ಕೋವಿಡ್‌ ಈ ಶತಮಾನದ ಅತ್ಯಂತ ದೊಡ್ಡ ಪಿಡುಗು

ಲಾಕ್ ಡೌನ್ ಸಮಯದಲ್ಲಿ, ಎರಡು ತರಹದ ವದಂತಿಗಳು ಕಾಣಿಸಿಕೊಂಡವು. ಮೊದಲನೆಯದು, ವೈರಾಣುಗಳು ಚೀನಾ ಪ್ರಯೋಗಾಲಯಗಳಲ್ಲಿ ತಯಾರಿಸಿ ಅವನ್ನು ಶತ್ರು ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡುವುದಕ್ಕೆ ರವಾನಿಸಿದೆ ಅಂತ. ಇನ್ನೊಂದು ಗಾಳಿಸುದ್ದಿ, ಭಾರತದಲ್ಲಿ ವೈರಾಣುವನ್ನು ಹರಡಲು ತಾಬ್ಲಿಗಿ ಜಮಾತ್ ಮಾಡಿದ ಪಿತೂರಿ ಎಂಬುದು. 

                                                                      – ಗುರುರಾಜ ದೇಸಾಯಿ

ಕೋವಿಡ್‌ 19 ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರಕಾರ ಜನತಾ ಕರ್ಫ್ಯೂ ಅಥವಾ ಲಾಕ್ಡೌನ್‌ ಹೇರಿ ಇಂದಿಗೆ ಒಂದು ವರ್ಷ ಕಳೆಯಿತು. ಈ ಲಾಕ್ಡೌನ್‌ ಲಾಭ ಪಡೆದದ್ದು ಯಾರು? ಈ ಲಾಕ್ಡೌನ್‌ ನಿಂದ ಜನರಿಗೆ ಆದ ಲಾಭ ಎಷ್ಟು, ಎದುರಿಸಿದ ಸಂಕಷ್ಟಗಳೆಷ್ಟು?  ಲಾಕ್ಡೌನ್‌ ಹೆಸರಲ್ಲಿ ಸರಕಾರಗಳು ಏನೆಲ್ಲ ಮಾಡಿದವು? ಲಾಕ್ಡೌನ್‌ ನ ಕಥೆ ಮತ್ತು ವ್ಯಥೆಯನ್ನು ಒಂದೊಂದಾಗಿ ನೋಡ್ತಾ ಹೋಗೋಣ

ವೈರಸ್‌ ಮೊದಲು ಕಾಣಿಸಿದ್ದು ಎಲ್ಲಿ :  ಚೀನಾದ ವುಹಾನ್‌ನಲ್ಲಿ ನೋವೆಲ್ ಕರೋನಾ ವೈರಸ್‌ನ ಮೊದಲ ಪ್ರಕರಣ ಪತ್ತೆಯಾಗಿ ಒಂದು ವರ್ಷ ಕಳೆಯಿತು. ಈ ವೈರಸ್ ಎಲ್ಲಾ ಏಳು ಖಂಡಗಳಲ್ಲೂ ಹರಡಿ ಸುಮಾರು ನೂರು ಮಿಲಿಯನ್‌ನಷ್ಟು ಜನರನ್ನು ಭಾದಿಸಿ, ಎರಡು ಮಿಲಿಯನ್ ಜನರ ಸಾವಿಗೆ ಕಾರಣವಾಯಿತು. ಈ ಒಂದು ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕತೆಯು ನಾಲ್ಕು ಪ್ರತಿಶತಕ್ಕಿಂತಲೂ ಜಾಸ್ತಿ ಕುಸಿಯಿತು.  ಭಾರತದಲ್ಲಿ ಕೋವಿಡ್‌ ಗಿಂತ ಮೊದಲೆ ಕುಸಿತ ಕಂಡಿದ್ಧ ಆರ್ಥಿಕತೆ ಮತ್ತಷ್ಟು ಕುಸಿತ ಕಂಡಿತು. ಇದು ಎರಡನೇ ಮಹಾಯುದ್ಧದ ನಂತರದ ಅತಿ ದೊಡ್ಡ ಆರ್ಥಿಕ ಕುಸಿತ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ.

ಸರಕಾರಗಳು ವೈರಸ್‌ ನಿಯಂತ್ರಣಕ್ಕೆ ತೆಗೆದುಕೊಂಡ ನಿರ್ಧಾರಗಳು : ಕೋವಿಡ್‌ ನಿಯಂತ್ರಿಸಲು  ಜಗತ್ತಿನಲ್ಲಿ  ವಿವಿಧ ಸರಕಾರಗಳು ಹಲವು ಮಾರ್ಗಗಳನ್ನು ಅನುಸರಿಸಿದವು.  ಅಂತರಾಷ್ಟ್ರೀಯ, ರಾಷ್ಟ್ರೀಯ ವಿಮಾನ ಸಂಚಾರಗಳನ್ನು ಸ್ಥಗಿತಗೊಳಿಸಲಾಯಿತು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನ ಹೋಗದಂತೆ  ಗಡಿಯನ್ನು ಬಂದ್‌  ಮಾಡಲಾಯಿತು.  ಜನರು ಒಂದು ಕಡೆ ಸೇರದಂತೆ ನೋಡಿಕೊಂಡರು, ಲಾಕ್‌ಡೌನ್‌ ಹೇರಲಾಯಿತು, ಆರ್ಥಿಕ ಪ್ಯಾಕೇಜ್‌ ಗಳನ್ನು ಘೋಷಿಸಲಾಯಿತು.  ಬಹುತೇಕ ಸರಕಾರಗಳು ಚೀನಾವನ್ನು ದ್ವೇಷಿಸುತ್ತಿರುವ ಕಾರಣ ಇದು ಚೀನಾ ವೈರಸ್‌ ಎಂದೆಲ್ಲ ಆಪಾದನೆಯನ್ನು ಮಾಡತೊಡಗಿದರು, ತಬ್ಲೀಗ್‌ ವೈರಸ್‌ ಎಂದು ವೈರಸ್‌ ಗೆ ಧಾರ್ಮಿಕ ಬಣ್ಣ ಬಳೆಯಲಾಯಿತು.  ಮಾಧ್ಯಮಗಳು  ತಮ್ಮ ಟಿಆರ್‌ಪಿ ಗಾಗಿ ಆರ್ಭಟಿಸಿದವು. ಸಣ್ಣದನ್ನು ವೈಭವಿಕರಿಸಿ ಜನರನ್ನು, ಸರಕಾರವನ್ನು ಹೆದರಿಸುವ ಕೆಲಸ ಮಾಡಿದವು ಆಡಳಿತ ವ್ಯವಸ್ಥೆಯು ಕೋವಿಡ್‌ ನ್ನು ದುರುಪಯೋಗದ ಮೂಲಕ ಸದುಪಯೋಗ ಪಡಸಿಕೊಂಡಿತು.

“ಲಾಕ್ಡೌನ್‌”  ಹುಟ್ಟಿಸಿದ ಭಯ: ಈ ಪದವನ್ನು ಕೇಳಿದಾಕ್ಷಣ ಈಗಲೂ ಭಯ ಬೀಳಿಸುವ ಪದವಾಗಿದೆ. ಕೋವಿಡ್‌ ನ ಎರಡನೆ ಅಲೆಯನ್ನು ನಿಯಂತ್ರಿಸಲು ಸರಕಾರ ಲಾಕ್ಡೌನ್‌ ಘೋಷಿಸುವುದಾಗಿ ಚರ್ಚೆ ನಡೆಸುತ್ತಿವೆ ಎಂದು ಪತ್ರಿಕೆಗಳಲ್ಲಿ, ಟಿವಿ ಗಳಲ್ಲಿ ನೋಡಿದಾಕ್ಷಣ, ಕೇಳಿದಾಕ್ಷಣ, ಓದಿದಾಕ್ಷಣ ನಿಟ್ಟುಸಿರುವ ಬೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಮಾರ್ಚ್ 22, 2020 ರಂದು ಕೊರೊನಾ ಸೋಂಕು ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮನೆಯೊಳಗೆ ಇರಬೇಕೆಂದು ಘೋಷಿಸಿದರು. ಹಾಗಾಗಿ, 14 ಗಂಟೆಗಳ ಕಾಲ ‘ಜನತಾ ಕರ್ಫ್ಯೂ’ ಜಾರಿಗೆ ಬಂದಿತು. ಅದಾದ ಬಳಿಕ ಹಂತ ಹಂತವಾಗಿ ಲಾಕ್ ಡೌನ್ ವಿಸ್ತರಿಸಲಾಯಿತು. ಮಾರ್ಚ್ 24 ರಂದು ಕೊರೊನಾ ತಡೆಗೆ ದೇಶದಲ್ಲಿ ಪ್ರಧಾನಿ ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದರು. ಪರಿಸ್ಥಿತಿ ಗಂಭೀರತೆ ಅರಿತು ಪರಿಗಣಿಸಬೇಕು. ಅಗತ್ಯ ಸರಕುಗಳು ಲಭ್ಯವಿರುತ್ತವೆ ಎಂದು ಅವರು ಟ್ವೀಟ್‌ನಲ್ಲಿ ಭರವಸೆ ನೀಡಿದ್ದರು.  ಕೇಂದ್ರ ಸರ್ಕಾರವು ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿತು.  ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಬರುವ ಜಿಲ್ಲೆಗಳಲ್ಲಿ ಸ್ವಲ್ಪ ವಿನಾಯಿತಿಯೊಂದಿಗೆ ಮೇ 17 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಯಿತು. ಎಲ್ಲ ಕೆಂಪು ವಲಯ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಮುಂದುವರೆಸಿತು.  75 ದಿನಗಳ ಸುದೀರ್ಘ ಲಾಕ್ ಡೌನ್ ಬಳಿಕ ಹಂತ ಹಂತವಾಗಿ ಅನ್‌ಲಾಕ್‌ಗೆ ಚಾಲನೆ ಸಿಕ್ಕಿತು.  ನಾಲ್ಕು ಹಂತದಲ್ಲಿ ಅನ್‌ಲಾಕ್‌  ಮಾಡಲಾಯಿತು.

