ಮಿತವ್ಯಯ-ವಿತ್ತ ನೀತಿಗಳನ್ನು ಪಾಲಿಸುವಂತೆ ಪಟ್ಟು ಹಿಡಿಯುವ ಐಎಂಎಫ್ ಕೋವಿಡ್ ಸಂದರ್ಭದಲ್ಲಿ ರಕ್ಷಣಾ ಮತ್ತು ಚೇತರಿಕೆಯ ಪ್ಯಾಕೇಜ್‌ಗಳನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ತೃತೀಯ ಜಗತ್ತಿನ ದೇಶಗಳು ಕೈಗೊಂಡ ಹೆಚ್ಚು ಹೆಚ್ಚು ಸಾರ್ವಜನಿಕ ವೆಚ್ಚಗಳನ್ನೂ ಸಹ ಬೆಂಬಲಿಸಿದೆ. ಆದರೆ, ತೃತೀಯ ಜಗತ್ತಿನ ದೇಶಗಳಿಗೆ ಸಾಲ ಮಂಜೂರು ಮಾಡುವ ಸಮಯದಲ್ಲಿ, ಅದು ಹಿಂದಿನಂತೆ ಈ ದೇಶಗಳ ಮೇಲೆ ಮಿತವ್ಯಯ-ವಿತ್ತ ನೀತಿಗಳನ್ನು ಮತ್ತೊಮ್ಮೆ ಹೇರಿ ತನ್ನ ನಿಜಬಣ್ಣವನ್ನು ತೋರಿಸಿದೆ. ಮುಂದುವರಿದ ಮತ್ತು ಹಿಂದುಳಿದ ದೇಶಗಳ ಬಗ್ಗೆ ಐಎಂಎಫ್ ಅಳವಡಿಸಿಕೊಂಡ ವಿಭಿನ್ನ ನಿಲುವುಗಳು ಸಾಂಕ್ರಾಮಿಕದ ಆಚೆಗೂ ವಿಸ್ತರಿಸುವ ಸಾಧ್ಯತೆ ಇದೆ. ನವ ಉದಾರವಾದಿ ಬಂಡವಾಳಶಾಹಿಯು ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಅನುವಾಗುವಂತಹ ಒಂದು ಹೊಸ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಈ ಇಬ್ಬಂದಿ ನೀತಿಯೇ ತಳಹದಿಯಾಗಬಹುದು. ಇದು ಮೂರನೇ ಜಗತ್ತಿನ ಅರ್ಥವ್ಯವಸ್ಥೆಗಳಿಂದ ಮುಂದುವರಿದ ದೇಶಗಳನ್ನು ಒಂದು ಕಾವಲು ಬೇಲಿಯ ರೀತಿಯಲ್ಲಿ ಕಾಯುವ ಕಾರ್ಯತಂತ್ರವೂ ಆಗಬಹುದು ಎಂಬುದನ್ನು ಆರ್ಥಿಕ ತಜ್ಞರಾದ ಪ್ರೊ. ಪ್ರಭಾತ್ ಪಟ್ನಾಯಕ್ ವಿವರಿಸಿದ್ದಾರೆ.
ಮೂರನೇ ಜಗತ್ತಿನ ದೇಶಗಳಿಗೆ ಹೋಲಿಸಿದರೆ, ಕೋವಿಡ್-19ರ ಬಿಕ್ಕಟ್ಟಿಗೆ ಮುಂದುವರಿದ ದೇಶಗಳು ಸ್ಪಂದಿಸಿರುವ ರೀತಿಯು ಬಹಳ ಭಿನ್ನವಾಗಿದೆ. ಜನರ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಅರ್ಥವ್ಯವಸ್ಥೆಯ ಚೇತರಿಕೆಗಾಗಿ ಮುಂದುವರಿದ ದೇಶಗಳು ಗಣನೀಯ ಪ್ರಮಾಣದ ವಿತ್ತೀಯ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿರುವ ಸಂದರ್ಭದಲ್ಲಿ, ತೃತೀಯ ಜಗತ್ತಿನ ದೇಶಗಳು ಮಿತವ್ಯಯ-ವಿತ್ತ ನೀತಿಗಳ ಹಿಡಿತಕ್ಕೆ ಸಿಕ್ಕಿ ಬಿದ್ದಿವೆ. ಭಾರತದ ಪರಿಹಾರ ಪ್ಯಾಕೇಜ್ ಅತ್ಯಂತ ನಿಕೃಷ್ಟವಾಗಿದ್ದು, ಗಾತ್ರದಲ್ಲಿ ಜಿಡಿಪಿಯ ಶೇ. ಒಂದಕ್ಕಿಂತ ಬಹುಷಃ ಹೆಚ್ಚಿಗೆ ಇರಲಿಕ್ಕಿಲ್ಲ. ತೃತೀಯ ಜಗತ್ತಿನ ಉಳಿದ ದೇಶಗಳ ಪ್ಯಾಕೇಜ್‌ಗಳೂ ಸಹ ಅಷ್ಟೇನೂ ಉತ್ತಮವಾಗಿಲ್ಲ. ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ಅಮೆರಿಕಾದ ಟ್ರಂಪ್ ಸರ್ಕಾರವು 2020ರಲ್ಲಿ ಜಿಡಿಪಿಯ ಶೇ.10ರಷ್ಟು ಅಂದರೆ, 1.9 ಟ್ರಿಲಿಯನ್ ಡಾಲರ್ ಮೊತ್ತದ ರಕ್ಷಣಾ ಮತ್ತು ಚೇತರಿಕೆಯ ಪ್ಯಾಕೇಜನ್ನು ಬಿಡುಗಡೆ ಮಾಡಿತ್ತು. ನಂತರ, ಈ ವರ್ಷದ ಆರಂಭದಲ್ಲಿ ಬಿಡೆನ್ ಸರ್ಕಾರವು 2 ಟ್ರಿಲಿಯನ್ ಡಾಲರ್‌ಗಳಷ್ಟು ಮೊತ್ತದ ಇನ್ನೊಂದು ಪ್ಯಾಕೇಜನ್ನು ಘೋಷಿಸಿದ್ದು, ಅದರಲ್ಲಿ ಕನಿಷ್ಠ 1 ಟ್ರಿಲಿಯನ್ ಡಾಲರ್‌ಗಳಷ್ಟು ಹಣ ಜನರಿಗೆ ನೇರ ವರ್ಗಾವಣೆಯಾಗುತ್ತದೆ. ಈ ಎರಡು ಪ್ಯಾಕೇಜ್ ಗಳ ಒಟ್ಟು ಮೊತ್ತವು ಅಮೇರಿಕಾದ ಜಿಡಿಪಿಯ ಸುಮಾರು ಶೇ.20ರಷ್ಟಾಗುತ್ತದೆ. ಯೂರೋಪಿನ ಒಕ್ಕೂಟವೂ ಸಹ ಗಣನೀಯ ಪ್ರಮಾಣದ ಆರ್ಥಿಕ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದೆ.
ಹೇಳುವುದು ಶಾಸ್ತ್ರ, ತಿನ್ನುವುದು ಬದನೆಕಾಯಿ
ಗಮನಾರ್ಹವಾದ ಅಂಶವೆಂದರೆ, ಮಿತವ್ಯಯ-ವಿತ್ತ ನೀತಿಗಳನ್ನು ಪಾಲಿಸುವಂತೆ ಪಟ್ಟು ಹಿಡಿಯುವ ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ), ತನ್ನ ಎಂದಿನ ಹಠಮಾರಿ ಧೋರಣೆಯನ್ನು ಬಿಟ್ಟು, ರಕ್ಷಣಾ ಮತ್ತು ಚೇತರಿಕೆಯ ಪ್ಯಾಕೇಜುಗಳನ್ನು ಸಕ್ರಿಯವಾಗಿ ಬೆಂಬಲಿಸಿದೆ ಮತ್ತು ಪ್ರೋತ್ಸಾಹಿಸಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ತೃತೀಯ ಜಗತ್ತಿನ ದೇಶಗಳು ಕೈಗೊಂಡ ಹೆಚ್ಚು ಹೆಚ್ಚು ಸಾರ್ವಜನಿಕ ವೆಚ್ಚಗಳನ್ನೂ ಸಹ ಬೆಂಬಲಿಸಿದೆ. ಆದರೆ, ಆಕ್ಸ್‌ಫಾಮ್ ಎಂಬ ಒಂದು ಸರ್ಕಾರೇತರ ಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ಕೋವಿಡ್-19ರ ಕಾಲದಲ್ಲಿ ತೃತೀಯ ಜಗತ್ತಿನ ದೇಶಗಳಿಗೆ ಸಾಲ ಮಂಜೂರು ಮಾಡುವ ಸಮಯದಲ್ಲಿ, ಐಎಂಎಫ್ ತನ್ನ ಬಾಯಿ ಮಾತಿನ ಉಪಚಾರದ ಮಾತುಗಳಿಗೆ ತದ್ವಿರುದ್ಧವಾಗಿ, ಈ ದೇಶಗಳ ಮೇಲೆ ಮಿತವ್ಯಯ-ವಿತ್ತ ನೀತಿಗಳನ್ನು ಮತ್ತೊಮ್ಮೆ ಹೇರಿದೆ!
