ಮೊದಲ ಅಲೆಯಿಂದ ಪಾಠ ಕಲಿತು ಕ್ರಮಗಳನ್ನು ಕೈಗೊಳ್ಳಬೇಕಾದ್ದು ಈಗ ಮಹತ್ವದ ಸಂಗತಿ. ಕೇಂದ್ರ ಮತ್ತು ರಾಜ್ಯಗಳ ನಡುವೆ ಭಾಗೀದಾರಿಕೆಯೊಂದಿಗೆ ಇದನ್ನು ಮಾಡಬೇಕಾಗಿದೆ. ಕೇಂದ್ರ ಸರಕಾರ ಸಾಕ್ಷ್ಯ-ಆಧಾರಿತ ಕಟ್ಟುಪಾಡುಗಳನ್ನು ಮತ್ತು ಹಣಕಾಸು ಹಾಗೂ ಇತರ ನೆರವುಗಳನ್ನು ಒದಗಿಸಬೇಕು, ವಿವಿಧ ರಂಗಳಲ್ಲಿ ಅಗತ್ಯ ಪೂರೈಕೆಗಳನ್ನು ಮತ್ತು ಸಹಕಾರವನ್ನು ಕೊಡದೆ ರಾಜ್ಯಗಳ ಮೇಲೆ ದೂಷಣೆಗಳನ್ನು ವರ್ಗಾಯಿಸುವ ಪ್ರಯತ್ನಗಳನ್ನು ಮಾಡಬಾರದು ಎಂದು ಅಖಿಲ ಭಾರತ ಜನವಿಜ್ಞಾನ ಜಾಲ(ಎ.ಐ.ಪಿ.ಎಸ್.ಎನ್.) ಹೇಳಿದೆ.
ಭಾರತದ ಎರಡನೇ ಕೊವಿಡ್-19 ಅಲೆ ಮೊದಲನೇ ಅಲೆಗಿಂತ ಹೆಚ್ಚು ವೇಗವಾಗಿ, ಹೆಚ್ಚು ತೀವ್ರವಾಗಿ ಏರುತ್ತಿದೆ. 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ ಈಗ 2 ಲಕ್ಷವನ್ನೂ ದಾಟುತ್ತಿದೆ.
ಎಪ್ರಿಲ್ 15- ಹೊಸ ಸೋಂಕಿತರು 1,99,286 ಮತ್ತು ಸಾವುಗಳು 990
ಎಪ್ರಿಲ್ 16- 2,16, 642 1153
ಎಪ್ರಿಲ್ 17 2,33,757 1388
ಇದು ಮೊದಲ ಅಲೆಯ ಅತಿ ಹೆಚ್ಚು ದೈನಂದಿನ ಸೋಂಕಿತರ ಸಂಖ್ಯೆಯ ದುಪ್ಪಟ್ಟು ಎನ್ನಲಾಗಿದೆ. ಅದೀಗ ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಬ್ರೆಝಿಲ್ ಎರಡನ್ನೂ ದಾಟಿ ಜಗತ್ತಿನಲ್ಲಿ ಪ್ರತಿದಿನ ಅತಿಹೆಚ್ಚು ಸೋಂಕಿತರು ದಾಖಲಾಗುತ್ತಿರುವ ದೇಶವಾಗುತ್ತಿದೆ (ನ್ಯೂಸ್‌ಕ್ಲಿಕ್, ಎಪ್ರಿಲ್ 16).
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 46ಶೇ. ಪ್ರಕರಣಗಳು ದಾಖಲಾಗುತ್ತಿದ್ದರೂ, ಇತರ ಹೆಚ್ಚಿನ ರಾಜ್ಯಗಳಲ್ಲೂ ಅದು ಏರುತ್ತಿದೆ, ಮೊದಲನೇ ಅಲೆಗೆ ಹೋಲಿಸಿದರೆ ಹೆಚ್ಚು ವ್ಯಾಪಕವಾಗಿ ಹರಡುತ್ತಿದೆ. ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಆಸ್ಪತ್ರೆ ಹಾಸಿಗೆಗಳು, ಆಕ್ಸಿಜನ್ ಮತ್ತು ಔಷಧಿಗಳ ಅಭಾವ ಕಾಡಲಾರಂಭಿಸಿದೆ. ಇದನ್ನು ಎದುರಿಸಲು ಕ್ರಮಗಳನ್ನು ಕೈಗೊಳ್ಳದಿದ್ದರೆ ಇದನ್ನು ದೇಶದಲ್ಲೆಲ್ಲ ಕಾಣಬೇಕಾದೀತು ಎಂದು ಪರಿಣಿತರು ಎಚ್ಚರಿಸುತ್ತಿದ್ದಾರೆ.
