ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ರೈತರ ಎಚ್ಚರಿಕೆ

ನವದೆಹಲಿ : ಮೂರು ಕೃಷಿ ಕಾಯ್ದೆಗಳ ವಿರುದ್ಧ ನಾಲ್ಕೂವರೆ ತಿಂಗಳಿಂದ ಹೋರಾಡುತ್ತಿರುವ ರೈತರು ದಿಲ್ಲಿ ರಾಜಧಾನಿ ಪ್ರದೇಶದ ಜೀವನರೇಖೆಯಾದ ಪಶ್ಚಿಮ ಹೊರವಲಯ ಹೆದ್ದಾರಿ ಅಥವ ಕುಂಡ್ಲಿ- ಮನೇಸರ್-ಪಲ್ವಲ್ (ಕೆಎಂಪಿ) ಹೆದ್ದಾರಿ ತಡೆ ನಡೆಸಿ ಕೇಂದ್ರ ಸರಕಾರಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟರು.

ಇದನ್ನು ಓದಿ: ತಟ್ಟೆ, ಲೋಟ ಬಾರಿಸಿ ವಿನೂತನವಾಗಿ ಪ್ರತಿಭಟಿಸಿದ ಸಾರಿಗೆ ನೌಕರರು

ಸಂಯುಕ್ತ ಕಿಸಾನ್‍ ಮೋರ್ಚಾದ ಕರೆಯ ಮೇರೆಗೆ ಎಪ್ರಿಲ್‍ 10ರಂದು  ನಿಗದಿತ ಬೆಳಿಗ್ಗೆ 8 ಗಂಟೆಯ ಮೊದಲೇ  ನೆರದ ರೈತರು ಈ ಹೆದ್ದಾರಿಯಲ್ಲಿ ಹೋಗುವ ಎಲ್ಲ ಓಡಾಟಗಳನ್ನು ಸ್ಥಬ್ಧಗೊಳಿಸಿದರು, ಕೇವಲ ಅಂಬ್ಯುಲೆನ್ಸ್  ಮತ್ತಿತರ  ತುರ್ತು ವಾಹನಗಳಿಗೆ ಮಾತ್ರ ಅವಕಾಶ ಕೊಟ್ಟರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಹಿರಿಯ ಮತ್ತು ಮಹಿಳಾ ರೈತರನ್ನು ಸುಡುಬಿಸಿಲಿನಲ್ಲಿ ತಂಪಾಗಿಡಲು ಪಾನಕಗಳನ್ನು ಹಂಚುತ್ತ ಇಡೀದಿನ ರಸ್ತೆ ತಡೆ ನಡೆಯುವಂತೆ ಮಾಡಿದರು.

ಸರಕಾರ ತಬ್ಬಿಬ್ಬುಗೊಂಡಿದೆ

ಹೆದ್ದಾರಿ ತಡೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತಾಡುತ್ತ ರೈತ ಮುಖಂಡರು ಕೇಂದ್ರೀಯ ಏಜೆನ್ಸಿಗಳ ಬಂಟರು ಚಳುವಳಿಗೆ ಕೆಟ್ಟ ಹೆಸರು ತರಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ, ಈ ಬಗ್ಗೆ ಎಚ್ಚರದಿಂದಿರಬೇಕು ಎಂದರು. “ಸುಮಾರು ಐದು ತಿಂಗಳ ಕಾಲ ಈ ಹೋರಾಟವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ, ಈ ಹೋರಾಟ ಪಂಜಾಬ್‍-ಹರ್ಯಾಣಗಳ ಜಿಲ್ಲೆ ಮೀರಿ ಇಡೀ ದೇಶವನ್ನು ವ್ಯಾಪಿಸಿದೆ. ಇದು ಸರಕಾರವನ್ನು ತಬ್ಬಿಬ್ಬುಗೊಳಿಸಿದೆ, ಚುನಾವಣಾ ಫಲಿತಾಂಶಗಳ ನಂತರ ದಾಳಿಗಳು ಇನ್ನಷ್ಟು ಹೆಚ್ಚಲಿವೆ, ಇದಕ್ಕೆ ಸಿದ್ಧವಾಗಿರಬೇಕು” ಎಂದರು.

