ಬೆಂಗಳೂರು : ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಖಾಸಗೀ ಬಸ್ಸುಗಳಿಗೆ ಟೆಂಡರ್ ಕರೆಯುವ ಮೂಲಕ ಬಿಎಂಟಿಸಿಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಮುಂದಾಗಿದೆ ಎಂದು ಕರಾರಸಾನಿಗಮಗಳ ನೌಕರರ ಫೆಡರೇಶನ್ ( CITU) ಆರೋಪಿಸಿದೆ.
ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ಬಿಎಂಟಿಸಿ ಖಾಸಗೀಕರಣ ಮಾಡುವ ಪ್ರಕಿಯೆಯ ಭಾಗವಾಗಿ ಎಪ್ರಿಲ್ ತಿಂಗಳಲ್ಲಿ ತತ್ಕಾಲಿಕವಾಗಿ ಹಾಗೂ 1500 ಬಸ್ಸುಗಳನ್ನು ಗುತ್ತಿಗೆ ಆಧಾರಿತವಾಗಿ ಖಾಸಗೀಯವರಿಗೆ ನೀಡಲು ಆಡಳಿತ ವರ್ಗದ ಮೂಲಕ ಟೆಂಡರ್ ನ್ನು ಕರೆಯಲಾಗಿದೆ. ಬಿಜೆಪಿ ಸರ್ಕಾರವು ಬಿಎಂಟಿಸಿ ನಿಗಮವನ್ನು ಹಂತ- ಹಂತವಾಗಿ ಖಾಸಗೀಕರಣ ಮಾಡಲು ಹೊರಟಿರುವ ಹುನ್ನಾರವಾಗಿದೆ ಎಂಬುದು ಫೆಡರೇಷನ್ ನ ಆರೋಪವಾಗಿದೆ.
ಇದನ್ನೂ ಓದಿ : ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯ?
ಬಿಎಂಟಿಸಿ ಇಡೀ ದೇಶದಲ್ಲಿಯೇ ಅತ್ಯಂತ ಉತ್ತಮ ನಗರ ಸಾರಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನೀತಿಗಳಿಂದಾಗಿ ಬಿಎಂಟಿಸಿಯು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರಿಗೆ ನಿಗಮಗಳಿಗೆ ನೀಡುತ್ತಿದ್ದ ಎಲ್ಲಾ ನೆರವುಗಳನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಡೀಸಲ್ ಮೇಲೆ 1 ಲೀಟರ್ ಗೆ 45 ರೂಗಳು ತೆರಿಗೆ ಪಡೆಯುತ್ತಿವೆ. ಹಾಗೂ ಇತರೆ ಬಿಡಿಭಾಗಗಳಿಗೆ ಎಕ್ಸೈಸ್ ಡ್ಯೂಟಿ ಹೆಚ್ಚಿಸಲಾಗಿದೆ. ವಿದ್ಯಾರ್ಥಿ ಮತ್ತಿತರೆ ಹತ್ತಾರು ವಿಧದ ರಿಯಾಯಿತಿ ಪಾಸುಗಳನ್ನು ನೀಡಲಾಗಿದೆ. ಸರ್ಕಾರ ಮತ್ತು ಆಡಳಿತ ವರ್ಗ ರೂಪಿಸುವ ನೀತಿಗಳ ಆಧಾರದಲ್ಲಿ ಬೆಂಗಳೂರಿನ ಜನತೆಗೆ ಅತ್ಯುತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿ ಮತ್ತಿತರೆ ರಿಯಾಯಿತಿ ಪಾಸಿನ ಬಾಬ್ತು ಸರ್ಕಾರ ಕೊಡಬೇಕಾಗಿರುವ ಬಾಕಿ ಹಣವನ್ನು ನೀಡುತ್ತಿಲ್ಲ. ಬಿಎಂಟಿಸಿಯು ಸುಮಾರು 1250 ಎಕರೆ ಜಮೀನನ್ನು ಬೆಂಗಳೂರು ನಗರದಲ್ಲಿ ಹೊಂದಿದೆ. ಹತ್ತಾರು ಬೃಹತ್ ಕಟ್ಟಡಗಳು, ಬಸ್ ನಿಲ್ದಾಣಗಳು, 50 ಬಸ್ ಡಿಪೋಗಳು, 6500 ಬಸ್ಸುಗಳು ಹಾಗೂ ಸುಮಾರು 35000 ಕಾರ್ಮಿಕರನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿದೆ. ಬೆಂಗಳೂರು ನಗರ ಹಾಗೂ ಸುತ್ತ- ಮುತ್ತಲ ಹಳ್ಳಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂಗಳೂರು ನಗರದ ಜನರ ಮನ್ನಣೆಯನ್ನು ಗಳಿಸಿರುವ ಇಂತಹ ಬೃಹತ್ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ ಬೆಂಗಳೂರು ಮತ್ತು ಈ ರಾಜ್ಯದ ಜನತೆಗೆ ದ್ರೋಹ ಮಾಡಲು ಹೊರಟಿದೆ ಎಂದು ಕರಾರಸಾನಿಗಮಗಳ ನೌಕರರ ಫೆಡರೇಶನ್ ಅಧ್ಯಕ್ಷರಾದ H D ರೇವಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ : ಬಿಎಂಟಿಸಿ ಖಾಸಗೀಕರಣ ಸಮರ್ಥನೆ ತೇಜಸ್ವಿ ಸೂರ್ಯ ವಿರುದ್ಧ ಸಾರಿಗೆ ನೌಕಕರ ಸಂಘ ಗರಂ