ಏರುತ್ತಲೇ ಹೋಯೀತು ಕೋವಿಡ್‌ ನಂಬರ್‌ :  ಮಾರ್ಚ್ 25 ಕ್ಕೆ ಭಾರತದಲ್ಲಿ 600 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು.  ಮಾರ್ಚ್‌ 31 ಕ್ಕೆ 1,397 ಕೋವಿಡ್ ಪ್ರಕರಣ ದಾಖಲಾಗಿ, 35 ಸಾವು ಸಂಭವಿಸಿದ್ದವು.  ಮೇ 1ಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ 42,505 ಕ್ಕೆ ಏರಿದ್ದು, 1,391 ಜನರು ಸಾವನ್ನಪ್ಪಿದ್ದರು.  ಜೂನ್‌ ವೇಳೆಗೆ ನಿಧಾನಕ್ಕೆ ಭಾರತ ಒಂದೊಂದು ರಾಷ್ಟ್ರಗಳನ್ನು ಹಿಂದಿಕ್ಕಿ ಮುಂದೆ ಸಾಗೀತು. ಈಗಲೂ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಭಾರತ 3 ನೇ ಸ್ಥಾನದಲ್ಲಿದೆ. ಒಟ್ಟು ಸೋಂಕಿತರ ಸಂಖ್ಯೆ : 1,17, 34, 058 ಇದೆ. 1.60,477 ಜನ ಸಾವನ್ನಪ್ಪಿದ್ದಾರೆ.

ಕೋವಿಡ್‌ ಗೆ ಧಾರ್ಮಿಕ ಬಣ್ಣ ಬಳಿದರು : ಮಾರ್ಚ್ 31 ರಂದು ದೆಹಲಿಯ ನಿಜಾಮುದ್ದೀನ್ ಪ್ರದೇಶವು ದೇಶದ ಕೊರೊನಾ ವೈರಸ್ ‘ಹಾಟ್‌ಸ್ಪಾಟ್‌’ಗಳಲ್ಲಿ ಒಂದಾಗಿ ಹೊರಹೊಮ್ಮಿತು ಎಂದು ಹೇಳುವ ಮೂಲಕ ಕೋವಿಡ್‌ ಗೆ ಧಾರ್ಮಿಕ ಬಣ್ಣವನ್ನು ಬಳೆಯಲಾಯಿತು. ತಬ್ಲಿಘಿ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಂಡ ಹಲವರಲ್ಲಿ ಪಾಸಿಟಿವ್‌ ಪ್ರಕರಣಗಳು ಪತ್ತೆಯಾದ ಕಾರಣ ಇವರು ಹಿಂದುತ್ವವನ್ನು ನಾಶ ಮಾಡುವುದಕ್ಕಾಗಿ ಈ ವೈರಸ್‌ ಹಬ್ಬಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಯಿತು.   ನಾಣ್ಯಕ್ಕೆ, ಪಾತ್ರಗಳಿಗೆ ಎಂಜಲು ಹಚ್ಚುವುದು, ಅಲ್ಲಲ್ಲಿ ಉಗುಳುವ ಫೇಕ್‌ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಮುಸ್ಲೀಂ ಸಮುದಾಯದ ವಿರುದ್ಧ ಅಪಪ್ರಚಾರ ಮಾಡಲಾಯಿತು. ಬೆಂಗಳೂರಿನ ಪಾದರಾಯನಪುರದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಗಳು ಕೇಳಿ ಬಂದವು. ಈ ಎರಡು ಘಟನೆಗಳನ್ನು ದೃಶ್ಯ ಮಾಧ್ಯಮಗಳು ವೈಭವೀಕರಿಸಿದವು, ತಬ್ಲೀಘಿ ವೈರಸ್‌, ಪಾದರಾಯನ ಪುರದ ಪಾಪಿಗಳು ಎಂಬೆಲ್ಲ ಪ್ರಚೋಧನಾಕಾರಿ ಸುದ್ಧಿಗಳನ್ನು ಭಿತ್ತರಿಸಿದವು.