ಮೊತ್ತಮೊದಲ ಬಾರಿಗೆ ಕಾರ್ಪೊರೇಟ್‍ಗಳ ವಿರುದ್ಧ ಇಂತಹ ಸಮರವನ್ನು ಇಡೀ ಜಗತ್ತು ಹೆಮ್ಮೆ ಮತ್ತು ಆಶಾಭಾವನೆಯಿಂದ ನೋಡುತ್ತಿದೆ. ಈ ಆಂದೋಲನ ಜಾತಿ, ಧರ್ಮ, ಪ್ರದೇಶಗಳನ್ನು ಮೀರಿ ಜನಗಳನ್ನು ಒಂದುಗೂಡಿಸಿದೆ. ಹೊಡೆದು, ಬಡಿದು, ಚಚ್ಚಿ, ಅಜೇಯ ಎನಿಸಿಕೊಂಡು ಮುಂದೊತ್ತುತ್ತಿದ್ದ ಹಿಂದುತ್ವ ಪಡೆಗಳನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಇದನ್ನು ಓದಿ: ಜೀತಕ್ಕಷ್ಟೇ ವಿಮುಕ್ತಿ, ಸೆರೆಯಲ್ಲೇ ಉಳಿದ ಬದುಕು

ಇದು ಒಂದು ರಾಜ್ಯಕ್ಕೆ ಮಾತ್ರ ಸೇರಿದ ಚಳುವಳಿ ಎಂದಿದ್ದವರು  ಕೃಷಿ ಕಾಯ್ದೆಗಳ ಜಾರಿಯನ್ನು ಮಾಡಲಾಗಲಿಲ್ಲ. ಈಗ ಕಾರ್ಮಿಕ ಸಂಹಿತೆಗಳನ್ನೂ ಜಾರಿ ಮಾಡಲಾಗಿಲ್ಲ. ರಸಗೊಬ್ಬರ ಬೆಲೆಯೇರಿಕೆಗಳನ್ನೂ ತಡೆಹಿಡಿಯಬೇಕಾಗಿ ಬಂದಿದೆ. ಆದ್ದರಿಂದ ಬಿಕ್ಕಟ್ಟಿನಲ್ಲಿರುವುದು ಈ ಹೋರಾಟವಲ್ಲ, ಸರಕಾರವೇ ಎಂಬುದು ಅವರ ವಿಶ್ಲೇಷಣೆ.

ದಲಿತರನ್ನು ಎತ್ತಿಕಟ್ಟುವ ಹುನ್ನಾರ

ಎಪ್ರಿಲ್‍ 14ರಂದು ಸಿಂಘು ಗಡಿಯ ಬಳಿ ಹರ್ಯಾಣದ ಮುಖ್ಯಮಂತ್ರಿ  ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಯೋಜಿಸಿದೆ. ಉಪಮುಖ್ಯಂತ್ರಿಗಳು ಕೂಡ ಇನ್ನೊಂದೆಡೆಯಲ್ಲಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರಂತೆ. ಬಿಜೆಪಿ-ಜೆಜೆಪಿ ಶಾಸಕರನ್ನು ಬಹಿಷ್ಕರಿಸಲು  ರೈತ ಸಂಘಟನೆಗಳು ಕರೆ ನೀಡಿರುವುದನ್ನು ಅವರು ದಲಿತ-ವಿರೋಧಿಗಳು ಎಂದು ಚಿತ್ರಿಸಲು ಬಳಸುವ ಹುನ್ನಾರವಿದು.

ಬಿಜೆಪಿ ಸರಕಾರಗಳ ದಲಿತ-ವಿರೋಧಿ ನಡೆಗಳು ಈಗ ಎಲ್ಲರಿಗೂ ತಿಳಿದಿದೆ. ಆದ್ದರಿಂದ ಹರ್ಯಾಣದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮುಂತಾದವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಬೇಕು ಎಂದು ರೈತ ಸಂಘಟನೆಗಳು ಕರೆ ನೀಡಿವೆ.

Donate Janashakthi Media

Leave a Reply

Your email address will not be published. Required fields are marked *