ವಾಷಿಂಗ್ಟನ್: ಮೂರು ತಿಂಗಳ ಬಳಿಕ ಮತ್ತೆ ವಾಷಿಂಗ್ಟನ್ನಲ್ಲಿರುವ ಅಮೆರಿಕದ ಸಂಸತ್ನ ಮೇಲೆ ದಾಳಿ ನಡೆದಿದೆ. ಕ್ಯಾಪಿಟಲ್ ಕಟ್ಟಡಕ್ಕೆ ದುಷ್ಕರ್ಮಿಯೊಬ್ಬ ಕಾರನ್ನು ವೇಗವಾಗಿ ನುಗ್ಗಿಸಿದ ಪರಿಣಾಮ ಸಂಸತ್ ಕಟ್ಟಡದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಅಮೆರಿಕದ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಮತ್ತೋರ್ವ ಹಿರಿಯ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ದುಷ್ಕರ್ಮಿಯೊಬ್ಬ ನೀಲಿ ಸೆಡಾನ್ ಕಾರಿನಲ್ಲಿ ವೇಗವಾಗಿ ಅಮೆರಿಕ ಸಂಸತ್ ಭವನದೊಳಗೆ ನುಗ್ಗಿಸಿದ್ದಾನೆ. ಅತ್ಯಂತ ಭದ್ರತೆ ಇರುವ ಸ್ಥಳವನ್ನು ಭೇದಿಸಿ ಮುನ್ನಗಿದ್ದ ಕಾರಿನೊಳಗಿದ್ದ ದುಷ್ಕರ್ಮಿ, ನೇರವಾಗಿ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಬ್ಯಾರಿಕೇಡ್ ಬಳಿ ಇದ್ದ ಇಬ್ಬರು ಅಮೆರಿಕ ಕ್ಯಾಪಿಟಲ್ ಪೊಲೀಸ್ (ಯುಎಸ್ಸಿಪಿ) ಅಧಿಕಾರಿಗಳು ಗಾಯಗೊಂಡರು.
ಇದನ್ನೂ ಓದಿ : ಟ್ರಂಪ್ ಬೆಂಬಲಿಗರಿಂದ ವೈಟ್ ಹೌಸ್ ಮೇಲೆ ದಾಳಿ
ಈ ಪೈಕಿ ಓರ್ವ ಸಾವನಪ್ಪಿದ್ದಾನೆ. ಇನ್ನು ಡಿಕ್ಕಿ ಹೊಡೆದ ಬಳಿಕ ಕಾರಿನಿಂದ ಚೂರಿ ಹಿಡಿದುಕೊಂಡು ದುಷ್ಕರ್ಮಿ ಇಳಿದಿದ್ದಾನೆ. ಈ ವೇಳೆ ಎಚ್ಚೆತ್ತ ಅಲ್ಲಿದ್ದ ಪೊಲೀಸ್ ಅಧಿಕಾರಿ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ದುಷ್ಕರ್ಮಿ ಸಾವನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
U.S. Capitol Police officer dead after suspect rammed police at barricade https://t.co/N9uzllDIye
— The Washington Post (@washingtonpost) April 2, 2021
ಮೃತ ಪೊಲೀಸ್ ಅಧಿಕಾರಿ ಬಿಲ್ಲಿ ಇವಾನ್ಸ್ ಎಂದು ಗುರುತಿಸಲಾಗಿದ್ದು, 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಇನ್ನು ಕಾರು ಚಾಲನೆ ಮಾಡಿದ ವ್ಯಕ್ತಿಯನ್ನು 25 ವರ್ಷದ ನೋವಾ ಗ್ರೀನ್ ಎಂದು ಗುರುತಿಸಲಾಗಿದೆ. ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇವಾನ್ಸ್ ಸಂತಾಪ ಸೂಚಿಸಿದ್ದು, ನಮ್ಮ ಪ್ರಜಾಪ್ರಭುತ್ವದ ಹುತಾತ್ಮ ಎಂದು ಬಣ್ಣಿಸಿದ್ದಾರೆ.
ಪೊಲೀಸ್ ಅಧಿಕಾರಿಗೆ ಗೌರವ ಸೂಚಕವಾಗಿ ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ರಾಷ್ಟ್ರಧ್ವಜವನ್ನು ತಗ್ಗಿಸಲಾಯಿತು. ಅಲ್ಲದೆ ಪ್ರದೇಶದಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದೆ. ಇನ್ನು ಘಟನೆ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಂತಾಪ ಸೂಚಿಸಿದ್ದಾರೆ.
ಜನವರಿ 6ರಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ನಡೆಸಿದ ದಂಗೆಯಲ್ಲಿ ಬ್ರಿಯಾನ್ ಸಿಕ್ನಿಕ್ ಎಂಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು. ಒಂದು ವಾರದ ಬಳಿಕ ಹೋವರ್ಡ್ ಲೈಬೆನ್ಗುಡ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಒಂದೇ ವರ್ಷದಲ್ಲಿ ಸಂಸತ್ ಭವನದ ಮೇಲೆ ಎರಡು ದಾಳಿ ನಡೆದಿರುವುದು ಸುತ್ತ ಮುತ್ತಲು ಪ್ರದೇಶದ ಜನರಲ್ಲಿ ಭಯವನ್ನು ಸೃಷ್ಟಿಸಿದೆ.