ಜನಗಳನ್ನು, ರಾಜ್ಯಗಳನ್ನು ದೂಷಿಸುವುದೇಕೆ?
ಮೊದಲ ಅಲೆ ಇಳಿಯಲಾರಂಭಿಸಿದಾಗ ಕೇಂದ್ರ ಸರಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತ ಫೆಬ್ರುವರಿ ವೇಳೆಗೆ ದೇಶದಲ್ಲಿ ಇದು ಮುಗಿದೇ ಹೋಗುತ್ತದೆ ಎಂದು ಸಾರಲಾಯಿತು. ಕುಂಭಮೇಳದಂತಹ ಲಕ್ಷಾಂತರ ಜನರು ಸೇರುವ ಧಾರ್ಮಿಕ ಜಮಾವಣೆಗಳಿಗೂ, ಸಾರ್ವಜನಿಕ ರ‍್ಯಾಲಿಗಳಿಗೂ ಅವಕಾಶ ನೀಡಲಾರಂಭಿಸಿತು. ಇದರಿಂದ ಪ್ರೇರಿತರಾದ ಜನಗಳು ಮಾಸ್ಕ್ ಗಳು, ದೈಹಿಕ ಅಂತರಗಳು ಮುಂತಾದ ಎಲ್ಲ ಜಾಗರೂಕತೆಗಳನ್ನು ಬದಿಗೆ ತಳ್ಳಿದಂತೆ ಕಾಣುತ್ತದೆ.
(ಕೃಪೆ: ಸತೀಶ ಆಚಾರ್ಯ/ಫೇಸ್ ಬುಕ್)
ಆದರೆ ಈಗ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸರಕಾರ ಜನಗಳು ಜಾಗರೂಕರಾಗಿರಲಿಲ್ಲ ಅದರಿಂದಾಗಿ ಹೀಗಾಗುತ್ತಿದೆ ಎಂದು ದೂಷಿಸಿದ್ದಾರೆ.
“ಇದು ಪ್ರಸಕ್ತ ಸನ್ನಿವೇಶಕ್ಕೆ ತನ್ನ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲಿಕ್ಕೆ ಮತ್ತು ಭವಿಷ್ಯದ ನಿಷ್ಕ್ರೀಯತೆ ಮತ್ತು ವಿಫಲತೆಗೆ ನೆಪಗಳನ್ನು ಒಡ್ಡಲಿಕ್ಕೆ ಅವಕಾಶ ಮಾಡಿಕೊಡುತ್ತದಷ್ಟೇ” ಎಂದು ಅಖಿಲ ಭಾರತ ಜನವಿಜ್ಞಾನ ಜಾಲ (ಎ.ಐ.ಪಿ.ಎಸ್.ಎನ್.) ಎಪ್ರಿಲ್ 14ರಂದು ನೀಡಿದ ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದೆ. ಭಾರತ ಇದಾಗಲೇ ನಿಜವಾಗಿಯೂ ಕೊವಿಡ್-19 ಮಹಾಸೋಂಕಿನ ಒಂದು ಕ್ರೂರವಾದ ಎರಡನೇ ಅಲೆಯನ್ನು ಪ್ರವೇಶಿಸಿದೆ ಎಂದು ಅದು ಎಚ್ಚರಿಸಿದೆ. ಎ.ಐ.ಪಿ.ಎಸ್.ಎನ್. ದೇಶಾದ್ಯಂತ ವಿಜ್ಞಾನವನ್ನು ಜನರ ಬಳಿಗೆ ಒಯ್ಯುವ ವಿಜ್ಞಾನ ಕಾರ್ಯಕರ್ತರ ಅಖಿಲ ಭಾರತ ಸಂಘಟನೆ.
