ಕೊರಟಗೆರೆ: ಎತ್ತಿನಹೊಳೆ ಕಾಮಗಾರಿಯ ಬ್ಲಾಸ್ಟಿಂಗ್ ಶಬ್ದದಿಂದ 3 ತಿಂಗಳ ಹಸುಗೂಸು ಗುಡಿಸಲಿನಲ್ಲಿಯೇ ಮೃತಪಟ್ಟಿರುವ ಆತಂಕಕಾರಿ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಸಮೀಪದ ಜಂಪೇನಹಳ್ಳಿ ಸಮೀಪ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಸಮೀಪದ ಜಂಪೇನಹಳ್ಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆಯ ಬ್ರಿಡ್ಜ್ನ ಕಾಮಗಾರಿ ಕಳೆದ ತಿಂಗಳಿಂದ ನಡೆಯುತ್ತಿದೆ. ಪೈಪ್ಲೈನ್ ಅಳವಡಿಸಲು ಕಲ್ಲುಬಂಡೆ ಅಡ್ಡವಾದ ಹಿನ್ನೆಲೆ ಶನಿವಾರ ರಾತ್ರಿ ಸ್ಥಳೀಯರಿಗೆ ಮಾಹಿತಿಯೇ ನೀಡದೇ ಬ್ಲಾಸ್ಟಿಂಗ್ನ ಕೆಲಸ ನಡೆದಿದೆ. ಬ್ಲಾಸ್ಟಿಂಗ್ ಕರ್ಕಶ ಶಬ್ದದಿಂದ ಬೆಚ್ಚಿಬಿದ್ದ 3 ತಿಂಗಳ ಹಸುಗೂಸು ಹೆಣ್ಣು ಮಗು ಮನೆಯಲ್ಲಿಯೇ ಮೃತಪಟ್ಟಿದೆ. ಬ್ಲಾಸ್ಟಿಂಗ್ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲಿಯೇ ಕುಟುಂಬ ವಾಸವಿತ್ತು.
ಘಟನೆಯ ಬಗ್ಗೆ ಅರಿವೇ ಇಲ್ಲದ ಅಮಾಯಕ ದಲಿತ ಕುಟುಂಬ ತನ್ನ ಪುಟ್ಟ ಮಗುವನ್ನು ಸುವರ್ಣಮುಖಿ ನದಿಗೆ ಹೊಂದಿಕೊಂಡ ಸ್ಮಶಾನದ ಜಾಗದಲ್ಲಿ ಮೃತ ಮಗುವಿನ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದ ವೇಳೆ ಅಂತ್ಯಕ್ರಿಯೆ ಮಾಡದಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ ಅಮಾನವೀಯ ಘಟನೆಯೂ ನಡೆದಿದೆ. ಆ ಜಾಗದ ಸೆಕ್ಯುರಿಟಿಯೊಬ್ಬ ಎತ್ತಿನಹೊಳೆ ಕಾಮಗಾರಿ ಶಬ್ದದ ತೀವ್ರತೆಗೆ ಮೃತಪಟ್ಟ 3 ತಿಂಗಳ ಹಸುಗೂಸಿನ ಮೃತ ಮಗುವಿನ ದೇಹವನ್ನು ಗುಂಡಿಯಿಂದ ಹೊರಗಡೆ ತೆಗೆಸಿ ತಾನೊಬ್ಬ ಮನುಷ್ಯನೇ ಅಲ್ಲದಂತೆ ವರ್ತಿಸಿದ್ದಾನೆ.