ಸಾರಿಗೆ ಕಾರ್ಮಿಕರು ತಮಗೆ ಕಳೆದ ಹಲವು ದಶಕಗಳಿಂದ ವೇತನದಲ್ಲಿ ಅನ್ಯಾಯವಾಗಿದೆ ಅದಕ್ಕಾಗಿ ವೇತನ ಹೆಚ್ಚಳ ಮಾಡಬೇಕೆಂದು ತೀವ್ರ ಪ್ರತಿಭಟನೆಗೆ ಮುಂದಾಗಿರುವ ಈ ಸಂದರ್ಭದಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವ ಬದಲು ಈ ಸಂದರ್ಭವನ್ನೆ ಬಳಸಿ ಖಾಸಗೀ ಬಸ್ಸುಗಳಿಗೆ ಅವಕಾಶ ನೀಡಲು ಹೊರಟಿದೆ. ಇದಲ್ಲದೆ ಕೇಂದ್ರ ಸರ್ಕಾರವೂ ಸಹ ಎಂವಿ ಕಾಯ್ದೆ ತಿದ್ದುಪಡಿ ಮಾಡಿ ಈ ದೇಶದ ಎಲ್ಲಾ ಸಾರಿಗೆ ನಿಗಮಗಳನ್ನು ಸಂಪೂರ್ಣ ಖಾಸಗೀಕರಣ ಮಾಡಲು ಯೋಜನೆ ರೂಪಿಸಿದೆ. ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಬಿಎಂಟಿಸಿ ಯನ್ನು ಖಾಸಗೀಕರಣ ಮಾಡವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಒಟ್ಟಾರೆ ಬಿಜೆಪಿ ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸಹ ಬಿಎಂಟಿಸಿ ಮತ್ತು ಇತರೆ ಸಾರಿಗೆ ನಿಗಮಗಳನ್ನು ಖಾಸಗೀಯವರಿಗೆ ಹರಾಜು ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ರಾಜ್ಯದ ಮತ್ತು ಬೆಂಗಳೂರಿನ ಜನತೆಗೆ ಮೂಲಭೂತ ಸೌಕರ್ಯಗಳಲ್ಲಿ ಅತೀ ಮುಖ್ಯವಾದ ಸಾರಿಗೆ ಸೌಕರ್ಯವನ್ನು ಒದಗಿಸಬೇಕಾಗಿರುವುದು ಸರ್ಕಾರದ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕರಾರಸಾನಿಗಮಗಳ ನೌಕರರ ಫೆಡರೇಶನ್ ಉಪಾಧ್ಯಕ್ಷರಾದ ಡಾ. K. ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ : ಖಾಸಗೀಕರಣಕ್ಕೆ ವಿರೋಧ: ಸಾರಿಗೆ ನೌಕರರಿಂದ ಪ್ರತಿಭಟನೆ
ಸರ್ಕಾರ ಈ ರಾಜ್ಯದ ನಗರ ಮತ್ತು ಹಳ್ಕಿಗಳಿಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಾಸುಗಳು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಣೆ ಮಾಡುತ್ತಿರುವ ಬೃಹತ್ ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ಮೊದಲನೇ ಭಾಗವಾಗಿ ಬೆಂಗಳೂರು ನಗರದಲ್ಲಿ ಖಾಸಗೀ ವಾಹನಗಳಿಗೆ ಅವಕಾಶ ಕಲ್ಪಿಸಲು ಹೊರಟಿದೆ. ಬೆಂಗಳೂರಿನಲ್ಲಿ 1500 ಬಸ್ಸುಗಳನ್ನು ಓಡಿಸಲು ಬಿಎಂಟಿಸಿ ಆಡಳಿತ ವರ್ಗ ಟೆಂಡರ್ ಕರೆದಿರುವುದರ ವಿರುದ್ದ ಬಿಎಂಟಿಸಿ ಮತ್ತು ಇತರೆ ಸಾರಿಗೆ ನಿಗಮಗಳ ನೌಕರರು ತೀವ್ರವಾದ ಚಳುವಳಿಗಳನ್ನು ನಡೆಸುತ್ತೇವೆ. ಕೂಡಲೆ ರಾಜ್ಯ ಸರ್ಕಾರ ಬಿಎಂಟಿಸಿ ಖಾಸಗೀಕರಣದ ಪ್ರಕ್ರಿಯೆಯನ್ನು ಕೂಡಲೆ ನಿಲ್ಲಿಸಬೇಕೆಂದು ಕರಾರಸಾನಿಗಮಗಳ ನೌಕರರ ಫೆಡರೇಶನ್ (CITU) ಪ್ರಧಾನ ಕಾರ್ಯದರ್ಶಿ H S ಮಂಜುನಾಥ್ ತಿಳಿಸಿದ್ದಾರೆ.