ಆಕ್ಸ್‌ಫಾಮ್‌ನ ವಿಶ್ಲೇಷಣೆಯ ಪ್ರಕಾರ, ಮಾರ್ಚ್ 2020ರ ನಂತರ 81 ದೇಶಗಳಿಗೆ ಐಎಂಎಫ್ ಮಂಜೂರು ಮಾಡಿರುವ 91 ಸಾಲಗಳ ಪೈಕಿ, 76 ಪ್ರಕರಣಗಳಲ್ಲಿ ಮಿತವ್ಯಯ-ವಿತ್ತ ನೀತಿಗಳನ್ನು ಪಾಲಿಸುವಂತೆ ಹೇಳಿದೆ. ಈ ನೀತಿಗಳ ಪ್ರಕಾರ, ಸರ್ಕಾರವು ಸಾರ್ವಜನಿಕ ವೆಚ್ಚಗಳನ್ನು ಕಡಿತಗೊಳಿಸಬೇಕಾಗುತ್ತದೆ. ಅಂದರೆ, ಸಾರ್ವಜನಿಕ ಆರೋಗ್ಯ ಸೇವೆಯ ವೆಚ್ಚಗಳನ್ನು ಕಡಿತಗೊಳಿಸುವ, ಪಿಂಚಣಿಯ ಮೊತ್ತವನ್ನು ಇಳಿಸುವ, ವೈದ್ಯರು, ದಾದಿಯರು ಮತ್ತು ಇತರರ ಆದಾಯವನ್ನು ವೇತನ ಸ್ಥಗಿತದ ಅಥವಾ ಕಡಿತದ ಮೂಲಕ ಇಳಿಕೆ ಮಾಡುವ ಹಾಗೂ ನಿರುದ್ಯೋಗ ಭತ್ಯೆ ಮತ್ತು ಅನಾರೋಗ್ಯ-ವೇತನಗಳನ್ನು ಕಡಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಆಕ್ಸ್‌ಫಾಮ್ ಈ ಸಂಬಂಧವಾಗಿ ಅನೇಕ ಉದಾಹರಣೆಗಳನ್ನು ಕೊಟ್ಟಿದೆ. ಇತ್ತೀಚೆಗೆ, ಈಕ್ವೆಡಾರ್ ದೇಶಕ್ಕೆ 6.5 ಬಿಲಿಯನ್ (ಶತಕೋಟಿ) ಡಾಲರ್ ಸಾಲ ಕೊಡಲು ಐಎಂಎಫ್ ಸಮ್ಮತಿಸಿತ್ತು, ಆದರೆ, ಅದರಲ್ಲಿದ್ದ ಮೋಸವೆಂದರೆ, ಬಡಜನರು ಹೆಚ್ಚಾಗಿ ಬಳಸುವ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸುವ, ನಿರುದ್ಯೋಗಿಗಳಿಗೆ ನಗದು ವರ್ಗಾವಣೆಯನ್ನು ನಿಲ್ಲಿಸುವ ಮತ್ತು ಆರೋಗ್ಯ ರಕ್ಷಣೆಯ ಮೇಲಿನ ವೆಚ್ಚಗಳನ್ನು ಕಡಿತಗೊಳಿಸುವ “ಸಲಹೆ”ಯನ್ನು ಈಕ್ವೆಡಾರ್‌ಗೆ ಕೊಡಲಾಗಿತ್ತು. ಅಂಗೋಲ ಮತ್ತು ನೈಜೀರಿಯಾ ಸೇರಿದಂತೆ ಒಂಭತ್ತು ದೇಶಗಳಿಗೆ, ಬಡವರು ಕೊಳ್ಳುವ ಆಹಾರ ಪದಾರ್ಥಗಳು, ಬಟ್ಟೆ-ಬರೆ ಮುಂತಾದ ಗೃಹೋಪಯೋಗಿ ವಸ್ತುಗಳ ಮೇಲಿನ ಮೌಲ್ಯವರ್ಧಿತ ತೆರಿಗೆಗಳನ್ನು ಹೆಚ್ಚಿಸುವಂತೆ ಐಎಂಎಫ್ ಹೇಳಿದೆ. ಬಾರ್ಬಡೋಸ್, ಎಲ್ ಸಾಲ್ವಡಾರ್, ಲೆಸೊಥೋ ಮತ್ತು ಟ್ಯುನೀಷಿಯಾ ಸೇರಿದಂತೆ ಹದಿನಾಲ್ಕು ದೇಶಗಳಲ್ಲಿ ಸಾರ್ವಜನಿಕ ವಲಯದ ವೇತನ ಮತ್ತು ಉದ್ಯೋಗಗಳನ್ನು ಕಡಿತಗೊಳಿಸುವ ಅಥವಾ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಪರಿಣಾಮವಾಗಿ, ಸರ್ಕಾರಿ ವೈದ್ಯರು, ದಾದಿಯರು ಮತ್ತು ಆರೋಗ್ಯ-ಆರೈಕೆಯ ಇತರ ಕೆಲಸಗಾರರ ಸಂಖ್ಯೆ ಇಳಿಯುತ್ತದೆ. ಜನಸಂಖ್ಯೆಯ ತಲಾವಾರು ಲೆಕ್ಕದಲ್ಲಿ ಈಗಾಗಲೇ ಅತ್ಯಂತ ಕಡಿಮೆ ಸಂಖ್ಯೆಯ ಇಂತಹ ಸಿಬ್ಬಂದಿಗಳನ್ನು ಹೊಂದಿರುವ ದೇಶಗಳಲ್ಲಿ ಇದು ಹೆಚ್ಚು ಸಾವು-ನೋವುಗಳಿಗೆ ಕಾರಣವಾಗುತ್ತದೆ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಈ ಕಠಿಣ ಮಿತವ್ಯಯ-ವಿತ್ತ ನೀತಿಗಳನ್ನು ಪಾಲಿಸಲೇಬೇಕೆಂಬ ಐಎಂಎಫ್‌ನ ಒತ್ತಾಯದ ಧೋರಣೆಯು ಎರಡು ಅಂಶಗಳನ್ನು ಸ್ಪಷ್ಟಪಡಿಸುತ್ತದೆ: ಮೊದಲನೆಯದಾಗಿ, ಶ್ರೀಮಂತ ಮತ್ತು ಬಡ ದೇಶಗಳ ನಡುವೆ ಐಎಂಎಫ್ ತಾರತಮ್ಯ ಮಾಡುತ್ತದೆ. ಶ್ರೀಮಂತ ದೇಶಗಳು ಈ ಕಠಿಣ ಮಿತವ್ಯಯ-ವಿತ್ತ ನೀತಿಗಳನ್ನು ಪಾಲಿಸದಿರುವ ಕ್ರಮವನ್ನು ಅದು ಸಹಿಸಿಕೊಳ್ಳುತ್ತದೆ, ಆದರೆ, ಹಿಂದುಳಿದ ದೇಶಗಳಿಗೆ ಅದೇ ರಿಯಾಯ್ತಿ ತೋರಿಸಲು ಐಎಂಎಫ್ ತಯಾರಿಲ್ಲ. ಎರಡನೆಯದಾಗಿ, ಐಎಂಎಫ್ ಬೋಧಿಸುವ ನೀತಿಗಳು ಅಪರೂಪಕ್ಕೊಮ್ಮೆ ನ್ಯಾಯಸಮ್ಮತವಾಗಿ ಕಂಡರೂ ಸಹ, ತನ್ನ ಕಠಿಣ ಮಿತವ್ಯಯ-ವಿತ್ತ ನೀತಿಗಳ ಮತ್ತು ಖಾಸಗೀಕರಣದ ಅಜೆಂಡಾವನ್ನು ಐಎಂಎಫ್ ಮೂರನೇ ಜಗತ್ತಿನ ದೇಶಗಳ ಮೇಲೆ ಅನಿವಾರ್ಯವಾಗಿ ಹೇರುತ್ತದೆ. ತನ್ನ ಮಾಮೂಲು ಷರತ್ತುಗಳಿಗೆ ವ್ಯತಿರಿಕ್ತವಾಗಿ ಕಾಣುವ ಕೆಲವು ಸಾಂದರ್ಭಿಕ “ವಿವೇಕಯುತ” ಹೇಳಿಕೆಗಳ ಮೂಲಕ ಐಎಂಎಫ್ ಮಾನವೀಯವಾಗಿ ಬದಲಾಗುತ್ತಿದೆ ಎಂಬ ನಂಬಿಕೆಯನ್ನು ಕೆಲವು ಪ್ರಗತಿಪರ ಅರ್ಥಶಾಸ್ತ್ರಜ್ಞರಲ್ಲಿ ಮೂಡಿಸಲು ಪ್ರಯತ್ನಿಸುತ್ತದೆ ಮತ್ತು ಇಂತಹ “ವಿವೇಕಯುತ” ಹೇಳಿಕೆಗಳು ಐಎಂಎಫ್‌ನ ಅಧಿಕಾರಿಗಳ ಸಂಶೋಧನಾ ಲೇಖನಗಳ ರೂಪದಲ್ಲಿ ಐಎಂಎಫ್‌ನ ನಿಯತಕಾಲಿಕದಲ್ಲಿ ಪ್ರಕಟಗೊಳ್ಳುತ್ತವೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಹಾಗೆ ಅದೊಂದು ದೂರದ ನೋಟವಷ್ಟೇ. ಒಳ ಹೊಕ್ಕು ನೋಡಿದರೆ ಅದು ತನ್ನ ಕಸುಬು ಮಾಡುತ್ತಲೇ ಇರುತ್ತದೆ.