ಸರಕಾರಗಳು ಘೋಷಿಸಿದ ಆರ್ಥಿಕ ಪ್ಯಾಕೇಜ್‌ : ಮೇ 12 ರಂದು ಕೋವಿಡ್‌ನಿಂದ ತತ್ತರಿಸಿದ್ದ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ₹ 20 ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜ್ ಘೋಷಿಸಿದರು. ಈ ಪ್ಯಾಕೇಜ್ ಗಾತ್ರವು ಜಿಡಿಪಿಯ 10% ರಷ್ಟಾಗಿದ್ದು, ಇದರಲ್ಲಿ ಆರ್‌ಬಿಐ ಮತ್ತು ಈ ಹಿಂದೆ ಹಣಕಾಸು ಸಚಿವರು ಮಾಡಿದ ಪ್ರಕಟಣೆಗಳು ಸೇರಿವೆ ಎಂದು ಹೇಳಿದರು. ಕರ್ನಾಟಕದಲ್ಲೂ ಕೆಲ ವಿಭಾಗಗಳಿಗೆ ವಿಶೇಷ ಪ್ಯಾಕೇಜ್‌ ನ್ನು ಘೋಷಿಸಲಾಯಿತು.  ಮೋದಿ ಸರಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್‌ ಬಗ್ಗೆ ಸಾಕಷ್ಟು ಜನ ಆರ್ಥಿಕ ತಜ್ಙರು ಪ್ರತಿಕ್ರೀಯೆ ನೀಡಿದರು.  ಈಗಾಗಲೇ ಮೊದಲ ಲಾಕ್‌ಡೌನ್ ಆರಂಭಿಸಿದ ನಂತರ ಮಾರ್ಚ್‍ 27ರಂದು ಪ್ರಕಟಿಸಿದ ‘ ೧.೭ಲಕ್ಷ ಕೋಟಿ ರೂ.ಗಳ ‘ಗರೀಬ್ ‍ಕಲ್ಯಾಣ್‍’ ಪ್ಯಾಕೇಜ್ ಮತ್ತು ರಿಝರ್ವ್ ಬ್ಯಾಂಕ್ ಪ್ರಕಟಿಸಿದ ಹಣಕಾಸು ಕ್ರಮಗಳೂ ಈ ೨೦ಲಕ್ಷ ಕೋಟಿಯಲ್ಲಿ, ಸೇರಿವೆ ಎಂದು ಹೇಳಿದರು.  ಇದರ ಮೊತ್ತ ಎಷ್ಟೆಂದು ಅವರೇನೂ ಹೇಳಿಲ್ಲ. ಆದರೆ ಹಲವು ಜನ ತಜ್ಞರು ಗಮನಿಸಿದ ಮುಖ್ಯ ಅಂಶ ಎಂದರೆ  ವಾಸ್ತವವಾಗಿ ಜನಸಾಮಾನ್ಯರಿಗೆ ಅದುವರೆಗಿನ ಈ ಕ್ರಮಗಳಿಂದ ಏನೇನೂ ಸಿಕ್ಕಿರದಿದ್ದರೂ, ಅದರ ಮೊತ್ತ ಆಗಲೇ ೯.೮ ಲಕ್ಷ ಕೊಟಿ ರೂ. ಆಗಿದೆ ಎಂದು ಪರಿಣಿತರು ಲೆಕ್ಕ ಹಾಕಿದ್ದಾರೆ. ಮತ್ತು ಗರೀಬ್‍ ಕಲ್ಯಾಣ್‍ ಯೋಜನೆಯಲ್ಲಿಸುಮಾರು 80 ಸಾವಿರ ಕೋಟಿರೂ.ಗಳಷ್ಟು, 2020-21ರ ಬಜೆಟಿನಲ್ಲಿ ಘೊಷಿಸಿದ್ದ  ಕ್ರಮಗಳು ಎಂಬುದನ್ನೂ ನಾವಿಲ್ಲಿ ಗಮನಿಸಬೇಕು. ಜಗತ್ತಿನಲ್ಲೆಲ್ಲ ಘೋಷಣೆಯಾದ ಪರಿಹಾರ ಪ್ಯಾಕೇಜ್‌ದ ಮೊತ್ತಗಳನ್ನು ಗಮನಿಸಿದರೆ ದೇಶ ಮತ್ತು ಮತ್ತು ದೇಶದ ಜನತೆ  ಬಿಕ್ಕಟ್ಟಿನಿಂದ ಪಾರಾಗಲು ಮಾಡುವ ಹೆಚ್ಚುವರಿ ವೆಚ್ಚ. ಆದರೆ ನಮ್ಮ ದೇಶದಲ್ಲಿ ಪರಿಹಾರಕ್ಕಿಂತ ಸಾಲದ ಅವಕಾಶವನ್ನು ನೀಡಲಾಗಿದೆ. ಇದನ್ನು ಪರಿಹಾರ ೆಂದು ಕರೆಯಲು ಸಾಧ್ಯವಿಲ್ಲ.  ಮತ್ತೆ ಹಳೆಯ ಹಾಗೂ ಬಜೆಟ್ ನಲ್ಲಿಯ ಯೋಜನೆಗಳನ್ನೆ ಇಲ್ಲಿ ಗುರುತಿಸಲಾಗಿದೆ. ಇದು ಹೇಗಿದೆ ಅಂದರೆ ಹೊಸ ಪೊಟ್ಟಣವನ್ನು ಕಟ್ಟಿ ಕೊಟ್ಟಂತಿದೆ.  ವಾಸ್ತವವಾಗಿ ಸರಕಾರ ಕೊವಿಡ್ ಪರಿಹಾರವನ್ನು ಕೊಟ್ಟಿದ್ದು ಎಷ್ಟೆಂದರೆ 2 ಲಕ್ಷ ಕೋಟಿ ರೂ ಮಾತ್ರ.  10 ಜಿಡಿಪಿ ಯಷ್ಟು ಪರಿಹಾದ ಪ್ಯಾಕೇಜ್ ಎಂದು ಹೇಳಿದ್ದ ಪ್ರಧಾನಿವರ ವಾಸ್ತವ ಪ್ಯಾಕೇಜ್ ಕೇವಲ 1% ಮಾತ್ರ. ಒಟ್ಟಾರೆ ಹೇಳುವುದಾದರೆ  ಈ ಪ್ಯಾಕೆಜ್ ಪರಿಹಾರವೂ ಇಲ್ಲ, ಸ್ವಾವಲಂಬನೆಯೂ ಇಲ್ಲ, ಕಾರ್ಪೊರೇಟ್‍ ಕುಳಗಳಿಗೆ ಮಾತ್ರ ಉತ್ತೇಜನೆ ನೀಡಬಹುದಾದ ಪ್ಯಾಕೇಜ್ ಆಗಿದೆ. ಹಾಗಾಗಿ 20 ಲಕ್ಷ ಕೋಟಿಯಲ್ಲಿ ಒಂದು ಸೊನ್ನೆ ತೆಗೆದು 2 ಲಕ್ಷ ಕೋಟಿಯ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಎಂದು ಹೇಳಬಹುದಾಗಿದೆ. ಅದಾಣಿ, ಅನಿಲ್‍ ಅಂಬಾನಿ, ವೆದಾಂತ ,ಕಲ್ಯಾಣಿ, ಟಾಟಾಪವರ್, ಜೆಎಸ್‍ಡಬ್ಲ್ಯುಸ್ಟೀಲ್, ಜಿವಿಕೆ, ಹಿಂಡಾಲ್ಕೊ, ಜಿಎಂಆರ್‍ ಮುಂತಾದವರು ಮೋದಿ ಸರಕಾರದ ಈ ನಾಲ್ಕನೇಕಂತಿನ ಪ್ರಮುಖ ‘ದೇಶೀ’ ಫಲಾನುಭವಿಗಳು.

ರಕ್ಷಣಾ ಉತ್ಪಾದನಾ ವಲಯದಲ್ಲಿ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಾಗಿದೆ. ಮದ್ದು ಗುಂಡು ತಯಾರಿಕೆಯಲ್ಲಿ ಸಾರ್ವಜನಿಕ-ಖಾಸಗಿಭಾಗೀದಾರಿಕೆ, ಜತೆಗೆ 74ಶೇ. ಎಫ್‍ಡಿಐಗೆ ನೇರ ಅವಕಾಶದ ಮೂಲಕ ರಕ್ಷಣಾ ಉತ್ಪಾದನಾ ವಲಯದ ಖಾಸಗೀಕರಣದ ನಕಾಶೆಯನ್ನು ಕೊಟ್ಟಿದೆ.

ವಲಸೆ ಕಾರ್ಮಿಕರ ಸಂಕಷ್ಟಗಳು : ಕೊರೊನಾ ವೈರಸ್‌ ಜಗತ್ತಿನಾದ್ಯಂತ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಹೆಚ್ಚಿಸಿದೆ. ಒಂದು ಕಡೆ ರೋಗವಾಹಕರಾಗುವ ಅಪಾಯ, ಮತ್ತೊಂದು ಕಡೆ ಸಾಮಾಜಿಕ ಭದ್ರತೆಯ ಅಭಾವಕ್ಕೀಡಾಗಿದ್ದಾರೆ.  ಜಗತ್ತಿನ ಎಲ್ಲ ರಾಷ್ಟ್ರಗಳು ವಲಸಿಗರ ಸೇವೆಯನ್ನು ಬಯಸುತ್ತವೆ. ಮಹಾ ನಗರಗಳ ನಿರ್ಮಾಣದಲ್ಲಿಅವರಿಲ್ಲದೆ ಆಗುವುದಿಲ್ಲ. ವಲಸಿಗರಿಗೂ ಜೀವನೋಪಾಯಕ್ಕೆ ಇದು ಅನಿವಾರ್ಯ. ಆದರೆ ಕೊರೊನಾ ವೈರಸ್‌ ವಿಶ್ವಾದ್ಯಂತ ಅಸಂಘಟಿತ ವಲಯದ ಕೋಟ್ಯಂತರ ಬಡ ವಲಸಿಗರನ್ನು ನಾನಾ ಸಂಕಟಕ್ಕೆ ತಳ್ಳಿದೆ. ಒಂದು ಕಡೆ ಕೆಲಸವಿಲ್ಲ, ಸಾಮಾಜಿಕ ಭದ್ರತೆಯಂತೂ ಮೊದಲೇ ಇಲ್ಲ. ಸರಕಾರದ ನೆರವಿನ ಪ್ಯಾಕೇಜ್‌ನ ಕೊರತೆ ಅವರನ್ನು ಹೈರಾಣಾಗಿಸಿದೆ.  ಲಾಕ್‌ಡೌನ್ ಪರಿಣಾಮ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ವಲಸೆ ಕಾರ್ಮಿಕರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಉದ್ಯೋಗ ಕಳೆದುಕೊಂಡು ಮೂರು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ದಿನ ದೂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮರಳುವ ಪ್ರಯತ್ನವನ್ನು ಮಾಡಿದರು. ಒರಿಸ್ಸಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಿಂದ ತುತ್ತಿನ ಚೀಲ ತುಂಬಿಸಲು ಬೆಂಗಳೂರಿಗೆ ಬಂದಿದ್ದ ಕಾರ್ಮಿಕರು ಊರಿಗೆ ವಾಪಸ್‌ ಹೋಗಲು ನಿರ್ಧಾರವನ್ನು ಮಾಡಿದರು. ಇದನ್ನೆ ಬಂಡವಾಳವಾಗಿಸಿಕೊಂಡ ಸರಕಾರಗಳು ರಾಜ್ಯದ ಜನರಿಗೆ ದುಪ್ಪಟ್ಟು ಟಿಕೇಟ್‌ ದರ ನಿಗದಿ ಮಾಡಿದವು. ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ದುಪ್ಪಟ್ಟು ದರ ನಿಗದಿಮಾಡಿ ರೈಲು ವ್ಯವಸ್ಥೆ ಮಾಡಲಾಯಿತು. ಆ ಹಣವನ್ನು ನೀಡಲಾಗದೆ ಅನೇಕ ಕಾರ್ಮಿಕರು ನಡಿಗೆಯ ಮೂಲಕ ಊರುಗಳನ್ನು ತಲುಪಲು ಪ್ರಯತ್ನಿಸಿದರು.  ಆ ಸಂದರ್ಭದಲ್ಲಿ ಅನೇಕರು ದಾರಿಯ ಮಧ್ಯೆ ಸಾವನ್ನಪ್ಪಿದರು. ಮಹಾರಾಷ್ಟ್ರದ ಔರಂಗಬಾದ್‌ನ ನಗರದ ರೈಲು ಹಳಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 17 ಮಂದಿ ಸಾವಿಗೀಡಾದ ಘಟನೆಯು ನಡೆಯಿತು.  ಕಾರ್ಮಿಕ ಸಂಘಟನೆಗಳು ಅದರಲ್ಲೂ ವಿಶೇಷವಾಗಿ ಸಿಐಟಿಯು, ವಿರೋಧ ಪಕ್ಷ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಊರುಗಳನ್ನು ತಲುಪುವಂತೆ ಮಾಡಿದರು.