ಮೊದಲ ಅಲೆಯಿಂದ ಪಾಟ ಕಲಿತು ಕ್ರಮಗಳನ್ನು ಕೈಗೊಳ್ಳಬೇಕಾದ್ದು ಈಗ ಮಹತ್ವದ ಸಂಗತಿ. ಕೇಂದ್ರ ಮತ್ತು ರಾಜ್ಯಗಳ ನಡುವೆ ಭಾಗೀದಾರಿಕೆಯೊಂದಿಗೆ ಇದನ್ನು ಮಾಡಬೇಕಾಗಿದೆ. ಕೇಂದ್ರ ಸರಕಾರ ಸಾಕ್ಷ್ಯ-ಆಧಾರಿತ ಕಟ್ಟುಪಾಡುಗಳನ್ನು ಮತ್ತು ಹಣಕಾಸು ಹಾಗೂ ಇತರ ನೆರವುಗಳನ್ನು ಒದಗಿಸಬೇಕು, ವಿವಿಧ ರಂಗಳಲ್ಲಿ ಅಗತ್ಯ ಪೂರೈಕೆಗಳನ್ನು ಮತ್ತು ಸಹಕಾರವನ್ನು ಕೊಡದೆ ರಾಜ್ಯಗಳ ಮೇಲೆ ದೂಷಣೆಗಳನ್ನು ವರ್ಗಾಯಿಸುವ ಪ್ರಯತ್ನಗಳನ್ನು ಮಾಡಬಾರದು ಎಂದು ಎ.ಐ.ಪಿ.ಎಸ್.ಎನ್. ಹೇಳಿದೆ.
ಏಕೆಂದರೆ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರಕಾರ ಎಲ್ಲ ಅಧಿಕಾರಗಳನ್ನು ತನ್ನದಾಗಿಸಿಕೊಂಡಿದೆ, ಮತ್ತು ಇಂತಹ ಅಧಿಕಾರಗಳೊಂದಿಗೆ ಹೊಣೆಗಾರಿಕೆಯೂ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರಬೇಕಾದ ಸಂಗತಿ.
ಎಪ್ರಿಲ್ 14ರಂದು ಎ.ಐ.ಪಿ.ಎಸ್.ಎನ್. ಹೇಳಿಕೆ ಎರಡನೇ ಅಲೆಯನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದೆ.
- ಹೊಣೆಗಾರಿಕೆಯನ್ನು ಸ್ವೀಕರಿಸಿ, ಜನಗಳನ್ನು , ರಾಜ್ಯಗಳನ್ನು ದೂಷಿಸಬೇಡಿ.
- ರೂಪಾಂತರಿ ವೈರಸ್‌ಗಳ ಪಾತ್ರದ ಅರಿವು ಪಡೆಯಬೇಕು, ಜೀನ್ ಸೀಕ್ವೆನ್ಸಿಂಗ್ ನಡೆಸಬೇಕು.
- ಸೋಂಕು ತಪಾಸಣೆ ಮತ್ತು ಸಂಪರ್ಕ ಪತ್ತೆ ಹಾಗೂ ನಿಗಾ ಕಾರ್ಯವನ್ನು ಹೆಚ್ಚಿಸಬೇಕು.
- ಲಸಿಕೆ ಕೊರತೆಯ ಪ್ರಶ್ನೆ ಮತ್ತು ಲಸಿಕೆ ಅಭಿಯಾನದಲ್ಲಿ ಅಸಮತ್ವದ ಪ್ರಶ್ನೆಯನ್ನು ಎತ್ತಿಕೊಳ್ಳಬೇಕು.
- ಲಸಿಕೆ ಉತ್ಪಾದನೆಯನ್ನು ಮತ್ತು ಲಭ್ಯತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.
- ಪರವಾನಿಗೆ/ ಪೇಟೆಂಟ್ ಪ್ರಶ್ನೆಗಳನ್ನು ಎತ್ತಿಕೊಳ್ಳಬೇಕು.
- ಲಸಿಕೆ ರಾಷ್ಟ್ರಕ್ಕೆ ಬಲಿಬೀಳಬಾರದು.