ಐಎಂಎಫ್‌ನ ಇಬ್ಬಂದಿ ನೀತಿಗೆ ಇನ್ನೊಂದು ಉದಾಹರಣೆಯೆಂದರೆ, ತೃತೀಯ ಜಗತ್ತಿನ ದೇಶಗಳು ಬಂಡವಾಳದ ಹರಿವಿನ ಮೇಲೆ ನಿಯಂತ್ರಣಗಳನ್ನು ಹೇರುವ ಅಗತ್ಯದ ಬಗ್ಗೆ ಅದು ವ್ಯಕ್ತಪಡಿಸಿದ ಮೆಚ್ಚುಗೆಯು ಅನೇಕ ಪ್ರಗತಿಪರ ಅರ್ಥಶಾಸ್ತ್ರಜ್ಞರಲ್ಲಿ ಐಎಂಎಫ್ ಬದಲಾಗುತ್ತಿದೆ ಎಂಬ ಭಾವನೆಯನ್ನು ಮೂಡಿಸಿತ್ತು. ಆದರೆ, ವ್ಯವಹಾರದ ಪ್ರಶ್ನೆ ಬಂದಾಗ ಎಳ್ಳಷ್ಟೂ ಸೋಲುವುದಿಲ್ಲ. ಹಣಕಾಸು ಬಂಡವಾಳವೂ ಸೇರಿದಂತೆ ಬಂಡವಾಳದ ಮುಕ್ತ ಹರಿವಿಗೆ ಎಲ್ಲ ದೇಶಗಳೂ ಅವಕಾಶ ಕಲ್ಪಿಸಿಕೊಡಬೇಕು ಎಂಬ ತನ್ನ ನಿಲುವಿನಿಂದ ಅದು ಸ್ವಲ್ಪವೂ ವಿಚಲಿತವಾಗಿಲ್ಲ. ಅದು ವಿಧಿಸುವ ಷರತ್ತುಗಳ ಬಗ್ಗೆ, ವ್ಯಕ್ತಪಡಿಸುವ ವಿರುದ್ಧ ಅಭಿಪ್ರಾಯಗಳ ಬಗ್ಗೆ ಅದರ ತೋರಿಕೆಯ ಸಹಮತವು, ಪ್ರಗತಿಪರ ಅರ್ಥಶಾಸ್ತ್ರಜ್ಞರಿಂದ ವಿಶ್ವಾಸಾರ್ಹತೆಯನ್ನು ಪಡೆಯುವ ಉದ್ದೇಶದಿಂದ ಕೂಡಿದ ಚಮತ್ಕಾರದ ಮಾತುಗಳಷ್ಟೇ ಅಲ್ಲದೆ ಬೇರೆ ಏನೂ ಅಲ್ಲ.
ಬಡ ದೇಶಗಳು ಚೇತರಿಸಿಕೊಳ್ಳಲು ಮತ್ತು ಸಮೃದ್ಧಿಯತ್ತ ಸಾಗಲು ಶ್ರೀಮಂತ ದೇಶಗಳು ಸಹಾಯ ಮಾಡುತ್ತವೆ ಎಂಬ ಒಂದು ಸಾಮರಸ್ಯದ ಕನಸನ್ನು ಅನೇಕ ಪ್ರಗತಿಪರ ಅರ್ಥಶಾಸ್ತ್ರಜ್ಞರು ಕಂಡಿದ್ದರು. ಈ ಕನಸು ಉದಾತ್ತವಾದದ್ದು, ನಿಜ. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದು ನನಸಾಗಲು ಶಕ್ಯವಿಲ್ಲ. ಕೊರೊನಾದ ಸಂದರ್ಭದಲ್ಲಿ ಐಎಂಎಫ್ ಅನುಸರಿಸಿದ ಇಬ್ಬಂದಿ ನೀತಿಯು ಈ ಕನಸು ನನಸಾಗಲು ಬಿಡುವುದಿಲ್ಲ ಎಂಬ ಅಂಶವನ್ನು ಒತ್ತಿ ಹೇಳುತ್ತದೆ.
ಇಲ್ಲೊಂದು ಆತಂಕವೂ ಕಾಡುತ್ತದೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಮುಂದುವರಿದ ಮತ್ತು ಹಿಂದುಳಿದ ದೇಶಗಳ ಬಗ್ಗೆ ಐಎಂಎಫ್ ಅಳವಡಿಸಿಕೊಂಡ ವಿಭಿನ್ನ ನಿಲುವುಗಳು ಸಾಂಕ್ರಾಮಿಕದ ಆಚೆಗೂ ವಿಸ್ತರಿಸುವ ಸಾಧ್ಯತೆ ಇದೆ. ನವ ಉದಾರವಾದಿ ಬಂಡವಾಳಶಾಹಿಯು ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಅನುವಾಗುವಂತಹ ಒಂದು ಹೊಸ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಈ ಇಬ್ಬಂದಿ ನೀತಿಯೇ ತಳಹದಿಯಾಗಬಹುದು. ಈ ಆಳ್ವಿಕೆಯಲ್ಲಿ, ಮುಂದುವರಿದ ದೇಶಗಳು ತಮ್ಮ ಅರ್ಥವ್ಯವಸ್ಥೆಗಳ ಚೇತರಿಕೆಗಾಗಿ ಕೈಗೊಳ್ಳುವ ವಿತ್ತೀಯ ಉತ್ತೇಜನದ ಕ್ರಮಗಳಿಗೆ ಅಡ್ಡಿ ಇರದು. ಆದರೆ, ತೃತೀಯ ಜಗತ್ತಿನ ದೇಶಗಳು ಕಠಿಣ ಮಿತವ್ಯಯ-ವಿತ್ತ ನೀತಿಗಳನ್ನು ಪಾಲಿಸಲೇಬೇಕಾಗುತ್ತದೆ. ಹಾಗಾಗಿ, ತೃತೀಯ ಜಗತ್ತಿನ ದೇಶಗಳು ಬೃಹತ್ ಪ್ರಮಾಣದ ನಿರುದ್ಯೋಗ ಮತ್ತು ಆದಾಯಗಳ ಕುಗ್ಗುವಿಕೆಯ ಕಾರಣಗಳಿಂದ ನಿರಂತರವಾಗಿ ಬಿಕ್ಕಟ್ಟಿಗೆ ಒಳಗಾಗುವುದರಿಂದ, ಮುಂದುವರಿದ ದೇಶಗಳಲ್ಲಿ ಹಣದುಬ್ಬರವು ಅವುಗಳ ಚೇತರಿಕೆಗೆ ಅನುಕೂಲಕರವೇ ಆಗುತ್ತದೆ.
