ಸುಧೀರ್ಘ ಇಪ್ಪತ್ತು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ತಮ್ಮದೇ ಪ್ರಜಾ ಕ್ಷೇಮ ಪಕ್ಷ ಮರಳಿ ಚುನಾವಣೆಯಲ್ಲಿ ಗೆದ್ದು ತಮ್ಮ ಪಕ್ಷವೇ ಅಧಿಕಾರ ನಡೆಸಲಿದೆ ಎಂಬ ವೇಳೆಯಲ್ಲೆ ತನ್ನೊಳಗಿನ ಅಂತರಂಗ ಮತ್ತು ಮಿತ್ರರು-ಶತ್ರುಗಳು ಜೊತೆ ನಡೆಸಿದ ಸಂವಾದ ನಡೆಸಿದಾಗ ಮಾನ್ಯ ಶೀಲವಂತರಿಗೆ ಇದುವರೆಗೆ ತನ್ನನ್ನು ಪಂಜರದಲ್ಲಿ ಬಂಧಿಸಿಲಾಗಿತ್ತು ಎಂಬ ಸತ್ಯ ಅರವಿಗೆ ಬರುತ್ತದೆ.
ನಾಟಕ ʻಮತ್ತೆ ಮುಖ್ಯಮಂತ್ರಿʼ, ತಂಡ ಕಲಾ ಗಂಗೋತ್ರಿ. ಡಾ. ಕೆ.ವೈ.ನಾರಾಯಣಸ್ವಾಮಿ ರಚನೆಯ ನಾಟಕವನ್ನು ಡಾ. ಬಿ.ವಿ.ರಾಜಾರಾಂ ಅವರು ನಿರ್ದೇಶನ ಮಾಡಿದ್ದರು. ಈ ನಾಟಕ ತನ್ನ ಮೊದಲ ಪ್ರದರ್ಶನವನ್ನು ಏಪ್ರಿಲ್ 04, 2021ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಂಡಿತು.
ಇದನ್ನು ಓದಿ : ಅಭಿವ್ಯಕ್ತಿಯ ನಿಷೇಧ ಸಂಸ್ಕೃತಿಯ ಅವಾಂತರಗಳು
ಪ್ರಾಮಾಣಿಕ ವ್ಯಕ್ತಿಯೊಬ್ಬ ತನ್ನ ಪ್ರಾಮಾಣಿಕತೆ ಸಾಬೀತುಪಡಿಸುವುದು ತನ್ನ ಸುತ್ತ ಇರುವವರಿಂದಲ್ಲ. ತನ್ನವರಲ್ಲದವರಿಂದಲೂ ಸಾಬೀತುಪಡಿಸಿದರೆ ಮಾತ್ರ ಅದಕ್ಕೆ ನಿಜವಾದ ಅರ್ಥಬರುತ್ತದೆ. ಪ್ರಭುತ್ವದ ಪ್ರವಾಹದಲ್ಲಿ ತಾನು ಈಜುತ್ತಿರುವುದು ವಿರುದ್ಧ ದಿಕ್ಕಲ್ಲಿ ಎಂದು ಅರಿವಾಗುವುದು ಮತ್ತೆ ಆತ ಹಿಂತಿರುಗಿ ನೋಡಿಕೊಂಡಾಗ ಮಾತ್ರ.
ಈ ಪ್ರಯತ್ನಕ್ಕೆ ಮುಂದಾದ ಮುಖ್ಯಮಂತ್ರಿ ಶೀಲವಂತರು ತನ್ನ ಸುತ್ತಲು ನಿರ್ಮಾಣವಾದ ಪಂಜರದಿಂದ ಆಚೆ ಬಂದು ತನ್ನ ಆಡಳಿತದಲ್ಲಿ ಅನ್ಯಾಯಕ್ಕೆ ಗುರಿಯಾದ ವರ್ಗಗಳನ್ನು ಮುಖತಃ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಅವಿರಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುವ ತಮ್ಮ ನಿರ್ಧರ ಅಚಲವಾಗುತ್ತದೆ.