ಇದುವರೆಗೆ ನಡೆದಿರುವ ಪರೀಕ್ಷಣೆಗಳ ಪ್ರಕಾರ ಹೊಸ ರೂಪದಲ್ಲಿ ಬಂದಿರಬಹುದಾದ ಕೊವಿಡ್ ವೈರಸ್ ಹಿಂದಿನದಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿರುವಂತೆ ಕಾಣುತ್ತದೆ. ಹಿಂದೆ ಸೋಂಕು ತಗಲಿದವರಿಗೆ ಮತ್ತೆ ತಗಲಿರುವ ಪ್ರಕರಣಗಳೂ ಇವೆ. ಬಹುಶಃ ಈಗ ಬಂದಿರುವ ಲಸಿಕೆಗಳಿಂದಲೂ ಈ ವೈರಸ್ ತಪ್ಪಿಸಿಕೊಳ್ಳಬಹುದು. ಇದಕ್ಕೆ ಸಾಕಷ್ಟು ಪುರಾವೆಗಳು ಇನ್ನೂ ಲಭ್ಯವಾಗಿರದಿದ್ದರೂ ಸರಕಾರ ತಡೆ ಕ್ರಮಗಳನ್ನು ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಮಾಡಬೇಕು. ಲಸಿಕೆ ಸಾಮೂಹಿಕ ಸೋಂಕು-ನಿರೋಧವನ್ನು ಒದಗಿಸಬಹುದಾದರೂ, ಈಗ ಈ ಸೋಂಕು ಹರಡುತ್ತಿರುವ ವೇಗವನ್ನು ನೋಡಿದರೆ, ಹೆಚ್ಚಿನ ಪರೀಕ್ಷಣೆ, ಸಂಪರ್ಕಗಳ ಪತ್ತೆ-ಇದೇ ಸೋಂಕು ಹರಡದಂತೆ ತಡೆಯುವ ಮುಖ್ಯ ಕ್ರಮಗಳಾಗಬೇಕು.
“ಸಂಪರ್ಕ ಪತ್ತೆ ಕೆಲಸವನ್ನು ಗಮನಾರ್ಹವಾಗಿ ಬಲಪಡಿಸಬೇಕಾಗಿದೆ. ಇದನ್ನು ಕೇಂದ್ರೀಕೃತ ಆರೋಗ್ಯ ಸೇತು ಆಪ್ ಮೂಲಕ ಮಾಡುವುದಕ್ಕಿಂತ ವಿಕೇಂದ್ರೀಕೃತ ಸಾಕ್ಷ್ಯ-ಆಧಾರಿತ ಮತ್ತು ಸಮುದಾಯದ ಭಾಗವಹಿಸುವಿಕೆಯಿಂದ ಮಾಡಬೇಕಾಗಿದೆ” ಎಂದು ಎಂದು ಎ.ಐ.ಪಿ.ಎಸ್.ಎನ್. ಹೇಳಿಕೆ ಹೇಳುತ್ತದೆ.
(ಕೃಪೆ: ಅಲೋಕ್ ನಿರಂತರ್/ಫೇಸ್‍ಬುಕ್)
ಲಸಿಕೆಗಳ ಕೊರತೆಯ ಸಮಸ್ಯೆ
ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಾಗ ಲಸಿಕೆ ಕೂಡ ತಕ್ಷಣವೇ ಪರಿಣಾಮಕಾರಿಯಾಗದು ಎಂಬುದು ನಿಜ. ಆದರೆ ಇಲ್ಲಿ ಕೂಡ ಕೇಂದ್ರ ಸರಕಾರ, ದುರದೃಷ್ಟವಶಾತ್, ಲಸಿಕೆ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಲು ಕ್ರಮ ಕೈಗೊಳ್ಳಲಿಲ್ಲ, ಕೊವ್ಯಾಕ್ಸಿನ್‌ನ ತುರ್ತು ಬಳಕೆಯನ್ನಷ್ಟೇ ತ್ವರಿತಗೊಳಿಸಿತು. ಇದು ಕೂಡ ವiಹಾಸೊಂಕು ಇನ್ನೇನು ಮುಗಿಯಿತು ಎಂಬ ನಂಬಿಕೆಯಿಂದ ಮಾಡಿರುವ ಪ್ರಮಾದ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಭಾರತ ಜಗತ್ತಿನಲ್ಲೆ ಅತಿ ದೊಡ್ಡ ಲಸಿಕೆ ತಯಾರಿಕಾ ಸಾಮರ್ಥ್ಯ ಹೊಂದಿರುವ ದೇಶ. ಸುಮಾರು 20 ಲಸಿಕೆ ತಯಾರಕ ಕಂಪನಿಗಳಿವೆ. ಈ ತಯಾರಕರೊಂದಿಗೆ ಕೇಂದ್ರ ಸರಕಾರ ತಾನಾಗಿಯೇ ಮುತುವರ್ಜಿ ವಹಿಸಬೇಕಾಗಿತ್ತು. ಆದರೆ ಅದರ ಬದಲು ಅದು ದೊಡ್ಡ ಬಂಡವಾಳಿಗರೇ ಎಲ್ಲವನ್ನೂ ಮಾಡುತ್ತಾರೆ, ತಾನೇನೂ ಮಾಡಬೇಕಾಗಿಲ್ಲ ಎಂದು ಕುಳಿತುಕೊಂಡಿತು. ಅಷ್ಟೇ ಅಲ್ಲ, ಅಮೆರಿಕ, ಆಸ್ಟ್ರೇಲಿಯ, ಜಪಾನಿನೊಂದಿಗೆ ರಚಿಸಿಕೊಂಡ ‘ಕ್ವಾಡ್’ ಕೂಟದ ಪರವಾಗಿ ಲಸಿಕೆ ಪೂರೈಸುವ ಕೆಲಸವನ್ನು ತಾನು ಮಾಡುವುದಾಗಿ ಹೇಳಿಕೊಂಡು, ಶ್ರೀಮಂತ ದೇಶಗಳಿಂದ ಲಸಿಕೆ ಪಡೆಯದ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾದ ದೇಶಗಳಿಗೆ ಲಸಿಕೆ ಪೂರೈಸಲು ಚೀನಾದೊಂದಿಗೆ ಸ್ಪರ್ಧೆಗಿಳಿಯಿತು. ಈಗ ಎರಡನೇ ಅಲೆ ವಕ್ಕರಿಸಿರುವುದರಿಂದ ಸರಕಾರ ಈ ರಫ್ತುಗಳನ್ನು ತೀವ್ರವಾಗಿ ಕಡಿತಮಾಡಿ ದೇಶದೊಳಗೆ ಲಸಿಕೆ ಪೂರೈಕೆಯನ್ನು ಹೆಚ್ಚಿಸಲು ಒದ್ದಾಡಬೇಕಾಗಿ ಬಂದಿದೆ ಎಂದು ಈ ರಂಗದಲ್ಲಿನ ಪರಿಣಿತರು ಹೇಳುತ್ತಿದ್ದಾರೆ.
(ಕೃಪೆ: ಪಿ.ಮಹಮ್ಮದ್, ಆಂದೋಲನ)
ಲಸಿಕೆ ಉತ್ಪಾದನೆಯನ್ನು ಒಂದೇ ದಿನದಲ್ಲಿ ಹೆಚ್ಚಿಸಲು ಆಗುವುದಿಲ್ಲ. ಉತ್ಪಾದನಾ ಸೌಕರ್ಯಗಳನ್ನು ಹೆಚ್ಚಿಸುವುದು ಮತ್ತು ಒಂದು ಲಸಿಕೆ ಪೂರೈಕೆಯ ಸರಪಳಿಯನ್ನು ನಿರ್ಮಿಸಲು 3-6ತಿಂಗಳು ಬೇಕಾಗುತ್ತದೆ. ಅಲ್ಲದೆ ಭಾರತದ ಹೆಚ್ಚಿನ ಕಂಪನಿಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಬೇಕಾದ ಹಣಕಾಸು ಸಾಮರ್ಥ್ಯವಿಲ್ಲ. ಅವರಿಗೆ ಬ್ಯಾಂಕ್ ಸಾಲಗಳು, ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಬೆಂಬಲ ಮತ್ತು ಲಸಿಕೆಗಳ ಖರೀದಿಯ ಖಾತ್ರಿ ಬೇಕಾಗುತ್ತದೆ. .