ಈ ಅಂಶವನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, ಐಎಂಎಫ್‌ನ ಈ ಕಾರ್ಯತಂತ್ರವು ಮೂರನೇ ಜಗತ್ತಿನ ಅರ್ಥವ್ಯವಸ್ಥೆಗಳಿಂದ ಮುಂದುವರಿದ ದೇಶಗಳನ್ನು ಒಂದು ಕಾವಲು ಬೇಲಿಯ ರೀತಿಯಲ್ಲಿ ಕಾಯುತ್ತದೆ. ಅಮೆರಿಕದಲ್ಲಿ ಟ್ರಂಪ್ ಚಾಲ್ತಿಗೆ ತಂದ ರಕ್ಷಣಾತ್ಮಕ ಕ್ರಮಗಳನ್ನು ಮುಂದುವರಿದ ಬಂಡವಾಳಶಾಹಿ ಜಗತ್ತಿಗೆ ಸಾಮಾನ್ಯಗೊಳಿಸುವ ಮೂಲಕ ಈ ಕಾರ್ಯವನ್ನು ಸಾಧಿಸಲಾಗುತ್ತದೆ. ಅದರ ಜೊತೆಗೆ, ತಮ್ಮ ತಮ್ಮ ಅರ್ಥವ್ಯವಸ್ಥೆಗಳಿಗೆ ಆರ್ಥಿಕ ಉತ್ತೇಜನ ಒದಗಿಸುವ ಅವಕಾಶವನ್ನು ಮುಂದುವರಿದ ದೇಶಗಳಿಗೆ ಒದಗಿಸಲಾಗುವುದು. ಹಾಗಾಗಿ, ಈ ದೇಶಗಳಲ್ಲಿ ವರಮಾನಗಳು ಹೆಚ್ಚುತ್ತವೆ ಮತ್ತು ಅದೇ ಸಮಯದಲ್ಲಿ, ಮಿತವ್ಯಯ-ವಿತ್ತ ನೀತಿಗಳನ್ನು ಅನುಸರಿಸುವುದರಿಂದಾಗಿ ಹಾಗೂ ರಫ್ತು ಅವಕಾಶಗಳ ಕೊರತೆಯಿಂದಾಗಿ ಮೂರನೇ ಜಗತ್ತಿನ ದೇಶಗಳ ವರಮಾನಗಳು ಕುಗ್ಗುತ್ತವೆ. ಈ ದೇಶಗಳಲ್ಲಿ ಉತ್ಪಾದನೆಯಾಗುವ ಎಲ್ಲಾ ಪ್ರಾಥಮಿಕ ಸರಕುಗಳ ಬೆಲೆಗಳೂ ಅಲ್ಲಿನ ಜನರ ಆದಾಯಕ್ಕೆ ಸಂಬಂಧಿಸಿರುವುದರಿಂದ ಮತ್ತು ಈ ಸರಕುಗಳಿಗೆ ಉಂಟಾಗುವ ಸ್ಥಳೀಯ ಬೇಡಿಕೆಯನ್ನು ಅಲ್ಲಿನ ಜನರ ಆದಾಯಗಳು ನಿರ್ಧರಿಸುವುದರಿಂದ ಮತ್ತು ಆದಾಯಗಳ ಕುಗ್ಗುವಿಕೆಯಿಂದಾಗಿ ಅಲ್ಲಿನ ಬೇಡಿಕೆಯೂ ಕುಗ್ಗುವುದರಿಂದ ಈ ದೇಶಗಳಲ್ಲಿ ಉತ್ಪಾದನೆಯಾದ ಪ್ರಾಥಮಿಕ ಸರಕುಗಳನ್ನು ಮುಂದುವರಿದ ದೇಶಗಳು ಕೇಳಿದಷ್ಟು ಬೆಲೆಗೆ ರಫ್ತು ಮಾಡುವುದು ಅನಿವಾರ್ಯವಾಗುತ್ತದೆ.
