ನಾಲ್ಕು ದಶಕಗಳ ಪ್ರಕರಣ : ರೈತನಿಗೆ ಗೆಲುವು, ಅಧಿಕಾರಿಗಳ ಪರದಾಟ
ಗದಗ: ಗದಗ್ ನಗರದ ಎಪಿಎಂಸಿ ಜಾಗವನ್ನು ಜಪ್ತಿ ಮಾಡಲಾಗಿದೆ. ಪರಿಹಾರ ಹಣ ವಿಳಂಬ ಮಾಡಿದ್ದಕ್ಕೆ ಜಫ್ತಿ ಮಾಡಲಾಗಿದ್ದು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎನ್ನುವಂತಾಗಿದೆ ಗದಗ ಎಪಿಎಂಸಿ ಕಚೇರಿಯ ಕಥೆ.
ಎಪಿಎಂಸಿ ಕಚೇರಿಯನ್ನು ಜಪ್ತಿ ಮಾಡಲು ಕಾರಣವೇನೆಂದರೆ ಆರ್.ಆರ್.ಹೇಮಂತನವರ ಎಂಬುವರ 4 ಎಕರೆ 25 ಗುಂಟೆ ಜಾಗವನ್ನು 40 ವರ್ಷಗಳ ಹಿಂದೆ ಎಪಿಎಂಸಿ ಸ್ವಾಧಿನ ಪಡಿಸಿಕೊಂಡಿತ್ತು. ಆಗ ಸುಮಾರು 76 ಲಕ್ಷ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿದ ಎಪಿಎಂಸಿ, ಇನ್ನುಳಿದ ಹದಿನಾರುವರೆ ಲಕ್ಷ ರೂಪಾಯಿ ಪಾವತಿಸಲು ವಿಳಂಬ ಮಾಡಿದೆ.
ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಹಲವು ಬಾರಿ ಎಪಿಎಂಸಿ ಅಧಿಕಾರಿಗಳಿಗೆ ಕೋರ್ಟ್ ನೋಟಿಸ್‌ನ ಬಿಸಿ ಮುಟ್ಟಿಸಿದ್ದರು. ಅದಕ್ಕೂ ಡೋಂಟ್‌ಕೇರ್ ಎನ್ನದ ಅಧಿಕಾರಿಗಳ ಮೂಗುದಾರಕ್ಕೆ ಕೈಹಾಕಿದ್ದಾರೆ. ಈ ಹಿಂದೆ ಭೂ ಸ್ವಾಧೀನ ಅಧಿಕಾರಿ, ಎಪಿಎಂಸಿ ಉಪವಿಭಾಗಾಧಿಕಾರಿಯನ್ನು ಹೊಣೆಯಾಗಿಸಿ, ಅವರ ಕಚೇರಿಯನ್ನು ಜಪ್ತಿ ಮಾಡಿಕೊಳ್ಳುವಂತೆ ಗದಗ ಜಿಲ್ಲಾ ಪ್ರಧಾನಿ ದಿವಾನಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ವಾರೆಂಟ್ ಆಧರಿಸಿ, ಕಚೇರಿಯ 1 ಸ್ಕಾರ್ಪಿಯೋ ಕಾರು ಮತ್ತು ನಾಲ್ಕು ಕಂಪ್ಯೂಟರ್, ಖುರ್ಚಿಗಳನ್ನು ವಶಕ್ಕೆ ಪಡೆದಿದೆ.
ಈ ಪ್ರಕರಣ ಇವತ್ತು ನಿನ್ನೆಯದಲ್ಲ. ಸುಮಾರು ನಲ್ವತ್ತು ವರ್ಷಗಳ ಹಳೆಯ ಪ್ರಕರಣ. ಗದಗಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚನೆಗಾಗಿ 1977ರಲ್ಲಿ ಭೂ ಸ್ವಾಧಿನ ಅಧಿಸೂಚನೆ ಹೊರಡಿಸಿತ್ತು. 1982ರಲ್ಲಿ ಆರ್.ಆರ್.ಹೇಮಂತನವರ ಅವರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಎಪಿಎಂಸಿಯಿಂದ ಬರಬೇಕಿದ್ದ ಬಾಕಿ ಪರಿಹಾರ ಹಣಕ್ಕಾಗಿ ಸುಪ್ರೀಂ ಕೋರ್ಟ್‌ವರೆಗೆ ಹೋಗಿತ್ತು. ಪ್ರಕರಣ ಪುನಃ ಜಿಲ್ಲಾ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯಕ್ಕೆ ಜ್ಞಾಪನಾ ಆದೇಶ ಆಗಿದ್ದರಿಂದ ಸದರಿ ಪ್ರಕರಣದಲ್ಲಿ ರೈತರಿಗೆ ಪ್ರತಿ ಚದರ ಅಡಿಗೆ ಎಂಟೂವರೆ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಅಧಿಕಾರಿಗಳು ಅಂದಿನಿಂದ ಇಂದಿನವರೆಗೂ ವಿನಾಕಾರಣ ವಿಳಂಬ ಮಾಡುತ್ತಲೇ ಬಂದಿದ್ದರು. ಕೋರ್ಟ್ ಆದೇಶದಂತೆ ಕಚೇರಿ ಜಪ್ತಿಮಾಡಿ ಮುಖಭಂಗ ಮಾಡಿದೆ. ಇತ್ತ ಜಪ್ತಿ ಕಾರ್ಯ ನಡೆಯುತ್ತಿದ್ದಂತೆ ಎಪಿಎಂಸಿ ಅಧಿಕಾರಿಗಳು ಪಲಾಯಣಗೊಂಡರು.
ರೈತರನ್ನು ಕಡೆಗಣಿಸುವ ಅಧಿಕಾರಿಗಳಿಗೆ ಇದು ತಕ್ಕಪಾಠವಾಗಿದೆ. ಮಾಡಿದ್ದುಣ್ಣೋ ಮಾರಾಯ ಅನ್ನುವಂತೆ, ಎಪಿಎಂಸಿ ಅಧಿಕಾರಿಗಳು ಓಡಾಡುವ ಸ್ಕಾರ್ಪಿಯೋ ವಾಹನ, ಕಚೇರಿಯಲ್ಲಿ ಇದ್ದ ಕಂಪ್ಯೂಟರ್, ಕುರ್ಚಿ ಜಪ್ತಿ ಮಾಡಿದ್ದರಿಂದ ಎಪಿಎಂಸಿ ನೌಕರರು ಪರದಾಡುವಂತಾಯಿತು. ರೈತರಿಗೆ ನೀಡಬೇಕಾದ ಪರಿಹಾರ ನೀಡುವಲ್ಲಿ ನಾಲ್ಕು ದಶಕಗಳ ಕಾಲ ವಿಳಂಬ ಮಾಡಿರುವುದು ವಿಪರ್ಯಾಸವೇ ಸರಿ