ಚೀನಾ ಪಿತೂರಿ’ ವದಂತಿ ; ಲಾಕ್ ಡೌನ್ ಸಮಯದಲ್ಲಿ, ಎರಡು ತರಹದ ವದಂತಿಗಳು ಕಾಣಿಸಿಕೊಂಡವು. ಮೊದಲನೆಯದು, ವೈರಾಣುಗಳು ಚೀನಾ ಪ್ರಯೋಗಾಲಯಗಳಲ್ಲಿ ತಯಾರಿಸಿ ಅವನ್ನು ಶತ್ರು ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡುವುದಕ್ಕೆ ರವಾನಿಸಿದೆ ಅಂತ. ಇನ್ನೊಂದು ಗಾಳಿಸುದ್ದಿ, ಭಾರತದಲ್ಲಿ ವೈರಾಣುವನ್ಮು ಹರಡಲು ತಾಬ್ಲಿಗಿ ಜಮಾತ್ ಮಾಡಿದ ಪಿತೂರಿ ಎಂಬುದು.  ಇದನ್ನು ಹುಟ್ಟಿಸಿದ್ದು, ರಾಜಕೀಯವಾಗಿ ಚೀನಾಗೆ ವಿರುದ್ಧವಾಗಿರುವ ಸರಕಾರಗಳು. ಆದರೆ ಜಾಗತಿಕ ವಿಜ್ಞಾನಿಗಳ ಸಮುದಾಯ ಇದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿತು. ಇದಕ್ಕೆ ವೈರಾಣುಗಳನ್ನು ಪ್ರಯೋಗಾಲಯಗಳಲ್ಲಿ ತಯಾರಿಸಲಾಗುವುದಿಲ್ಲ ಎಂಬುದು ಕಾರಣವಲ್ಲ. ಇಂತಹ ರಾಜಕೀಯ ಆರೋಪಗಳನ್ನು ವಿಜ್ಞಾನಿಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರಸಿದ್ಧ ವೈಜ್ಞಾನಿಕ ಪತ್ರಿಕೆ ಒಂದರಲ್ಲಿ ಕೊವಿಡ್ ವೈರಸ್ ಪ್ರಾಕೃತಿಕ ಮೂಲದಿಂದ ಬಂದಿದ್ದು ಕೃತಕ ಅಲ್ಲ ಎಂದು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರಕಟಿಸಿತು. ಕೊವಿಡ್ ವೈರಸ್ ಕೃತಕವಾಗಿ ತಯಾರಿಸಿದ್ದು ಎಂಬುದಕ್ಕೆ ವೈಜ್ಞಾನಿಕ ವಿಶ್ಲೇಷಣೆಯನ್ನು ಯಾರೂ ಕೊಡಲಿಲ್ಲ. ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಚೀನಾದ ವಿಜ್ಞಾನಿಗಳು ಪ್ರಪಂಚದ ಇತರ ವಿಜ್ಞಾನಿಗಳೊಂದಿಗೆ ಹಂಚಿಕೊಂಡು, ಲಸಿಕೆಯ ತಯಾರಿಕೆ, ಸೊಂಕು ನಿವಾರಣೆ ಮುಂತಾದ ಪ್ರಯತ್ನಗಳಲ್ಲಿ ಸಹಾಯಮಾಡಿದರು. ಆದರೆ ಔಷಧಿ ಕಂಪನಿಗಳು ತಮ್ಮ ನಂತರದ ಸಂಶೋಧನೆಗಳನ್ನು ‘ವ್ಯವಹಾರದ ಗುಟ್ಟು’ ಎಂಬ ಕಾರಣವೊಡ್ಡಿ ಬೇರೆ ಯಾರೊಂದಿಗೂ ಅದನ್ನು ಹಂಚಿಕೊಳ್ಳುವುದಿಲ್ಲ. ಇವೆಲ್ಲವನ್ನೂ ಗಮನಿಸಿ ‘ಚೀನಾ ಪಿತೂರಿ ಸಿದ್ದಾಂತ’ಗಳನ್ನು ಓದುಗರು ಸತ್ಯಾಸತ್ಯತೆಗಳನ್ನು ಪರಾಮರ್ಶಿಸಬಹುದು ಎಂದು ಡಾ. ಸವ್ಯಸಾಚಿ ಚಟರ್ಜಿ ಹೇಳುತ್ತಾರೆ.