ಆಗಲೇ, ಲಸಿಕೆ ತಯಾರಿಕೆಯಲ್ಲಿ ತೊಡಗಿರುವ ಎರಡೇ ಭಾರತದ ಕಂಪನಿಗಳು, ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯ(ಎಸ್‌ಐಐ) ಮತ್ತು ಭಾರತ್ ಬಯೊಟೆಕ್ ಹಣಕಾಸು ಬೆಂಬಲವನ್ನು ಕೋರಿವೆ. ಎಸ್‌ಐಐ ಈಗ 6 ಕೊಟಿ ಲಸಿಕೆಗಳನ್ನು ತಯಾರಿಸುತ್ತಿದ್ದು ಇಂತಹ ಬೆಂಬಲ ಸಿಕ್ಕರೆ 20 ಕೋಟಿ ಡೋಸ್‌ಗಳನ್ನು ತಯಾರಿಸುವುದಾಗಿ ಹೇಳಿದೆ. ದೊಡ್ಡ ಬಂಡವಳಿಗರಿಗೆ ವಿನಾಯ್ತಿ/ರಿಯಾಯ್ತಿಗಳನ್ನು ಕೊಡಮಾಡಲು, ಅಹಮದಾಬಾದಿನಲ್ಲಿ ಮೊಟೆರಾ ಸ್ಟೇಡಿಯಂನಂತಹದ್ದಕ್ಕೆ ಮತ್ತಿತರ ‘ಪ್ರತಿಷ್ಠೆ’ ಹೆಚ್ಚಿಸುವ ಕೆಲಸಗಳಿಗೆ ಹಣ ಸುರಿಯುವ, ಆದರೆ ಜನರ ಅಗತ್ಯಗಳನ್ನು ಪೂರೈಸಲು ಹಣ ಕೊಡುವ ಬದಲು ಕಡಿತ ಮಾಡುವ ಆಳ್ವಿಕೆಯಲ್ಲಿ ಇದನ್ನು ನಿರೀಕ್ಷಿಸಬಹುದೇ ಎಂಬುದೇ ಪ್ರಶ್ನೆ.
ಅಲ್ಲದೆ 35 ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಸ್ಫುಟ್ನಿಕ್ ಲಸಿಕೆಯನ್ನು ತಯಾರಿಸಲು ದೇಶದ 5 ತಯಾರಕರು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಇವರು ಒಟ್ಟು 85 ಕೋಟಿ ಡೋಸ್‌ಗಳನ್ನು ತಯಾರಿಸ ಬಲ್ಲರು. ಆದರೂ ಈ ಲಸಿಕೆಗೆ ತುರ್ತು ಬಳಕೆಯ ಅನುಮತಿ ನೀಡಲು ಇಷ್ಟೊಂದು ವಿಳಂಬವೇಕೆ ಎಂದೂ ಪರಿಣಿತರು ಪ್ರಶ್ನಿಸಿದ್ದಾರೆ.
ಲಸಿಕೆ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಲು ಇನ್ನೂ ಒಂದು ದಾರಿಯಿತ್ತು. ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಣು ವಿಜ್ಞಾನ ಸಂಸ್ಥೆ(ಎನ್‌ಐವಿ)ಯ ಜಂಟಿ ಉತ್ಪನ್ನದ ತಯಾರಿಕೆಗೆ ಭಾರತ್ ಬಯೊಟೆಕ್‌ಗೆ ಮಾತ್ರ ಪರವಾನಿಗೆ ನೀಡಲಾಗಿದೆ. ಭಾರತದ ಇತರ ಲಸಿಕೆ ತಯಾರಕ ಕಂಪನಿಗಳಿಗೂ ಇಂತಹ ಪರವನಿಗೆ ನೀಡಬಹುದಾಗಿತ್ತು. ಹಾಫ್ಕಿನ್ ಬಯೋ-ಫಾರ್ಮಸುಟಿಕಲ್ ಕಾರ್ಪೊರೇಷನ್(ಜೈವಿಕ ಔಷಧಿ ನಿಗಮ)ನಂತಹ ಸಾರ್ವಜನಿಕ ವಲಯದ ಘಟಕಗಳನ್ನು ಕೂಡ ಈ ಪರಿಯೋಜನೆಯೊಳಕ್ಕೆ ತರಬಹುದಿತ್ತು ಎಂದು ಪರಿಣಿತರು ಹೇಳುತ್ತಾರೆ.
