ಬೆಂಗಳೂರು : ರಸಗೊಬ್ಬರಗಳ ಬೆಲೆ ಏರಿಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದರೆ ಬೆಲೆ ಏರಿಕೆಯನ್ನು ಪ್ರಶ್ನಿಸದ ಬಿಜೆಪಿ ಸಂಸದರು ಮತ್ತು ರಾಜ್ಯ ಸರ್ಕಾರ ಹೇಡಿಗಳು ಮತ್ತು ಗುಲಾಮಿ ಮನಸ್ಥಿತಿಯವರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶಗೊಂಡಿದ್ದಾರೆ.
‘ದೇಶದ ಸರ್ಕಾರಿ ಖಜಾನೆ ಖಾಲಿಯಾಗುತ್ತಿದೆ. ಆದರೆ ಅದಾನಿ-ಅಂಬಾನಿ ಮುಂತಾದವರ ಖಜಾನೆಗಳು ತುಂಬಿ ತುಳುಕುತ್ತಿವೆ. ಕೊರೊನಾ ಬಿಕ್ಕಟ್ಟಿನಲ್ಲೂ ಅವರಿಗೆ 12 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ವೃದ್ಧಿಯಾಗಿದೆ’ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇದನ್ನು ಓದಿ : ರಸಗೊಬ್ಬರ ಬೆಲೆಗಳಲ್ಲಿ ವಿಪರೀತ ಏರಿಕೆ : ರೈತರ ಮೇಲೆ ದಾಳಿಗಳನ್ನು ನಿಲ್ಲಿಸಿ – ಎಐಕೆಎಸ್
’ದೇಶ ಬಿಕ್ಕಟ್ಟಿನ ಸ್ಥಿತಿಯಲ್ಲಿರುವಾಗ ರೈತರು ಕಷ್ಟಪಟ್ಟು ದುಡಿದಿದ್ದಾರೆ. ಕೃಷಿಯು ರಾಜ್ಯದಲ್ಲಿ ಶೇ.6.4 ರಷ್ಟು ಪ್ರಗತಿ ಕಂಡಿದೆ. ದೇಶದಲ್ಲಿ ಶೇ. 3.4 ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ. ದೇಶದ ಜಿಡಿಪಿಗೆ ಈ ವರ್ಷ ಶೇ. 20 ರಷ್ಟು ಕೊಡುಗೆಯನ್ನು ಕೃಷಿರಂಗ ಕೊಟ್ಟಿದೆ. ಇಂಥ ಸಂದರ್ಭದಲ್ಲಿ ಈ ಮನೆಹಾಳೂ ಪ್ರವೃತ್ತಿಯ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60 ರಷ್ಟು ಹೆಚ್ಚಿಸಿರುವುದು ಖಂಡನೀಯʼ ಎಂದರು.
ʻಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಾವ ದೃಷ್ಟಿಯಿಂದ ನೋಡಿದರೂ ಬಡವರ, ರೈತರ, ಹಿಂದುಳಿದವರ, ದಲಿತರ, ಮಹಿಳೆಯರ, ಮಕ್ಕಳ ಪರವಾಗಿಲ್ಲ ಎಂಬುದು ಪದೇ ಪದೇ ನಿಜವಾಗುತ್ತಿದೆ’ ಎಂದಿದ್ದಾರೆ.
ಮೋದಿಯವರ ಭಾಷಣಗಳು ಹೂರಣ ಇಲ್ಲದ ಹೋಳಿಗೆಯಂತೆ, ಕಡುಬಿನಂತೆ. ಅವರು ಬರೀ ಸುಳ್ಳು ಹೇಳುತ್ತಿದ್ದಾರೆ. ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ಹೂವನ್ನೇ ನಿಜವಾದ ಹೂವು ಅನ್ನುತ್ತಾರೆ.
ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ : ತರಬೇತಿ ನಿರತ ಬಿಎಂಟಿಸಿ ನೌಕರರ ವಜಾ
’ಸರ್ಕಾರ ರಸಗೊಬ್ಬರಕ್ಕೆ ಈ ಬಾರಿ ಬಜೆಟ್ಟಿನಲ್ಲಿ 54,417 ಕೋಟಿ ರೂಪಾಯಿಗಳಷ್ಟು ಸಬ್ಸಿಡಿಯನ್ನು ಕಡಿಮೆ ಮಾಡಿದೆ. ಕಳೆದ ವರ್ಷ 1,33,947 ಕೋಟಿ ರೂಪಾಯಿಗಳನ್ನು ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು 79,530 ಕೋಟಿ ರೂಪಾಯಿಗಳಿಗೆ ಇಳಿಸಿದ್ದಾರೆ. ಶೇ 40.62 ರಷ್ಟು ಕಡಿಮೆ ಮಾಡಿದ್ದರ ಪರಿಣಾಮವಾಗಿ ರಸಗೊಬ್ಬರದ ಬೆಲೆ ಹೆಚ್ಚಾಗಿದೆ’ ಎಂದರು.
ʼಗ್ಯಾಸ್, ಪೆಟ್ರೋಲ್ ,ಡೀಸೆಲ್ ಎಲ್ಲದರ ಬೆಲೆ ಗಗನಕ್ಕೆ ಮುಟ್ಟಿದೆ. ಇಂಥ ಸಂದರ್ಭದಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಿಸಲಾಗಿದೆ. ಇದು ರೈತನ ಹೊಟ್ಟೆಯ ಮೇಲೆ ಹಾಕಿದ ಭೀಕರ ಬರೆ. ರಸಗೊಬ್ಬರಗಳ ಬೆಲೆಯೇರಿಕೆಯಂಥ ಜನದ್ರೋಹಿ ನಿರ್ಧಾರವನ್ನು ಈ ಕೂಡಲೇ ವಾಪಸ್ಸು ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.