ಸಿಕ್ಕ ವ್ಯಾಕ್ಸಿನ್‌ ಸುತ್ತ ಪ್ರಶ್ನೆಗಳ ಹುತ್ತ :  ಕೊರೊನಾ ನಿಯಂತ್ರಣಕ್ಕೆ ಲಸಿಕೆಯನ್ನು ಕಂಡುಹಿಡಿಯಲಾಯಿತು. ಆದರೂ ಅದರ ಸುತ್ತ ಎದ್ದಿದ್ದ ಪ್ರಶ್ನೆಗಳ ಹುತ್ತಕ್ಕೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಈಗಿರುವ ಮಾಹಿತಿಯಂತೆ ಎರಡನೇ ಲಸಿಕೆ ಪಡೆದ 14 ದಿನಗಳ ನಂತರ, ಫಲಾನುಭವಿಗಳಲ್ಲಿ ರೋಗನಿರೋಧಕ ಶಕ್ತಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ರೋಗಲಕ್ಷಣ ಸಹಿತ ಮತ್ತು ರೋಗ ಲಕ್ಷಣ ರಹಿತ ಜನರಿಂದ ಅತ್ಯಂತ ಕ್ಷಿಪ್ರವಾಗಿ, ಸುಲಭದಲ್ಲಿ ಇತರರಿಗೆ ಹರಡುತ್ತದೆ. ಹಾಗಾಗಿ ಈ ಲಸಿಕೆಯನ್ನು ಇತರ ಲಸಿಕೆಗಳನ್ನು ನೀಡುವಂತೆ, ಅಂಗನವಾಡಿ, ಶಾಲೆ ಹಾಗೂ ನಿರ್ದಿಷ್ಟ `ಬೂತ್’ಗಳಲ್ಲಿ ಫಲಾನುಭವಿಗಳನ್ನು ಗುಂಪುಸೇರಿಸಿ ನೀಡುವುದು ಅಪಾಯ. ಈಗಾಗಲೇ ಸಮಯಾಭಾವ ಮತ್ತು ಕಾರ್ಯಕರ್ತರ ಕೊರತೆ ಇರುವಾಗ, ಮನೆ ಮನೆಗೆ ತೆರಳಿ ನೀಡುವುದು ಸಾಧ್ಯವೇ? ಹಾಗೂ ಒಂದೇ ಮನೆಯಲ್ಲಿ ಬೇರೆ ಬೇರೆ ಆದ್ಯತೆ ಇರುವ ಸದಸ್ಯರಿರುವಾಗ ಇವರೆಲ್ಲರಿಗೆ ಒಂದೇ ಬಾರಿ ನೀಡುವುದು ಅಸಾಧ್ಯ. ಹೀಗಾಗಿ ಒಂದೇ ಮನೆಗೆ ಹಲವು ಬಾರಿಯ ಭೇಟಿಯ ಅವಶ್ಯಕತೆ ಇದೆ. ಅದಾಗಲೇ ಕೊವಿಡ್ ಬಂದವರಿಗೆ ಲಸಿಕೆ ನೀಡಬೇಕೆ? ಬೇಡವಾದರೆ ಎಷ್ಟು ಕಾಲ? ಇಷ್ಟೊಂದು ಸಂಖ್ಯೆಯ ಲಸಿಕೆ ನೀಡಲು ಬೇಕಾದ ಸಿರಿಂಜ್ ಹಾಗೂ ಸೂಜಿಗಳನ್ನು ಪೂರೈಸಲು ಸಾಧ್ಯವೆ? ಬಿಲಿಯಗಟ್ಟಲೆ ಜನರಿಗೆ ಲಸಿಕೆ ನೀಡುವಾಗ ಹಲವಾರು ಹೊಸ ತೊಂದರೆ ಫಲಾನುಭಾವಿಗಳಲ್ಲಿ ಕಾಣಿಸಿಕೊಳ್ಳಬಹುದು. ಅತ್ಯಂತ ಕನಿಷ್ಟ ಪ್ರಮಾಣದಲ್ಲಿ ಗಂಭೀರ ತೊಂದರೆಯೂ ಕಾಣಿಸಿಕೊಳ್ಳಬಹುದು. ಈಗ ಅದನ್ನು ತತ್‍ಕ್ಷಣ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಮಿಂಚಿನ ವೇಗದಲ್ಲಿ ಸತ್ಯ, ಮತ್ತು ಸುಳ್ಳುಗಳನ್ನು ಪ್ರಪಂಚದಲ್ಲೆಡೆ ಹರಡಲು ಸಾಧ್ಯವಿರುವ ಈ ಕಾಲದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಹಿನ್ನಡೆಯಾಗುವ ಸಂಭವ ಹೆಚ್ಚು ಎಂದು ಖ್ಯಾತ ವೈಧ್ಯರಾದ ಡಾ| ಕೆ. ಸುಶೀಲಾ ರವರು ಅಭಿಪ್ರಯಾ ಪಟ್ಟಿದ್ದಾರೆ.