‘ಲಸಿಕೆ ರಾಷ್ಟವಾದ’ದ ಅಪಾಯ
ಈ ಸಂದರ್ಭದಲ್ಲಿ ‘ಲಸಿಕೆ ರಾಷ್ಟವಾದದ ಅಪಾಯದತ್ತವೂ ಎ.ಐ.ಪಿ.ಎಸ್.ಎನ್. ಗಮನ ಸೆಳೆದಿದೆ. ಅಮೆರಿಕಾದಲ್ಲಿ ಕಂಡು ಬರುತ್ತಿರುವ ಇಂತಹ ‘ಲಸಿಕೆ ರಾಷ್ಟವಾದ’ಮತ್ತು ಪಕ್ಕಾ ವ್ಯಾಪಾರೀ ಪ್ರವೃತ್ತಿಯ ಕಸಮಿಶ್ರಣದ ಪ್ರಭಾವ ನಮ್ಮ ಆಳರಸರನ್ನೂ ಬಾಧಿಸುವಂತೆ ಕಾಣುತ್ತಿದೆ. ಇದೇ ಸೀರಂ ಇನ್ಸ್ಟಿಟ್ಯೂಟ್ ಮತ್ತು ಜಾನ್ಸನ್ ಅಂಡ್ ಜಾನ್ಸನ್‌ನ ಲಸಿಕೆಯನ್ನೂ ಭಾರತದಲ್ಲಿ ತಯಾರಿಸಲು ಅನುಮತಿ ಪಡೆದಿರುವ ಬಯೊಲಾಜಿಕಲ್ ಇ ಮುಂತಾದ ಕಂಪನಿ ಗಳಿಗೆ ಭಾರತದಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಅಡ್ಡಿಯಾಗಿರುವ ಸಂಗತಿಗಳು ಎಂದು ಎ.ಐ.ಪಿ.ಎಸ್.ಎನ್. ಹೇಳಿದೆ. ಈ ತಯಾರಕರು ವಿಶೇಷ ಸ್ವರೂಪಗಳ ಕಚ್ಚಾಸಾಮಗ್ರಿಗಳು ಮತ್ತು ವಿಶಿಷ್ಟ ರಾಸಾಯನಿಕಗಳನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಅದು ಇಂತಹ ರಫ್ತುಗಳಿಗೆ ತನ್ನ ರಕ್ಷಣಾ ಉತ್ಪಾದನಾ ಕಾಯ್ದೆಯ ಅಡಿಯಲ್ಲಿ ನಿಷೇಧ ಹಾಕಿದೆ. ಅದನ್ನು ತೆಗೆಸಬೇಕಾಗಿದೆ. ಆದರೆ ತನ್ನ ದೇಶದಲ್ಲಿ ಲಸಿಕೆಗಳ ರಫ್ತಿಗೆ ಮಿತಿ ಹೇರಿರುವ ಭಾರತ ಅಮೆರಿಕಾ ಮತ್ತಿತರ ದೇಶಗಳಂತಹ ನಿಷೇಧವನ್ನು ತೆಗೆಸಲು ನೈತಿಕ ಆಧಾರ ಇಲ್ಲದಂತಾಗಿದೆ ಎಂದು ಎ.ಐ.ಪಿ.ಎಸ್.ಎನ್. ಹೇಳಿದೆ.
ಭಾರತ ಜಾಗತಿಕ ಲಸಿಕೆ ಪ್ರಯತ್ನಗಳಲ್ಲಿ ನೆರವಾಗುವ ಉತ್ತಮ ದಾಖಲೆ ಹೊಂದಿದ್ದರೂ, ಅಮೆರಿಕ, ಯುರೋಪಿಯನ್ ಒಕ್ಕೂಟಗಳಂತಹ ಶ್ರೀಮಂತ ದೇಶಗಳು ಲಸಿಕೆಗಳ ಅನಗತ್ಯ ದಾಸ್ತಾನುಗಳನ್ನು ಪೇರಿಸಿಕೊಂಡು ಬಡದೇಶಗಳಿಗೆ ಇಲ್ಲದಂತೆ ಮಾಡುವುದನ್ನು ನಿಲ್ಲಿಸಲು ಪ್ರಯತ್ನಿಸಿಲ್ಲ ಎಂದೂ ಎ.ಐ.ಪಿ.ಎಸ್.ಎನ್. ಖೇದ ವ್ಯಕ್ತಪಡಿಸಿದೆ.
ನಮಗೆ ಬೇಕಿರುವುದ ಆಸ್ಪತ್ರೆಗಳಲ್ಲ……….ಇನ್ನಷ್ಟು ಹಸುವಿಜ್ಞಾನ ಸಂಸ್ಥೆಗಳು!
(ಕೃಪೆ: ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ)