿಕೊಂಡರು.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹರಡುವಿಕೆ ಹೆಚ್ಚಾಗಿದ್ದು, ರಾಜ್ಯಗಳಲ್ಲಿ ಆಕ್ಸಿಜನ್, ಔಷಧಗಳ ಪೂರೈಕೆ ವ್ಯತ್ಯಯವಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈಗಾಗಲೇ ಈ ಬಗ್ಗೆ ವಿವಿಧ ರಾಜ್ಯದ ಹೈಕೋರ್ಟ್ನಲ್ಲಿಯೂ ವಿಚಾರಣೆ ಹಂತದಲ್ಲಿದೆ. ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ಗಳಲ್ಲಿ ನಡೆಯುತ್ತಿರುವ ವಿಚಾರಗಣೆಗಳಿಗೆ ತಡೆಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಕೇಂದ್ರ ಸರಕಾರವು ಪ್ರತಿಕ್ರಿಯೆ ಸಲ್ಲಿಸಲು ಸುಪ್ರೀಂ ಕೋರ್ಟ್ ಏಪ್ರಿಲ್ 27 ವರೆಗೆ ಕಾಲಾವಕಾಶ ನೀಡಿದೆ.