ಜಿಲೆಟಿನ್‌ ಸ್ಪೋಟದ ಕುರಿತು ತನಿಖೆಯೇ ಇನ್ನೂ ಆರಂಭವಾಗಿಲ್ಲ : ಸಿದ್ದು

ಬೆಂಗಳೂರು: ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್‌ ಸ್ಪೋಟ ದುರಂತವನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ವಿಧಾನಸಭೆಯ ಅಧಿವೇಶನದಲ್ಲಿ ಇಂದು ಮಧ್ಯಾಹ್ನ ಚರ್ಚೆಗೆ ನಿಲುವಳಿ ಸೂಚನೆ ಪ್ರಸ್ತಾಪಿಸಿದ ಸಿದ್ದರಾಮಯ್ಯರವರು ಕಳೆದ ಬಾರಿ ಅಧಿವೇಶನದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಹುಣಸೋಡುನಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಜಿಲೆಟಿನ್‌ ನಿಂದಾಗಿ ಸ್ಪೋಟ ಸಂಭವಿಸಿದೆ. ಈ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಸರಕಾರ ಆದಷ್ಟು ಬೇಗನೇ ತನಿಖೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಇದುವರೆಗೂ ತನಿಖೆ ಪ್ರಾರಂಭವಾಗಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆ ಹಿರೆನಾಗವಲ್ಲಿಯಲ್ಲಿ ಜಿಲೆಟಿನ್‌ ಸ್ಪೋಟದಿಂದಾಗಿ ಹನ್ನೆರಡು ಜನ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. ಅದೂ ಕೂಡ ಒಂದೇ ತಿಂಗಳಿನಲ್ಲಿ ನಡೆದಿದೆ. ಈ ಎರಡು ಸ್ಥಳಗಳಿಗೆ ನಾನು ಭೇಟಿ ಮಾಡಿದ್ದೆ. ಆಯನೂರು ಮಂಜುನಾಥ್ ಸಹ ನನ್ನೊಂದಿಗೆ ಬಂದಿದ್ದರು. ಇವೆರಡೂ ಘಟನೆಗೂ ರಾಜಕೀಯ ಸಂಬಂಧವಿದೆ. ರಾಜಕಾರಣಿಗಳ ಸಹಯೋಗದಿಂದ ನಡೆಯುತ್ತಿರುವ ಈ ಕ್ವಾರಿಗಳು ಇವುಗಳು ಗುಡಿಬಂಡೆ ಬಿಜೆಪಿ ನಾಗರಾಜ್ ರವರಿಗೆ ಸೇರಿದ್ದು. ಭ್ರಮರವಾಸಿನಿ ಕ್ರಷರ್‌ ಮತ್ತು ಶಿರಡಿ ಸಾಯಿ ಕಲ್ಲು ಕ್ವಾರಿ ಹೆಸರಿನಲ್ಲಿ ನಡೆಯುತ್ತಿರುವ ಕಂಪನಿ ಇದಾಗಿದೆ. ಇವೆರಡೂ ಒಂದೇ ಕಂಪನಿಗೆ ಸೇರಿದ್ದಾವೆ. ಆಗ ಈ ಆರೋಪಿಗಳ ಮೇಲೆ 302 ಕೇಸ್ ಹಾಕಿ ಅಂತ ಹೇಳಿದ್ದೆ. ಕಾನೂನಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ. ಅವರನ್ನು ಅರೆಸ್ಟ್‌ ಮಾಡಿ ಎಂದು  ಎಸ್‌ ಪಿ ಗೆ ಸೂಚನೆ ಕೊಟ್ಟಿದೆ. ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಇನ್ಸ್‌ ಪೆಕ್ಟರ್‌ ಗಳು ಅಮಾನತ್ತಾಗಿದ್ದಾರೆ. ಉಳಿದವರು ರಾಜಾರೋಷವಾಗಿ ಇನ್ನೂ ಓಡಾಡಿಕೊಂಡಿದ್ದಾರೆ   ಎಂದು ಪ್ರಸ್ತಾಪಿಸಿದರು.

ಸಿದ್ದು ಮತ್ತು ಸ್ಪೀಕರ್‌ ನಡುವೆ ಸ್ವಾರಸ್ಯಕರ ಮಾತು

ಕಲ್ಲು ಕ್ವಾರಿ ದುರಂತದ ಕುರಿತು ಸಿದ್ದರಾಮಯ್ಯ ಮಾತು ಆರಂಭಿಸುತ್ತಿದ್ದಂತೆ, ಬೃಹತ್‌ ಮತ್ತು ಮದ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ಬೇಗನೇ ಮಾತು ಮುಗಿಸಿ ಎಂದರು. ಅದಕ್ಕೆ ಸಿದ್ದರಾಮಯ್ಯರವರು ನೀವು ಬೇಡ ಅಂದ್ರೆ ಈಗ್ಲೇ ನಿಲ್ಲಿಸ್ತೇನೆ ಎಂದರು. ತಕ್ಷಣ ಮಧ್ಯಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ಪರವಾಗಿಲ್ಲ, ಮಾತಾಡಿ ನಮ್ಮ ನಿಮ್ಮ ನಡುವೆ ಹೊಂದಾಣಿಕೆ ಇದೆ ಎಂದರು.

ತಕ್ಷಣ ಸಿದ್ದರಾಮಯ್ಯರವರು ಹೌದು ಹೊಂದಾಣಿಕೆ ಇದೆ… ಅದು ಬೇರೆ ರೀತಿಯ ಹೊಂದಾಣಿಕೆ. ನಿಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ನಮ್ಮವರು ಅಂದುಕೊಂಡ್ರೆ ಅದು ತುಂಬಾ ಕಷ್ಟ ಎಂದು ಹೇಳಿದರು. ಸ್ಪೀಕರ್‌ ಕಾಗೇರಿರವರು ಮಾಧ್ಯಮದವರೂ ಇದ್ದಾರೆ, ಅವರು ಬೇರೆ ಅರ್ಥ ಮಾಡಿಕೊಂಡ್ರೆ ಕಷ್ಟವಾಗುತ್ತದೆ ಎಂದು ಮರು ಉತ್ತರ ನೀಡಿದರು.

Donate Janashakthi Media

Leave a Reply

Your email address will not be published. Required fields are marked *