ನವ ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಮುಂದುವರಿದ ದೇಶಗಳ ಉತ್ಪಾದನೆ-ತಯಾರಿಕೆ ಮತ್ತು ಸೇವೆಗಳಿಗೆ ಸಂಬಂಧಿಸಿದ ನಾನಾ ರೀತಿಯ ಕೆಲಸ-ಕಾರ್ಯಗಳನ್ನು ಮೂರನೇ ಜಗತ್ತಿನ ದೇಶಗಳಿಗೆ, ಅದರಲ್ಲೂ ವಿಶೇಷವಾಗಿ ಏಷ್ಯಾದ ದೇಶಗಳಿಗೆ ಸಾಗಿಸಿ ಹಂಚಲಾಗಿತ್ತು. ಅವುಗಳನ್ನು ತುಂಡು ತುಂಡು ಮಾಡಿ ಒಂದೊಂದನ್ನೂ ಬೇರೆ ಬೇರೆಯವರಿಗೆ ಗುತ್ತಿಗೆ ಆಧಾರದ ಮೇಲೆ ವಹಿಸಲಾಗುತ್ತಿತ್ತು. ಆದರೆ, ಈಗ ಐಎಂಎಫ್ ಅನುಸರಿಸುತ್ತಿರುವ ರೀತಿ-ನೀತಿಗಳನ್ನು ಗಮನಿಸಿದರೆ, ಈ ತುಂಡು ತುಂಡು ಚಟುವಟಿಕೆ/ಕೆಲಸಗಳ ಮರು-ಜೋಡಣೆಯ ಕಾರ್ಯತಂತ್ರದ ಮುನ್ಸೂಚನೆಯು ಆತಂಕಕಾರಿಯಾಗಿದೆ. ಒಂದು ಕಡೆಯಲ್ಲಿ ಮುಂದುವರಿದ ದೇಶಗಳ ಕಾರ್ಪೋರೇಟ್-ಹಣಕಾಸು ಕುಳಗಳು ತಮ್ಮ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ನಿರುದ್ಯೋಗವನ್ನು ಮತ್ತು ಕೆಲಸಗಾರರ ಸಂಕಷ್ಟಗಳನ್ನು ಪರಿಹರಿಸುವ ಮೂಲಕ ತಮಗೆ ತಟ್ಟಬಹುದಾದ ಹಾನಿಯನ್ನು ತಡೆಯಲು ಹವಣಿಸುತ್ತಿವೆ. ಇನ್ನೊಂದು ಕಡೆಯಲ್ಲಿ. ದೀರ್ಘ ಕಾಲದಿಂದಲೂ ಸ್ಥಗಿತತೆ ಮತ್ತು ಹಿಂಜರಿತಗಳಿಗೆ ಒಳಗಾಗಿರುವ ಮೂರನೇ ಜಗತ್ತಿನ ದೇಶಗಳ ಅರ್ಥವ್ಯವಸ್ಥೆಗಳೊಂದಿಗೆ ಅಲ್ಲಿನ ದುಡಿಯುವ ಜನರು ಏಗುತ್ತಿದ್ದಾರೆ. ಆದರೆ, ಈ ದೇಶಗಳ ದೊಡ್ಡ ದೊಡ್ಡ ಬಂಡವಾಳಗಾರರು, ಬೆಂಕಿ ಹತ್ತಿದ ಮನೆಯಿಂದ ಹಿರಿದದ್ದೇ ಲಾಭ ಎನ್ನುವ ರೀತಿಯಲ್ಲಿ, ಮುಂದುವರಿದ ದೇಶಗಳಲ್ಲಿ ಬಂಡವಾಳ ಹೂಡಿ ತಮ್ಮ ಐಶ್ವರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ತೊಡಗಿದ್ದಾರೆ.