20 ವರ್ಷಗಳ ಹಿಂದೆ ಎಲ್ಲಿಯೋ ಮೂಲೆಯಲ್ಲಿದ್ದ ಶೀಲವಂತನನ್ನು ಗೋಪಾಲಗೌಡರು ತಮ್ಮ ಮುಂದಿನ ಉತ್ತರಾಧಿಕಾರಿಯಾಗಿ ಶೀಲವಂತರನ್ನು ಆಯ್ಕೆ ಮಾಡುತ್ತಾರೆ. ಕುಟುಂಬ, ಸಂಸಾರ, ಸಂಬಂಧಿಕರ ಹಂಗು ಇಲ್ಲದೆ ಸತತ ನಾಲ್ಕು ಬಾರಿ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದರು. ಗೋಪಾಲಗೌಡರ ಸ್ಥಾಪಿತ ಪ್ರಜಾಕ್ಷೇಮ ಪಕ್ಷದ ನಿಷ್ಠೆ ಮತ್ತು ಜನಹಿತ ಅಧಿಕಾರವೆಂಬ ಸೌಧದ ಕುರ್ಚಿ ಇನ್ನಷ್ಟು ಭದ್ರಗೊಳ್ಳುತ್ತಿದ್ದಂತೆ ತನ್ನ ಮೂಲವನ್ನು ಸಂಪೂರ್ಣವಾಗಿ ಬದಲಾಯಿಸಿ ಕೊಳ್ಳುವ ಪ್ರಮಾದಕ್ಕೆ ಒಳಗಾಗುತ್ತದೆ.
ಇದನ್ನು ಓದಿ : ಲಜ್ಜೆಗೆಟ್ಟ ರಾಜಕಾರಣವೂ ಮಾನಗೆಟ್ಟ ಮಾಧ್ಯಮವೂ
ಗೋಪಾಲಗೌಡರ ಪ್ರಾಮಾಣಿಕತೆಯನ್ನೇ ಬಂಡವಾಳ ಮಾಡಿಕೊಂಡು ಆಡಳಿತ ನಡೆಸುವ ಪಕ್ಷದಲ್ಲಿ ಅದೆಷ್ಠೆ ಪಕ್ಷ ನಿಷ್ಠೆ ಮತ್ತು ಜನಹಿತ ಆಡಳಿತ ನೀಡಿದರೂ ಒಂದಲ್ಲ ಒಂದು ದಿನ ಜಿಗುಪ್ಸೆಗೊಳ್ಳುವ ಸನ್ನಿವೇಶ ಎದುರಾಗುವುದು ಒಮ್ಮೆ ಕಾರ್ಯವೈಖರಿಯನ್ನು ಹಿಂತಿರುಗಿ ನೋಡಿಕೊಂಡಾಗ. ಇದು ಶೀಲವಂತರಿಗೆ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವಂತೆ ಮಾಡುವ ಸನ್ನಿವೇಶವನ್ನು ನಾಟಕ ಪ್ರಸ್ತುತಪಡಿಸುತ್ತದೆ.
ಸ್ವಾತಂತ್ರ್ಯ ನಂತರದ ಭಾರತದಲ್ಲಿ ಪ್ರಜಾಪ್ರಭುತ್ವ ಸಮಾಜದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುವ ಸಂದರ್ಭಗಳಲ್ಲೇ ವಿವಿಧ ಮಜಲುಗಳನ್ನು ಪಡೆದುಕೊಂಡಿತು. ಮುಖ್ಯವಾಗಿ ಜಾಗತೀಕರಣ ಪೂರ್ವ ಮತ್ತು ನಂತರದ ರಾಜಕಾರಣದ ಪ್ರವಾಹದಲ್ಲಿ ಎರಡು ಮಜಲುಗಳನ್ನು ಗುರುತಿಸಿಕೊಂಡಿತು. ಜಾಗತೀಕರಣ ಪೂರ್ವದಲ್ಲಿ ರಾಜಕಾರಣವೆನ್ನುವುದು ಜನಹಿತ, ಪಕ್ಷನಿಷ್ಠೆ, ಸಿದ್ಧಾಂತ ಇತ್ಯಾದಿಯೊಂದಿಗೆ ಗಾಂಧಿ, ಅಂಬೇಡ್ಕರ್, ಲೋಹಿಯಾರ ಆದರ್ಶಗಳು ಒಳಗೊಂಡಿದ್ದವು. ಜಾಗತೀಕರಣದ ನಂತರದ ರಾಜಾಕಾರಣವೆನ್ನುವುದು ವ್ಯಾಪಾರ, ವ್ಯಕ್ತಿನಿಷ್ಠೆ, ವ್ಯವಹಾರ, ಲಾಭಿ ಮತ್ತು ವ್ಯಕ್ತಿ ಸಾಮ್ರಾಜ್ಯವನ್ನು ಸೃಷ್ಠಿಸಿಕೊಳ್ಳುವ ಹುನ್ನಾರಕ್ಕೆ ಬಲಿಯಾಗಿದೆ.
