ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ಯುವತಿ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ನಂತರ ಬಿಜೆಪಿ ಶಾಸಕ, ಆರೋಪಿ ರಮೇಶ ಜಾರಕಿಹೊಳಿ ಅವರಿಗೆ ಬಂಧನ ಭೀತಿ ಶುರುವಾಗಿದ್ದು, ಇದೀಗ ಎಸ್ಐಟಿ ವಿಚಾರಣೆಗೂ ಅವರು ಗೈರಾಗಿದ್ದಾರೆ.
ನ್ಯಾಯಾಲಯದ ಎದುರು ಹಾಜರಾಗಿ ಸಿಆರ್ಪಿಸಿ 164ರಡಿ ಹೇಳಿಕೆ ನೀಡಿರುವ ಸಂತ್ರಸ್ತೆ, ವಿಚಾರಣೆ ಹಾಗೂ ಮಹಜರು ಪ್ರಕ್ರಿಯೆಗೆ ಸಹಕರಿಸಿದ್ದಾರೆ.
ಪ್ರಕರಣದ ಆರೋಪಿಯಾಗಿರುವ ರಮೇಶ ಜಾರಕಿಹೊಳಿ ಅವರನ್ನು ಶುಕ್ರವಾರ ಬೆಳಿಗ್ಗೆ ವಿಚಾರಣೆ ನಡೆಸಲು ಎಸ್ಐಟಿ ಸಿದ್ಧವಾಗಿತ್ತು. ಆದರೆ, ರಮೇಶ ಮಧ್ಯಾಹ್ನದವರೆಗೂ ವಿಚಾರಣೆಗೆ ಬರಲಿಲ್ಲ.
ಅವರ ಪರವಾಗಿ ಎಸ್ಐಟಿ ಕಚೇರಿಗೆ ಬಂದಿದ್ದ ವಕೀಲ ಶ್ಯಾಮಸುಂದರ್, ರಮೇಶ ಅವರು ನೀಡಿದ್ದ ಪತ್ರವೊಂದನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
‘ನನಗೆ ವಿಪರೀತ ಜ್ವರವಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು, ವಿಶ್ರಾಂತಿ ಪಡೆಯುವಂಯೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ವಿಚಾರಣೆಗೆ ಬರಲು ಆಗುತ್ತಿಲ್ಲ’ ಎಂದು ಪತ್ರದಲ್ಲಿ ಹೇಳಿರುವುದಾಗಿ ಗೊತ್ತಾಗಿದೆ.
ಪತ್ರ ಪಡೆದು ಪರಿಶೀಲನೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಪುನಃ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ನೋಟಿಸ್ ನೀಡಬೇಕೋ ಅಥವಾ ಬೇರೆ ಕಾನೂನು ಕ್ರಮ ಕೈಗೊಳ್ಳಬೇಕೋ ಎಂಬುದನ್ನು ಯೋಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.