ಇಂದು ದಾಖಲಾದ ಕೋವಿಡ್‌ ಪ್ರಕರಣಗಳ ವಿವರ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿಯೂ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ವೇಗವಾಗಿ ಹೆಚ್ಚಾತ್ತಿರುವ ಹಿನ್ನೆಲೆಯಲ್ಲಿ ಜನತೆ ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ಬರಬೇಕೆಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಮನವಿ ಮಾಡಿದ್ದಾರೆ. ಪ್ರಸ್ತುತ ವೆಂಟಿಲೇಟರ್‌ಗಳ ಕೊರತೆಯಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ.

“ನಮಗೆ 13,000 ಹಾಸಿಗೆಗಳಿವೆ. ವೆಂಟಿಲೇಟರ್‌ಗಳ ಕೊರತೆಯಿಲ್ಲ. ದೆಹಲಿ ಮತ್ತು ಇತರ ರಾಜ್ಯಗಳ ರೋಗಿಗಳನ್ನು ದಾಖಲಿಸಲಾಗುತ್ತಿದೆ. ಕೇಂದ್ರವು 1,100 ಹಾಸಿಗೆಗಳನ್ನು ಒದಗಿಸಿದೆ. ಇನ್ನಷ್ಟು ಹಾಸಿಗೆಗಳನ್ನು ಒದಗಿಸಬೇಕೆಂದು ಮಾತುಕತೆ ನಡೆಸಿದ್ದೇವೆ.  ಅಲ್ಲದೆ,  5525 ಕೋವಿಡ್ ಆರೈಕೆ ಕೇಂದ್ರಗಳು ಸ್ಥಾಪಿಸಲಾಗಿದೆ. ಜೊತೆಯಲ್ಲಿ ಔತಣಕೂಟ, ಹೋಟೆಲ್‌ಗಳನ್ನು ಶೀಘ್ರದಲ್ಲೇ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

ಇದನ್ನು ಓದಿ : ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?

ಮಹರಾಷ್ಟ್ರದಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಏಪ್ರಿಲ್ 14 ರಿಂದ ಮೇ 8 ರವರೆಗೆ ರಾಜ್ಯದ ಜನರ ಸಂಚಾರಕ್ಕೆ ಕರ್ಫ್ಯೂ ತರಹದ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಆದರೆ ಅದನ್ನು ಲಾಕ್ ಡೌನ್ ಎಂದು ಕರೆಯಲಿಲ್ಲ.

38 ನಿಮಿಷಗಳ ತಮ್ಮ ಭಾಷಣದಲ್ಲಿ ಠಾಕ್ರೆ ಅವರು ಏಪ್ರಿಲ್ 6 ರಿಂದ ಜಾರಿಗೆ ಬಂದಿದ್ದಕ್ಕಿಂತ ಕಠಿಣವಾದ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಸೆಕ್ಷನ್ 144 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತಿದ್ದು ಇದು ಇಂದು ರಾತ್ರಿಯಿಂದಲೇ ರಾಜ್ಯದಲ್ಲಿ ಜಾರಿಗೊಳ್ಳಲಿದೆ.

ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಿದ್ದು. ವಿವಿಧ ಕ್ಷೇತ್ರಗಳು ಮತ್ತು ಕೆಲವು ವಿಭಾಗಗಳಲ್ಲಿ ಪರಿಣಾಮ ಬೀರುವವರಿಗೆ 5,476 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ.

ಇಡೀ ದೇಶದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 1,84,372 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳು 1,38,73,825 ಕ್ಕೆ ಏರಿಕೆ ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ದೇಶದಲ್ಲಿ ಒಂದೇ ದಿನದಲ್ಲಿ ಕೊರೊನಾ ವೈರಸ್‌ ನಿಂದ 1,027  ಜನ ಮೃತಪಟ್ಟಿದ್ದು, ಕಳೆದ ಐದು ತಿಂಗಳಲ್ಲಿ ಒಂದೇ ದಿನದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 1000ದ ಗಡಿ ದಾಟಿದೆ. ಒಟ್ಟಾರೆ ಸಾವಿನ ಸಂಖ್ಯೆ 1,72,085ಕ್ಕೆ ಏರಿದೆ.

ಇದನ್ನು ಓದಿ: ಕೊರೊನಾ ನಿಯಂತ್ರಣ: ತಾಂತ್ರಿಕ ಸಲಹಾ ಸಮಿತಿಯಿಂದ 13 ಅಂಶಗಳ ಶಿಫಾರಸ್ಸು

ನೆನ್ನೆ 82,339 ಜನ ಗುಣಮುಖರಾಗಿದ್ದಾರೆ.  ಸಕ್ರಿಯ ಪ್ರಕರಣಗಳ ಸಂಖ್ಯೆ 13,65,704 ಆಗಿದ್ದರೆ, 1,23,36,036 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ಕನಿಷ್ಠ 11,11,79,578 ಜನರಿಗೆ ಲಸಿಕೆ ನೀಡಲಾಗಿದೆ. ಒಟ್ಟು ಪ್ರಕರಣಗಳು ಹಾಗೂ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಭಾರತವು ಈಗಾಗಲೇ ಬ್ರೆಜಿಲ್‌ ಹಿಂದಕ್ಕಿಟ್ಟು ಎರಡನೇ ಸ್ಥಾನಕ್ಕೇರಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 60,212, ಉತ್ತರ ಪ್ರದೇಶ-17,963, ಛತ್ತೀಸ್‌ಘಡ-15,121, ದೆಹಲಿ-13,468, ಮಧ್ಯಪ್ರದೇಶ-8,998, ಕರ್ನಾಟಕ-8,778, ಕೇರಳ-7,515, ತಮಿಳುನಾಡು-6,984, ಗುಜರಾತ್-6,690‌, ರಾಜಸ್ಥಾನ-5,528 ಕೋವಿಡ್‌ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದಲ್ಲಿ ನೆನ್ನೆ 8778 ಕೋವಿಡ್‌ ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು ಕೋವಿಡ್‌ ಸೋಂಕಿನಿಂದ 67 ಜನ ಮೃತಪಟ್ಟಿರುತ್ತಾರೆ. ನೆನ್ನೆ ಒಂದೇ ದಿನ 6079 ಜನ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. ಇದುವರೆಗೆ ರಾಜ್ಯದಲ್ಲಿ 10,83,647 ಪ್ರಕರಣಗಳು ದಾಖಲಾಗಿದ್ದು, 9,92,003 ಜನ ಇದುವರೆಗೆ ಗುಣಮುಖರಾಗಿದ್ದಾರೆ. ಅಲ್ಲದೆ, ಇದುವರೆ ಒಟ್ಟಾರೆಯಾಗಿ 13,008 ಜನ ರಾಜ್ಯದಲ್ಲಿ ನಿಧನರಾಗಿದ್ದಾರೆ. ಸದ್ಯ 78,617 ಪ್ರಕರಣಗಳು ಸಕ್ರಿಯವಾಗಿವೆ.

Donate Janashakthi Media

Leave a Reply

Your email address will not be published. Required fields are marked *