ಈ ಸನ್ನಿವೇಶವನ್ನು ವಸಾಹತುಶಾಹಿಯ ಮರುಕಳಿಕೆಯೇ ಎನ್ನಲಡ್ಡಿಯಿಲ್ಲ. ನವ ಉದಾರವಾದಿ ಬಂಡವಾಳವಾದವು ಈವರೆಗೆ ಅನುಸರಿಸಿದ ರೀತಿ-ನೀತಿಗಳ ಅಡಿಯಲ್ಲಿ ಮೂರನೇ ಜಗತ್ತಿನ ದುಡಿಯುವ ಜನರು ಪೌಷ್ಟಿಕ ಬಡತನಕ್ಕೆ ಒಳಗಾಗಿದ್ದರೂ ಸಹ, ಕನಿಷ್ಠ ಪಕ್ಷ, ಮುಂದುವರಿದ ದೇಶಗಳ ಚಟುವಟಿಕೆ/ಕೆಲಸಗಳು ಮೂರನೇ ಜಗತ್ತಿನ ದೇಶಗಳಿಗೆ ಸ್ಥಳಾಂತರಗೊಂಡಿದ್ದವು. ಇಂತಹ ಸ್ಥಳಾಂತರಗೊಳ್ಳುವ ಯುಗ ಕೊನೆಗೊಳ್ಳಲಿದೆ. ಚೀನಾ ಮತ್ತು ಅಮೆರಿಕ ದೇಶಗಳ ನಡುವಿನ ದ್ವೇಷವು, ಕೆಲಸಗಳ ಸ್ಥಳಾಂತರವನ್ನು ನಿರುತ್ತೇಜಿಸುವಲ್ಲಿ ಒಂದು ತೆರೆಯನ್ನು ಒದಗಿಸಲಿದೆ. ಪಶ್ಚಿಮ ದೇಶಗಳ ಪ್ರಗತಿಪರ ಅರ್ಥಶಾಸ್ತ್ರಜ್ಞರು ಇಂತಹ ಲಜ್ಜೆಗೆಟ್ಟ ತಾರತಮ್ಯವನ್ನು ಬಯಲಿಗೆಳೆಯುತ್ತಾರೆ ಮತ್ತು ಅದರ ವಿರುದ್ಧ ದನಿ ಎತ್ತುತ್ತಾರೆ. ಅಷ್ಟಾಗಿಯೂ ಈ ತಾರತಮ್ಯವು ಮುಂದುವರಿದದ್ದೇ ಆದರೆ, ಮೂರನೇ ಜಗತ್ತಿನ ದೇಶಗಳು ಇಂತಹ ನಾಚಿಕೆಗೆಟ್ಟ ತಾರತಮ್ಯದ ಜಾಗತಿಕ ವ್ಯವಸ್ಥೆಯಿಂದ ಕಳಚಿಕೊಂಡು ತಮ್ಮ ಬೆಳವಣಿಗೆಯ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.
ಜಾಗತಿಕ ವ್ಯವಸ್ಥೆಯು ಯಾವತ್ತೂ ಮೂರನೇ ಜಗತ್ತಿನ ದೇಶಗಳ ದುಡಿಯುವ ಜನರನ್ನು ತಾತ್ಸಾರ-ತಾರತಮ್ಯಗಳಿಂದ ಕಂಡಿದೆ, ಆದರೆ ಮುಂದುವರಿದ ದೇಶಗಳ ಚಟುವಟಿಕೆಗಳು ಮೂರನೇ ಜಗತ್ತಿನ ದೇಶಗಳಿಗೆ ಸ್ಥಳಾಂತರಗೊಂಡಿದ್ದರಿಂದಾಗಿ ಎತ್ತರಕ್ಕೆ ಬೆಳೆಯುತ್ತಿದ್ದ ಜಿಡಿಪಿಯ ಹೆಸರಿನಲ್ಲಿ ದುಡಿಯುವ ಜನರ ಕಣ್ಣಿಗೆ ಮಣ್ಣೆರೆಚುವುದು ಸಾಧ್ಯವಾಗಿತ್ತು. ಆದರೆ, ಒಂದು ವೇಳೆ ಉದ್ಯೋಗಗಳ ಸ್ಥಳಾಂತರಗಳಿಗೆ ತಡೆಯುಂಟಾದರೆ, ಅನಿವಾರ್ಯವಾಗಿ ಮೂರನೇ ಜಗತ್ತಿನ ದೇಶಗಳಲ್ಲಿ ಪ್ರತಿರೋಧದ ಅಲೆಗಳು ಏಳುತ್ತವೆ. ಬಡ ದೇಶಗಳು ಚೇತರಿಸಿಕೊಳ್ಳಲು ಮತ್ತು ಸಮೃದ್ಧಿಯತ್ತ ಸಾಗಲು ಶ್ರೀಮಂತ ದೇಶಗಳು ಸಹಾಯ ಮಾಡುತ್ತವೆ ಎಂಬ ಒಂದು ಸಾಮರಸ್ಯದ ಕನಸನ್ನು ಅನೇಕ ಪ್ರಗತಿಪರ ಅರ್ಥಶಾಸ್ತ್ರಜ್ಞರು ಕಂಡಿದ್ದರು. ಈ ಕನಸು ಉದಾತ್ತವಾದದ್ದು, ನಿಜ. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದು ನನಸಾಗಲು ಶಕ್ಯವಿಲ್ಲ. ಕೊರೊನಾದ ಸಂದರ್ಭದಲ್ಲಿ ಐಎಂಎಫ್ ಅನುಸರಿಸಿದ ಇಬ್ಬಂದಿ ನೀತಿಯು ಈ ಕನಸು ನನಸಾಗಲು ಬಿಡುವುದಿಲ್ಲ ಎಂಬ ಅಂಶವನ್ನು ಒತ್ತಿ ಹೇಳುತ್ತದೆ.
ಅನು: ಕೆ.ಎಂ. ನಾಗರಾಜ್