ಪ್ರಸ್ತುತ ದೇಶದಲ್ಲಿ ಪ್ರಭುತ್ವ, ಸಮಾಜ ಮತ್ತು ವರ್ಗ ಸಮೂಹದಲ್ಲಿ ಆಗುತ್ತಿರುವ ಬದಲಾವಣೆಯ ಬಿರಿಸು ಕಳೆದ ಎರಡು ದಶಕದಲ್ಲಿ ಅದೆಷ್ಟು ಬಿರಿಸಿನಿಂದ ಸಾಗುತ್ತಿದೆ ಎಂದರೆ ಕೆಲವು ಘಟನೆಗಳು ಕ್ಷಣಿಕದಲ್ಲೇ ಸಂಭವಿಸುವ ಹಂತಕ್ಕೆ ಬಂದು ನಿಂತಿರುವುದು ಕಾಣಬಹುದಾಗಿದೆ.
ನಾಟಕಕಾರರು ʻಮತ್ತೆ ಮುಖ್ಯಮಂತ್ರಿʼ ಯಲ್ಲಿ ಈಗಿನ ರಾಜಕಾರಣವೆನ್ನುವುದು ಆಳುವವರು ಮತ್ತು ಆಳಿಸುವವರ ಬಗ್ಗೆ ತಿಳಿಸುತ್ತಾ, ನೀವೆಷ್ಟೆ ಪ್ರಾಮಾಣಿಕರಾಗಿರಿ ಅದು ಮುಖ್ಯವಲ್ಲ. ಆದರೆ, ಅದೇ ಪ್ರಾಮಾಣಿಕತೆಯನ್ನೇ ಬಂಡವಾಳ ಮಾಡಿಕೊಂಡ ಒಂದು ವರ್ಗವು ವ್ಯವಸ್ಥೆ, ಆಡಳಿತ ಯಂತ್ರ, ಸಹದ್ಯೋಗಿ ಮಿತ್ರರು ಮತ್ತು ಮಾಧ್ಯಮ ಎಲ್ಲವು ಸೃಷ್ಟಿಸುವ ಭ್ರಮೆಗಳ ಮೂಲಕ ಆಳಿಸುವವರ ಪರವಾಗಿಯೇ ಕಾರ್ಯನಿರ್ವಹಿಸುವ ವ್ಯವಸ್ಥಿತ ಸಂಚು ಸದಾಕಾಲ ನಿಯಂತ್ರಿಸಲಾಗುತ್ತದೆ ಎಂದು ತೋರಿಸಲಾಗಿದೆ.
ಇದನ್ನು ಓದಿ : ವರ್ತಮಾನಕ್ಕೆ ಧ್ವನಿಯಾದ ರೈತ ಗೀತೆಗಳು : ಬಿಳಿಮಲೆ
ಹಂಗಾಮಿ ಮುಖ್ಯಮಂತ್ರಿಯಾದ ಶೀಲವಂತರು ಮುಂದಿನ ಮುಖ್ಯಮಂತ್ರಿ ತಾನಲ್ಲ ಎಂದು ತಿಳಿಯಪಡಿಸುತ್ತಿದ್ದಂತೆ ಪ್ರಜಾ ಕ್ಷೇಮ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಗುವ ಲಾಭಿಗಳು, ಅದನ್ನು ಸಾಧಿಸಲು ಅನುಸರಿಸುವ ತಂತ್ರ ಮತ್ತು ಕುತಂತ್ರಗಳು ಬಯಲಾಗುತ್ತದೆ. ಪ್ರಜಾಕ್ಷೇಮ ಪಕ್ಷಾಧ್ಯಕ್ಷ ಮತ್ತು ಮಂತ್ರಿ ಸರ್ವಾನಂದ ಹೂಡುವ ಲಾಭಿಗೆ ಶೀಲವಂತರು ಬಲಿಯಾಗುತ್ತಾರೆ.
ರೈತ, ಹಿಂದುಳಿದ, ಮಹಿಳೆ ಮತ್ತು ಅಲ್ಪಸಂಖ್ಯಾತ ವರ್ಗದ ಪ್ರತಿನಿಧಿಗಳನ್ನು ಭೇಟಿಯಾದಾಗ ಇಷ್ಟು ವರ್ಷ ಆಡಳಿತ ನಡೆಸಿದರೂ ಬಹುದೊಡ್ಡ ವರ್ಗದ ಮೂಲಭೂತ ಸಮಸ್ಯೆಗಳಲ್ಲಿ ಸುಧಾರೀಸುವಂತಹ ಯಾವುದೇ ಬದಲಾವಣೆಯಾಗದಿರುವುದನ್ನು ಹಂಗಾಮಿ ಮುಖ್ಯಮಂತ್ರಿ ಕಂಡುಕೊಳ್ಳುತ್ತಾರೆ. ಹಾಗೆಯೇ ಕಾರ್ಯಾಂಗದಲ್ಲಿ ಅತ್ಯಂತ ಉನ್ನತವಾದ ಸ್ಥಾನದಲ್ಲಿ ಆಡಳಿತವನ್ನು ನಿಭಾಯಿಸಿದ ಸಂಜೀವ್ ಸಿಂಗ್ ಆಳಿಸುವವರ ವರ್ಗಕ್ಕೆ ಬಲಿಪಶು ಮಾಡಲಾಗಿರುತ್ತದೆ. ಹಂಗಾಮಿ ಮುಖ್ಯಮಂತ್ರಿಗಳು ಸಂಜೀವ್ ಸಿಂಗ್ರನ್ನು ಜೈಲಿನಲ್ಲಿ ಭೇಟಿಯಾದಾಗ ಮತ್ತಷ್ಟು ವಿಚಾರಗಳು ಬೆಳಕಿಗೆ ಬರುತ್ತದೆ.