ಜಾಗತಿಕ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜಾರ್ಜ್‌ ಮ್ಯಾಸೊನ್ ಯುನಿವರ್ಸಿಟಿಯ ಆರ್ಥಿಕ ತಜ್ಞ ಟೈಲರ್ ಕೋವೆನ್ “ ಪ್ರಪಂಚದ ವಿವಿಧ ದೇಶಗಳು ಕೋವಿಡ್‌ಗೆ ಹೇಗೆ ಪ್ರತಿಕ್ರಿಯಿಸಿವೆ ಎಂದು ಈಗಲೇ ನಿರ್ಣಯಿಸಲಾಗುವುದಿಲ್ಲ. ಯಾವ ನಿರ್ಧಾರ ಸರಿ ಯಾವುದು ತಪ್ಪು ಎನ್ನುವುದು ಅರ್ಥವಾಗಲು ದಶಕಗಳೇ ಬೇಕಾಗಬಹುದು” ಎನ್ನುತ್ತಾರೆ. ಕೆಲವು ದೇಶದ ಸರ್ಕಾರಗಳು ತ್ವರಿತವಾಗಿ ಸ್ಪಂದಿಸಿದರೆ ಇನ್ನೂ ಕೆಲವು ದೇಶಗಳಲ್ಲಿ ಜನ ಸರ್ಕಾರದ ಮೇಲಿನ‌ ನಂಬಿಕೆ ಕಳೆದುಕೊಳ್ಳುವಂತಾಯಿತು. ಜನತೆಯ ಬದುಕು ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವ ತೀರ್ಮಾನಗಳು ಸರ್ಕಾರದ ಮೇಲೆ ಜನತೆಗಿರುವ ನಂಬಿಕೆಯನ್ನೂ ಪ್ರಭಾವಿಸುತ್ತದೆ ಎಂದೂ ಅವರು ಅಭಿಪ್ರಾಯ ಪಡುತ್ತಾರೆ.

ಸರಕಾರದ ಖಾಸಗೀಕರಣದ ಮುಖ : ಕೋವಿಡ್‌ ಎಂದರೆ ಸರಕಾರಕ್ಕೆ ಇಷ್ಟವೆಂದು ಕಂಡಿದ್ದು ಸರಕಾರ ತಂದ ಅಪಾಯಕಾರಿ ರೈತ ಮತ್ತು ಕಾರ್ಮಿಕ ಕಾಯ್ದೆಗಳಿಂದ ಸೆಪ್ಟಂಬರ್‌ ತಿಂಗಳಲ್ಲಿ ಈ ಕಾಯ್ದೆಗಳನ್ನು ಜಾರಿ ಮಾಡಲಾಯಿತು. ಈ ಕಾಯ್ದೆಗಳನ್ನು ರದ್ದು ಮಾಡುವಂತೆ ರೈತರು, ಕಾರ್ಮಿಕರು ಜನಪರ ಸಂಘಟನೆಗಳ ಜೊತೆಸೇರಿ  ನಿರಂತರ ಪ್ರತಿಭಟನೆಗಳನ್ನು ನಡೆಸಿದರು.  ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ನವೆಂಬರ್‌ 26 ರಿಂದ ಇಲ್ಲಿಯವರೆಗೆ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾರ್ಚ್‌ 26 ಕ್ಕೆ  ನಾಲ್ಕು ತಿಂಗಳು ಪೂರ್ಣಗೊಳ್ಳಲಿದೆ. ರೈತರ ಹೋರಾಟವನ್ನು ಹತ್ತಿಕ್ಕುವುದಕ್ಕಾ ಕೇಂದ್ರ ಸರಕಾರ ಜಲಫಿರಂಗಿ ಬಳಸಿತು, ಲಾಠಿಚಾರ್ಜ್‌ ನಡೆಸಿತು. ಇದೆಲ್ಲವನ್ನು ಮೀರಿ ರೈತರು ಪ್ರತಿಭಟನೆಯನ್ನು ಮುಂದುವರೆಸಿದರು. ರೈತರು ದೆಹಲಿಯತ್ತ ಬಾರದಂತೆ ರಸ್ತೆ ಸಿಮೆಂಟ್‌ ಕಾಂಕ್ರೀಟ್‌ ಗೋಡೆಯನ್ನು ನಿರ್ಮಿಸಲಾಯಿತು. ರಸ್ತೆಗಳಲ್ಲಿ ಮೊಳೆಯನ್ನು ನೆಡಲಾಯಿತು. ಇದ್ಯಾವದಕ್ಕೂ ಜಗ್ಗದೆ ರೈತರು ಸಾಗರದಂತೆ ಹೋರಾಟಕ್ಕೆ ಹರಿದು ಬರುತ್ತಿದ್ದಾರೆ.

ಒಟ್ಟಾರೊ ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿದರೆ, ಆಳುವ ಸರಕಾರಗಳು  ಇದನ್ನು ಲಾಭವಾಗಿಸಿಕೊಂಡು ಖಾಸಗೀಕರಣದ ಎಲ್ಲ ಪ್ರಕ್ರೀಯೆಗಳನ್ನು  ಮಾಡಿ ಮುಗಿಸಿ ಬಿಟ್ಟರು. ಕರೋನಾಕ್ಕೆ ವ್ಯಾಕ್ಸಿನ್ ಬಂದ ಮೇಲೂ‌ ಅದು ಪ್ರಪಂಚದಾದ್ಯಂತ ಉಳಿಸಿರುವ ಕರಿ ನೆರಳು, ಆರ್ಥಿಕ ಹಿಂಜರಿತ, ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ದಶಕಗಳೇ ಬೇಕಾಗಬಹುದೇನೋ. ಖಂಡಿತವಾಗಿಯೂ ಕರೋನಾ ಈ ಶತಮಾನದ ಅತ್ಯಂತ ದೊಡ್ಡ ಪಿಡುಗಾಗಿ ಇತಿಹಾಸದಲ್ಲಿ ದಾಖಲಾಗಲಿದೆ.

Donate Janashakthi Media

Leave a Reply

Your email address will not be published. Required fields are marked *