ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ತೀವ್ರ ಕಡಿತ- ಹಿಂಪಡೆತ  ಯಾರನ್ನೂ ಮರುಳು ಮಾಡದು-ಸಿಪಿಐ(ಎಂ) ಪೊಲಿಟ್‌ಬ್ಯುರೊ

ದೆಹಲಿ ಕೇಂದ್ರ ಹಣಕಾಸು ಮಂತ್ರಾಲಯ ಮಾರ್ಚ್ 31 ರಂದು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ತೀವ್ರವಾಗಿ ಇಳಿಸಿದ ಪ್ರಕಟಣೆಯನ್ನು ಹೊರಡಿಸಿತು. 24 ಗಂಟೆಗಳೊಳಗೆ ಹಣಕಾಸು ಮಂತ್ರಿಗಳು ಈ ಪ್ರಕಟಣೆಯನ್ನು ಹಿಂದಕ್ಕೆ ತೆಗೆದುಕೊಂಡಿರುವುದಾಗಿ ಪ್ರಕಟಿಸಿದ್ದಾರೆ. ಇದು ಕಣ್ತಪ್ಪಿನಿಂದ ಹೊರಡಿಸಿದ ಆದೇಶ ಎಂದು ಅವರು ಹೇಳಿದ್ದಾರೆ.

ಆದರೆ ಇದು ಯಾರನ್ನೂ ಮರುಳು ಮಾಡಲಾರದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಬಗ್ಗೆ ಟಿಪ್ಪಣಿ ಮಾಡುತ್ತ ಹೇಳಿದೆ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಈ ನಿರ್ಧಾರವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂಬುದು ಸ್ಪಷ್ಟ. ಇದು ಚುನಾವಣೆಗಳು ಮುಗಿಯುವ ವರೆಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಿಸದಿರುವಂತೆ ತೈಲ ಮಾರಾಟ ಕಂಪನಿಗಳಿಗೆ ಸರಕಾರ ಹೇರಿರುವ ಆದೇಶದಂತಹುದೇ ಆಗಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಈ ಬಡ್ಡಿದರ ಇಳಿಕೆಯ ಪ್ರಕಟಣೆಯಿಂದ ತಮ್ಮ ಭವಿಷ್ಯದ ಭದ್ರತೆಗೆಂದು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿರುವ ಕೋಟ್ಯಂತರ ಜನಗಳು ನಾಶವಾಗುತ್ತಾರೆ. ಜನಗಳ ಭವಿಷ್ಯನಿಧಿಯ ಮೇಲಿನ ಬಡ್ಡಿದರವನ್ನು 6.4ಶೇ.ಕ್ಕೆ ಇಳಿಸಲಾಗಿದೆ. ಇದು ಇದುವರೆಗಿನ ಅತ್ಯಂತ ಕಡಿಮೆ ಬಡ್ಡಿದರ, ಹಣದುಬ್ಬರ ದರವನ್ನು ಕೂಡ ಇದು ಸರಿದೂಗಿಸುವುದಿಲ್ಲ. ಇದು ಕೋಟ್ಯಂತರ ಹಿರಿಯ ನಾಗರಿಕರ ಜೀವನಾಧಾರಗಳನ್ನು ಧ್ವಂಸ ಮಾಡುತ್ತದೆ.

ಈ ಬಿಜೆಪಿ ಸರಕಾರ ಕಾರ್ಪೊರೇಟ್‌ಗಳ, ನಿರ್ದಿಷ್ಟವಾಗಿ ತನ್ನ ಬಂಟರ ಲಾಭಗಳನ್ನು, ಭಾರೀ ಪ್ರಮಾಣದ ತೆರಿಗೆ ಕಡಿತಗಳ ಮೂಲಕ ಹೆಚ್ಚಿಸಲು ತದೇಕಚಿತ್ತದಿಂದ ಗಮನ ಕೇಂದ್ರೀಕರಿಸಿದೆ. ಸಾರ್ವಜನಿಕ ವಲಯದ ಖಾಸಗೀಕರಣದ ಮೂಲಕ ರಾಷ್ಟ್ರೀಯ ಆಸ್ತಿಗಳ ಲೂಟಿ ಮತ್ತು ಭಾರತೀಯ ಕೃಷಿಯನ್ನು ಕಾರ್ಪೊರೇಟ್‌ಗಳಿಗೆ ವಹಿಸಿ ಕೊಡುವ ಮೂಲಕ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿ ಮಾಡುತ್ತಿದೆ, ಬಡವರನ್ನು ಮತ್ತಷ್ಟು ಬಡವರಾಗಿಸುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಚುನಾವಣೆಗಳ ನಂತರ ಖಂಡಿತವಾಗಿಯೂ ಜಾರಿಗೊಳಿಸಲಿರುವ ಈ ನಿರ್ಧಾರದ ವಿರುದ್ಧ ಪ್ರತಿಭಟಿಸಿ ಎದ್ದು ನಿಲ್ಲಬೇಕು ಎಂದು ಜನತೆಗೆ ಕರೆ ನೀಡಿದೆ. ಸರಕಾರ ಈ ನಡೆಯನ್ನು ಹಿಂದಕ್ಕೆ ಪಡೆಯುವಂತೆ ಬಲವಂತ ಮಾಡಬೇಕಾಗಿದೆ ಎಂದು ಅದು ಹೇಳಿದೆ.

ಇದನ್ನು ಓದಿ… ಚುನಾವಣೆ ನಡೆಯುತ್ತಿದೆಯಮ್ಮಾ!!

“ಸಾರಿ, ತಪ್ಪು ಸುತ್ತೋಲೆ, ಕಣ್ತಪ್ಪಿನಿಂದ ನಿಮಗೆ ಕೊಟ್ಟೆ..”

ವ್ಯಂಗ್ಯಚಿತ್ರ: ಅಲೋಕ್‍ ನಿರಂತರ್

ಮಾರ್ಚ್ 31 ರಂದು ಪ್ರಕಟಿಸಿದ ದರ ಇಳಿಕೆಗಳು ಹೀಗಿವೆ:

ಯೋಜನೆ ಪ್ರಸಕ್ತ ಬಡ್ಡಿದರ ಪ್ರಕಟಿತ ಬಡ್ಡಿದರ
ಉಳಿತಾಯ ಠೆವಣಿ 4 % 3.5%
5 ವರ್ಷದ ಆರ್.ಡಿ. 5.8% 5.3%
1 ವರ್ಷದ ಠೇವಣಿ 5.5% 4.4%
2 ವರ್ಷಗಳ ಠೇವಣಿ 5.5% 5.8%
5 ವರ್ಷಗಳ ಠೇವಣಿ 6.7% 5.8%
ಮಾಸಿಕ ಆದಾಯ ಖಾತೆ 6.6% 5.7%
ರಾಷ್ಟ್ರೀಯ ಉಳಿತಾಯ ಪತ್ರ 6.8% 5.9%
ಕಿಸಾನ್ ವಿಕಾಸ ಪತ್ರ 6.9% 6.2%
ಸಾರ್ವಜನಿಕ ಭವಿಷ್ಯ ನಿಧಿ 7.1% 6.4%
ಹಿರಿಯ ನಾಗರಿಕರ ಉಳಿತಾಯ ಯೋಜನೆ 7.4% 6.5%
ಸುಕನ್ಯಾ ಸಮೃದ್ಧಿ ಯೋಜನೆ 7.6% 6.9%

 

Donate Janashakthi Media

Leave a Reply

Your email address will not be published. Required fields are marked *