ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆ

ರಾಜ್ಯದಲ್ಲಿಂದು 19,067  ಕೋವಿಡ್‌ ಪ್ರಕರಣ ಪತ್ತೆ, 81 ಮಂದಿ ಸಾವು

ಕಲಬುರಗಿ / ಬೆಂಗಳೂರು: ಕಲಬುರ್ಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವ ನಡುವೆಯೇ ಸಾಮಾನ್ಯ ರೋಗಿಗಳು ಸಹ ಚಿಕಿತ್ಸೆಗಾಗಿ ಪರದಾಡುವಂತೆ ಆಗಿದೆ. ಮಹಿಳೆಯೊಬ್ಬರು ಐಸಿಯು ಬೆಡ್ ಸಿಗದ ಕಾರಣ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೋದಲ್ಲಿ ಐದಾರು ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿದ ಮನಕಲುವ ಘಟನೆ ರವಿವಾರ ನಡೆದಿದೆ.

ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆಯೊಬ್ಬರು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕುಟುಂಬದವರು ಕರೆದುಕೊಂಡು ಹೋಗಿದ್ದರು. ಆಗ ಐಸಿಯು ಬೆಡ್ ಖಾಲಿ ಇಲ್ಲ ಎಂದು ಹೇಳಿ ಆಸ್ಪತ್ರೆಯವರು ಆಕ್ಸಿಜನ್ ಸಿಲಿಂಡರ್ ಅಳವಡಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದರು.

ನಂತರ ಐಸಿಯು ಬೆಡ್‌ಗಾಗಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೋದಲ್ಲಿ ವಾತ್ಸಲ್ಯ,  ಚಿರಾಯು,
ಧನ್ವಂತರಿ,  ಕ್ರಿಸ್ಟಲ್, ಇಎಸ್‌ಐ ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಎಲ್ಲೂ ಬೆಡ್ ಸಿಗದ ಕಾರಣ ಜಿಮ್ಸ್ ಆಸ್ಪತ್ರೆಗೆ ಆಟೋದಲ್ಲೇ ಆಕ್ಸಿಜನ್ ಸಿಲಿಂಡರ್ ಸಮೇತ ಕುಟುಂಬದವರು ಕರೆದುಕೊಂಡು ಬಂದಿದ್ದರು. ಆದರೆ, ಇಲ್ಲೂ ಬೆಡ್‌ಗಳು ಖಾಲಿ ಇಲ್ಲ ಎನ್ನುವ ಕಾರಣಕ್ಕೆ ಮೂರು ಗಂಟೆಗಳ ಕಾಲ ಆಸ್ಪತ್ರೆಯ ಮುಂದೆಯೇ ಆಟೋದಲ್ಲಿ ರೋಗಿ ಪರದಾಡುವಂತೆ ಆಗಿತ್ತು.

ಆಟೋದಲ್ಲಿ ಆಕ್ಸಿಜನ್ ಸಿಲಿಂಡರ್ ಮೇಲೆ ಉಸಿರಾಡುತ್ತಿರುವ ರೋಗಿಯ ಸ್ಥಿತಿ ಕರುಣಾಜನಕವಾಗಿತ್ತು. ಮಹಿಳೆ ಕಷ್ಟ ಅನುಭವಿಸುತ್ತಿರುವ ದೃಶ್ಯ ಮನಕಲುಕುವಂತೆ ಇತ್ತು. ಕೊನೆಗೆ ಮಧ್ಯಾಹ್ನ ವೇಳೆಗೆ ಜಿಮ್ಸ್ ಆಸ್ಪತ್ರೆಯವರೇ ಐಸಿಯು ಘಟಕದಲ್ಲಿ ಮತ್ತೊಂದು ಬೆಡ್ ವ್ಯವಸ್ಥೆ ಮಾಡಿ ಒಂದೇ ಯಂತ್ರಕ್ಕೆ ಎರಡು `ಫ್ಲೋ ಮೀಟರ್’ ಅಳವಡಿಸಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದರು.‌

ಇದನ್ನೂ ಓದಿ : ಬೆಡ್ ಕೊರತೆ : ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುವಷ್ಟರಲ್ಲಿ ನಿಂತೇ ಹೋಯ್ತು ಸೋಂಕಿತನ ಉಸಿರು

ಇಂದಿನ ಕೊರೊನಾ ಮೀಟರ್‌ :  ಕರ್ನಾಟಕ ರಾಜ್ಯದಲ್ಲಿ ಭಾನುವಾರ (ಏಪ್ರಿಲ್ 18) ಒಟ್ಟು 19,067 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 81 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಇಂದು ಒಂದೇ ದಿನ 12,793 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿಗೆ 60 ಜನರ ಬಲಿಯಾಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? : ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 12,793 ಮಂದಿಯಲ್ಲಿ ಭಾನುವಾರ (ಏಪ್ರಿಲ್ 18) ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದಂತೆ ಮೈಸೂರು 777, ಕಲಬುರಗಿ 671, ಬೀದರ್ 469, ತುಮಕೂರು 494, ಮಂಡ್ಯ 338, ಧಾರವಾಡ 265, ಬೆಂಗಳೂರು ಗ್ರಾಮಾಂತರ 245, ದಕ್ಷಿಣ ಕನ್ನಡ 272, ಬಳ್ಳಾರಿ 238, ವಿಜಯಪುರ 200, ಚಿಕ್ಕಬಳ್ಳಾಪುರ 190, ಬಾಗಲಕೋಟೆ 104, ಬೆಳಗಾವಿ 129, ಚಾಮರಾಜನಗರ 102, ಚಿಕ್ಕಮಗಳೂರು 81, ಚಿತ್ರದುರ್ಗ 102, ದಾವಣಗೆರೆ 133, ಗದಗ 48, ಹಾವೇರಿ 43, ಕೊಡಗು 44, ಕೋಲಾರ 175, ಕೊಪ್ಪಳ 65, ಉಡುಪಿ 152, ರಾಯಚೂರು 133, ರಾಮನಗರ 122, ಶಿವಮೊಗ್ಗ 156, ಉತ್ತರ ಕನ್ನಡ 104, ಯಾದಗಿರಿ 74 ಜನರಿಗೆ ಸೋಂಕು ದೃಢಪಟ್ಟಿದೆ.

ಇದನ್ನು ಓದಿ: ಕೋವಿಡ್‌ ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೊ ಇರಲಿ – ನವಾಬ್‌ ಮಲ್ಲಿಕ್

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? : ರಾಜ್ಯದಲ್ಲಿ ಇಂದು ಒಂದೇ ದಿನ ಕೊರೊನಾಗೆ 81 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 60 ಜನರು ಸಾವನ್ನಪ್ಪಿದ್ದಾರೆ. ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ತಲಾ ಮೂವರು, ಬಳ್ಳಾರಿ, ಕೊಪ್ಪಳ, ಉತ್ತರ ಕನ್ನಡ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಲಾ ಇಬ್ಬರು, ಬೆಳಗಾವಿ, ಬೀದರ್, ಚಾಮರಾಜನಗರ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,351 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ : ಜನರ ಜೀವಕ್ಕಿಂತ ಪ್ರಧಾನಿಗೆ ಚುನಾವಣಾ ಪ್ರಚಾರವೇ ದೊಡ್ಡದೇ?–ಸಿಪಿಎಂ ಪ್ರಶ್ನೆ

Donate Janashakthi Media

Leave a Reply

Your email address will not be published. Required fields are marked *