ತನ್ನದೇ ಆಡಳಿತ ಯೋಜನೆಗಳು ನಿಜವಾಗಿಯೂ ಮುಟ್ಟಬೇಕಾದ ಫಲಾನುಭವಿಗಳಿಗೆ ಮುಟ್ಟದೇ ಇರುವುದು ಮತ್ತು ಅಭಿವೃದ್ಧಿ ಬಗೆಗಿನ ಭ್ರಮೆ ಮತ್ತು ತೋರ್ಪಡಿಕೆ ಘೋಷಣೆಗಳು ನಿಜವಾಗಿಯೂ ಅದು ಜನಹಿತವಾದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಶೀಲವಂತರಿಗೆ ತಿಳಿಯುತ್ತವೆ.
ಇದನ್ನು ಓದಿ : ವೆಬ್ ಮಾಧ್ಯಮಗಳ ಸೆನ್ಸಾರಿನತ್ತ ದೊಡ್ಡ ಹೆಜ್ಜೆ
ತನ್ನ ಸುದೀರ್ಘ 20 ವರ್ಷದ ಆಡಳಿತದ ಕಾರ್ಯವೈಖರಿ ಸಮೃದ್ಧಿಯಾಗಿರಲಿಲ್ಲ, ಇನ್ನು ಸಾಕಷ್ಟು ಪ್ರಶ್ನೆಗಳಿವೆ. ಸಮಸ್ಯೆಗಳೂ ಇವೆ. ಆಡಳಿತದಲ್ಲಿ ನಿಜವಾಗಿಯೂ ಆದದ್ದು ಏನು ಎಂಬ ಬಗ್ಗೆ ತನ್ನದೇ ಸರಕಾರದ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶ ನೀಡುತ್ತಾರೆ. ಹಂಗಾಮಿ ಮುಖ್ಯಮಂತ್ರಿಯ ಆದೇಶದ ವಿರುದ್ಧ ನ್ಯಾಯಾಲಯದ ಅಂಗಳಕ್ಕೆ ಹೊಕ್ಕುತ್ತದೆ. ಅಂತಿಮವಾಗಿ ನ್ಯಾಯಮೂರ್ತಿಗಳ ಬಲ ಭಾಗದಲ್ಲಿ ಆಳುವ ಮುಖಗಳ ಎದುರಿಗೆ ಅಂದರೆ, ಎಡ ಭಾಗದಲ್ಲಿ ಶೋಷಿತ ವರ್ಗದ ನಡುವೆ ಕುಳಿತುಕೊಳ್ಳುವ ಅನಿವಾರ್ಯತೆ ಹಂಗಾಮಿ ಮುಖ್ಯಮಂತ್ರಿಗಳದ್ದಾಗುತ್ತದೆ.
ಶೀಲವಂತರಾಗಿ ಮುಖ್ಯಮಂತ್ರಿ ಚಂದ್ರು, ಪ್ರಜಾಕ್ಷೇಮಾ ಪಕ್ಷಾಧ್ಯಕ್ಷರಾಗಿ ಮಂಜುನಾಥ ಹೆಗಡೆ, ಮಂತ್ರಿ ಸರ್ವಾನಂದರಾಗಿ ಶ್ರೀನಿವಾಸ ಮೇಷ್ಟ್ರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು. ಸಂಜೀವ್ ಸಿಂಗ್ ಆಗಿ ಸಿದ್ಧಾರ್ಥ ಭಟ್ ಸೇರಿದಂತೆ ಒಂದು ದೊಡ್ಡ ಕಲಾವಿದರ ತಂಡ ಅಭಿನಯ ಮಾಡಿತ್ತು.
ನಾಟಕ ವಿಮರ್ಶೆ : ವಿನೋದ ಶ್ರೀರಾಮಪುರ